ಬಾಡಿಗೆ ತಾಯಿಯೂ ಇಲ್ಲ, ಮಗುವೂ ಇಲ್ಲ, ಹೀಗೊಂದು ವಿಚಿತ್ರ ಘಟನೆ
ಬೆಂಗಳೂರು, ನವೆಂಬರ್ 8: ಬಾಡಿಗೆ ತಾಯಿಯ ಮೂಲಕ ಮಗು ಕೊಡುವುದಾಗಿ ವಂಚಿಸಿದ ಬೆಂಗಳೂರಿನ ಪ್ರತಿಷ್ಠಿತ ಐವಿಎಫ್ ಕೇಂದ್ರಕ್ಕೆ ಗ್ರಾಹಕ ನ್ಯಾಯಾಲಯ 3 ಲಕ್ಷ ರೂ ಪರಿಹಾರ ಸಹಿತ ಹಣ ವಾಪಸ್ ಮಾಡುವಂತೆ ಆದೇಶಿಸಿದೆ.
ವಿಚ್ಛೇದಿತರಾಗಿದ್ದ ಮೈಸೂರಿನ ಮಾರ್ಟಿನ್ ಸುಜಯ್ ಎಂಬುವವರು 2016 ರಲ್ಲಿ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನು ಓದಿ ಬೆಂಗಳೂರಿನ ಇಂದಿರಾ ನಗರದಲ್ಲಿರುವ ಡಾ.ರಮಾಸ್ ಫರ್ಟಿಲಿಟಿ ಐವಿಎಫ್ ಸೆಂಟರ್ ಗೆ ಭೇಟಿ ನೀಡಿದ್ದರು.
ಆ ವೇಳೆ ಬಾಡಿಗೆ ತಾಯಿಯ ಮೂಲಕ ಒಂದು ಮಗುವಿಗೆ 7 ಲಕ್ಷ ರೂಪಾಯಿ, ಅವಳಿ ಮಕ್ಕಳಿಗೆ 8.5 ಲಕ್ಷ ರೂಪಾಯಿ ಶುಲ್ಕ ಭರಿಸಲು ತಿಳಿಸಲಾಗಿತ್ತು. ಮುಂಗಡವಾಗಿ ಸುಜಯ್ 2016ರ ಆಗಸ್ಟ್ 19ರಂದು2.50 ಲಕ್ಷ ರೂಪಾಯಿ ಪಾವತಿಸಿದ್ದರು.

ಆದರೆ ಸುಜಯ್ ಗೆ ಬಾಡಿಗೆ ತಾಯಿ ಯಾರು ಎಂಬುದನ್ನು ದಿನಗಳೆದರೂ ವೈದ್ಯರು ಭೇಟಿ ಮಾಡಿಸಲಿಲ್ಲ. ಅದಾದ ಸುಮಾರು ಎಂಟು ತಿಂಗಳ ನಂತರ 2017ರ ಏಪ್ರಿಲ್ 25ರಂದು ಸುಜಯ್ ಅವರಿಗೆ ಮತ್ತೆ 2.50 ಲಕ್ಷ ರೂಪಾಯಿ ಪಾವತಿಸಲು ಸೂಚಿಸಿದ ವೈದ್ಯರು, ಇನ್ನೇನು ಬಾಡಿಗೆ ತಾಯಿ ಬರುತ್ತಿದ್ದಾರೆ. ಟ್ರಾಫಿಕ್ ನಲ್ಲಿ ಸಿಲುಕಿದ್ದಾರೆ ಎಂದು ತಿಳಿಸಿದ್ದರು.
ಕೊನೆಗೆ ಬಾಡಿಗೆ ತಾಯಿ ಅಪಘಾತಕ್ಕೀಡಾಗಿದ್ದಾರೆ ಎಂದು ತಿಳಿಸಿದ ವೈದ್ಯರು, ಮತ್ತೊಬ್ಬ ಬಾಡಿಗೆ ತಾಯಿ ಹುಡುಕುವ ಭರವಸೆ ನೀಡಿದರು. ಆಗ ಸಂಶಯಗೊಂಡ ಸುಜಯ್ ಮತ್ತು ಪಾಲಕರು ಹಣ ವಾಪಸ್ ಕೊಡುವಂತೆ ಕೋರಿದರು. ಆಗ ತಂದೆ ಒಬ್ಬರೇ ಇದ್ದರೆ ಮಗು ಕೊಡಲು ಆಗುವುದಿಲ್ಲ ಎಂದು ಕಾನೂನು ತೊಡಕಿನ ನೆಪ ಹೇಳಿದ ಕೇಂದ್ರ ಹಣ ವಾಪಸ್ ಕೊಡಲಿಲ್ಲ. ಆಗ ಸುಜಯ್ ಗ್ರಾಹಕ ನ್ಯಾಯಾಲಯದ ಮೊರೆ ಹೋದರು.
ಅಂತಿಮವಾಗಿ ವಿಚಾರಣೆ ನಡೆಸಿದ ಗ್ರಾಹಕ ನ್ಯಾಯಾಲಯ 4.75 ಲಕ್ಷ ಹಣವನ್ನು ಶೇ.10 ರಷ್ಡು ಬಡ್ಡಿಯ ಸಮೇತ ಹಾಗೂ 3 ಲಕ್ಷ ರೂಪಾಯಿ ಪರಿಹಾರವನ್ನು ಆರು ವಾರಗಳಲ್ಲಿ ಪಾವತಿಸಲು ಆದೇಶ ನೀಡಿದೆ.












Click it and Unblock the Notifications