Karnataka assembly elections: ಪಂಚರತ್ನ ಯಾತ್ರೆಯೆಡೆ ಎಚ್.ಡಿ. ಕುಮಾರಸ್ವಾಮಿ, ಕಾಂಗ್ರೆಸ್ ಕಡೆಗೆ ಜೆಡಿಎಸ್ ನಾಯಕರು
ಬೆಂಗಳೂರು, ಜನವರಿ, 20: ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಪ್ರಚಾರ ಆರಂಭಿಸುವುದು ಒಂದೆಡೆಯಾದರೇ, ಸದ್ದಿಲ್ಲದೇ ಬೇರೆ ಪಕ್ಷಗಳ ಮುಖಂಡರನ್ನು ತಮ್ಮ ಪಕ್ಷಗಳಿಗೆ ಸೆಳೆಯುವುದು ಮತ್ತೊಂದು ರೀತಿಯ ತಂತ್ರಗಾರಿಕೆ.
ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಪರೋಕ್ಷವಾಗಿ ಪ್ರಚಾರ ಆರಂಭಿಸಿವೆ. ಇದರ ಜೊತೆಗೆಯೇ ಪಕ್ಷಾಂತರವಾಗುವ ಕೆಲಸವು ಜೋರಾಗಿಯೇ ನಡೆದಿದೆ. ಪಂಚರತ್ನ ಯಾತ್ರೆಯ ಜೊತೆಗೆ ಊರು ಊರು ಸುತ್ತಿ ಪಕ್ಷ ಗಟ್ಟಿ ಮಾಡಲು ಅತ್ತ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಯತ್ನಿಸುತ್ತಿದ್ದರೇ, ಇತ್ತ ಜೆಡಿಎಸ್ ನಾಯಕರು ಸದ್ದಿಲ್ಲದೇ ತೆನೆ ಇಳಿಸಿ ಕೈ ಹಿಡಿದು ದಳಪತಿಗೆ ಶಾಕ್ ನೀಡಿದ್ದಾರೆ.
ಹೌದು, ನೆಲಮಂಗಲದ ನಗರಸಭೆಯ ಹಾಲಿ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್ ಸೇರಿದಂತೆ ಜೆಡಿಎಸ್‌ನ 11 ಮಂದಿ ಸದಸ್ಯರು ಶುಕ್ರವಾರ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಸಮ್ಮುಖದಲ್ಲಿ ನೆಲಮಂಗಲ ನಗರಸಭೆಯ ಜೆಡಿಎಸ್‌ನ ಹಾಲಿ ಅಧ್ಯಕ್ಷರು ಮತ್ತು 11 ಸದಸ್ಯರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹಾಗೂ ನೂರಾರು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಗೃಹ ಕಚೇರಿಯಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಬೆಮಲ್ ಕಾಂತರಾಜು, ಕಾಂಗ್ರೆಸ್ ಮುಖಂಡ ಎನ್. ಶ್ರೀನಿವಾಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ನಗರಸಭೆ ಅಧ್ಯಕ್ಷೆ ಲತಾ ಹೇಮಂತ್ ಕುಮಾರ್, ಅಂಜನಮೂರ್ತಿ, ದಾಕ್ಷಾಯಿಣಿ ರವಿ ಕುಮಾರ್, ರಾಜಮ್ಮ ಪಿಳ್ಳಪ್ಪ, ಆಂಜಿನಪ್ಪ, ಪ್ರಸಾದ್, ಚೇತನ್, ಆನಂದ್, ಪುಷ್ಪಲತಾ ಮಾರೇಗೌಡ, ಭಾರತಿ ಬಾಯಿ ನಾರಾಯಣ್ ರಾವ್ ಹೊಸದಾಗಿ ಕಾಂಗ್ರೆಸ್‌ಗೆ ಸೇರ್ಪಡೆಯಾದವರು.

ಇನ್ನು, ಈ ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆ ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ನೆಲಮಂಗಲ ನಗರಸಭೆಯಲ್ಲಿ ಜೆಡಿಎಸ್ 14 ಸದಸ್ಯರನ್ನು ಹೊಂದಿತ್ತು. 11 ಸದಸ್ಯರ ಪಕ್ಷಾಂತರ ಮಾಡಿರುವ ಕಾರಣ ಈಗ ಮೂವರಷ್ಟೇ ಜೆಡಿಎಸ್‌ನಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ಈ ಜೆಡಿಎಸ್ ಸದಸ್ಯರನ್ನು ಪಕ್ಷಕ್ಕೆ ಸ್ವಾಗತಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿವಿಧ ಪಕ್ಷಗಳ ಮತ್ತಷಟು ನಾಯಕರು ಕಾಂಗ್ರೆಸ್‌ಗೆ ಸೇರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
'ಬೇರೆ ಪಕ್ಷದ ಮತ್ತಷ್ಟು ನಾಯಕರು ನಮ್ಮ ಪಕ್ಷ ಸೇರ್ಪಡೆಯಾಗಲಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಹೊಸಬರು, ಹಳಬರು ಎಂಬ ಬೇಧವಿಲ್ಲ. ಇವರಲ್ಲಿ ಬಹುತೇಕರು ನನ್ನ ಜತೆ ಕೆಲಸ ಮಾಡಿದ್ದರು. ಈ ಬಾರಿ ನಾವು ಯಾರಿಗೆ ಟಿಕೆಟ್ ಕೊಟ್ಟರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಎಲ್ಲರೂ ಕೆಲಸ ಮಾಡಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷದಿಂದ ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ. ಎಚ್ ವಿಶ್ವನಾಥ್ ಅವರು ಪಕ್ಷ ಸೇರ್ಪಡೆಯಾಗಲು ದಿನಾಂಕ ನಿಗದಿ ಆಗಿದೆ. ಅದನ್ನು ಆದಷ್ಟು ಬೇಗ ಘೋಷಣೆ ಮಾಡುತ್ತೇವೆ" ಎಂದು ಮಾಹಿತಿ ನೀಡಿದ್ದಾರೆ.












Click it and Unblock the Notifications