ಹೆಸರಘಟ್ಟದಲ್ಲಿ ಭಾರತದ ಮೊದಲ ‘ಕ್ವಾಂಟಮ್ ಸಿಟಿ’ ನಿರ್ಮಾಣ: ಸಿಎಂ ಡಿ ಕೆ ಶಿವಕುಮಾರ್

ಬೆಂಗಳೂರು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಭಾರತದ ಮೊಟ್ಟಮೊದಲ 'ಕ್ವಾಂಟಮ್ ಸಿಟಿ' ಬೆಂಗಳೂರಿನ ಹೆಸರಘಟ್ಟದಲ್ಲಿ ನಿರ್ಮಾಣವಾಗುತ್ತಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಿಸಿದ್ದಾರೆ. ಬೆಂಗಳೂರಿನ ಸೈನ್ಸ್ ಗ್ಯಾಲರಿಯಲ್ಲಿ ಆಯೋಜಿಸಲಾಗಿದ್ದ 'ಕ್ವಾಂಟಮ್' ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ತಂತ್ರಜ್ಞಾನ ಭವಿಷ್ಯ ಹಾಗೂ ಜಾಗತಿಕ ಪಾಲುದಾರಿಕೆಯ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಂಡರು.

'ಕರ್ನಾಟಕ ಕ್ವಾಂಟಮ್ ಮಿಷನ್' ಬೆಂಬಲದೊಂದಿಗೆ ಆರಂಭವಾಗುತ್ತಿರುವ ಈ ಯೋಜನೆ, ಸಂಶೋಧನಾ ಪ್ರಯೋಗಾಲಯಗಳು ಹಾಗೂ ಆಧುನಿಕ ತಂತ್ರಜ್ಞಾನದ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಹೆಸರಘಟ್ಟದಲ್ಲಿ ತಲೆ ಎತ್ತಲಿರುವ ಈ ಕ್ವಾಂಟಮ್ ಸಿಟಿಯು ನವೋದ್ಯಮಗಳು ಅಂದರೆ ಸ್ಟಾರ್ಟ್‌ಅಪ್‌ಗಳು, ವಿಜ್ಞಾನಿಗಳು, ವಿಶ್ವವಿದ್ಯಾಲಯಗಳು ಹಾಗೂ ಹೂಡಿಕೆದಾರರನ್ನು ಒಂದೇ ವೇದಿಕೆಯಲ್ಲಿ ತರುವ ಪರಿಸರ ವ್ಯವಸ್ಥೆಯನ್ನ ಸೃಷ್ಟಿಸಲಿದೆ. ಮುಂದಿನ ದಿನಗಳಲ್ಲಿ ಕಂಪ್ಯೂಟಿಂಗ್, ಸಂವಹನ, ಆರೋಗ್ಯ ಮತ್ತು ಆಧುನಿಕ ಉತ್ಪಾದನಾ ಕ್ಷೇತ್ರಗಳಲ್ಲಿ ಕ್ವಾಂಟಮ್ ವಿಜ್ಞಾನವು ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

India

ಬೆಂಗಳೂರು ಹಾಗೂ ಅಮೆರಿಕ ನಡುವಿನ ಬಾಂಧವ್ಯವನ್ನ ಮತ್ತಷ್ಟು ಬಲಪಡಿಸುವ ಅವಶ್ಯಕತೆಯನ್ನ ಸಿಎಂ ಒತ್ತಿ ಹೇಳಿದರು. ಪ್ರಸ್ತುತ ಬೆಂಗಳೂರಿನಲ್ಲಿ 1,000ಕ್ಕೂ ಹೆಚ್ಚು ಅಮೆರಿಕನ್ ಕಂಪನಿಗಳು ಕಾರ್ಯನಿರ್ವಹಿಸುತ್ತಿದ್ದು, 80 ಸಾವಿರ ಅಮೆರಿಕನ್ ನಾಗರಿಕರು ಹಾಗೂ 10 ಲಕ್ಷಕ್ಕೂ ಹೆಚ್ಚು ತಂತ್ರಜ್ಞಾನ ಉದ್ಯೋಗಿಗಳಿದ್ದಾರೆ. ಸಿಲಿಕಾನ್ ವ್ಯಾಲಿ, ಬಾಸ್ಟನ್, ಆಸ್ಟಿನ್ ಮತ್ತು ಪಿಟ್ಸ್‌ಬರ್ಗ್‌ನಂತಹ ಪ್ರಮುಖ ಅಮೆರಿಕದ ನಾವೀನ್ಯತಾ ಕೇಂದ್ರಗಳೊಂದಿಗೆ 'ಶೈಕ್ಷಣಿಕ ಮತ್ತು ಕೌಶಲ್ಯಾಭಿವೃದ್ಧಿ ಕಾರಿಡಾರ್‌'ಗಳನ್ನು ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ. ಈ ಜಾಗತಿಕ ಪಾಲುದಾರಿಕೆಗೆ ಅಮೆರಿಕದ ರಾಯಭಾರಿಗಳ ಸಹಕಾರ ಅತ್ಯಗತ್ಯ ಎಂದರು.

ಧಾರವಾಡ ಐಐಐಟಿಯಲ್ಲಿ ಕ್ವಾಂಟಮ್ ಕೃತಕ ಬುದ್ಧಿಮತ್ತೆ ಕೇಂದ್ರ

ತಂತ್ರಜ್ಞಾನ ಅಭಿವೃದ್ಧಿಯನ್ನು ಕೇವಲ ರಾಜಧಾನಿಗೆ ಸೀಮಿತಗೊಳಿಸದೆ, ಇತರ ಜಿಲ್ಲೆಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. 'ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ' (LEAP) ಅಡಿಯಲ್ಲಿ , ಧಾರವಾಡದ ಐಐಐಟಿ (IIIT) ಯಲ್ಲಿ 'ಕ್ವಾಂಟಮ್ ಕೃತಕ ಬುದ್ಧಿಮತ್ತೆ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ'ವನ್ನು ಸ್ಥಾಪಿಸಲಾಗಿದೆ. ಇದು ಬೆಂಗಳೂರಿನ ಹೊರಗೆ ಆರಂಭಗೊಂಡ ಮೊದಲ ಉನ್ನತ ಮಟ್ಟದ ಸಂಶೋಧನಾ ಕೇಂದ್ರವಾಗಿದ್ದು, ಉತ್ತರ ಕರ್ನಾಟಕದ ತಾಂತ್ರಿಕ ಪ್ರಗತಿಗೆ ಹೊಸ ದಿಕ್ಕು ನೀಡಲಿದೆ.

ತರಗತಿಯಿಂದ ಜಾಗತಿಕ ಮಾರುಕಟ್ಟೆಗೆ ಯುವ ಪ್ರತಿಭೆಗಳ ಸಂಪರ್ಕ

ರಾಜ್ಯದ ಯುವ ಜನತೆಗೆ ವಿಶ್ವದರ್ಜೆಯ ಕೌಶಲ್ಯಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಗುರಿಯಾಗಿದೆ. "ತರಗತಿಗಳನ್ನ ಪ್ರಯೋಗಾಲಯಗಳಿಗೆ , ಪ್ರಯೋಗಾಲಯಗಳನ್ನ ಸ್ಟಾರ್ಟ್‌ಅಪ್‌ಗಳಿಗೆ ಮತ್ತು ಸ್ಟಾರ್ಟ್‌ಅಪ್‌ಗಳನ್ನು ಜಾಗತಿಕ ಮಾರುಕಟ್ಟೆಗೆ ಜೋಡಿಸುವುದು ನಮ್ಮ ಉದ್ದೇಶ " ಎಂದು ಸಿಎಂ ಹೇಳಿದರು. ರಾಜ್ಯದ ವಿಶ್ವವಿದ್ಯಾಲಯಗಳು ಹಾಗೂ ಅಮೆರಿಕದ ಪ್ರಮುಖ ಸಂಶೋಧನಾ ಸಂಸ್ಥೆಗಳ ನಡುವೆ ಜಂಟಿ ಸಂಶೋಧನೆ ಮತ್ತು ಉದ್ಯಮಾಧಾರಿತ ಪಠ್ಯಕ್ರಮವನ್ನು ರೂಪಿಸಲಾಗುವುದು.

ಈ ಸಹಭಾಗಿತ್ವದಿಂದ ಕರ್ನಾಟಕದ ನವೋದ್ಯಮಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯ ಪ್ರವೇಶ, ಬಂಡವಾಳ ಮತ್ತು ಉನ್ನತ ಮಟ್ಟದ ಮಾರ್ಗದರ್ಶನ ಸಿಗಲಿದೆ. ಅದೇ ರೀತಿ ಅಮೆರಿಕದ ನಾವೀನ್ಯಕಾರರಿಗೂ ಕರ್ನಾಟಕದ ಪ್ರತಿಭಾ ಸಂಪತ್ತು ಮತ್ತು ಉತ್ಪಾದನಾ ಸಾಮರ್ಥ್ಯವನ್ನು ಬಳಸಿಕೊಳ್ಳಲು ಅವಕಾಶಗಳು ಲಭ್ಯವಾಗಲಿವೆ.

ಕಾರ್ಯಕ್ರಮದಲ್ಲಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್, ಐಟಿ & ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಸಾರಿಗೆ ಸಚಿವ ಬೈರತಿ ಸುರೇಶ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್-ಷಾ ಮತ್ತು ಸೈನ್ಸ್ ಗ್ಯಾಲರಿ ನಿರ್ದೇಶಕಿ ಡಾ. ಜಾಹ್ನವಿ ಫಾಲ್ಕಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+