Bengaluru Airport: ಇಂಡಿಗೋ ಹಬ್ ಆಗುತ್ತಿದೆ ಬೆಂಗಳೂರು ಏರ್‌ಪೋರ್ಟ್
ಬೆಂಗಳೂರು, ಮಾರ್ಚ್ 10: ದೇಶದ ಅತಿ ಹೆಚ್ಚು ಪ್ರಯಾಣಿಕ ದಟ್ಟಣೆಯ ವಿಮಾನ ನಿಲ್ದಾಣಗಳಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಸಹ ಒಂದು. ಪ್ರತಿದಿನ 650ಕ್ಕೂ ಅಧಿಕ ವಿಮಾನಗಳು ಬೆಂಗಳೂರು ಏರ್‌ಪೋರ್ಟ್ ಮೂಲಕ ಸಂಚಾರ ನಡೆಸುತ್ತಿವೆ. ಇವುಗಳಲ್ಲಿ ವಿವಿಧ ವಿಮಾನಯಾನ ಕಂಪನಿಗಳ ವಿಮಾನಗಳು ಸೇರಿವೆ. ಆದರೆ ಇಂಡಿಗೋ ನಿಧಾನವಾಗಿ ಬೆಂಗಳೂರು ನಗರವನ್ನು ತನ್ನ ಹಬ್ ಆಗಿ ಪರಿವರ್ತನೆ ಮಾಡಿಕೊಳ್ಳುತ್ತಿದೆ.
ವಿಮಾನಯಾನ ಕಂಪನಿಗಳ ದರ ಸಮರಗಳ ನಡುವೆಯೇ ಇಂಡಿಗೋ ಬೆಂಗಳೂರು ನಗರದಿಂದ ವಿವಿಧ ದೇಶಿಯ ಮತ್ತು ಅಂತರಾಷ್ಟ್ರೀಯ ವಿಮಾನ ಸೇವೆಗಳನ್ನು ನೀಡುತ್ತಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಇಂಡಿಗೋ ಹಬ್ ಆಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಬೆಂಗಳೂರು ನಗರದಿಂದ ಸಂಚಾರ ನಡೆಸುವ ವಿಮಾನಗಳ ಸಂಖ್ಯೆಯೇ ಕಾರಣವಾಗಿದೆ.

ಭಾರತದಲ್ಲಿ ಬೆಂಗಳೂರು ಏರ್‌ಪೋರ್ಟ್ ಇಂಡಿಗೋದ 2ನೇ ಹಬ್ ಆಗಿದೆ. ಬೆಂಗಳೂರು ನಗರದಿಂದ ಇಂಡಿಗೋ 67 ದೇಶಿಯ ನಗರಗಳಿಗೆ ವಿಮಾನ ಸೇವೆಯನ್ನು ಹೊಂದಿದೆ. 13 ಅಂತರಾಷ್ಟ್ರೀಯ ನಗರಗಳಿಗೆ ವಿಮಾನ ಸೇವೆ ಇದೆ. ಈ ಮೂಲಕ ಬೆಂಗಳೂರು ಪ್ರಮುಖ ಟ್ರಾನ್ಸ್‌ಪೋರ್ಟ್ ಹಬ್ ಆಗಿದೆ.
ಎಲ್ಲೆಲ್ಲಿಗೆ ವಿಮಾನಗಳ ಸೇವೆ: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು ಮೂಲಕ ಇಂಡಿಗೋ ದುಬೈ, ಅಬುದಾಬಿ, ದೋಹಾ, ಬ್ಯಾಂಕಾಕ್, ಪುಕೆಟ್, ಕೌಲಾಲಂಪುರ, ಸಿಂಗಾಪುರ, ಕೊಲೊಂಬೊ, ಮಾರಿಷಸ್, ಬಾಲಿ ಸೇರಿದಂತೆ ವಿವಿಧ ನಗರಗಳಿಗೆ ವಿಮಾನ ಸೇವೆ ಇದೆ.
ಇಂಡಿಗೋದ 200 ವಿಮಾನಗಳು ಬೆಂಗಳೂರಿನಿಂದ ಪ್ರತಿನಿತ್ಯ ಹಾರಾಟ ನಡೆಸುತ್ತವೆ. ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಿ ಈ ವಿಮಾನಯಾನ ಸಂಸ್ಥೆ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ವಿಮಾನ ನಿಲ್ದಾಣವನ್ನು ಪ್ರಮುಖ ಹಬ್ ಆಗಿ ಪರಿವರ್ತನೆ ಮಾಡಿಕೊಂಡು, ಕಾರ್ಯಾಚರಣೆಯನ್ನು ಮುಂದುವರೆಸುತ್ತಿದೆ.
ಇಂಡಿಗೋ ವರ್ಜಿನ್ ಅಟ್ಲಾಂಟಿಕ್, ಬ್ರಿಟಿಷ್ ಏರ್‌ವೇಸ್, ಕೆಎಲ್‌ಎಮ್, ಮಲೇಷ್ಯಾ ಏರ್‌ವೇಸ್, ಏರ್ ಫ್ರಾನ್ಸ್, ಕತಾರ್ ಏರ್‌ವೇಸ್, ಜಪಾನ್ ಏರ್‌ವೇಸ್ ಮತ್ತು ಕ್ವಾಂಟಾಸ್ ಸೇರಿದಂತೆ ಹಲವಾರು ಪ್ರಮುಖ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೋಡ್‌ಶೇರ್ ಸಹಭಾಗಿತ್ವವನ್ನು ಹೊಂದಿದೆ. ಈ ಮೂಲಕ ಬೆಂಗಳೂರು ನಗರದಿಂದ ಜಾಗತಿಕ ಸಂಪರ್ಕವನ್ನು ಪ್ರಮುಖ ಸ್ಥಳಗಳಿಗೆ ವಿಸ್ತರಿಸಲು ಸಹಾಯಕವಾಗಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯು ಕೆಐಎಲ್ ಮೂಲಕ ತನ್ನ ಕಾರ್ಯಾಚರಣೆಗಳನ್ನು ಇತ್ತೀಚಿನ ವಿವಿಧ ಕಂಪನಿಗಳ ಸ್ಪರ್ಧಾತ್ಮಕ ಒತ್ತಡದ ನಡುವೆಯೂ ಮುಂದುವರಿಸುತ್ತಿದೆ. 102 ವಾರದ ಅಂತಾರಾಷ್ಟ್ರೀಯ ವಿಮಾನಗಳನ್ನು 13 ನಗರಗಳಿಗೆ ಸಂಪರ್ಕಿಸುತ್ತಿದೆ.
ಬೆಂಗಳೂರು ವಿಮಾನ ನಿಲ್ದಾಣ ದೇಶದ 3ನೇ ಬ್ಯುಸಿಯೆಸ್ಟ್ ವಿಮಾನ ನಿಲ್ದಾಣವಾಗಿದೆ. ಇಂಡಿಗೋ ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಿ ಶೇ 53ರಷ್ಟು ಪಾಲು ಹೊಂದಿದೆ. 12,588,898 ಸೀಟುಗಳನ್ನು ಇದು ಹೊಂದಿದೆ. ಇದಕ್ಕೂ ಮೊದಲು ಇದು ಶೇ 60ರಷ್ಟು ಪಾಲನ್ನು ಹೊಂದಿತ್ತು.
ಬೆಂಗಳೂರು ನಗರವನ್ನು ಆಕಾಶ್ ಏರ್, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಪ್ರಮುಖ ಕೇಂದ್ರವಾಗಿ ಮಾಡಿಕೊಂಡಿವೆ. ಹಲವಾರು ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳನ್ನು ಇಲ್ಲಿಂದ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿವೆ. ಈ ವಿಮಾನಯಾನ ಸಂಸ್ಥೆಗಳ ವಿಸ್ತರಣೆ ಇಂಡಿಗೋನ ಬೆಂಗಳೂರಿನ ಮೇಲೆ ತನ್ನ ಅಧಿಪತ್ಯ ಸ್ಥಾಪಿಸುವುದಕ್ಕೆ ಸ್ವಲ್ಪ ಪೈಪೋಟಿಯನ್ನು ನೀಡುತ್ತಿವೆ.












Click it and Unblock the Notifications