ಐಎಂಎ ಹಗರಣ : ಎಸ್‌ಐಟಿ ವಿಚಾರಣೆಗೆ ರೋಷನ್ ಬೇಗ್ ಗೈರು
ಬೆಂಗಳೂರು, ಆಗಸ್ಟ್ 06 : ಮಾಜಿ ಸಚಿವ ರೋಷನ್ ಬೇಗ್ ಎಸ್‌ಐಟಿ ವಿಚಾರಣೆಗೆ ಗೈರಾಗಿದ್ದಾರೆ. ಐಎಂಎ ಹಗರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಆಗಸ್ಟ್ 13ರಂದು ಪುನಃ ಹಾಜರಾಗುವಂತೆ ನೋಟಿಸ್ ನೀಡಿದೆ.
ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ರೋಷನ್ ಬೇಗ್ ಅನಾರೋಗ್ಯದ ನೆಪ ಹೇಳಿ ಸೋಮವಾರ ಎಸ್‌ಐಟಿ ವಿಚಾರಣೆಗೆ ಗೈರಾಗಿದ್ದಾರೆ. ಐಎಂಎ ವ್ಯವಸ್ಥಾಪಕ ನಿರ್ದೇಶಕ ಮಹಮದ್ ಮನ್ಸೂರ್ ಖಾನ್‌ನಿಂದ ದೊಡ್ಡ ಮೊತ್ತದ ಹಣ ಪಡೆದ ಆರೋಪ ರೋಷನ್ ಬೇಗ್ ಮೇಲಿದೆ.
ರೋಷನ್ ಬೇಗ್ ಒಂದು ಬಾರಿ ಎಸ್‌ಐಟಿ ವಿಚಾರಣೆ ಎದುರಿಸಿದ್ದಾರೆ. ಸೋಮವಾರ ಪುನಃ ವಿಚಾರಣೆಗೆ ಆಗಮಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ, ವಿಚಾರಣೆಗೆ ಗೈರಾಗಿದ್ದಾರೆ. ಆಗಸ್ಟ್ 13ರಂದು ಆಗಮಿಸುವಂತೆ ಮತ್ತೊಂದು ನೋಟಿಸ್ ನೀಡಲಾಗಿದೆ.

ಐಎಂಎ ಹಗರಣದ ರೂವಾರಿ ಮಹಮದ್ ಮನ್ಸೂರ್ ಖಾನ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಬಂಧನಕ್ಕೆ ಮುನ್ನ ಬಿಡುಗಡೆ ಮಾಡಿದ್ದ ಆಡಿಯೋದಲ್ಲಿ ಆತ ರೋಷನ್ ಬೇಗ್ ವಿರುದ್ಧ ಆರೋಪಗಳನ್ನು ಮಾಡಿದ್ದ.
"ಶಿವಾಜಿನಗರ ಶಾಸಕರು ತಮ್ಮಿಂದ ಹಣ ಪಡೆದು ವಾಪಸ್ ಕೊಡದೆ ವಂಚಿಸಿದ್ದಾರೆ" ಎಂದು ಮನ್ಸೂರ್ ಖಾನ್ ಹೇಳಿಕೆ ನೀಡಿದ್ದ. ಈ ಆರೋಪದ ಬಗ್ಗೆ ರೋಷನ್ ಬೇಗ್ ವಿಚಾರಣೆಯನ್ನು ಎಸ್‌ಐಟಿ ನಡೆಸುತ್ತಿದೆ.












Click it and Unblock the Notifications