PG Business: ಈ ಕಾರಣದಿಂದ ಬೆಂಗಳೂರು ರಿಯಲ್ ಎಸ್ಟೇಟ್, ಪಿಜಿ ಉದ್ಯಮಕ್ಕೆ ಭಾರಿ ಹೊಡೆತ
ಸಿಲಿಕಾನ್ ಸಿಟಿ ಬೆಂಗಳೂರಿಗೆ ಕೆಲಸಕ್ಕೆ ಬರುವವರಿಗೆ ಪೇಯಿಂಗ್ ಗೆಸ್ಟ್‌ಗಳೇ (ಪಿಜಿ) ನೆಚ್ಚಿನ ಆಶ್ರಯ ತಾಣ. ಬಾಡಿಗೆ ಮನೆಗೆ ಹೋಲಿಸಿದರೆ ಈ ಪಿಜಿಗಳು ಹಣಕ್ಕೆ ತಕ್ಕಂತೆ ಉತ್ತಮ ಸೌಕರ್ಯಗಳನ್ನು ಕಲ್ಪಿಸುತ್ತವೆ. ಈ ಕಾರಣದಿಂದಲೇ ಉದ್ಯೋಗ ಅರಸಿ, ಕಾಲೇಜು ಸೇರುವವರು ಬೆಂಗಳೂರಿಗೆ ಬಂದ ತಕ್ಷಣ ಪಿಜಿಗಳನ್ನು ಹುಡುಕುತ್ತಾರೆ. ಪಿಜಿ ನಡೆಸುವುದರಲ್ಲಿ ಭಾರಿ ಲಾಭವೂ ಇರುವುದರಿಂದ ನಗರದ ಗಲ್ಲಿಗಲ್ಲಿಯಲ್ಲೂ ಪಿಜಿಗಳು ತಲೆ ಎತ್ತಿವೆ. ಆದರೆ, ಈಗ ಪಿಜಿ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿರುವ ಬೆಳವಣಿಗೆಯೊಂದು ನಡೆದಿದೆ. ಭಾರಿ ಆದಾಯ ಗಳಿಸುತ್ತಿದ್ದ ಪಿಜಿ ಉದ್ಯಮ ಈಗ ನಷ್ಟದ ಕೂಪಕ್ಕೆ ಬೀಳುವ ಹಂತ ತಲುಪುತ್ತಿವೆ ಎಂದು ವರದಿಯಾಗಿದೆ. ಇದಕ್ಕೆ ಕಾರಣವೇನು ಎಂಬುದು ಇಲ್ಲಿದೆ.
ಕೇವಲ ಪಿಜಿ ಉದ್ಯಮ ಮಾತ್ರವಲ್ಲ, ಮತ್ತೊಂದೆಡೆ ರಿಯಲ್ ಎಸ್ಟೇಟ್ ಉದ್ಯಮ ಕೂಡ ನಲುಗುತ್ತಿದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿರುವ ರಿಯಲ್ ಎಸ್ಟೇಟ್ ಉದ್ಯಮ ಇತ್ತೀಚೆಗೆ ನೆಲಕಚ್ಚಿದೆ. ಈ ಎರಡೂ ಉದ್ಯಮಗಳು ನಷ್ಟಕ್ಕೆ ಸಿಲುಕಲು ಕಾರಣ ಒಂದೇ ಎಂದು ಹೇಳಲಾಗುತ್ತಿದೆ. ಬೆಂಗಳೂರು ಗ್ಲೋಬಲ್ ಐಟಿಬಿಟಿ ಕಂಪನಿಗಳು ಹಾಗೂ ಸ್ಟಾರ್ಟಪ್‌ಗಳಿಗೆ ಹೆಸರುವಾಸಿಯಾಗಿರುವ ಸಿಲಿಕಾನ್ ವ್ಯಾಲಿ. ಈ ಕಾರಣದಿಂದಲೇ ದೇಶ ವಿದೇಶಗಳಿಂದ ಜನ ಈ ಊರಿಗೆ ಕಾಲಿಡುತ್ತಿದ್ದರು. ಕನಸಿನ ಕೆಲಸ ಹುಡುಕುತ್ತಾ ಬೆಂಗಳೂರಿನಲ್ಲಿ ಬಂದು ಸೆಟಲ್ ಆಗುತ್ತಿದ್ದರು.

ಇಲ್ಲಿ ಉದ್ಯೋಗ ಮಾಡಿ ಕೈತುಂಬಾ ಸಂಬಳ ಪಡೆಯುತ್ತಾ ಕೊನೆಗೆ ಹುಟ್ಟಿದ ಊರು ತೊರೆದು ಇಲ್ಲಿಯೇ ಮನೆ ಮಾಡಿಕೊಂಡು ಅಥವಾ ಬಾಡಿಗೆ ಮನೆಗಳಲ್ಲಿ ಉಳಿದುಬಿಡುತ್ತಿದ್ದರು. ಆದರೆ, ಇತ್ತೀಚೆಗೆ ಉದ್ಯೋಗ ವಲಯದಲ್ಲಿ ಆಗುತ್ತಿರುವ ಬೆಳವಣಿಗೆಯಿಂದಾಗಿ ಉದ್ಯೋಗಿಗಳ ಕನಸು ಕಮರುತ್ತಿದೆ. ದೊಡ್ಡ ಕಂಪನಿಗಳು ದಿಢೀರನೆ ಉದ್ಯೋಗ ಕಡಿತಕ್ಕೆ ಮುಂದಾಗುತ್ತಿರುವ ಕಾರಣ ಉದ್ಯೋಗಿ ಬದುಕು ನಡುನೀರಲ್ಲಿ ಕೈಬಿಟ್ಟಂತಾಗುತ್ತಿದೆ. ಈ ಪ್ರವೃತ್ತಿ ಹೆಚ್ಚಾಗಿರುವ ಹಿನ್ನೆಲೆ ಇದು ನೇರವಾಗಿ ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಗೂ ಪಿಜಿ ಉದ್ಯಮಕ್ಕೆ ಹೊಡೆತ ನೀಡಿದೆ ಎಂದು ಹೇಳಲಾಗುತ್ತಿದೆ.
ಉದ್ಯೋಗ ಕಡಿತದಿಂದ ಹೆಚ್ಚಾಯ್ತು ಅಭದ್ರತೆ:
ಕಳೆದ ವರ್ಷಗಳಲ್ಲಿ ಬೆಂಗಳೂರಿನ ಪ್ರಮುಖ ಕಂಪನಿಗಳು ನಷ್ಟ ಸರಿದೂಗಿಸುವ ನೆಪದಲ್ಲಿ ಉದ್ಯೋಗಿಗಳನ್ನು ಇದ್ದಕ್ಕಿದ್ದಂತೆ ಕೆಲಸದಿಂದ ತೆಗೆದುಹಾಕಲಾಗುತ್ತಿದೆ. ಮೊದಲೆಲ್ಲ ಕೆಲಸದಲ್ಲಿ ಉತ್ತಮ ಪರ್ಫಾರ್ಮೆನ್ಸ್ ಇಲ್ಲದವರನ್ನು ಮಾತ್ರವೇ ಕೆಲಸದಿಂದ ತೆಗೆಯಲಾಗುತ್ತಿತ್ತು. ಈಗ ಒಟ್ಟೊಟ್ಟಿಗೆ ನೂರಾರು ಮಂದಿಯನ್ನು ದಿಢೀರನೆ ಉದ್ಯೋಗದಿಂದ ತೆಗೆದುಹಾಕಲಾಗುತ್ತಿದೆ. ಇದರಿಂದ ಉದ್ಯೋಗಿಗಳು ಮತ್ತೆ ಒಳ್ಳೆಯ ಕೆಲಸ ಪಡೆಯಲು ವಿಫಲರಾಗುತ್ತಿದ್ದಾರೆ. ಈ ಕಾರಣದಿಂದ ಉದ್ಯೋಗಿಗಳು ಪಿಜಿಗಳನ್ನು ತೊರೆದು ಬೇರೆ ದಾರಿ ಹಿಡಿಯುತ್ತಿದ್ದಾರೆ.

ಲಕ್ಷಾಂತರ ಉದ್ಯೋಗಿಗಳು ಪೇಯಿಂಗ್ ಗೆಸ್ಟ್ (ಪಿಜಿ) ಅಥವಾ ಕಡಿಮೆ ಬೆಲೆಗೆ ಸಿಗುವ ಬಾಡಿಗೆ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಸಂಬಳದಿಂದಲೇ ಅವರು ಇದನ್ನೆಲ್ಲ ಭರಿಸುವ ಸಾಮರ್ಥ್ಯ ಹೊಂದಿದ್ದರು. ಈಗ ಐಟಿ ವಲಯದಲ್ಲಿನ ಉದ್ಯೋಗ ಕಡಿತ, ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನದ ಬಳಕೆ ಹೆಚ್ಚಾಗಿ ಉದ್ಯೋಗಿಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತಿದೆ. ಕ್ರಮೇಣ ಬೆಂಗಳೂರಿನ ಉದ್ಯೋಗ ವಲಯವು ಬಿಕ್ಕಟ್ಟಿಗೆ ಸಿಲುಕಿದೆ ಎಂದು ಹೇಳಲಾಗುತ್ತಿದೆ. ಈ ಬಿಕ್ಕಟ್ಟು ಬೆಂಗಳೂರಿನ ವಸತಿ ಮಾರುಕಟ್ಟೆ, ಆಸ್ತಿ ಖರೀದಿ, ರಿಯಲ್ ಎಸ್ಟೇಟ್ ಹೂಡಿಕೆಗಳು ಮತ್ತು ಸ್ಥಳೀಯ ವ್ಯವಹಾರಗಳಿಗೂ ಸವಾಲಾಗಿ ಕ್ರಮೇಣ ನಗರದ ಆರ್ಥಿಕತೆಗೂ ಹೊಡೆತ ನೀಡುತ್ತಿದೆ.












Click it and Unblock the Notifications