IPL 2023: ಬೆಂಗಳೂರು ನಮ್ಮ ಮೆಟ್ರೋ ರೈಲಿನ ಸಮಯ ತಡರಾತ್ರಿ ತನಕ ವಿಸ್ತರಣೆ, ಮೆಟ್ರೋ ಸಮಯ, ಟಿಕೆಟ್ ಬೆಲೆ ತಿಳಿಯಿರಿ
ಬೆಂಗಳೂರು, ಮಾರ್ಚ್ 31: ಏಪ್ರಿಲ್ 1ರಿಂದ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಪಂದ್ಯಾವಳಿ ಆರಂಭಗೊಳ್ಳಲಿದ್ದು, ಬೆಂಗಳೂರು ಕ್ರಿಕೆಟ್ ಅಭಿಮಾನಿಗಳಿಗೆ 'ನಮ್ಮ ಮೆಟ್ರೋ' ಖುಷಿ ಸುದ್ದಿಯೊಂದನ್ನು ನೀಡಿದೆ.
ದೇಶದಲ್ಲಿ ಇಂಡಿಯನ್ ಪ್ರಿಮಿಯರ್ ಲೀಗ್ ( ಐಪಿಎಲ್) ಇದೇ ಶನಿವಾರದಿಂದ (ಏಪ್ರಿಲ್ 1) ಶುರುವಾಗಲಿವೆ. ಇದರಲ್ಲಿ ಒಂದಷ್ಟು ಪಂದ್ಯಾವಳಿಗಳು ಬೆಂಗಳೂರಿನಲ್ಲೂ ರಾತ್ರಿ ವೇಳೆ ಜರುಗಲಿವೆ. ಹೀಗಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಬೆಂಗಳೂರಿನಲ್ಲಿ ರಾತ್ರಿ ಪಂದ್ಯಾವಳಿ ವೀಕ್ಷಣೆಗೆ ಬರುವವರಿಗೆ ಅನುಕೂಲಕ್ಕಾಗಿ ಮೆಟ್ರೋ ರೈಲು ಸಂಚಾರವನ್ನು ತಡರಾತ್ರಿ 1.30 ಗಂಟೆವರೆಗೂ ವಿಸ್ತರಣೆ ಮಾಡಿ ಆದೇಶ ಹೊರಡಿದೆ.

ಪ್ರತಿ ವರ್ಷದಂತೆ ಈ ವರ್ಷವು ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ IPL ಪಂದ್ಯಾವಳಿಗಳು ನಡೆಯಲಿವೆ. ಪಂದ್ಯಾವಳಿ ನಡೆಯುವ ನಿಗದಿತ ದಿನದಂದು ನಮ್ಮ ಮೆಟ್ರೋ ರೈಲುಗಳ ಸೇವೆಯನ್ನು ರಾತ್ರಿ 1.30ವರೆಗೂ ಪ್ರಯಾಣಿಕರಿಗೆ ಲಭ್ಯವಿರಲಿದೆ. ಇದರ ಸದುಪಯೋಗ ಮಾಡಿಕೊಳ್ಳುವಂತೆ ನಮ್ಮ ಮೆಟ್ರೋ ಮನವಿ ಮಾಡಿದೆ.
ಪಂದ್ಯಾವಳಿ ನಡೆಯುವ ದಿವಸದಂದು ರೈಲುಗಳು ಕೆಂಪೇಗೌಡ ನಿಲ್ದಾಣದಿಂದ ( ಮೆಜೆಸ್ಟಿಕ್) ನಾಲ್ಕು ದಿಕ್ಕುಗಳಲ್ಲಿ ರಾತ್ರಿ 1.30ಕ್ಕೆ ಕೊನೆಯದಾಗಿ ಹೊರಡುತ್ತವೆ. ಇದರಿಂದ ನಗರದ ವಿವಿಧೆಡೆಯಿಂದ ಬರುವ ಕ್ರಿಕೆಟ್ ಪ್ರಿಯರಿಗೆ ಪಂದ್ಯ ಮುಗಿಸಿ ನಂತರ ಮನೆಗೆ ತೆರಳಲು ಸಾಧ್ಯವಾಗುತ್ತದೆ. ಈ ಉದ್ದೇಶದಿಂದಲೇ ರಾತ್ರಿ 11ಗಂಟೆಗೆ ಕೊನೆಗೊಳ್ಳುತ್ತಿದ್ದ ನಮ್ಮ ಮೆಟ್ರೋ ರೈಲು ಸಂಚಾರ ಸೇವೆಯನ್ನು ತಡರಾತ್ರಿವರೆಗೂ ವಿಸ್ತರಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್ (BMRCL) ನಿಗಮ ತಿಳಿಸಿದೆ.
ಕ್ರಿಕೆಟ್ ಪಂದ್ಯಾವಳಿ-ರೈಲು ವಿಸ್ತರಣೆ ದಿನದ ಮಾಹಿತಿ
ಭಾನುವಾರ ಏಪ್ರಿಲ್ 2, ಏಪ್ರಿಲ್ 10, 17 ಮತ್ತು 26 ರಂದು ಹಾಗೂ ಕೊನೆಯದಾಗಿ ಮೇ 21ರಂದು ರಾತ್ರಿ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗಳು ಜರುಗಲಿವೆ. ಭಾರತೀಯ ತಂಡದ ಸದಸ್ಯರು ದೇಶ, ವಿದೇಶಗಳ ವಿವಿಧ ಖ್ಯಾತ ಕ್ರೀಡಾಪಟುಗಳು ಇದರಲ್ಲಿ ಪಾಲ್ಗೊಳ್ಳುತ್ತಾರೆ.

ಅವರೆಲ್ಲರನ್ನು ಕಣ್ತುಂಬಿಕೊಳ್ಳಲು ಕರ್ನಾಟಕದ ವಿವಿಧ ಜಿಲ್ಲೆ, ರಾಜ್ಯ- ಹೊರ ರಾಜ್ಯಗಳಿಂದಲೂ ಬೆಂಗಳೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುತ್ತಾರೆ. ಹೀಗಾಗಿ ಈ ಮೇಲಿನ ಕ್ರಿಕೆಟ್ ಪಂದ್ಯಾವಳಿ ನಡೆಯುವ ದಿನ ಮಧ್ಯರಾತ್ರಿ 1.30ರ ತನಕ ನಮ್ಮ ಮೆಟ್ರೋ ರೈಲು ಸೇವೆ ಇರಲಿದೆ ಎಂದು ತಿಳಿಸಲಾಗಿದೆ.
ನಾಲ್ಕ ದಿಕ್ಕಿನಿಂದ ರಾತ್ರಿ 1ಕ್ಕೆ ಕೊನೆ ರೈಲು
ಬೈಯಪ್ಪನಹಳ್ಳಿಯಿಂದ ಕೆಂಗೇರಿ ಹಾಗೂ ನಾಗಸಂದ್ರದಿಂದ ರೇಷ್ಮೇ ಸಂಸ್ಥೆವರೆಗೆ ಈ ನಾಲ್ಕು ಕೊನೆಯ ನಿಲ್ದಾಣಗಳಿಂದ ರಾತ್ರಿ 1 ಗಂಟೆಗೆ ಕೊನೆಯ ರೈಲು ನಗರದತ್ತ ಹೊರಡಲಿದೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ ( ಮಜೆಸ್ಟಿಕ್) ಕೊನೆಯ ವಾಣಿಜ್ಯ ರೈಲು ಸೇವೆಯು ಎಲ್ಲಾ ನಾಲ್ಕು ದಿಕ್ಕುಗಳಿಗೆ ರಾತ್ರಿ 1.30 ಹೊರಡಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ವಿಶೇಷ ಸಂದರ್ಭಗಳಲ್ಲಿ ಪೇಪರ್ ಟಿಕೆಟ್ ವಿತರಿಸುವಂತೆ ಐಪಿಎಲ್ ಗಾಗಿಯು ನಿಗಮ ಪೇಪರ್ ಟಿಕೆಟ್ ನೀಡುತ್ತಿದೆ.
ಯಾವುದೇ ಮೆಟ್ರೋ ರೈಲು ನಿಲ್ದಾಣದಿಂದಲೂ ಸಹ ಪ್ರಮಾಣಿಕರು ಟೋಕನ್, ಕ್ಯೂಆರ್ ಟಿಕೆಟ್ ಮತ್ತು ಸ್ಮಾರ್ಟ್ ಕಾರ್ಡ್ ಬಳಸಿ ಪಂದ್ಯಾವಳಿ ಸ್ಥಳವಾದ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಬರಬಹುದು.
ನಿಲ್ದಾಣಗಳಿಂದ ಪ್ರಯಾಣಿಕರು ತ್ವರಿತವಾಗಿ ಪ್ರಯಾಣಿಸಲು ಅನುಕೂಲವಾಗುವಂತೆ ರಿಟರ್ನ್ ಜರ್ನಿ ಪೇಪರ್ ಟಿಕೆಟ್ ಗಳನ್ನು ಮಧ್ಯಾಹ್ನ 3.00 ಗಂಟೆಯಿಂದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ವಿತರಿಸಲಾಗುವುದು. ಈ ಪೇಪರ್ ಟಿಕೆಟ್ ವಿತರಣೆಯಿಂದ ಈ ಎರಡು ಮೆಟ್ರೋ ನಿಲ್ದಾಣದಲ್ಲಿ ಜನದಟ್ಟಣೆ ನಿಯಂತ್ರಣಕ್ಕೆ ಬರಲಿದೆ ಎನ್ನಲಾಗಿದೆ.
ಪೇಪರ್ ಟಿಕೆಟ್ ದರ ಎಷ್ಟು?
ಮೆಟ್ರೋ ನಿಲ್ದಾಣಗಳಲ್ಲಿ ಸಿಗುವ 50 ರೂ. ದರದ ಪೇಪರ್ ಟಿಕೆಟ್‌ಗಳನ್ನು ನೀಡಲಾಗುವುದು. ಆ ಟಿಕೆಟ್ ಬಳಸಿ ಕಬ್ಬನ್ ಪಾರ್ಕ್ ಹಾಗೂ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣಗಳಿಂದ ಪ್ರಯಾಣಿಕರು ನಾಲ್ಕು ದಿಕ್ಕುಗಳ ಕೊನೆಯ ಮೆಟ್ರೋ ನಿಲ್ದಾಣ ತಲುಪಬಹುದಾಗಿದೆ. ರಾತ್ರಿ 8 ಗಂಟೆ ನಂತರ ಈ ಪೇಪರ್ ಟಿಕೆಟ್‌ಗಳನ್ನು ಮಾನ್ಯ ಮಾಡಲಾಗುವುದಿಲ್ಲ. ಆ ಸಂದರ್ಭದಲ್ಲಿ ಈ ಪೇಪರ್ ಟಿಕೆಟ್ ಜೊತೆಗೆ ಸ್ಮಾರ್ಟ್ ಕಾರ್ಡ್, ಕ್ಯೂಆರ್ ಟಿಕೆಟ್ ಸಹಿತ ಪ್ರಯಾಣಿಕರು ಸಂಚಾರ ಮಾಡಬಹುದಾಗಿದೆ.
ಈ ಪೇಪರ್ ಟಿಕೆಟ್ ಸೇವೆಯನ್ನು ಇತ್ತೀಚೆಗೆ ಪ್ರಧಾನಮಂತ್ರಿಗಳಿಂದ ಉದ್ಘಾಟನೆಗೊಂಡ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೃಷ್ಣರಾಜಪುರ ನಡುವಿನ ರೈಲು ಸೇವೆಗಳನ್ನು ವಿಸ್ತರಿಸಲಾಗಿರುವುದಿಲ್ಲ ಎಂದು ನಮ್ಮ ಮೆಟ್ರೋ ತಿಳಿಸಿದೆ.












Click it and Unblock the Notifications