ಐಎಂಎ ಹಗರಣ: ಪೈಪ್‌ನಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ನಕಲಿ ಚಿನ್ನದ ಬಿಸ್ಕೆಟ್ ವಶ
ಬೆಂಗಳೂರು, ಆಗಸ್ಟ್ 07: ಐಎಂಎ ಹಗರಣದ ತನಿಖೆ ಚುರುಕಾಗುತ್ತಾ ಸಾಗಿದ್ದು, ಇಂದು ಎಸ್‌ಐಟಿಯು ಮನ್ಸೂರ್ ಖಾನ್‌ಗೆ ಸೇರಿ ಭಾರಿ ಮೊತ್ತದ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದೆ. ಆದರೆ ಇವು ನಕಲಿ ಚಿನ್ನದ ಬಿಸ್ಕತ್ತುಗಳಾಗಿವೆ.
ಮಾಜಿ ಸಚಿವ ಜಮೀರ್ ಅಹ್ಮದ್ ಅವರು ಐಎಂಎ ಮಾಲೀಕ ಮನ್ಸೂರ್ ಖಾನ್‌ಗೆ ಮಾರಿದ್ದ ಬಹುಮಹಡಿ ಕಟ್ಟಡದಲ್ಲಿ ಅಡಗಿಸಿಟ್ಟಿದ್ದ ಭಾರಿ ಪ್ರಮಾಣದ ನಕಲಿ ಚಿನ್ನದ ಬಿಸ್ಕೆಟ್ಟುಗಳನ್ನು ಇಂದು ಎಸ್‌ಐಟಿ ವಶಪಡಿಸಿಕೊಂಡಿದೆ.
ರಿಚ್‌ಮಂಡ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡದ ಮೇಲಿದ್ದ ಈಜುಕೊಳಕ್ಕೆ ಸಂಪರ್ಕ ಕಲ್ಪಿಸಿದ್ದ ಪೈಪ್‌ನಲ್ಲಿ ಅಡಗಿಸಿಟ್ಟಿದ್ದ ಬರೋಬ್ಬರಿ 300 ಕೆ.ಜಿ ತೂಕದ ನಕಲಿ ಚಿನ್ನದ ಬಿಸ್ಕೆಟ್ಟುಗಳನ್ನು ಎಸ್‌ಐಟಿ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ.

5880 ನಕಲಿ ಚಿನ್ನದ ಬಿಸ್ಕೆಟ್ಟುಗಳನ್ನು ಎಸ್‌ಐಟಿ ವಶಪಡಿಸಿಕೊಂಡಿದ್ದು, ಇವುಗಳ ಅಂದಾಜು ಮೌಲ್ಯ ಕೋಟ್ಯಂತರ ರೂಪಾಯಿಗಳೆಂದು ಹೇಳಲಾಗುತ್ತಿದೆ. ಮೌಲ್ಯದ ಬಗ್ಗೆ ನಿಖರ ಮಾಹಿತಿ ಇನ್ನಷ್ಟು ಹೊರಬೀಳಬೇಕಿದೆ.
'ದೊಡ್ಡ ಹೂಡಿಕೆದಾರ ವಿಶ್ವಾಸಗಳಿಸಲು ಈ ಚಿನ್ನದ ಬಿಸ್ಕತ್ತುಗಳನ್ನು ಅವರಿಗೆ ತೋರಿಸುತ್ತಿದ್ದೆ', ಎಂದು ಮನ್ಸೂರ್ ಖಾನ್ ವಿಚಾರಣೆ ವೇಳೆ ತಿಳಿಸಿದ್ದ. ಹಾಗಾಗಿ ಇಂದು ಎಸ್‌ಐಟಿ ಸಿಬ್ಬಂದಿ ದಾಳಿ ನಡೆಸಿ ನಕಲಿ ಚಿನ್ನದ ಬಿಸ್ಕತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮನ್ಸೂರ್ ಖಾನ್‌ಗೆ ಸೇರಿದ 23 ಆಸ್ತಿಗಳನ್ನು ಎಸ್‌ಐಟಿ ಈವರೆಗೆ ವಶಪಡಿಸಿಕೊಂಡಿದೆ. ಮನ್ಸೂರ್ ಖಾನ್ ಪ್ರಸ್ತುತ ಎಸ್‌ಐಟಿ ವಶದಲ್ಲಿದ್ದು, ಎಸ್‌ಐಟಿಯು ವಿಚಾರಣೆ ನಡೆಸುತ್ತಿದೆ. ಇಡಿ ಸಹ ಐಎಂಎ ಹಗರಣ ಪ್ರಕರಣವನ್ನು ವಿಚಾರಣೆ ನಡೆಸುತ್ತಿದೆ.












Click it and Unblock the Notifications