Kannadigas’ ಕನ್ನಡಿಗರಿಗೆ ಔದಾರ್ಯವಿದೆ ಜೊತೆಗೆ ಕಟ್ಟಾ ಕನ್ನಡ ಭಾಷಾಭಿಮಾನವೂ ಇರಲಿ: ಸೋಷಿಯಲ್ ಮೀಡಿಯಾ ಚರ್ಚೆ
Kannadigas: ಕನ್ನಡಿಗರಿಗೆ ಔದಾರ್ಯವಿದೆ ಜೊತೆಗೆ ಕಟ್ಟಾ ಕನ್ನಡ ಭಾಷಾಭಿಮಾನವೂ ಇರಲಿ ಎನ್ನುವ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪತ್ರಕರ್ತ ಕುಮಾರ ರೈತ (Kumara Raitha) ಅವರ ಬರಹ ಇಲ್ಲಿದೆ.
ವಲಸೆಯ ಹಿಂದೆ ಹಲವು ಕಾರಣಗಳಿವೆ. ಅವುಗಳಲ್ಲಿ ಹೊಟ್ಟೆಪಾಡು ಬಹಳ ಮುಖ್ಯವಾಗಿದೆ. ಈ ಕಾರಣಕ್ಕಾಗಿಯೇ ಕರ್ನಾಟಕಕ್ಕೆ ವಲಸಿಗರ ಸಂಖ್ಯೆ ಹೆಚ್ಚಿದೆ. ಉದ್ಯೋಗಾವಕಾಶ ಇದ್ದಲ್ಲಿ ವಲಸೆಯೂ ಸಹಜ. ಬರುವವರೆಲ್ಲ ಬರಲಿ, ಬಂದವರು ಕನ್ನಡದವರೂ ಆಗಲಿ. ಈ ಮಾತುಗಳನ್ನು ಬರೆಯಲು ಕಾರಣವಿದೆ. ಇಂದು ಸಂಜೆ ಬೆಂಗಳೂರು ರಾಜಾಜಿನಗರದ ಹೋಟೆಲ್ ಗೆ ಹೋದೆ. ಏನಿದೆ ತಿಂಡಿ ಎಂದರೆ ಆಕೆ ಕ್ಯಾ ಕ್ಯಾ ಎಂದರು. ಮತ್ತೆ ಏನು ತಿಂಡಿ ಇದೆ ಎಂದೆ, ಹಿಂದಿ ಓನ್ಲಿ ಎಂದರು. ಸಿಟ್ಟು ನೆತ್ತಿಗೇರಿತು ಅಷ್ಟರಲ್ಲಿ ಇನ್ನೊಬ್ಬ ಯುವತಿ ಬಂದರು. ಅವರಿಗೂ ಕನ್ನಡ ಗೊತ್ತಿಲ್ಲ. ಇನ್ನೋರ್ವ ಯುವಕ ಬಂದರು, ಅವರಿಗೂ ಗೊತ್ತಿಲ್ಲ. ಅಷ್ಟರಲ್ಲಿ ಮತ್ತೊಬ್ಬ ಯುವಕ ಧಾವಿಸಿ ಬಂದು ಏನು ಬೇಕು ಎಂದು ಕೇಳಿ ಮಾಯ.

ಕನ್ನಡ ಕಲಿಸುವವರೇ ಇಲ್ಲ
ಅಲ್ಲಿದ್ದ ಕೆಲಸಗಾರರು ಪಶ್ಚಿಮ ಬಂಗಾಳ, ಅಸ್ಸಾಂ ಮೂಲದವರು. ಇವರು ಕೆಲಸ ಆರಂಭಿಸುವ ಮುನ್ನ ಮೂಲಭೂತ ಕನ್ನಡ ಪದಗಳನ್ನು ಕಲಿಸಿಕೊಡುವುದು ಕಷ್ಟವೇ ಅಲ್ಲ, ಕಲಿಸುವವರೇ ಕಮ್ಮಿ. ಕಲಿಯುವ ಆಸಕ್ತಿ ಇರುವವರೂ ಕಮ್ಮಿ. ವರ್ಷಗಟ್ಟಲೇ ಇಲ್ಲೇ ಇದ್ದರೂ "ಕನಡ್ ಗೊತಿಲ್" ಎನ್ನುವವರೇ ಅಧಿಕ. ಬಹುಶಃ ಕರ್ನಾಟಕ, ಮಹಾರಾಷ್ಟ್ರ ಇವೆರಡೇ ರಾಜ್ಯಗಳಲ್ಲಿ ಅಲ್ಲಿನ ರಾಜ್ಯಭಾಷೆ ಕಲಿಯದೇ ಬದುಕುವ ಅವಕಾಶವಿದೆ. ಕರ್ನಾಟಕಕ್ಕೆ ಹೋಲಿಸಿದರೆ ಮಹಾರಾಷ್ಟ್ರದಲ್ಲಿ ಭಾಷಾಭಿಮಾನ ಹೆಚ್ಚುತ್ತಿದೆ. ಆದರೆ ಕರ್ನಾಟಕದಲ್ಲಿ ಪರಭಾಷೆಯವರು ಎಲ್ಲಿ ನೊಂದಾರೋ ಎನ್ನುವಂತೆ ಹರಕುಮುರುಕಾದರೂ ಅವರ ಭಾಷೆಯಲ್ಲಿಯೇ ಮಾತನಾಡುವವರು ಹೆಚ್ಚು ! ಹಿಂದೊಮ್ಮೆ ಉತ್ತರಪ್ರದೇಶ ಮೂಲದ ಯುವಕ ನಾನಿದ್ದ ಕಚೇರಿಗೆ ಬಂದಿದ್ದರು.
'"ಹಿಂದಿ ರಾಷ್ಟ್ರ ಭಾಷೆ. ನೀವು ಕಲಿಯಬೇಕು" ಎಂದಿದ್ದರು. ಮಾತಿನಲ್ಲಿಯೇ ಬಿಸಿ ಮುಟ್ಟಿಸಿದ್ದೆ. ಅದೇಗೋ ಏನೋ ಹಲವರಿಗೆ ಹಿಂದಿ ಬಗ್ಗೆ ಇಂಥ ತಪ್ಪು ಗ್ರಹಿಕೆಯಿದೆ. ಕನ್ನಡಿಗರಿಗೆ ಖಂಡಿತ ಭಾಷಾಭಿಮಾನವಿದೆ. ಆದರೆ ಪರಭಾಷಾ ವಲಸೆಗಾರರ ಸಂದರ್ಭದಲ್ಲಿ ಕಟ್ಟಾ ಭಾಷಾಭಿಮಾನ ಮೆರೆಯಬೇಕು. ನಮ್ಮ ತಾಯ್ನುಡಿಯ ರುಚಿಯನ್ನು ಅವರಿಗೂ ಹತ್ತಿಸಬೇಕು. ಕನ್ನಡ ಕಲಿಯದಿದ್ದರೆ ಇಲ್ಲಿ ಬದುಕಿಲ್ಲ ಎನ್ನುವ ಭಾವನೆ ಮೂಡಿಸಬೇಕು. ಇದಾದೀತೇ.
Kannadigas ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ
ಇನ್ನು ಈ ಬರವು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಆಗುತ್ತಿದೆ. ಬಿ.ಕೆ. ಸುಮತಿ ಎನ್ನುವವರು ಹೀಗೆ ಪ್ರತಿ ದಿನ ಮಾತಾಡುತ್ತೇನೆ. ಮಾಲ್‌ಗಳಲ್ಲಿ, ಆಟೋದಲ್ಲಿ, ಕ್ಯಾಬ್ ಗಳಲ್ಲಿ, ಕನ್ನಡ ಕಲಿಯಿರಿ ಎನ್ನುತ್ತಾ ಪ್ರೀತಿ ಇಂದಲೇ ಸಂಭಾಷಣೆ ನಡೆಸುತ್ತೇನೆ. ಆದರೆ ಸೌಹಾರ್ದ ಸ್ವೀಕಾರ ಕಾಣುವುದಿಲ್ಲ. ನಾನು ಹುಟ್ಟಿ ಬೆಳೆದ ಬೆಂಗಳೂರು ಇದಾ ಎಂದು ನನಗೆ ಅನಿಸುತ್ತೆ. ಕನ್ನಡಿಗರು ಕನ್ನಡ ಮಾತಾಡುವ ಪ್ರಯತ್ನ ಜಾರಿಯಲ್ಲಿಟ್ಟರೆ ಸ್ವಲ್ಪ ಸುಧಾರಿಸಬಹುದೇನೋ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಮೇಶ್ ಎನ್ನುವವರು ಈ ಲೇಖನದ ಪೋಸ್ಟ್ ಹಾಕಿ ಕನ್ನಡದ ಬಗ್ಗೆ ನನ್ನ ತಲೆಯಲ್ಲಿ ನೂರಾರು ಪ್ರತಿಕ್ರಿಯೆಗಳು ಉಗಿಬಂಡಿ ಓಡುತ್ತಿದೆ. ಹಿಂದೆ ಮಾಸ್ಟರ್ ಹಿರಣ್ಣಯ್ಯ ಒಂದು ಮಾತು ಹೇಳಿದ್ದರು: ತಮಿಳುರಿಗೆ ಭಾಷಾ 'ದುರಭಿಮಾನ', ತೆಲುಗರಿಗೆ ಭಾಷಾ 'ಅಭಿಮಾನ', ಕನ್ನಡಿಗರಿಗೆ ಭಾಷಾ 'ನಿರಭಿಮಾನ'. ಇನ್ನೊಂದು ಮಾತು: ಕರ್ನಾಟಕದಲ್ಲಿ ಎಲ್ಲ ವರ್ಗಗಳ ಜನಸಂಖ್ಯೆಯೂ ಇದೆ, ದುರದೃಷ್ಟವಶಾತ್ ಎಲ್ಲ ವರ್ಗದವರನ್ನೂ ಓವರ್ ಟೇಕ್ ಮಾಡಿ ಉತ್ತರ ಭಾರತೀಯರು ಪ್ರಭುತ್ವ ಸ್ಥಾಪಿಸಲಾಗುತ್ತಿದೆ. ಇದಕ್ಕೆ ಸ್ಪಷ್ಟೀಕರಣ ಉತ್ತರ ನಾವು ಭಾರತೀಯರಿಗೆ ಸ್ವಲ್ಪ ಸುಖ ಜೀವಿಗಳು(ಸೋ--ಗಳು). ಇನ್ನೊಂದು ಕಾರಣ ನಮ್ಮವರು ಎಲ್ಲರೂ ಕುಲಕಸುಬುಗಳನ್ನು ನಿರ್ಲಕ್ಷಿಸುತ್ತಿದ್ದಾರೆ.
ಬಡಗಿ, ಕುಂಬಾರ,ನೇಕಾರ,ಅಕ್ಕಸಾಲಿಗ.. ಈ ಕೆಲಸ ಮಾಡಲು ಉತ್ತರ ಭಾರತೀಯರನ್ನೇ ಅವಲಂಬಿಸಬೇಕಾದ, ಅವರ ಸಂಸ್ಕೃತಿಯನ್ನೇ ಅನುಸರಿಸಬೇಕಾದ, ಅವರ ಭಾಷೆಯನ್ನೇ ಕಲಿಯಬೇಕಾದ ಅನಿವಾರ್ಯ ಕೂಡ ಕನ್ನಡಿಗರ ಮೇಲೆ ಇದೆ. ಸದ್ಯಕ್ಕೆ ಇಷ್ಟು ಸಾಕು ಕಾರಣಗಳನ್ನು ಹುಡುಕುತ್ತಾ ಹೋದರೆ ಇಡೀ ದಿನ ಬರೆಯಬಹುದಾದಷ್ಟಿದೆ ಎಂದಿದ್ದಾರೆ. ಕಿರಣ್ ಕೆ.ಎಸ್ ಎಂಬವರು ದುರದೃಷ್ಟಕರ ಸಂಗತಿ ಎಂದರೆ, ನಮ್ಮ ಕನ್ನಡಿಗರು ನಮ್ಮ ಹೆಣ್ಣು ಮಕ್ಕಳು ಪರ ಭಾಷೆ ಮಾತನಾಡೋ ಜನರ ಹತ್ತಿರ ಅವರ ಭಾಷೆಯಲ್ಲಿ ಮಾತನಾಡುತ್ತಾರೆ. ನಮ್ಮ ಸುತ್ತಮುತ್ತಲಿನ ನಮ್ಮ ಜನಗಳೇ ಅವರು ಕನ್ನಡ ಮಾತನಾಡಲೂ ನೋಡುತ್ತಾರೆ. ಆದರೆ, ನಮ್ಮ ನಿರಭಿಮಾನಿ ಕನ್ನಡಿಗರು ಅವರ ಭಾಷೆಯಲ್ಲಿ ಮಾತನಾಡುತ್ತಾರೆ ಏನೂ ಮಾಡೋದು ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications