ಬೆಂಗಳೂರು ಸಮೀಪ ಹೊಸ ವಿಮಾನ ನಿಲ್ದಾಣಕ್ಕೆ 12 ಹಳ್ಳಿಗಳ 2,900 ಎಕರೆ ಭೂಸ್ವಾಧೀನ
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಇನ್ನೂ ಜಾಗ ಜಾಗ ನಿಗದಿಯಾಗಿಲ್ಲ. ಆದರೆ ತಲಾ 4,500 ಎಕರೆಗಳನ್ನು ಗುರುತಿಸಿ ಕಾರ್ಯಸಾಧ್ಯತಾ ಅಧ್ಯಯನಕ್ಕಾಗಿ ಟೆಂಡರ್ ಕರೆದಿದೆ. ಆದರೆ ಪಕ್ಕದ ತಮಿಳುನಾಡು ಸರ್ಕಾರ ಬೆಂಗಳೂರಿನ ಸಮೀಪದಲ್ಲೇ ಹೊಸ ವಿಮಾನ ನಿಲ್ದಾಣ ನಿರ್ಮಾಣ ಕಾರ್ಯವನ್ನು ಚುರುಕುಗೊಳಿಸಿದೆ. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ 12 ಹಳ್ಳಿಗಳಲ್ಲಿ ಸುಮಾರು 2,900 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ.
ಈ ಭಾಗದಲ್ಲಿ ಸರ್ಕಾರಿ ಸ್ವಾಮ್ಯದ 800 ಎಕರೆ ಸೇರಿದಂತೆ 2,900 ಎಕರೆ ಭೂಮಿಯನ್ನು ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿದೆ. ಬೆಂಗಳೂರಿಗೆ ಬಹಳ ಹತ್ತಿರದಲ್ಲಿರುವ ಹಾಗೂ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕಾ ನಗರವಾದ ಹೊಸೂರು ಸಮೀಪ ಈ ಹೊಸ ವಿಮಾನ ನಿಲ್ದಾಣ ತಲೆ ಎತ್ತಲಿದೆ.

ಕರ್ನಾಟಕಕ್ಕೆ ಟಕ್ಕರ್ ಕೊಡಲು ಮುಂದಾಗಿರುವ ತಮಿಳುನಾಡು, ತನ್ನ ಹೊಸ ವಿಮಾನ ನಿಲ್ದಾಣವನ್ನು ಅಭಿವೃದ್ಧಿಪಡಿಸಲು ವಿವರವಾದ ತಾಂತ್ರಿಕ ಆರ್ಥಿಕ ವರದಿ (ಡಿಟಿಇಆರ್) ತಯಾರಿಸುವ ಸಲುವಾಗಿ ಸಲಹೆಗಾರರನ್ನು ಆಯ್ಕೆ ಮಾಡಲು ಸರ್ಕಾರ ಕಳೆದ ತಿಂಗಳೇ ಟೆಂಡರ್ ಕರೆದಿತ್ತು. ಅಲ್ಲದೆ ಸ್ಥಳ ಅನುಮತಿಗಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯದ ಮೆಟ್ಟಿಲೇರಿತ್ತು.
ಯಾವ ಗ್ರಾಮಗಳಲ್ಲಿ ಸ್ವಾಧೀನ?
ಹೊಸೂರು ವಿಮಾನ ನಿಲ್ದಾಣಕ್ಕೆ ಕೃಷಿ ಭೂಮಿಯೂ ಸೇರಿ 2,134 ಎಕರೆ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂದು ಈ ಯೋಜನೆ ಉದ್ದೇಶಿಸಿದ್ದು, ಒಟ್ಟಾರೆ ವಿಮಾನ ನಿಲ್ದಾಣ ಯೋಜನೆಗಾಗಿ 2,979 ಎಕರೆಗಳನ್ನು ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಹೊಸೂರು ತಾಲ್ಲೂಕಿನ 10 ಗ್ರಾಮಗಳು ಹಾಗೂ ಶೂಲಗಿರಿ ತಾಲ್ಲೂಕಿನ 2 ಗ್ರಾಮಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ. ಕಾರುಪಲ್ಲಿ, ನಂದಿಮಂಗಲಂ, ಸೂಡುಕೊಂಡಪಲ್ಲಿ, ಮಿದುಡೆಪಲ್ಲಿ ಮತ್ತು ವೆಂಕಟೇಶಪುರಂ, ಬಲವನಪಲ್ಲಿ, ಮುತಾಲಿ, ಅತ್ತೂರು, ಅಲೆನಾಥಂ, ಅಡವನಪಲ್ಲಿ, ದಾಸಪಲ್ಲಿ, ಪೇಡ ಮುತಾಲಿ ಗ್ರಾಮಗಳಲ್ಲಿ ಈಗ ಭೂಸ್ವಾಧೀನ ಪ್ರಕ್ರಿಯೆ ಶುರುವಾಗಲಿದೆ.
ಎಲ್‌ಡಿಪಿ ಅನುಮೋದನೆ ಪಡೆದ ನಂತರ ಇದನ್ನು ಆಡಳಿತಾತ್ಮಕ ಅನುಮೋದನೆಗಾಗಿ ವಿವಿಧ ಇಲಾಖೆಗಳಿಗೆ ಕಳುಹಿಸಿ ನಂತರ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ. ಇದಾದ ನಂತರ ಭೂಮಿಯನ್ನು ಸ್ವಾಧೀನ ಆರಂಭಗೊಳ್ಳಲಿದೆ. ಫೆಬ್ರವರಿ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದ್ದು, ಈಗ ಎಲ್ಲದಕ್ಕೂ ಅನುಮೋದನೆಗಳಿಗೆ ಕಾಯುತ್ತಿವೆ.

ಈಗ ಹೊಸೂರು ವಿಮಾನ ನಿಲ್ದಾಣಕ್ಕಾಗಿ ಆಯ್ಕೆ ಮಾಡಲಾದ ಸ್ಥಳವು ಬೆರಿಗೈ ಬಾಗಲೂರು ಬೆಂಗಳೂರು ಸ್ಯಾಟಲೈಟ್ ಟೌನ್ ರಿಂಗ್ ರಸ್ತೆಯ (ಎಸ್‌ಟಿಆರ್‌ಆರ್) ತಮಿಳುನಾಡು ವಿಭಾಗಕ್ಕೆ ಸಮೀಪದಲ್ಲೇ ಇದೆ. ಈ ಹೊಸ ವಿಮಾನ ನಿಲ್ದಾಣವು 500ಕ್ಕೂ ಹೆಚ್ಚು ಕೈಗಾರಿಕೆಗಳು ಮತ್ತು ಸುಮಾರು 3,000 ಎಂಎಸ್‌ಎಂಇ ಘಟಕಗಳನ್ನು ಹೊಂದಿದೆ. ಹೀಗಾಗಿ ಪ್ರಯಾಣಿಕರಿಗೆ ಮಾತ್ರವಲ್ಲ, ಸರಕು ಸಾಗಣೆಯಲ್ಲೂ ಈ ಏರ್‌ಪೋರ್ಟ್ ಪ್ರಮುಖ ಪಾತ್ರ ವಹಿಸಲಿದೆ.
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ 150 ಕಿ.ಮೀ ಒಳಗೆ 2033ರವರೆಗೆ ಯಾವುದೇ ವಿಮಾನ ನಿಲ್ದಾಣ ನಿರ್ಮಿಸುವಂತಿಲ್ಲ ಎಂಬ ಒಪ್ಪಂದವಿದೆ. ಇದು ಮುಗಿದ ನಂತರ ವಿನಾಯಿತಿ ಪಡೆಯಲು ಅಥವಾ ಯೋಜನೆಯನ್ನು ಕಾರ್ಯಗತಗೊಳಿಸಲು ಮತ್ತೊಂದು ಒಪ್ಪಂದ ಮಾಡಿಕೊಳ್ಳಲು ತಮಿಳುನಾಡು ಮುಂದಾಗಿದೆ.












Click it and Unblock the Notifications