ಬೆಂಗಳೂರಿನ ಮನೆ ಬಾಡಿಗೆ ದರಗಳಲ್ಲಿ ಶೇ 50ರಷ್ಟು ಏರಿಕೆ: ಯಾವ ಏರಿಯಾದಲ್ಲಿ ಎಷ್ಟು? ಅಂಕಿಅಂಶ, ವಿವರ
ಬೆಂಗಳೂರು, ಆಗಸ್ಟ್ 31: ಬೆಂಗಳೂರಿನ ಟೆಕ್ ಕಾರಿಡಾರ್‌ಗಳಲ್ಲಿ ವಸತಿ ಮನೆಗಳ ಬಾಡಿಗೆ ದರಗಳು ವ್ಯಾಪಕವಾಗಿ ಏರಿಕೆ ಕಂಡಿವೆ. ಮಾರತಹಳ್ಳಿ, ಬೆಳ್ಳಂದೂರು ಮತ್ತು ವೈಟ್‌ಫೀಲ್ಡ್‌ನಂತಹ ಪ್ರತಿಷ್ಠಿತ ಏರಿಯಾಗಳಲ್ಲಿ ವಸತಿ ಬಾಡಿಗೆಗಳು ಶೇ 50 ಕ್ಕಿಂತ ಹೆಚ್ಚು ಏರಿಕೆಯಾಗಿವೆ. ಕೋವಿಡ್ ನಂತರದಲ್ಲಿ ಸಾಪ್ಟ್‌ವೇರ್ ಕಂಪನಿಗಳಿಗೆ ಹತ್ತಿರ ಇರುವ ಮನೆಗಳಿಗೆ ಬೇಡಿಕೆ ಹೆಚ್ಚಾಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.
ಬ್ರೋಕರ್‌ಗಳು, ಮನೆಮಾಲೀಕರು ಮತ್ತು ಬಾಡಿಗೆದಾರರೊಂದಿಗೆ ಮಾತನಾಡಿರುವ 'ಟೈಮ್ಸ್ ಆಫ್ ಇಂಡಿಯಾ' ಈ ವರದಿಯನ್ನು ಪ್ರಕಟಿಸಿದೆ.

ಐಟಿ ಕಾರಿಡಾರ್‌ನ ಯಾವುದೇ ವಸತಿ ಪ್ರದೇಶದಲ್ಲಿ 1,000 ಚದರ ಅಡಿಗಿಂತ ಕಡಿಮೆ ಇರುವ 2-ಬಿಎಚ್‌ಕೆ ಮನೆಗೆ ಬಾಡಿಗೆದಾರರು ತಿಂಗಳಿಗೆ ಕನಿಷ್ಠ 30,000 ರೂ.ಗಳನ್ನು ಪಾವತಿಸಬೇಕಾಗುತ್ತದೆ ಎಂದು ತಿಳಿದುಬಂದಿದೆ. ಆದರೆ ಕ್ಲಬ್‌ಹೌಸ್‌ಗಳು ಮತ್ತು ಇತರ ಸೌಕರ್ಯಗಳಿರುವ ದೊಡ್ಡ ಅಪಾರ್ಟ್‌ಮೆಂಟ್ ಸಂಕೀರ್ಣಗಳಲ್ಲಿ ಬಾಡಿಗೆ ಫ್ಲಾಟ್‌ಗಳು 50,000 ರೂ.ಗೆ ದೊರೆಯುತ್ತವೆ.
ಸ್ಥಳೀಯ ಆಸ್ತಿ ಮಾಲೀಕರ ಪ್ರಕಾರ, ಕೋವಿಡ್‌ಗಿಂತ ಮೊದಲು 2- ಬಿಎಚ್‌ಕೆ ಮನೆಗಳು ಅಥವಾ ಫ್ಲಾಟ್‌ಗಳನ್ನು 12,000 ರಿಂದ 20,000 ರೂ ಗಳಿಗೆ ಬಾಡಿಗೆ ನೀಡಲಾಗುತ್ತಿತ್ತು. ಈಗ ಅದು 25,000 ರಿಂದ 40,000 ರೂ.ಗಳಾಗಿವೆ. ಅದೇ ರೀತಿ, 1-ಬಿಎಚ್‌ಕೆ ಮನೆಗಳು ಅಥವಾ ಫ್ಲಾಟ್‌ಗಳು ಪ್ರಸ್ತುತ 15,000 ರೂನಿಂದ 25,000 ಗೆ ಸಿಗುತ್ತವೆ. ಸಾಂಕ್ರಾಮಿಕ ಪೂರ್ವದಲ್ಲಿ ಇವುಗಳು ರೂ 7,000ದಿಂದ 10,000 ಕ್ಕೆ ಲಭ್ಯವಿದ್ದವು.
ಹೆಚ್ಚಿನ ಬಾಡಿಗೆಯ ಹೊರತಾಗಿಯೂ, ಪ್ಲಾಟ್‌ಗಳ ಬೇಡಿಕೆ ಹೆಚ್ಚಿದೆ. ಸಾವಿರಾರು ಫ್ಲಾಟ್‌ಗಳು ಅಲ್ಪಾವಧಿಯಲ್ಲಿಯೇ ಬಾಡಿಗೆದಾರರನ್ನು ಪಡೆಯುತ್ತಿವೆ ಎಂದು ಬಹು ಆಸ್ತಿ ದಲ್ಲಾಳಿಗಳು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದಾರೆ.

1-ಬಿಎಚ್‌ಕೆ, 2-ಬಿಎಚ್‌ಕೆ ಅಥವಾ 3-ಬಿಎಚ್‌ಕೆ ಎಲ್ಲಾ ರೀತಿಯ ವಸತಿ ಆಸ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಆದರೆ ಪ್ರಸ್ತುತ ಬೇಡಿಕೆಯನ್ನು ಪೂರೈಸಲು ಯಾವುದೇ ಖಾಲಿ ಮನೆಗಳಿಲ್ಲ ಎಂದು ಪ್ರಾಪರ್ಟಿ ಬ್ರೋಕರ್ ಹಗದೂರು ನಂಜೇಗೌಡ ಹೇಳಿದ್ದಾರೆ. ವೈಟ್‌ಫೀಲ್ಡ್‌ನಲ್ಲಿ ಬಾಡಿಗೆದಾರರು ಇತರ ಮನೆಗಳಿಗಿಂತ 3 ಬಿಎಚ್‌ಕೆ ಫ್ಲಾಟ್‌ಗಳು ಹಾಗೂ ಮನೆಗಳಿಗೆ ಆದ್ಯತೆ ನೀಡುತ್ತಾರೆ ಎಂದು ಅವರು ಹೇಳಿದ್ದಾರೆ.
ಅನೇಕ ಐಟಿ ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ವಾರಕ್ಕೆ ಎರಡು ಬಾರಿಯಾದರೂ ಕಚೇರಿಯಿಂದ ಕೆಲಸ ಮಾಡಲು ಕೇಳಿಕೊಂಡಿವೆ ಎಂದು ಗೌಡ ತಿಳಿಸಿದ್ದಾರೆ. ಇದರಿಂದಾಗಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಉಳಿಯಲು ಆದ್ಯತೆ ನೀಡುತ್ತಿದ್ದು, ವಸತಿ ಪ್ರಾಪರ್ಟಿಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ವರ್ತೂರಿನ ನಿವಾಸಿ ಜಗದೀಶ್ ರೆಡ್ಡಿ, 'ತಮ್ಮ ಪ್ರದೇಶದಲ್ಲಿ ಹಲವಾರು ವಸತಿ ಯೋಜನೆಗಳು ಬರಲಿವೆ. ಆಧುನಿಕ ಸೌಲಭ್ಯಗಳಿರುವ ಬೃಹತ್ ಅಪಾರ್ಟ್ ಮೆಂಟ್ ಸಮುಚ್ಚಯಗಳಲ್ಲಿ ಬಾಡಿಗೆ ಹೆಚ್ಚಾಗಿವೆ. ಪ್ರೆಸ್ಟೀಜ್ ಶಾಂತಿನಿಕೇತನದಲ್ಲಿ 3-ಬಿಎಚ್‌ಕೆ ಫ್ಲಾಟ್‌ಗಾಗಿ ನನ್ನ ಸ್ನೇಹಿತರು ತಿಂಗಳಿಗೆ 75,000 ರೂಪಾಯಿಗಳನ್ನು ಪಾವತಿಸುತ್ತಿದ್ದಾರೆ' ಎಂದು ರೆಡ್ಡಿ ಹೇಳಿದ್ದಾರೆ.

ಮಾರತ್ತಹಳ್ಳಿಯ ಪ್ರಾಪರ್ಟಿ ಬ್ರೋಕರ್ ಸುಂದರ್ ಮಾತನಾಡಿ, 'ಬೇಡಿಕೆ ಹೆಚ್ಚಿದ್ದು, ಖಾಲಿ ಇರುವ ಮನೆಗಳು ಕ್ಷಣಾರ್ಧದಲ್ಲಿ ತುಂಬಿಕೊಳ್ಳುತ್ತಿವೆ. ಬಾಡಿಗೆಗೆ ಮನೆಗಳನ್ನು ಪಡೆದು ಪೇಯಿಂಗ್ ಗೆಸ್ಟ್ ವಸತಿಗೆ ಪರಿವರ್ತಿಸುವುದು ಸಹ ಈ ಭಾಗದಲ್ಲಿ ಸಾಮಾನ್ಯವಾಗಿದೆ' ಎಂದು ಅವರು ತಿಳಿಸಿದ್ದಾರೆ.












Click it and Unblock the Notifications