2024ರಲ್ಲಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡಲು ಶ್ರಮಿಸುತ್ತೇನೆ: ಬಿಎಸ್ ಯಡಿಯೂರಪ್ಪ
ಈ ವೇಳೆ ಯಡಿಯೂರಪ್ಪ ಅವರು ಲಂಡನ್‌ನಲ್ಲಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರು, ಮಾರ್ಚ್ 13: 2024ರ ರಾಷ್ಟ್ರೀಯ ಚುನಾವಣೆಯಲ್ಲಿ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಶ್ರಮಿಸುವುದಾಗಿ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಈ ಮೂಲಕ ಮುಂದಿನ ಬಾರಿಯೂ ಕೇಂದ್ರದಲ್ಲಿ ಜನತಾ ಪಕ್ಷ ಅಧಿಕಾರ ಹಿಡಿಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳ ಜೊತೆಗೆ ಮಾತನಾಡಿರುವ ಯಡಿಯೂರಪ್ಪ ಅವರು, "ಪ್ರಧಾನಿ ನರೇಂದ್ರ ಮೋದಿ ನನ್ನ ಮತ್ತು ರಾಜ್ಯದ ಪಕ್ಷದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಅವರ ನಾಯಕತ್ವದ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ. ಅವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ನೋಡಲು ಶ್ರಮಿಸುತ್ತೇನೆ" ಎಂದು ಹೇಳಿದ್ದಾರೆ. ತಾವು ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸುವುದಾಗಿ ತಿಳಿಸಿದ್ದಾರೆ.

ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಜೊತೆಗೆ 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಪಕ್ಷವು ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವುದು ನಮಗೆ ಖಚಿತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಈ ವೇಳೆ ಯಡಿಯೂರಪ್ಪ ಅವರು ಲಂಡನ್‌ನಲ್ಲಿನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ರಾಹುಲ್ ಗಾಂಧಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು. ಅವರು ಇಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಮತ್ತು ಅಂತಹ ಹೇಳಿಕೆಗಳನ್ನು ಯಾರೂ ಮೆಚ್ಚುವುದಿಲ್ಲ ಎಂದು ಯಡಿಯೂರಪ್ಪ ಹೇಳಿದ್ದಾರೆ.
ಲಂಡನ್‌ನ ಕೇಂಬ್ರಿಡ್ಜ್ ಭಾಷಣದಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಯ ಅಗತ್ಯವನ್ನು ವಿವರಿಸಿಸುತ್ತಿದ್ದ ವೇಳೆ, ಭಾರತದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕರಿಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶವಿಲ್ಲ. ಪ್ರಧಾನಿ ಮೋದಿ ಅವರು ಭಾರತದ ನಿಜ ಕಲ್ಪನೆಯನ್ನು ನಾಶಪಡಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿ ರಾಜ್ಯ ಪ್ರವಾಸದಲ್ಲಿ ವಾಗ್ದಾಳಿ ನಡೆಸಿದ್ದರು. "'ಕೆಲವರು' ಲಂಡನ್‌ಗೆ ಹೋಗಿ ಭಾರತವನ್ನು ಅವಮಾನಿಸಲು ಪ್ರಾರಂಭಿಸಿದ್ದಾರೆ. ಲಂಡನ್ ಮಣ್ಣಿನಲ್ಲಿ ಕುಳಿತು ಭಾರತದ ಪ್ರಜಾಪ್ರಭುತ್ವದ ಮೇಲೆ ಪ್ರಶ್ನೆಗಳು ಎತ್ತುತ್ತಿರುವುದು ದುರದೃಷ್ಟಕರ. ಭಾರತದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವ ಶಕ್ತಿ ಎಲ್ಲಿಯೂ ಇಲ್ಲ. ಆದರೆ, ಈ ಜನ ಭಗವಾನ್ ಬಸವೇಶ್ವರರಿಗೆ, ಕರ್ನಾಟಕದ ಜನತೆಗೆ, ಭಾರತದ ಜನತೆಗೆ ಅವಮಾನ ಮಾಡುತ್ತಿದ್ದಾರೆ. ಇಂತಹವರಿಂದ ಕರ್ನಾಟಕ ದೂರ ಉಳಿಯಬೇಕು ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದರು.












Click it and Unblock the Notifications