ಮಹಿಳೆಗೆ ನಟ 'ದರ್ಶನ್' ಮನೆ ನಾಯಿ ಕಡಿತ: ಇಬ್ಬರ ವಿರುದ್ಧ FIR ದಾಖಲು: ಏನಿದು ಪ್ರಕರಣ?
ಬೆಂಗಳೂರು, ನವೆಂಬರ್ 01: ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆಯ ನಾಯಿ ಕಚ್ಚಿದೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಕ್ಟೋಬರ್ 28ರಂದು ನಾಯಿ ದಾಳಿ ನಡೆಸಿದೆ. ಗಾಯಗಳು ಆಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ನಟ ದರ್ಶನ್ ಸೇರಿ ಇಬ್ಬರ ವಿರುದ್ಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಅದೇ ಆರ್‌ಆರ್ ನಗರದ ಬಿಇಎಂಎಲ್ ಐದನೇ ಹಂತದ ನಿವಾಸಿ ವಕೀಲೆಯಾಗಿರುವ ಅಮಿತಾ ಜಿಂದಾಲ್ ಎಂಬುವವರು ದೂರು ನೀಡಿದ್ದಾರೆ.

ದೂರುದಾರರಾದ ಅಮಿತಾ ಜಿಂದಾಲ್ ಅವರು, ಕಳೆದ ಅಕ್ಟೋಬರ್ 28 ರಂದು ಕಾರ್ಯಕ್ರಮವೊಂದಕ್ಕೆ ತೆರಳುವ ವೇಳೆ ನಟ ದರ್ಶನ್ ಅವರ ಮನೆಯ ಎದುರಿನ ಖಾಲಿ ಸ್ಥಳದಲ್ಲಿದ್ದ ತಮ್ಮ ಕಾರು ನಿಲ್ಲಿಸಿ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ವಾಪಾಸ್ ಕಾರು ತೆಗೆಯಲು ಬಂದಾಗ ಮೂರು ನಾಯಿಗಳ ಪೈಕಿ ಎರಡನ್ನು ಕಟ್ಟಲಾಗಿತ್ತು. ಕಟ್ಟದೆ ಬಿಟ್ಟಿದ್ದ ಒಂದು ನಾಯಿಯು ದಾಳಿ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.
ಸಿಬ್ಬಂದಿ ನಿರ್ಲಕ್ಷ್: ಕ್ರಮಕ್ಕೆ ಒತ್ತಾಯ
ಅಲ್ಲದೇ ದರ್ಶನ್ ಮನೆಯ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಇದ್ದರು. ಸಿಬ್ಬಂದಿ ಈ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ನಮ್ಮೊಂದಿಗೆ ವಾಗ್ವಾದಕ್ಕೆ ಇಳಿದರು. ಈ ವೇಳೆ ನಾಯಿಯು ನನ್ನ ಮೇಲೆ ದಾಳಿ ನಡೆಸಿ ಕಚ್ಚಿದೆ ಎಂದು ಅವರು ವಿವರಿಸಿದ್ದಾರೆ.
ನಾಯಿ ಬಟ್ಟೆ ಬರೆ ಹರಿದಿದ್ದು, ಹೊಟ್ಟೆ ಭಾಗಕ್ಕೆ ಗಾಯವಾಗಿದೆ. ನಾಯಿಗಳು ಕಚ್ಚುತ್ತವೆ ಎಂದು ಗೊತ್ತಿದ್ದರೂ ಸಹ ಸಿಬ್ಬಂದಿ ಎಚ್ಚರಿಕೆ ವಹಿಸದೇ ನಿರ್ಲಕ್ಷ್ಯ ತೋರಿದ್ದರಿಂದಲೇ ಘಟನೆ ನಡೆದಿದೆ. ಆದ್ದರಿಂದ ಆ ಸಿಬ್ಬಂದಿ, ನಾಯಿ ಮಾಲೀಕರ ವಿರುದ್ಧ ಸೂಕ್ತ ಕ್ರಮಕ್ಕೆ ಅವರು ದೂರಿನಲ್ಲಿ ಆಗ್ರಹಿಸಿದ್ದಾರೆ.












Click it and Unblock the Notifications