ಡಿ.ವೈ. ಉಪ್ಪಾರ್ ಮತ್ತು ರಾಹುಲ್ ಎಂಟರ್‌ಪ್ರೈಸಸ್ ಕಪ್ಪು - ಬಿಳುಪು ವಹಿವಾಟು ಪತ್ತೆ?
ಬೆಂಗಳೂರು, ಅ. 08: ನೀರಾವರಿ ಇಲಾಖೆಯ ಬಹುಕೋಟಿ ಟೆಂಡರ್ ಕಾಮಗಾರಿ ಜಾಡು ಹಿಡಿದು ಐಟಿ ಅಧಿಕಾರಿಗಳು ನಡೆಸಿದ ದಾಳಿ ಹೊಸ ಆಯಾಮ ಪಡೆದುಕೊಂಡಿದೆ. ಅಗ್ರಗಣ್ಯ ಗುತ್ತಿಗೆದಾರ ಡಿ.ವೈ. ಉಪ್ಪಾರ್ ಅವರ ಸದಾಶಿವನಗರ ಮನೆ ಮೇಲೆ ಐಟಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಲೋಕೋಪಯಯೋಗಿ ಹಾಗೂ ನೀರಾವರಿ ಇಲಾಖೆಯಲ್ಲಿನ ಸುಮಾರು 20 ಸಾವಿರ ಕೋಟಿ ರೂ. ಮೊತ್ತದ ಟೆಂಡರ್ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೇನಾಮಿ ವಹಿವಾಟು
ಡಿ. ವೈ. ಉಪ್ಪಾರ್ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಿಗೆ ಕಬ್ಬಿಣ ಹಾಗೂ ಸಿಮೆಂಟ್ ಪೂರೈಸುವ ಕಾರ್ಯ ನಿರ್ವಹಸುತ್ತಿದ್ದ ರಾಹುಲ್ ಎಂಟರ್ ಪ್ರೈಸಸ್ ನೂರಾರುಕೋಟಿ ರೂ. ವಹಿವಾಟು ನಡೆಸಿದೆ. ತೆರಿಗೆ ವಂಚನೆ ಮಾತ್ರವಲ್ಲದೇ ಗುತ್ತಿಗೆ ಕಂಪನಿಗಳ ಕಪ್ಪು ಹಣವನ್ನು ಬಿಳಿಯನ್ನಾಗಿ ಪರಿವರ್ತನೆ ಮಾಡಿರುವ ದಾಖಲೆಗಳು ಐಟಿ ಅಧಿಕಾರಿಗಳಿಗೆ ಸಿಕ್ಕಿವೆ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಎರಡನೇ ದಿನವೂ ರಾಹುಲ್ ಎಂಟರ್ ಪ್ರೈಸಸ್ ಹಾಗೂ ಡಿ.ವೈ. ಉಪ್ಪಾರ್ ಕಂಪನಿಗೆ ಸಂಬಂಧಿಸಿದ ಕಚೇರಿ ಹಾಗೂ ಮನೆಗಳ ಮೇಲಿನ ದಾಳಿ ಮುಂದುವರೆದಿದೆ.
ರಾಹುಲ್ ಎಂಟರ್ ಪ್ರೈಸಸ್ ಮತ್ತು ಡಿ.ವೈ. ಉಪ್ಪಾರ್ ಕಂಪನಿ ನಡುವಿನ ಹಣಕಾಸಿನ ವಹಿವಾಟಿನ ದಾಖಲೆಗಳು ಹಾಗೂ ಒಡಂಬಡಿಕೆ, ಹಣದ ವಹಿವಾಟಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಹುಲ್ ಎಂಟರ್ ಪ್ರೈಸಸ್ ಹಣಕಾಸನ ವಹಿವಾಟಿನ ಲೆಕ್ಕ ಪರಿಶೋಧನೆ ನಡೆಸುತ್ತಿದ್ದ ಚಾರ್ಟಡ್ ಅಕೌಂಟೆಂಟ್ ಅವರ ಮನೆ ಮೇಲೂ ದಾಳಿ ನಡೆಸಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಕಬ್ಬಿಣ ಹಾಗೂ ಸಿಮೆಂಟ್ ಮತ್ತಿತರ ಉಪಕರಣಗಳನ್ನು ಉಪ್ಪಾರ್ ಕಂಪನಿಗೆ ಪೂರೈಕೆ ಮಾಡಿರುವ ಸಂಬಂಧ ದಾಖಲೆಗಳು ಸಿಕ್ಕಿವೆ. ಕೋಟಿ ಕೋಟಿ ವಹಿವಾಟು ನಡೆದಿದ್ದು, ಅದರಲ್ಲಿನ ಬೇನಾಮಿ ವಹಿವಾಟಿನ ವಾಸನೆ ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ಮತ್ತಷ್ಟು ದಾಖಲೆಗಳನ್ನು ಸಂಗ್ರಹಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗುತ್ತಿಗೆದಾರ ಸೋಮಶೇಖರ್ ಮನೆ ಮೇಲೆ ದಾಳಿ
ಸೋಮಶೇಖರ್ ಎಂಬುವರ ಮನೆ ಮೇಲೂ ಸಹ ಐಟಿ ಅಧಿಕಾರಿಗಳು ದಾಳಿ ಮಾಡಿ ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಬಿ.ಎಸ್. ಯಡಿಯೂರಪ್ಪ ಅವರ ಆಪ್ತರಾಗಿ ಗುರುತಿಸಿಕೊಂಡಿರುವ ಸೋಮಶೇಖರ ಕೂಡ ಪ್ರಥಮ ದರ್ಜೆ ಗುತ್ತಿಗೆದಾರ. ಕಳೆದ ಹಲವು ವರ್ಷಗಳಿಂದ ದೊಡ್ಡ ಮೊತ್ತದ ಗುತ್ತಿಗೆ ಕಾಮಗಾರಿ ಪಡೆದಿದ್ದರು ಎನ್ನಲಾಗಿದೆ. ಕಾಮಗಾರಿಗಳ ಅಕ್ರಮಕ್ಕೆ ಸಂಬಂಧಿಸಿದಂತೆ ದಾಖಲೆ ಜಪ್ತಿ ಮಾಡಿದ್ದಾರೆ.

ಉಮೇಶ್ ಬಗೆದಷ್ಟು ಅಕ್ರಮ
ಬಿ.ಎಸ್. ಯಡಿಯೂರಪ್ಪ ಅವರ ಆಪ್ತ ಸಹಾಯಕನಾಗಿದ್ದ ಬಿಎಂಟಿಸಿ ನೌಕರ ಉಮೇಶ್ ಅವರ ರಾಜಾಜಿನಗರ ಮನೆ ಜತೆಗೆ ಆಯನೂರಿನ ಮನೆ ಮೇಲೂ ದಾಳಿ ನಡೆಸಿ ನೀರಾವರಿ ಇಲಾಖೆ ಗುತ್ತಿಗೆಗೆ ಸಂಬಂಧಿಸಿದ ಕಡತಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಮಗಾರಿಗಳ ಹೆಸರಿನಲ್ಲಿ ಕಮೀಷನ್ ಪಡೆದು ಕೋಟಿ ಕೋಟಿ ರು. ಅಕ್ರಮ ಎಸಗಿರುವ ಬಗ್ಗೆ ಐಟಿ ಅಧಿಕಾರಿಗಳು ದಾಖಲೆ ಬ್ಯಾಂಕ್ ವಹಿವಾಟಿನ ದಾಖಲೆ, ಆಸ್ತಿಗಳ ವಿವರಗಳನ್ನು ಸಂಗ್ರಹಿಸಿದ್ದಾರೆ. ಅಕ್ರಮ ಲೇವಾದೇವಿ ನಡೆದಿರುವ ಹಿನ್ನೆಲೆಯಲ್ಲಿ ಐಟಿ ದಾಳಿಗೆ ಸಂಬಂಧಿಸಿದ ವರದಿಯನ್ನು ಜಾರಿ ನಿರ್ದೆಶನಾಲಯಕ್ಕೆ ಸಲ್ಲಿಸುವ ಸಾಧ್ಯತೆ ಕಾಣುತ್ತಿದೆ.
Recommended Video
|
ವಿಜಯೇಂದ್ರ ಕ್ಲಾಸ್‌ಮೇಟ್‌ಗೂ ಕಂಟಕ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕ್ಲಾಸ್ ಮೇಟ್ ಹಾಗೂ ಉಮೇಶ್ ಆಪ್ತನಾಗಿ ಗುರುತಿಸಿಕೊಂಡಿರುವ ಅರವಿಂದ್ ಮನೆ ಮೇಲೆ ದಾಳಿ ನಡೆಸಿದೆ. ವಸಂತನಗರದ ಎಂಬೆಸಿ ಅಪಾರ್ಟ್ ಮೆಂಟ್ ನಲ್ಲಿರುವ 19 ನೇ ಬ್ಲಾಕ್ ನಲ್ಲಿ ಪೋಷಕರೊಂದಿಗೆ ವಾಸವಾಗಿರುವ ಅರವಿಂದ ಮನೆಯಲ್ಲಿ ಕೆಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಅರವಿಂದ್ ಕೆಲಸದ ನಿಮಿತ್ತ ಐದು ದಿನಗಳ ಹಿಂದೆ ದುಬೈಯಲ್ಲಿದ್ದಾರೆ ಎನ್ನಲಾಗಿದೆ.
ಹೀಗಾಗಿ ಮನೆಯಲ್ಲಿ ಶೋಧ ಹಾಗೂ ದಾಖಲೆಗಳ ಜಪ್ತಿ ಮಾಡಿದ ಬಗ್ಗೆ ಅರವಿಂದ್ ಅವರ ಪತ್ನಿಯಿಂದಲೇ ಸಹಿ ಪಡೆಯಲಾಗಿದೆ. ಉಮೇಶ್ ಮನೆ ಮೇಲೆ ದಾಳಿ ಮಾಡಿದಾಗ ಅರವಿಂದ್ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಅರವಿಂದ ಮನೆ ಮೇಲೂ ದಾಳಿ ನಡೆದಿದ್ದು ಹಲವು ದಾಖಲೆಗಳು ಜಪ್ತಿಯಾಗಿವೆ. ವಿಜಯೇಂದ್ರ ಕ್ಲಾಸ್‌ಮೇಟ್ ಆಗಿರುವ ಅರವಿಂದ್‌ನ ಬೇನಾಮಿ ವಹಿವಾಟು ಪತ್ತೆಯಾದರೆ ಒಂದಷ್ಟು ಜನ ಪ್ರತಿನಿಧಿಗಳಿಗೂ ಐಟಿ ಕಂಟಕ ಎದುರಾಗಲಿದೆ.












Click it and Unblock the Notifications