14 ವರ್ಷದ ಹಳೇ ದಾಖಲೆ ಮುರಿದ ಬೆಂಗಳೂರು ಮುಂಗಾರು ಮಳೆ!
ಬೆಂಗಳೂರು, ಜುಲೈ 22: ರಾಜಧಾನಿ ಬೆಂಗಳೂರಿನ ಹವಾಮಾನ ದೇಶಾದ್ಯಂತ ಖ್ಯಾತಿ ಪಡೆದಿದೆ. ಅದರಲ್ಲೂ ಬೆಂಗಳೂರಿನಲ್ಲಿ ಮಳೆಯಾದರೆ ಟ್ವಿಟರ್ ನಲ್ಲಿ ಟ್ರೆಂಡಿಂಗ್ ಆಗುವಷ್ಟು ಬೆಂಗಳೂರಿಗರು ಮಳೆಯನ್ನು ಆಸ್ವಾದಿಸುತ್ತಾರೆ. ಭಾರೀ ಮಳೆಯಿಂದ ಹಲವೆಡೆ ಸಮಸ್ಯೆಯಾಗುವುದು ಇದೆ. ಜನಪ್ರತಿನಿಧಿಗಳಿಗೆ ಜನರ ಹಿಡಿಶಾಪ ಹಾಕಿದ ಉದಾಹರಣೆಗಳೂ ಇದೆ. ಇಂತಹ ಬೆಂಗಳೂರು ಮಳೆ ಈಗ 14 ವರ್ಷದ ಹಿಂದಿನ ದಾಖಲೆಯೊಂದನ್ನು ಅಳಿಸಿ ಹಾಕಿದೆ.
ಹೌದು, ಬೆಂಗಳೂರು ಈಗ 14 ವರ್ಷಗಳಲ್ಲಿ ಜುಲೈನಲ್ಲಿ ಅತಿ ಹೆಚ್ಚು ದೈನಂದಿನ ಮಳೆಯನ್ನು ಕಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ವೀಕ್ಷಣಾಲಯದ ಅಂಕಿಅಂಶಗಳು ತಿಳಿಸಿವೆ. ಉದ್ಯಾನ ನಗರಿ ಬೆಂಗಳೂರು ಹವಾಮಾನದ ವಿಚಾರದಲ್ಲಿ ಈ ವರ್ಷ ಹಲವು ದಾಖಲೆಗಳನ್ನು ಬರೆದಿದೆ.
ಏಳು ವರ್ಷಗಳಲ್ಲಿ ಅತ್ಯಂತ ತೇವವಾದ (Wettest) ಏಪ್ರಿಲ್, 10 ವರ್ಷಗಳಲ್ಲಿ ಅತ್ಯಂತ ಶೀತ ಮೇ ಮತ್ತು 10 ವರ್ಷಗಳಲ್ಲಿ ಅತಿ ಹೆಚ್ಚು ತೇವವಾದ (Wettest) ಜೂನ್ ದಾಖಲಾದ ನಂತರ, ಜುಲೈನಲ್ಲಿ ಅತ್ಯಂತ ಹೆಚ್ಚು ಮಳೆ ಸುರಿದ ವರ್ಷ ಎನಿಸಿಕೊಂಡಿದೆ.

24 ಗಂಟೆಗಳಲ್ಲಿ 133.4 ಮಿ.ಮೀ. ದಾಖಲೆ ಮಳೆ
"ಬೆಂಗಳೂರು ನಗರ ಭಾರತೀಯ ಹವಾಮಾನ ಇಲಾಖೆ ವೀಕ್ಷಣಾಲಯವು ಬುಧವಾರ ರಾತ್ರಿ 82.6 ಮಿ. ಮೀ. ಮಳೆಯನ್ನು ದಾಖಲಿಸುವ ಮೂಲಕ ಜುಲೈ ತಿಂಗಳಿನಲ್ಲಿ 14 ವರ್ಷಗಳಲ್ಲಿ ಅತಿ ಹೆಚ್ಚು 24 ಗಂಟೆಗಳ ಮಳೆಯನ್ನು ಕಂಡಿದೆ. ಸರಾಸರಿ 133.4 ಮಿಮೀ ದಾಖಲಾಗುವ ಮೂಲಕ ನಗರವು ಜುಲೈ ತಿಂಗಳ 116.4 ಮಿ. ಮೀ. ಇದ್ದ ಸರಾಸರಿ ಮಳೆಯ ಹಳೆಯ ದಾಖಲೆಯನ್ನು ಅಳಿಸಿ ಹೊಸ ದಾಖಲೆ ಬರೆದಿದೆ" ಎಂದು ಬೆಂಗಳೂರು ವೆದರ್ ಎಂಬ ಖಾತೆಯಲ್ಲಿ ಟ್ವೀಟ್ ಮಾಡಿದೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಮಳೆ ಪ್ರಮಾಣ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNMDC) ಪ್ರಕಾರ, ಪೂರ್ವ ಬೆಂಗಳೂರಿನ ಸಂಪಂಗಿರಾಮ ನಗರದಲ್ಲಿ ಗುರುವಾರ ಬೆಳಿಗ್ಗೆ 8.30 ರವರೆಗಿನ 24 ಗಂಟೆಗಳಲ್ಲಿ 79.5 ಮಿ. ಮೀ. ಮಳೆಯಾಗಿದೆ ಎಂದು ಹೇಳಿದೆ.
ಪೂರ್ವ ವಲಯದ ಪುಲಕೇಶಿನಗರ ಮತ್ತು ಪಶ್ಚಿಮ ವಲಯದ ಕಾಟನ್‌ಪೇಟೆಯಲ್ಲಿ ತಲಾ 64.5 ಮಿ. ಮೀ. ಮಳೆಯಾಗಿದ್ದು, ಮಹದೇವಪುರ ವಲಯದ ಹಗಡೂರಿನಲ್ಲಿ 70.5 ಮಿ. ಮೀ. ಮಳೆ ದಾಖಲಾಗಿದೆ ಎಂದು ಕೆಎಸ್‌ಎನ್‌ಎಂಡಿಸಿ ತಿಳಿಸಿದೆ. ಜುಲೈ 21 ರ ಮಧ್ಯರಾತ್ರಿಯ ನಂತರ ಅರ್ಧ ಗಂಟೆಯೊಳಗೆ ಬೆಂಗಳೂರಿನಲ್ಲಿ 30 ಮಿ. ಮೀ. ಮಳೆಯಾಗಿದೆ ಎಂದು ಸ್ವಯಂಚಾಲಿತ ಹವಾಮಾನ ಕೇಂದ್ರ (IMD AWS) ಹೇಳಿದೆ.

ಜೂನ್ ತಿಂಗಳಲ್ಲೂ ದಾಖಲೆಯ ಮಳೆ
ಜೂನ್‌ನ ಮೊದಲ 23 ದಿನಗಳಲ್ಲಿ ಬೆಂಗಳೂರಿನಲ್ಲಿ 198.5 ಮಿ. ಮೀ. ಮಳೆ ದಾಖಲಾಗಿದ್ದು, 10 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದು ಒಂದು ದಶಕದಲ್ಲೇ ಅತಿ ಹೆಚ್ಚು ಮಳೆಯಾಗಿದೆ.
ಕರ್ನಾಟಕವು ಇತ್ತೀಚೆಗೆ ವಿಶೇಷವಾಗಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ತತ್ತರಿಸಿದೆ. ಜೂನ್ 1 ಮತ್ತು ಜುಲೈ 17 ರ ನಡುವೆ 347.60 ಮಿ. ಮೀ. ವಾಡಿಕೆಯಂತೆ 450.20 ಮಿ. ಮೀ. ಮಳೆಯಾಗಿದ್ದು, ಸುಮಾರು 30 ಪ್ರತಿಶತ ಹೆಚ್ಚುವರಿ ಮಳೆಯನ್ನು ದಾಖಲಿಸಿದೆ, ಧಾರಾಕಾರ ಮಳೆಯಿಂದ ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ಸಾಕಷ್ಟು ಆಸ್ತಿ, ಜೀವ ಹಾನಿ ಸಂಭವಿಸಿದೆ.

ಮೇ ತಿಂಗಳಲ್ಲಿ ಚಳಿಯಲ್ಲಿ ದಾಖಲೆ
ಮೇ 14, 1972ರಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 22.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಮೇ 13ರ ಗುರುವಾರ ಸಂಜೆ 5.30ರ ವೇಳೆಗೆ ತಾಪಮಾನ 11 ಡಿಗ್ರಿ ಸೆಲ್ಸಿಯಸ್ ಕುಸಿತ ಕಂಡು 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ವರದಿ ಮಾಡಿತ್ತು. ಸಾಮಾನ್ಯ ಕನಿಷ್ಠ ತಾಪಮಾನಕ್ಕಿಂತ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದ್ದು,19.5 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.
ಮೇ 11 ರಂದು ನಗರದಲ್ಲಿ 24.3 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು, ಇದು ಕಳೆದ ಹತ್ತು ವರ್ಷದಲ್ಲೇ ಬೆಂಗಳೂರಿನಲ್ಲಿ ದಾಖಲಾದ ಚಳಿ ದಿನವಾಗಿತ್ತು. ಅಸಾನಿ ಚಂಡಮಾರುತದ ಪ್ರಭಾವವೇ ಬೆಂಗಳೂರಿನಲ್ಲಿ ತಾಪಮಾನ ಕಡಿಮೆಯಾಗಲು ಕಾರಣ ಎಂದು ಭಾರತೀಯ ಹವಾಮಾನ ಇಲಾಖೆಗಳು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದರು.












Click it and Unblock the Notifications