ಕನ್ನಡ ಬರಲ್ವಾ ತಲೆ ಕೆಡಿಸಿಕೊಳ್ಳಬೇಡಿ ನಮ್ಮ ಕಂಪನಿಗೆ ಬನ್ನಿ ಎಂದ ಕಾರ್ ಕಂಪನಿ ಸಿಇಒ!
ಕನ್ನಡ ಭಾಷೆಯ ಬಗ್ಗೆ ವ್ಯಂಗ್ಯವಾಡಿ ಖಾಸಗಿ ಕಂಪನಿಯೊಂದು ಜಾಹೀರಾತು ನೀಡಿದ್ದು, ಈ ಜಾಹೀರಾತು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅಲ್ಲದೆ ಕನ್ನಡಿಗರ ಆಕ್ರೋಶಕ್ಕೂ ಕಾರಣವಾಗಿದೆ. ಬೆಂಗಳೂರಿನಲ್ಲಿ ವರ್ಷಗಟ್ಟಲೆ ಇದ್ದರೂ, ಕನ್ನಡ ಕಲಿಯಲಿಲ್ಲ ಎಂದರೆ ತೊಂದರೆ ಇಲ್ಲ ಇಲ್ಲಿ ಬಂದು ಬಿಡು ಎನ್ನುವ ಸಾಲುಗಳೊಂದಿಗೆ ಈ ಜಾಹೀರಾತು ಪ್ರಾರಂಭವಾಗಿದೆ. ಈ ಜಾಹೀರಾತನ್ನು ಕಾರ್ 24 ಇಂಡಿಯಾ (cars24india Founder & CEO) ಸಂಸ್ಥಾಪಕ ಹಾಗೂ ಸಿಇಒ ವಿಕ್ರಮ್ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ದೆಹಲಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿ ಬೆಂಗಳೂರಿನಲ್ಲಿ ಕನ್ನಡ ಕಲಿಯಲು ಸಾಧ್ಯವಾಗದೆ ಇದ್ದರೆ ತಲೆಕೆಡಿಸಿಕೊಳ್ಳಬೇಡಿ ಎಂಬರ್ಥದಲ್ಲಿ ಟ್ವೀಟ್ ಮಾಡಲಾಗಿದೆ.
ಬೆಂಗಳೂರಿನಲ್ಲಿ ಈ ವರ್ಷ ಪೂರ್ತಿ ಕನ್ನಡ ಹಾಗೂ ಹಿಂದಿ ಭಾಷಿಕರ ನಡುವೆ ಹಲವು ಕಾರಣಕ್ಕೆ ವಿವಾದ ಆಗುತ್ತಲ್ಲೇ ಇದೆ. ಇದೇ ಸಂದರ್ಭದಲ್ಲಿ ಕೆಲವರು ಇದನ್ನು ಅವರವರ ಲಾಭಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೀಗ cars24india ಇಂತಹದೊಂದು ತಮಾಷೆಯ ಹೆಸರಿನಲ್ಲಿ ಜಾಹೀರಾತು ಪ್ರಕಟಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ. ಬೆಂಗಳೂರಿನಲ್ಲಿ ಹಿಂದಿ ಭಾಷೆ ಮಾತನಾಡುವವರು ಕನ್ನಡಿಗರೊಂದಿಗೆ ಸಂಘರ್ಷಕ್ಕೆ ಇಳಿಯುವ ದೃಶ್ಯಗಳಿರುವ ವಿಡಿಯೋಗಳು ಇತ್ತೀಚಿನ ದಿನಗಳಲ್ಲಿ ಭಾರೀ ವೈರಲ್ ಆಗಿತ್ತು.

ಇದೀಗ ಖಾಸಗಿ ಕಂಪನಿಯ ಸಿಇಒ ತನ್ನ ಟ್ವಿಟ್ಟರ್ ಅಕೌಂಟ್‌ನಲ್ಲಿ ಈ ಪೋಟೋ ಶೇರ್ ಮಾಡಿಕೊಂಡಿದ್ದಾನೆ. ವಿಕ್ರಮ್ ಚೋಪ್ರಾ ಎನ್ನುವವರು ಮಾಡಿರುವ ಟ್ವೀಟ್‌ಗೆ ಹಲವು ಕನ್ನಡಿಗರು ಹಾಗೂ ದೇಶದ ವಿವಿಧ ಭಾಗದ ಜನರು ಸಹ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ. ಬೆಂಗಳೂರಿನಲ್ಲಿ ವರ್ಷಗಟ್ಟಲೆ ಇದ್ದರೂ ಕನ್ನಡ ಮಾತನಾಡಲು ಬರುತ್ತಿಲ್ಲವೇ ? ಪರವಾಗಿಲ್ಲ ದೆಹಲಿಗೆ ಬನ್ನಿ ಎಂದು ಆಹ್ವಾನಿಸಲಾಗಿದೆ. ನಮ್ಮ ಕಂಪನಿಯಲ್ಲಿ ಇಂಜಿನಿಯರ್‌ಗಳಿಗೆ ಕೆಲಸ ಖಾಲಿ ಇದೆ. ಯಾರು ಅವರ ಮನೆಯಿಂದ ಹತ್ತಿರ ಇರಬೇಕು ಎಂದು ಬಯಸುತ್ತೀರೋ ಅವರಿಗಾಗಿ ಈ ಅವಕಾಶ ಎಂದಿದ್ದಾರೆ.
ಇನ್ನು ನಾವು ದೆಹಲಿ ಎನ್‌ಸಿಆರ್ ಉತ್ತಮವಾಗಿದೆ ಎಂದು ಹೇಳುತ್ತಿಲ್ಲ. ಆದರೆ, ಇದು ನಿಜವಾಗಿಯೂ ಉತ್ತಮವಾಗಿದೆ ಎಂದು ಮಾತ್ರ ಹೇಳಲು ಇಚ್ಛಿಸುತ್ತೇವೆ ಎಂದು ಟ್ವೀಟ್ ಮಾಡಲಾಗಿದೆ. ನೀವು ದೆಹಲಿಗೆ ಹಿಂದಿರುಗಿಸಲು ಬಯಸಿದರೆ, ನನಗೆ ಮೇಲ್ ಮಾಡಿ. ದೆಹಲಿ ಮೇರಿ ಜಾನ್ ♥️ ಎಂದು ಟ್ವೀಟಿನಲ್ಲಿ ಬರೆಯಲಾಗಿದೆ.
ಅಗ್ಗದ ಪ್ರಚಾರ ತಂತ್ರ: ಈ ಜಾಹೀರಾತನ್ನು ನೋಡಿರುವ ಹಲವರು ಇದೊಂದು ಅಗ್ಗದ ಪ್ರಚಾರ (Cheap Tricks) ತಂತ್ರ ಎಂದು ಕರೆದಿದ್ದಾರೆ. ಅಲ್ಲದೆ ಹಲವರು ನೀವು ಈ ಟ್ವೀಟ್ ಅನ್ನು ಡಿಲೀಟ್ ಮಾಡಬೇಕಾಗಬಹುದು ಎಂದೂ ಎಚ್ಚರಿಸಿದ್ದಾರೆ. ಇನ್ನು ಕೆಲವರು ಇದು (marketing tactic) ಮತ್ತೊಂದು ಮಾರ್ಕೆಟಿಂಗ್ ಸರಕಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದಷ್ಟು ಜನ ದೆಹಲಿಯ ಹವಾಮಾನ ಹಾಗೂ ಬೆಂಗಳೂರಿನ ವೆದರ್ ಬಗ್ಗೆ ಪಾಠ ಮಾಡಿದ್ದಾರೆ.
ಬೆಂಗಳೂರು ವೆದರ್‌ಗೂ ದೆಹಲಿಯ ವೆದರ್‌ಗೂ ತುಂಬಾನೇ ವ್ಯತ್ಯಾಸ ಇದೆ. ವಾಯುಮಾಲಿನ್ಯ ಹಾಗೂ ವಿಪರೀತ ಹವಾಮಾನ ದೆಹಲಿಯಲ್ಲಿ ಇದೆ ಎಂದಿದ್ದಾರೆ.












Click it and Unblock the Notifications