ಬೆಂಗಳೂರಲ್ಲಿ ಫ್ಲೆಕ್ಸ್ ಹಾವಳಿ: ಬಿಬಿಎಂಪಿ ವಿರುದ್ಧ ಹೈಕೋರ್ಟ್ ಕಿಡಿ
ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಪೋಸ್ಟರ್ ಎಲ್ಲೆಡೆ ಇದ್ದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಏನು ಮಾಡುತ್ತಿದೆ? ಎಂದು ಕರ್ನಾಟಕ ಹೈಕೋರ್ಟ್ ಪ್ರಶ್ನೆ ಮಾಡಿದೆ.
ಬೆಂಗಳೂರು, ಮಾರ್ಚ್ 21; ಬೆಂಗಳೂರು ನಗರದ ಎಲ್ಲೆಡೆ ಅನಧಿಕೃತ ಫ್ಲೆಕ್ಸ್, ಬ್ಯಾನರ್ ಪೋಸ್ಟರ್ ರಾಜಾಜಿಸುತ್ತಿದ್ದರೂ ಕಣ್ಣುಮುಚ್ಚಿ ಕುಳಿತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿರುದ್ಧ ಹೈಕೋರ್ಟ್ ಮತ್ತೆ ಕಿಡಿ ಕಾರಿದೆ. ಅಲ್ಲದೇ, ಪಾಲಿಕೆಯ ಕ್ರಮ ಕೇವಲ ನಿಜಕ್ಕೂ ಆಘಾತಕಾರಿ ಮತ್ತು ನಾಮಕವಾಸ್ತೆ ಆಗಿದೆ ಎಂದು ತರಾಟೆಗೆ ತೆಗೆದುಕೊಂಡಿದೆ.
ಸ್ವಂತ ವೈಭವೀಕರಣಕ್ಕೆ ಅಥವಾ ಬೇರೋಬ್ಬರ ಓಲೈಕೆಗೆ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಹಾಕಿ ನಗರದ ಸೌಂದರ್ಯ ಹಾಳು ಮಾಡುವವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಲು ನಿರ್ಲಕ್ಷ್ಯ ವಹಿಸಿದ ಬಿಬಿಎಂಪಿ ಕ್ರಮವನ್ನು ಕಟುವಾಗಿ ಟೀಕಿಸಿದೆ. ನಗರದಲ್ಲಿಅನಧಿಕೃ ಫ್ಲೆಕ್ಸ್, ಬ್ಯಾನರ್ ಹಾಗೂ ಹೋರ್ಡಿಂಗ್ಸ್‌ಗಳ ಹಾವಳಿ ಸಂಬಂಧ ಬೆಂಗಳೂರಿನ ಮಾಯ್ಗೆಗೌಡ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ಹಾಗೂ ನ್ಯಾ. ಅಶೋಕ್ ಎಸ್. ಕಿಣಗಿ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ಅಫಿಡವಿಟ್‌ಗೆ ಅಸಮಾಧಾನ: ಅಲ್ಲದೇ ಕೋರ್ಟ್ ಆದೇಶ ಪಾಲಿಸಿರುವ ಬಗ್ಗೆ ಬಿಬಿಎಂಪಿ ಮಾ.18ರಂದು ಸಲ್ಲಿಸಿರುವ ಅನುಪಾಲನಾ ವರದಿ ಒಂದಿಷ್ಟು ಸಮಾಧಾನ ತಂದಿಲ್ಲ. ಆದ್ದರಿಂದ ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಗೂ ಇತರೆ ಫಲಕ ತೆರವು ಮತ್ತು ತಪ್ಪಿತಸ್ಥರ ವಿರುದ್ಧ ಕೈಗೊಂಡಿರುವ ಕ್ರಮಗಳ ಸಮಗ್ರ ವರದಿಯನ್ನು ನಾಲ್ಕು ವಾರಗಳಲ್ಲಿ ಸಲ್ಲಿಸುವಂತೆ ಬಿಬಿಎಂಪಿಗೆ ಕೋರ್ಟ್ ತಾಕೀತು ಮಾಡಿದೆ.
ಇದಕ್ಕೂ ಮುನ್ನ ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ, 2023ರ ಜನವರಿಯಿಂದ ಇಲ್ಲಿವರೆಗೆ ಅನಧಿಕೃತ ಫ್ಲೆಕ್ಸ್, ಬ್ಯಾನರ್ ವಿರುದ್ಧ ಕೈಗೊಂಡಿರುವ ಕ್ರಮಗಳ ವಿವರಗಳನ್ನು ನ್ಯಾಯಪೀಠಕ್ಕೆ ಒದಗಿಸಿದರು. ಅದರಂತೆ, 2023ರ ಜನವರಿಯಿಂದ ಇಲ್ಲಿವರೆಗೆ ಬಿಬಿಎಂಪಿಯ ಎಲ್ಲಾ ಎಂಟು ವಲಯಗಳಲ್ಲಿ ಒಟ್ಟಾರೆ 9,750 ಅನಧಿಕೃತ ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್ಸ್ ಹಾಗೂ ಇತರೆ ಪ್ರದರ್ಶನ ಫಲಕಗಳನ್ನು ಗುರುತಿಸಲಾಗಿದೆ. ಆ ಪೈಕಿ 9,040 ತೆರವುಗೊಳಿಸಲಾಗಿದ್ದು, 41 ಪ್ರಕರಣಗಳಲ್ಲಿ ದಂಡ ವಿಧಿಸಲಾಗಿದೆ. 80 ದೂರುಗಳನ್ನು ದಾಖಲಿಸಿಕೊಂಡು ಆ ಪೈಕಿ 53 ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
ನಾಮಕಾವಸ್ತೆ ಕ್ರಮ: ಈ ಅಂಕಿ-ಅಂಶಗಳನ್ನು ಗಮನಿಸಿದ ನ್ಯಾಯಪೀಠ, ಅಧಿಕಾರಿಗಳಿಗೆ ಹೊಣೆಗಾರಿಕೆ ನಿಗದಿಪಡಿಸಿರುವುದು, ಸಾರ್ವಜನಿಕ ಪ್ರಕಟಣೆ ಹೊರಡಿಸಿರುವುದು, ಜನಸಾಮಾನ್ಯರು ದೂರು ನೀಡಲು ಅಧಿಕಾರಿಗಳ ಹೆಸರು ಮತ್ತು ಅವರ ಮೊಬೈಲ್ ನಂಬರ್‌ಗಳ ಪಟ್ಟಿ ಕೊಟ್ಟಿರುವ ಬಿಬಿಎಂಪಿ ಕ್ರಮ ಸ್ವಾಗತಾರ್ಹ ಎಂದು ಹೇಳಿತು. ಆದರೆ, ಅದು ಕಾರ್ಯಾಗತಗೊಂಡಿರುವುದು ಗಮನಿಸಿದರೆ, ಬಿಬಿಎಂಪಿಯ ಕ್ರಮ ಕೇವಲ ನಾಮಕಾವಾಸ್ತೆ ಮಾತ್ರ.

9,750 ಪ್ರಕರಣಗಳಲ್ಲಿಕೇವಲ 53 ಎಫ್‌ಐಆರ್ ದಾಖಲಾಗಿದೆ. ವಲಯವಾರು ಗಮನಿಸಿದರೆ ಕನಿಷ್ಟ 448 ರಿಂದ ಗರಿಷ್ಟ 2,525 ಅನಧಿಕೃತ ಫ್ಲೆಕ್ಸ್, ಬ್ಯಾನರ್‌ಗಳನ್ನು ಪತ್ತೆ ಹಚ್ಚಲಾಗಿದೆ. ಎಫ್‌ಐಆರ್ ಮಾತ್ರ ಒಂದಂಕಿಯಲ್ಲಿದೆ. ಕನಿಷ್ಠ 6 ಮತ್ತು ಗರಿಷ್ಠ 30 ಎಫ್‌ಐಆರ್‌ಗಳಾಗಿವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಯಾಕಿಷ್ಟು ಹಿಂಜರಿಯುತ್ತಿದೆ ಎಂದು ಅರ್ಥವಾಗುತ್ತಿಲ್ಲಎಂದು ತರಾಟೆಗೆ ತೆಗೆದುಕೊಂಡಿತು.
ತೆರಿಗೆ ಹೊರೆ ಜನರ ಮೇಲೆ: ಅನಧಿಕೃತ ಬ್ಯಾನರ್, ಫ್ಲೆಕ್ಸ್ ತೆರವುಗೊಳಿಸಲು ಹೆಚ್ಚುವರಿ ಸಿಬ್ಬಂದಿ ಮತ್ತು ಯಂತ್ರಗಳು ಬೇಕಾಗುತ್ತದೆ. ಅದಕ್ಕಾಗಿ ಆರ್ಥಿಕ ವೆಚ್ಚವೂ ಇದೆ ಎಂದು ಬಿಬಿಎಂಪಿ ಹೇಳಿದೆ. ಆದರೆ, ತಪ್ಪಿತಸ್ಥರ ವಿರುದ್ಧ ದಂಡ ವಿಧಿಸಿರುವ ಬಗ್ಗೆ ಕೇಳಿದರೆ ಬಿಬಿಎಂಪಿ ಬಳಿ ಉತ್ತರವಿಲ್ಲ ಎಂದು ನ್ಯಾಯಾಲಯ ಹೇಳಿತು. ಸ್ವಂತ ವೈಭವೀಕರಣಕ್ಕೆ ಅಥವಾ ಇನ್ನ್ಯಾರನ್ನೂ ಓಲೈಸಲಿಕ್ಕೆ ಬ್ಯಾನರ್, ಫ್ಲೆಕ್ಸ್ ಹಾಕಿ ನಗರದ ಸೌಂದರ್ಯ ಹಾಳು ಮಾಡುವವರ ವಿರುದ್ಧ ಕ್ರಮ ಕೈಗೊಂಡು ದಂಡ ವಿಧಿಸಬೇಕು. ಅದು ಬಿಟ್ಟು ತೆರವು ಕಾರ್ಯಾಚರಣೆಗೆ ತಗಲುವ ವೆಚ್ಚ ಬಿಬಿಎಂಪಿ ಭರಿಸಿದರೆ ಅಂತಿಮವಾಗಿ ಅದು ತೆರಿಗೆ ಪಾವತಿಸುವ ಜನಸಾಮಾನ್ಯರ ಮೇಲೆ ಭಾರ ಹಾಕಿದಂತೆ ಆಗುತ್ತದೆ ಎಂದು ನ್ಯಾಯಪೀಠ ಇದೇ ವೇಳೆ ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡಿತು.












Click it and Unblock the Notifications