ಸಿಎಂ ರಾಜಿನಾಮೆ ಕೇಳಿದರೆ ನೀಡುವೆ: ಸಚಿವ ಜಾರ್ಜ್ ಸ್ಪಷ್ಟನೆ
ಬೆಂಗಳೂರು, ಸೆಪ್ಟೆಂಬರ್ 8: ಮಾಜಿ ಡಿವೈಎಸ್ ಪಿ ಆತ್ಮಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ನನ್ನ ರಾಜಿನಾಮೆ ಕೇಳಿದರೆ, ಖಂಡಿತವಾಗಿಯೂ ಕೊಡಲು ಸಿದ್ಧ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.
ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸಲಿ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಜಾರ್ಜ್ ಅವರ ರಾಜಿನಾಮೆಗೆ ಆಗ್ರಹಿಸುತ್ತಲೇ ಇದ್ದಾರೆ.

ಈ ಬಗ್ಗೆ ಈ ಹಿಂದೆಯೇ ಸ್ಪಷ್ಟನೆ ನೀಡಿರುವ ಜಾರ್ಜ್, ''ಗಣಪತಿ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದ್ದಾಗಲೇ ತನಿಖೆಗೆ ಸಹಕಾರಿಯಾಗಲು ನಾನು ರಾಜಿನಾಮೆ ಸಲ್ಲಿಸಿದ್ದೆ. ಈಗ್ಯಾಕೆ ರಾಜಿನಾಮೆ ನೀಡಲಿ'' ಎಂದಿದ್ದರು.
ಇದೀಗ, ಆ ಬಗ್ಗೆ ಸ್ಪಷ್ಟನೆ ನೀಡಿರುವ ಜಾರ್ಜ್, ಮುಖ್ಯಮಂತ್ರಿ ರಾಜಿನಾಮೆ ಕೇಳಿದರೆ ರಾಜಿನಾಮೆ ನೀಡುವೆ ಎಂದಿದ್ದಾರೆ. ಇದೇ ವೇಳೆ, ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ''ಗಣಪತಿ ಆತ್ಮಹತ್ಯೆ ವಿಚಾರದಲ್ಲಿ ಬಿಜೆಪಿಗೆ ಸತ್ಯ ಬೇಕಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ನನ್ನ ರಾಜಿನಾಮೆ ಬೇಕಿದೆ'' ಎಂದು ವ್ಯಂಗ್ಯವಾಡಿದರು.












Click it and Unblock the Notifications