"ಕನ್ನಡಿಗರಿಗೆ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಸಿಗಲಿ: 2.5 ಲಕ್ಷ ಸರ್ಕಾರಿ ಹುದ್ದೆ ನೇಮಕಾತಿ ಆಗಲಿ, ನಿರ್ಣಯ ಕನ್ನಡಿಗರದ್ದೇ ಇರಲಿ"
ಕನ್ನಡಿಗರಿಗೆ ಉದ್ಯೋಗ ಹಾಗೂ ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಆದ್ಯತೆ ಕೊಡುವ ವಿಚಾರವು ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ. ಐಟಿ - ಬಿಟಿ ಕಂಪನಿಗಳಲ್ಲಿ ಕನ್ನಡಿಗರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ವಿಚಾರವು ಗಂಭೀರವಾಗಿ ಚರ್ಚೆ ಆಗುತ್ತಿರುವಾಗಲೇ ವಿರೋಧ ಪಕ್ಷಗಳು ಸಹ ಈ ವಿಚಾರದಲ್ಲಿ ಕರ್ನಾಟಕ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ.
ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಮಾನ್ಯ Dialogue King ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಐಟಿ ಹಾಗೂ ಇತರ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗಾದ್ಯತೆ ನೀಡಬೇಕೆಂಬ ನಿಮ್ಮ ಹೇಳಿಕೆಯನ್ನು ನಾವೂ ಸಂಪೂರ್ಣವಾಗಿ ಬೆಂಬಲಿಸುತ್ತೇವೆ! ಆದರೆ ಇದೇ ಕಾಲಕ್ಕೆ ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಸುಮಾರು 2.50 ಲಕ್ಷಕ್ಕೂ ಹೆಚ್ಚಿನ ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆ ನಡೆಸದೇ, ನಿರುದ್ಯೋಗಿ ಕನ್ನಡ ಯುವಕ-ಯುವತಿಯರನ್ನು ಅವಕಾಶ ವಂಚಿತರನ್ನಾಗಿಸಿ, ಅವರ ಭವಿಷ್ಯಕ್ಕೆ ಕಲ್ಲು ಹಾಕುತ್ತಿರುವ ನಿಮ್ಮ ನಡೆ ಕನ್ನಡ ಹಾಗೂ ಕನ್ನಡಿಗರ ಬಗೆಗಿನ ಡೋಂಗಿ ಕಾಳಜಿ ಹಾಗೂ ಬದ್ಧತೆಯನ್ನು ಸಾಕ್ಷೀಕರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದುವರಿದು ಕನ್ನಡ ನಾಡಿನಲ್ಲಿ ಖಾಸಗಿ ವಲಯವೂ ಕೂಡ ಕನ್ನಡಕ್ಕೆ ಮತ್ತು ಕನ್ನಡಿಗರಿಗೆ ಆದ್ಯತೆ ನೀಡಲೇ ಬೇಕು, ಆದರೆ ರಾಜ್ಯ ಸರ್ಕಾರ ಕನ್ನಡಿಗರಿಗೆ ಉದ್ಯೋಗ ನೀಡುವ ನಿಮ್ಮ ಜವಾಬ್ದಾರಿಯ ಬಗ್ಗೆಯೂ ನೀವು ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.
ಜೆನ್ ಜೀ ಸಮೂಹವನ್ನು ದಿಕ್ಕುತಪ್ಪಿಸುವ ಕಾರ್ಯದಲ್ಲಿ ತಲ್ಲೀನರಾಗಿರುವ ನಿಮ್ಮ ನಾಯಕ ರಾಹುಲ್ ಗಾಂಧಿಯವರಿಗೆ ಕರುನಾಡಿನ ನಿರುದ್ಯೋಗಿ ಯುವಕರ ಆಕ್ರಂದನ ಏಕೆ ಕೇಳಿಸುತ್ತಿಲ್ಲ? ಜೆನ್ ಜೀ ಸಮೂಹದ ಭವಿಷ್ಯಕ್ಕೆ ಕಳೆದ 3 ವರ್ಷಗಳಿಂದ ನಿರಂತರ ಕಲ್ಲು ಹಾಕುತ್ತಿರುವ ನಿಮ್ಮ ಸರ್ಕಾರದ ವಿರುದ್ಧ ಈಗಾಗಲೇ ಬಹುದೊಡ್ಡ ಮಟ್ಟದಲ್ಲಿ ನಿರುದ್ಯೋಗಿ ಯುವಸಮೂಹ ದನಿಯೆತ್ತಿ ಬೀದಿಗಿಳಿದು ಹೋರಾಟ ನಡೆಸಿದೆ.
ಆದಾಗ್ಯೂ ಕಣ್ಣು, ಕಿವಿ, ಹೃದಯ ಇಲ್ಲದ ನಿಮ್ಮ ಸರ್ಕಾರದಲ್ಲಿ, ನಿಮ್ಮ ಕೈಯಲ್ಲೇ, ನಿಮ್ಮ ಅಧೀನದಲ್ಲೇ ಇರುವ ಖಾಲಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಕುರಿತು ಮೊದಲು ಕಾಳಜಿ ಮತ್ತು ಬದ್ಧತೆ ತೋರಿ, ಇಲ್ಲದಿದ್ದಲ್ಲಿ ನಿಮ್ಮದು ಕೇವಲ ಮೊಸಳೆ ಕಣ್ಣೀರಿನ ಮಾತುಗಳು ಎನ್ನುವುದನ್ನು ಕನ್ನಡಿಗರು ಅರ್ಥಮಾಡಿಕೊಳ್ಳಬಲ್ಲರು ಎಂದೂ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಹೇಳಿದ್ದಾರೆ.
ಕಂಪನಿಗಳಲ್ಲಿ ನಿರ್ಣಯ ತೆಗೆದುಕೊಳ್ಳುವವರು ಕನ್ನಡಿಗರಿರಲಿ: ರೂಪೇಶ್ ರಾಜಣ್ಣ
ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ ಅವರು ಸಹ ಈ ವಿಷಯದ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರೇ, ಕಂಪನಿಗಳಲ್ಲಿ ಕನ್ನಡ ತಾರತಮ್ಯ ಇದ್ದೆ ಇದೆ. ಇದಕ್ಕೆ ಮುಖ್ಯ ಕಾರಣ ಹೆಚ್ಚಿನ HR ಮತ್ತು Decision Makers ಕನ್ನಡೇತರರು.
ಉತ್ತರ ಭಾರತ, ಬಂಗಾಳಿ, ಕೇರಳಂ, ತಮಿಳುನಾಡಿನವರೇ ಹೆಚ್ಚು. ಸರ್ಕಾರ ಒಂದು ಆಡಿಟ್ ಮಾಡಬೇಕು ಯಾವ ಕಂಪನಿಯಲ್ಲಿ HR ಮತ್ತು Decision Makers ಎಷ್ಟು ಜನ ಕನ್ನಡದವರು ಇದ್ದಾರೆಂದು ಆಗ ಎಲ್ಲವೂ ಹೋರಬರುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications
