Bengaluru Traffic: ಈ ಫ್ಲೈ ಓವರ್ ಶನಿವಾರ ಮಧ್ಯಾಹ್ನದಿಂದ ಬಂದ್, ಬದಲಿ ಮಾರ್ಗ
ಬೆಂಗಳೂರು, ಫೆಬ್ರವರಿ 15: ಬೆಂಗಳೂರು ನಗರದಲ್ಲಿ ಸಂಚಾರ ನಡೆಸುವ ವಾಹನ ಸವಾರರಿಗೆ ಪ್ರಮುಖ ಮಾಹಿತಿ ಇದೆ. ಶನಿವಾರ ಮಧ್ಯಾಹ್ನದಿಂದ ಭಾನುವಾರ ಬೆಳಗ್ಗೆ ತನಕ ಸಂಚಾರಿ ಪೊಲೀಸರು ಫ್ಲೈ ಓವರ್ ಒಂದನ್ನು ಬಂದ್ ಮಾಡಲಿದ್ದಾರೆ. ವಾಹನ ಸವಾರರು ಸರ್ವೀಸ್ ರಸ್ತೆಗಳನ್ನು ಬಳಕೆ ಮಾಡಬೇಕಿದೆ. ಸಂಚಾರ ದಟ್ಟಣೆ ಉಂಟಾಗುವ ಹಿನ್ನಲೆಯಲ್ಲಿ ಪರ್ಯಾಯ ಮಾರ್ಗಗಳ ವಿವರಗಳನ್ನು ನೀಡಲಾಗಿದೆ.
ಈ ಕುರಿತು ಬೆಂಗಳೂರು ನಗರ ಸಂಚಾರಿ ಪೊಲೀಸರು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದಾರೆ. ಪೋಸ್ಟ್‌ನಲ್ಲಿ ಹೆಚ್‌ಎಸ್‌ಆರ್ ಲೇಔಟ್ 14ನೇ ಮುಖ್ಯರಸ್ತೆ ಫ್ಲೈ ಓವರ್ (ಬಿಡಿಎ ಫ್ಲೈ ಓವರ್) ಮೇಲ್ಭಾಗದಲ್ಲಿ ಬಿಎಂಆರ್‌ಸಿಎಲ್ ಸೈಡಿಂಗ್ ಗರ್ಡಲ್‌ನ ದುರಸ್ತಿ ಕಾರ್ಯವನ್ನು ಬಿಎಂಆಸಿಎಲ್ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.

ಆದ್ದರಿಂದ ದಿನಾಂಕ 15-02-2025ರ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ದಿನಾಂಕ 16-02-2025ರ ಭಾನುವಾರ ಬೆಳಗ್ಗೆ 10 ಗಂಟೆ ತನಕ 14ನೇ ಮುಖ್ಯರಸ್ತೆ ಫೈಓವರ್‌ನ ಎರಡು ಕಡೆಯ ರಸ್ತೆಯನ್ನು (ಸಿಲ್ ಬೋರ್ಡ್‌ಗೆ ಸಾಗುವ ರಸ್ತೆ ಹಾಗೂ ಇಬ್ಬಲೂರು ಕಡೆಗೆ ಸಾಗುವ ರಸ್ತೆ) ಮುಚ್ಚಲಾಗುತ್ತದೆ ಎಂದು ತಿಳಿಸಿದ್ದಾರೆ.
ವಾಹನ ಸವಾರರು ಸಿಲ್ಕ್ ಬೋರ್ಡ್ ಹಾಗೂ ಇಬ್ಬಲೂರು ಕಡೆಗೆ ಸಾಗುವಾಗ ಬದಲಿ ಮಾರ್ಗದಲ್ಲಿ ಚಲಿಸಲು ಮನವಿ ಮಾಡಲಾಗಿದೆ. ಸಂಚಾರಿ ಪೊಲೀಸರ ಜೊತೆ ವಾಹನ ಸವಾರರು ಸಹಕಾರ ನೀಡಬೇಕು ಎಂದು ಕೋರಲಾಗಿದೆ.
ಪರ್ಯಾಯ ಮಾರ್ಗಗಳು
* ಸಿಲ್ಕ್ ಬೋರ್ಡ್ ಕಡೆಗೆ ಸಾಗುವ ವಾಹನ ಸವಾರರು 14ನೇ ಮುಖ್ಯರಸ್ತೆ ಸರ್ವಿಸ್ ರಸ್ತೆ ಮೂಲಕ ಸಾಗುವುದು ಅಥವಾ ಹೊರವರ್ತುಲ ರಸ್ತೆ 19ನೇ ಮುಖ್ಯರಸ್ತೆಯಲ್ಲಿ ಎಡ ತಿರುವು ಪಡೆದುಕೊಂಡು 17ನೇ ಕ್ರಾಸ್‌ನಲ್ಲಿ ಸಾಗಿ 5ನೇ ಮುಖ್ಯರಸ್ತೆ ಮೂಲಕ ಸಿಲ್ಕ್ ಬೋರ್ಡ್ ಜಂಕ್ಷನ್‌ಗೆ ತೆರಳುವುದು.
* ಇಬ್ಬಲೂರು ಕಡೆಗೆ ಸಾಗುವ ವಾಹನ ಸವಾರರು 14ನೇ ಮುಖ್ಯರಸ್ತೆಯ ಸರ್ವಿಸ್ ರಸ್ತೆಯಲ್ಲಿ ಸಾಗುವುದು ಅಥವಾ 14ನೇ ಮುಖ್ಯರಸ್ತೆ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದುಕೊಂಡು ಆಟೋಮಾರ್ಟ್ ಜಂಕ್ಷನ್‌ಗೆ ಸಾಗಿ ಆಗರ ಮೂಲಕ ಇಬ್ಬಲೂರಿಗೆ ತೆರಳುವುದು.
ಬುಧವಾರವೂ ಬಿಎಂಆರ್‌ಸಿಎಲ್‌ನ ಲಾಂಚಿಂಗ್ ಗಿರ್ಡರ್‌ನಲ್ಲಿನ ತಾಂತ್ರಿಕ ಸಮಸ್ಯೆಯಿಂದಾಗಿ, ಹೊರ ವರ್ತುಲ ರಸ್ತೆಯ ಮೇಲ್ಸೇತುವೆಯ ಹೆಚ್ಎಸ್‌ಆರ್ ಲೇಔಟ್ ಫ್ಲೈ ಓವರ್‌ನ 14ನೇ ಮುಖ್ಯ ರಸ್ತೆಯಿಂದ 19ನೇ ಮುಖ್ಯ ರಸ್ತೆಯ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಇದರಿಂದಾಗಿ ಭಾರೀ ವಾಹನ ದಟ್ಟಣೆ ಉಂಟಾಗಿತ್ತು.
ಗುರುವಾರ ಬೆಳಗ್ಗೆ ಸಂಚಾರ ಪೊಲೀಸರು ಬಿಎಂಆರ್‌ಸಿಎಲ್ ಕಾಮಗಾರಿಗಾಗಿ ಮುಚ್ಚಲಾಗಿದ್ದ 19ನೇ ಮುಖ್ಯ ರಸ್ತೆ ಮತ್ತು 14ನೇ ಮುಖ್ಯ ರಸ್ತೆಯ ನಡುವಿನ ಫ್ಲೈ ಓವರ್ ಈಗ ಸಂಚಾರಕ್ಕೆ ಮುಕ್ತವಾಗಿದೆ ಎಂದು ಸಿಲ್ಕ್‌ಬೋರ್ಡ್/ ಹೊಸೂರು ಕಡೆಗಿನ ಸಂಚಾರ ಈಗ ಸುಗಮವಾಗಿದೆ ಎಂದು ಹೇಳಿದ್ದರು.
ಈಗ ಶನಿವಾರ ಮಧ್ಯಾಹ್ನ 2 ಗಂಟೆಯಿಂದ ಭಾನುವಾರ ಬೆಳಗ್ಗೆ 10 ಗಂಟೆ ತನಕ ಫೈಓವರ್‌ನ ಎರಡೂ ಬದಿಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುತ್ತಿದೆ. ವೀಕೆಂಡ್ ಕಾರಣ ಹೆಚ್ಚು ಜನರು ಸಂಚಾರ ನಡೆಸುವ ನಿರೀಕ್ಷೆ ಇದ್ದು, ಸಂಚಾರ ದಟ್ಟಣೆ ಉಂಟಾಗಬಹುದು.












Click it and Unblock the Notifications