ಕಾಂಗ್ರೆಸ್ NEET ಹೋರಾಟ, 'ಮೊದಲು ನಿಮ್ಮ ಕಣ್ಣಿನ ದಿಮ್ಮಿ ತೆಗೆಯಿರಿ': 2016ರ ಘಟನೆ ನೆನಪಿಸಿದ ಜೆಡಿಎಸ್
ಬೆಂಗಳೂರು: ದೇಶಾದ್ಯಂತ ಕಾಂಗ್ರೆಸ್, ಇತರ ಪಕ್ಷಗಳು ಹಾಗೂ ಸಂಘಟನೆಗಳು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಹಾಗೂ ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿವೆ. ಕರ್ನಾಟಕದಲ್ಲೂ ಕಾಂಗ್ರೆಸ್ ನಾಯಕರು ಪ್ರತಿಭಟಿಸುತ್ತಿದ್ದು, ರಾಜ್ಯದಲ್ಲಿ 'ಕೈ' ನಾಯಕರ ಆಡಳಿತವಿರುದ್ದಾಗ ನಡೆದ ಅಕ್ರಮ, ಘಟನೆಗಳನ್ನು ಜೆಡಿಎಸ್ ನೆನೆಪಿಸಿದೆ.
'ಬೇರೆಯವರ ಕಣ್ಣಿನ ಕಸ ಹುಡುಕುವ ಮುನ್ನ, ನಿಮ್ಮ ಕಣ್ಣಿನ ದಿಮ್ಮಿಯನ್ನು ತೆಗೆಯಿರಿ' ಎಂದು ಜೆಡಿಎಸ್ ಎಕ್ಸ್ ಪೋಸ್ಟ್ ಮೂಲಕ ಕಾಂಗ್ರೆಸ್ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದೆ. ಆಡಳಿತಾರೂಢ ಕಾಂಗ್ರೆಸ್ ಕಾರ್ಯಕರ್ತರು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರವಾಗಿ ಬೆಂಗಳೂರಲ್ಲಿ ಪ್ರತಿಭಟಿಸಿದ್ದನ್ನು ಜೆಡಿಎಸ್ ಪ್ರಶ್ನಿಸಿದೆ. 2016ರ ಘಟನೆಗಳನ್ನು ನೆನಪಿಸಿದೆ. NEET ವಿಚಾರವಾಗಿ ರಾಜ್ಯದ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಬಹಿಷ್ಕರಿಸುವಂತೆ ಒತ್ತಡ ಹೇರುತ್ತಿರುವ ಕಾಂಗ್ರೆಸ್ ಶಾಸಕರು, ನಾಯಕರೇ ಒಮ್ಮೆ ನೆನಪಿಸಿಕೊಳ್ಳಿ ಎಂದು ಗುಡುಗಿದೆ.

ರಾಜ್ಯದಲ್ಲಿ ನಿಮ್ಮದೇ ಕಾಂಗ್ರೆಸ್ ಸರ್ಕಾರ ಇದ್ದಾಗ 2016ರಲ್ಲಿ ಒಂದಲ್ಲ, ಎರೆಡೆರಡು ಬಾರಿ ದ್ವಿತೀಯ ಪಿಯುಸಿ ರಸಾಯನಶಾಸ್ತ್ರ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಅಂದು ಲಕ್ಷಾಂತರ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಕಲ್ಲು ಹಾಕಿದ್ದು ಮರೆತುಹೋಯಿತೇ? ಅಂದಿನ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ರಾಜೀನಾಮೆ ಆಗ್ರಹಿಸಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡಿದ್ದರು. ಆಗ ಶಿಕ್ಷಣ ಸಚಿವರು ರಾಜೀನಾಮೆ ಕೊಟ್ಟಿದ್ದರೇ? ಎಂದು ಖಾರವಾಗಿ ಪ್ರಶ್ನಿಸಿದೆ.
ನೀಟ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ರಾಜಕೀಯ
ಈಗ NEET ವಿಚಾರವಾಗಿ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಪ್ರಚೋದನೆ ನೀಡುವ ಮೂಲಕ ವಾಮಮಾರ್ಗದಲ್ಲಿ ಕಾಂಗ್ರೆಸ್ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿಯನ್ನು ಜೆಡಿಎಸ್ ವಾಗ್ದಾಳಿ ನಡೆಸಿದೆ. ಜೊತೆಗೆ ನಿಮ್ಮ ಕಾಲದಲ್ಲಿ ನಡೆದ ಅಕ್ರಮಗಳು ಇಲ್ಲಿವೆ ನೋಡಿ ಎಂದು ವಿವರಿಸಿದ್ದಾರೆ.
* ವಾಲ್ಮೀಕಿ ಹಗರಣ
* SCSP/TSP ಹಣ ದುರ್ಬಳಕೆ
* ಕೆಪಿಎಎಸ್‌ಸಿ (KPSC) ಹಗರಣ
* ಗೃಹಲಕ್ಷ್ಮಿ (5000 ಕೋಟಿ ) ಹಗರಣ ನಡೆದಿವೆ. ಹೀಗೆ ಸಾಲು ಸಾಲು ಹಗರಣಗಳಾದಾಗ ಬಾಯಿ ಮುಚ್ಚಿಕೊಳ್ಳುವ ಕಾಂಗ್ರೆಸ್ ನಾಯಕರಿಗೆ, ಈಗ ಮಾತನಾಡಲು ಯಾವ ನೈತಿಕತೆ ಇದೆಯೇ?
ಕಾಂಗ್ರೆಸ್ ಸರ್ಕಾರದಿಂದಲೂ ಪ್ರತಿಭಟನಾಕಾರರಿಗೆ ಲಾಠಿ ಏಟು
ಧಾರವಾಡದಲ್ಲಿ ಉದ್ಯೋಗ ನೇಮಕಾತಿಗಾಗಿ ಹೋರಾಡಿದ ವಿದ್ಯಾರ್ಥಿಗಳ ಮೇಲೆ, ನರಗುಂದದಲ್ಲಿ ಕಬ್ಬು ಬೆಳೆಗಾರರ ಮೇಲೆ, ಬಿಡದಿಯಲ್ಲಿ ಭೂಸ್ವಾಧೀನ ವಿರೋಧಿಸುತ್ತಿರುವ ರೈತರ ಮೇಲೆ ಲಾಠಿ ಏಟು ಕೊಟ್ಟ ಜನವಿರೋಧಿ ಸರ್ಕಾರ ನಿಮ್ಮದು. ದಲಿತರ ಮನೆಗೆ ಬೆಂಕಿ ಬಿದ್ದಾಗ, ಹುಬ್ಬಳ್ಳಿಯಲ್ಲಿ ಗಲಭೆಯಾದಾಗ ನಿಮ್ಮ ಬಾಯಿ ಏಕೆ ಮುಚ್ಚಿತ್ತು ಕಾಂಗೆಸ್ಸಿಗರೇ?.
ಕಾಂಗ್ರೆಸ್ ಸರ್ಕಾರ ಮತ್ತು ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ, ಬೂಟಾಟಿಕೆ ಹಾಗೂ ದ್ವಂದ್ವ ನೀತಿಯನ್ನು ರಾಜ್ಯದ ಯುವಜನತೆ ಗಮನಿಸುತ್ತಿದ್ದಾರೆ ಎಂದು ಜೆಡಿಎಸ್ ಎಚ್ಚರಿಕೆ ನೀಡಿದೆ.
ನೀಟ್ ವಿದ್ಯಾರ್ಥಿಗಳು ಹಾಗೂ ಸಿಜೆಪಿ ತೀವ್ರ ಪ್ರತಿಭಟನೆ ಬೆನ್ನಲ್ಲೆ ಇತ್ತೀಚೆಗೆ ದೆಹಲಿ ಮೋದಿ ನಿವಾಸದ ಮುಂದೆ ರಾಜ್ಯ ಸಿಎಂ ಡಿಕೆ ಶಿವಕುಮಾರ್ ಅವರ ಪ್ರತಿಭಟನೆ ನಡೆಸಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದಲ್ಲೂ ಕಾಂಗ್ರೆಸ್ ಕಾರ್ಯಕರ್ತರು, ನಾಯಕರು ಧರಣಿ ನಡೆಸುತ್ತಿದ್ದಾರೆ. ಕೆಲವರು ರಾಜ್ಯದಲ್ಲಿನ ವಿದ್ಯಾರ್ಥಿಗಳಿಗೆ ಆದ ತೊಂದರೆ, ನೇಮಕಾತಿ ವಿಳಂಬ ಇನ್ನಿತರ ಸಮಸ್ಯೆಗಳ ಕುರಿತು ಇದೇ ರೀತಿ ಕಾಂಗ್ರೆಸ್ ಪ್ರತಿಕ್ರಿಯಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.


Click it and Unblock the Notifications
