INS Malvan: ನೌಕಾಪಡೆಗೆ ಸೇರ್ಪಡೆಯಾದ ಭಾರತದ ನೂತನ ಸಬ್‌ಮರೀನ್ ಬೇಟೆಗಾರ 'ಐಎನ್ಎಸ್ ಮಾಲ್ವನ್'

ಕರಾವಳಿ ಪ್ರದೇಶದ ಸಮುದ್ರ ನೀರಿನಲ್ಲೂ ಶತ್ರುಗಳ ಸಬ್‌ಮರೀನ್‌ಗಳನ್ನು ಬೇಟೆಯಾಡಬಲ್ಲ ಆಧುನಿಕ ಯುದ್ಧ ನೌಕೆಯಾದ ಐಎನ್ಎಸ್ ಮಾಲ್ವನ್ ಸೇರ್ಪಡೆಯೊಡನೆ ಭಾರತೀಯ ನೌಕಾ ಸೇನೆ ಇನ್ನಷ್ಟು ಶಕ್ತಿಶಾಲಿಯಾಗುತ್ತಿದೆ. ಇದು ಮಾಹೆ ವರ್ಗದ ಆ್ಯಂಟಿ ಸಬ್‌ಮರೀನ್ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್ (ಎಎಸ್‌ಡಬ್ಲ್ಯು- ಎಸ್‌ಡಬ್ಲ್ಯುಸಿ) ವಿಭಾಗದ ಎರಡನೇ ಯುದ್ಧ ನೌಕೆಯಾಗಿದ್ದು, ಕೊಚ್ಚಿಯಲ್ಲಿರುವ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ವಿನ್ಯಾಸಗೊಳಿಸಿ ನಿರ್ಮಿಸಿದೆ. ಈ ಯುದ್ಧ ನೌಕೆಯನ್ನು ಮಾರ್ಚ್ 31, 2026ರಂದು ನೌಕಾಪಡೆಗೆ ಹಸ್ತಾಂತರಿಸಲಾಯಿತು.

ಮಾಹೆ ವರ್ಗದ ನೌಕೆಗಳನ್ನು ಕರಾವಳಿ ಪ್ರದೇಶದ ಬಳಿಯ ಕಡಿಮೆ ಆಳದ ಸಮುದ್ರದಲ್ಲಿ ಕಾರ್ಯಾಚರಿಸಲು ವಿಶೇಷವಾಗಿ ನಿರ್ಮಿಸಲಾಗಿದೆ. ಶತ್ರು ಸಬ್‌ಮರೀನ್‌ಗಳನ್ನು ಗುರುತಿಸಿ ನಾಶಪಡಿಸುವುದು, ಅಪಾಯಕಾರಿ ನೌಕಾ ಮೈನ್‌ಗಳನ್ನು ತೆಗೆದು ಹಾಕುವುದು, ಕರಾವಳಿ ಸುರಕ್ಷತೆ ಮತ್ತು ಗಸ್ತು ಕಾರ್ಯಾಚರಣೆಯಂತಹ ಕಡಿಮೆ ತೀವ್ರತೆಯ ಸಮುದ್ರ ಕಾರ್ಯಾಚರಣೆಗಳನ್ನು (ಲೋ ಇಂಟೆನ್ಸಿಟಿ ಮಾರಿಟೈಮ್ ಆಪರೇಶನ್ಸ್ - ಎಲ್ಐಎಂಒ) ನಡೆಸುವುದು ಇವುಗಳ ಮುಖ್ಯ ಗುರಿಯಾಗಿದೆ. ಸರಳವಾಗಿ ಹೇಳುವುದಾದರೆ, ಈ ನೌಕೆಗಳು ಭಾರತದ ಕರಾವಳಿ ಪ್ರದೇಶಗಳನ್ನು ರಕ್ಷಿಸುವ ಸೂಕ್ಷ್ಮ ಕಾವಲುಗಾರರಾಗಿರಲಿವೆ.

INS Malvan

ಐಎನ್ಎಸ್ ಮಾಲ್ವನ್ ವೈಶಿಷ್ಟ್ಯ

ಐಎನ್ಎಸ್ ಮಾಲ್ವನ್ ಅಂದಾಜು 80 ಮೀಟರ್ ಉದ್ದವಿದ್ದು, ಅಂದಾಜು 1,100 ಟನ್‌ಗಳಷ್ಟು ತೂಕ ಹೊಂದಿದೆ. ಇದು ಆಧುನಿಕ ಸೆನ್ಸರ್‌ಗಳು, ಟಾರ್ಪಿಡೋಗಳು, ಬಹು ಉದ್ದೇಶದ ಸಬ್‌ಮರೀನ್ ವಿರೋಧಿ ರಾಕೆಟ್‌ಗಳನ್ನು ಹೊಂದಿದ್ದು, ನೀರಿನಾಳದಲ್ಲಿ ಬಚ್ಚಿಟ್ಟುಕೊಂಡಿರುವ ಶತ್ರು ಸಬ್‌ಮರೀನ್‌ಗಳನ್ನು ಹುಡುಕಿ, ದಾಳಿ ನಡೆಸಬಲ್ಲು. ಯುದ್ಧ ನೌಕೆಗೆ ಮೂರು ಮರೀನ್ ಡೀಸೆಲ್ ಇಂಜಿನ್‌ಗಳು ಶಕ್ತಿ ನೀಡುತ್ತಿದ್ದು, ಅವು ತಲಾ 6 ಮೆಗಾ ವ್ಯಾಟ್ ಶಕ್ತಿ ಉತ್ಪಾದಿಸುತ್ತವೆ. ಇವುಗಳನ್ನು ಒಂದು ವಿಶೇಷ ವಾಟರ್ ಜೆಟ್ ಸಿಸ್ಟಮ್‌ಗೆ ಅಳವಡಿಸಲಾಗಿದೆ. ಈ ಮೂಲಕ ಐಎನ್ಎಸ್ ಮಾಲ್ವನ್ ವಾಟರ್ ಜೆಟ್ ಪ್ರೊಪಲ್ಷನ್ ಹೊಂದಿರುವ ಭಾರತೀಯ ನೌಕಾಪಡೆಯ ಅತಿದೊಡ್ಡ ಯುದ್ಧ ನೌಕೆ ಎನಿಸಿದೆ.

ವಾಟರ್ ಜೆಟ್ ಪ್ರೊಪಲ್ಷನ್ ಎನ್ನುವುದು ಈ ನೌಕೆಯ ಮಹತ್ವದ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಅಂದರೆ, ಸಾಂಪ್ರದಾಯಿಕ ಪ್ರೊಪೆಲ್ಲರ್‌ಗಳನ್ನು ಬಳಸುವ ಬದಲು, ಈ ನೌಕೆ ಆಳದಿಂದ ಸಮುದ್ರದ ನೀರನ್ನು ಹೀರಿಕೊಂಡು, ಅವುಗಳನ್ನು ತನ್ನ ನಳಿಕೆಗಳ ಮೂಲಕ ಅತ್ಯಂತ ವೇಗವಾಗಿ ಹೊರ ಚಿಮ್ಮಿಸುತ್ತದೆ. ಈ ಮೂಲಕ ನೌಕೆ ಮುಂದಕ್ಕೆ ಸಾಗುತ್ತದೆ. ಈ ವ್ಯವಸ್ಥೆ ಯುದ್ಧ ನೌಕೆಗೆ ಹೆಚ್ಚಿನ ನಿಯಂತ್ರಣ, ಹೆಚ್ಚಿನ ವೇಗವರ್ಧನೆ, ಮತ್ತು ಕಡಿಮೆ ಆಳದ ಸಮುದ್ರದಲ್ಲೂ ಹೆಚ್ಚಿನ ಸಾಮರ್ಥ್ಯ ಒದಗಿಸುತ್ತದೆ. ಇದು ನೀರಿನಾಳದಲ್ಲಿ ಕಡಿಮೆ ಸದ್ದು ಉಂಟು ಮಾಡುವುದರಿಂದ ನೀರಿನಾಳದಲ್ಲಿ ಬಚ್ಚಿಟ್ಟುಕೊಂಡ ಅಡಚಣೆಗಳಿಂದ ಉಂಟಾಗುವ ಅಪಾಯವನ್ನು ಕಡಿಮೆಗೊಳಿಸಿ, ಸಬ್‌ಮರೀನ್ ಬೇಟೆ ಕಾರ್ಯಾಚರಣೆಗಳಲ್ಲಿ ಹೆಚ್ಚು ಪರಿಣಾಮಕಾರಿ ಎನಿಸುತ್ತದೆ.

14 ದಿನ ಸಮುದ್ರ ಆಳದಲ್ಲಿ ಕೆಲಸ ಸಾಮರ್ಥ್ಯ

ಈ ನೌಕೆ 25 ನಾಟ್‌ಗಳ ಗರಿಷ್ಠ ವೇಗವನ್ನು (ಪ್ರತಿ ಗಂಟೆಗೆ 45 ಕಿಲೋಮೀಟರ್) ತಲುಪಬಲ್ಲದು. ಇದು 14 ನಾಟ್‌ಗಳ ವೇಗದಲ್ಲಿ (ಪ್ರತಿ ಗಂಟೆಗೆ 25 ಕಿಲೋ ಮೀಟರ್) 1,800 ನಾಟಿಕಲ್ ಮೈಲಿ (3,300 ಕಿಲೋ ಮೀಟರ್) ತಲುಪಬಲ್ಲದಾಗಿದ್ದು, ಇದು ನಿರಂತರ 14 ದಿನಗಳ ಕಾಲ ಯಾವುದೇ ಬಾಹ್ಯ ಬೆಂಬಲವಿಲ್ಲದೆ ಸಮುದ್ರದಲ್ಲೇ ಇರಬಲ್ಲದು.

ಇನ್ನೊಂದು ಹೆಮ್ಮೆಯ ವಿಚಾರವೆಂದರೆ, ಐಎನ್ಎಸ್ ಮಾಲ್ವನ್ ಬಹುತೇಕ ಶೇ. 80ಕ್ಕೂ ಹೆಚ್ಚು ಭಾರತೀಯ ಬಿಡಿ ಭಾಗಗಳನ್ನೇ ಹೊಂದಿದೆ. ಇದು ಯುದ್ಧ ನೌಕೆಗಳ ವಿನ್ಯಾಸ, ಮತ್ತು ನಿರ್ಮಾಣಗಳನ್ನು ದೇಶದೊಳಗೇ ನಡೆಸಲು ನೆರವಾಗಿ, ಭಾರತದ ಮಹತ್ವಾಕಾಂಕ್ಷಿ ಆತ್ಮನಿರ್ಭರ ಭಾರತ (ಸ್ವಾವಲಂಬಿ ಭಾರತ) ಯೋಜನೆಗೆ ಬಲವಾದ ಬೆಂಬಲ ಒದಗಿಸುತ್ತದೆ. ಈ ಮೂಲಕ ವಿದೇಶೀ ಪೂರೈಕೆದಾರರ ಮೇಲಿನ ಅವಲಂಬನೆಯೂ ಕಡಿಮೆಯಾಗುತ್ತದೆ.

ಶತ್ರು ಸಬ್‌ಮರೀನ್ ಗುರುತಿಸಿ ಕಾರ್ಯ

ಹಿಂದಿನ ಅಭಯ್ ವರ್ಗದ ಕಾರ್ವೆಟ್‌ಗಳಿಗೆ ಪ್ರತಿಯಾಗಿ ಈ ಯುದ್ಧ ನೌಕೆಗಳನ್ನು ಪರಿಚಯಿಸಲಾಗುತ್ತಿದೆ. ಅಭಯ್ ವರ್ಗದ ಕಾರ್ವೆಟ್‌ಗಳು ಹಿಂದೆ ಸಮುದ್ರದಲ್ಲಿ ಮತ್ತು ಕರಾವಳಿ ಪ್ರದೇಶಗಳ ಬಳಿಯಲ್ಲಿ ಶತ್ರು ಸಬ್‌ಮರೀನ್‌ಗಳನ್ನು ಗುರುತಿಸಿ, ಅವುಗಳ ವಿರುದ್ಧ ಸೆಣಸಲು ಬಳಕೆಯಾಗುತ್ತಿದ್ದವು.

ಭಾರತೀಯ ನೌಕಾಪಡೆ ಐಎನ್ಎಸ್ ಮಾಲ್ವನ್ ಯುದ್ಧ ನೌಕೆಯನ್ನು ಜುಲೈ 22ರಂದು ಕರ್ನಾಟಕದ ಕಾರವಾರ ನೌಕಾ ನೆಲೆಯಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಿತು. ಈ ಕಾರ್ಯಕ್ರಮ ಚೀಫ್ ಆಫ್ ಏರ್ ಸ್ಟಾಫ್ ಆದ ಏರ್ ಚೀಫ್ ಮಾರ್ಷಲ್ ಎ ಪಿ ಸಿಂಗ್ ಅವರ ನೇತೃತ್ವದಲ್ಲಿ, ವೆಸ್ಟರ್ನ್ ನೇವಲ್ ಕಮಾಂಡಿನ ಫ್ಲಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್ ಆದ ವೈಸ್ ಅಡ್ಮಿರಲ್ ಸಂಜಯ್ ವಾತ್ಸಾಯನ್ ಅವರ ಉಪಸ್ಥಿತಿಯಲ್ಲಿ ನೆರವೇರಿತು.

ಈ ನೂತನ ಯುದ್ಧ ನೌಕೆಯ ಸೇರ್ಪಡೆಯೊಡನೆ, ಭಾರತೀಯ ನೌಕಾ ಸೇನೆ ದೇಶದ ಸಮುದ್ರವನ್ನು ಕಾಯುವತ್ತ ಇನ್ನೊಂದು ಆತ್ಮವಿಶ್ವಾಸದ ಹೆಜ್ಜೆಯನ್ನು ಇರಿಸಿದೆ.

ಗಿರೀಶ್ ಲಿಂಗಣ್ಣ ಅವರ ಹಿನ್ನೆಲೆ

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: [email protected])

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+