• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಂಬರ್ ಪ್ಲೇಟ್‌ ವಿಚಾರದಲ್ಲಿ ಗೊಂದಲಕ್ಕೆ ಸಾರಿಗೆ ಇಲಾಖೆ ಸ್ಪಷ್ಟನೆ

|
Google Oneindia Kannada News

ಬೆಂಗಳೂರು, ಮೇ 14: ನಂಬರ್ ಪ್ಲೇಟ್‌ ವಿಚಾರದಲ್ಲಿನ ಗೊಂದಲದಿಂದ ಹೈರಾಣಾಗಿದ್ದ ವಾಹನ ಸವಾರರಿಗೆ ಸಾರಿಗೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, 2019 ಏಪ್ರಿಲ್ 1ಕ್ಕಿಂತ ಮೊದಲು ಖರೀದಿಸಿದ ವಾಹನಗಳಿಗೆ ಅತಿ ಸುರಕ್ಷತೆಯ ನೋಂದಣಿ ಫಲಕ (ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್) ಕಡ್ಡಾಯವಲ್ಲ ಎಂದು ಹೇಳಿದೆ.

ನಂಬರ್ ಪ್ಲೇಟ್ ಬದಲಾಯಿಸುವಂತೆ ಕೆಲವು ಸಂಚಾರ ಪೊಲೀಸ್ ಸಿಬ್ಬಂದಿ ಒತ್ತಾಯಿಸುತ್ತಿರುವ ಹಿನ್ನೆಲೆ ಸಾರಿಗೆ ಇಲಾಖೆ ಸ್ಪಷ್ಟನೆಯಿಂದ ವಾಹನ ಸವಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಏಪ್ರಿಲ್ 1, 2019ರಿಂದ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್‌ಎಸ್‌ಆರ್‍‌ಪಿ) ಕಡ್ಡಾಯ ಎನ್ನುವ ನಿಯಮ ಜಾರಿಯಾಗಿದೆ. ನಿಯಮದ ಪ್ರಕಾರ ಏಪ್ರಿಲ್ 1, 2019ರ ನಂತರ ಖರೀದಿಸಿದ ಅಥವಾ ನೋಂದಣಿ ಆಗಿರುವ ವಾಹನಗಳಿಗೆ ಎಚ್‌ಎಸ್‌ಆರ್‍‌ಪಿ ಕಡ್ಡಾಯವಾಗಿದೆ.

ಆದರೆ ಅದಕ್ಕೂ ಮೊದಲು ನೋಂದಣಿಯಾಗಿರುವ ವಾಹನಗಳಿಗೆ ಎಚ್‌ಎಸ್‌ಆರ್‍‌ಪಿ ಕಡ್ಡಾಯವಲ್ಲ, ಈ ವಾಹನಗಳಿಗೆ ಪೊಲೀಸರು ದಂಡ ಹಾಕುವಂತಿಲ್ಲ. ಆದರೆ ಕೆಲವು ಪೊಲೀಸ್ ಸಿಬ್ಬಂದಿ ನಿಯಮ ಮೀರಿ ಎಚ್‌ಎಸ್‌ಆರ್‍‌ಪಿ ಇಲ್ಲ ಎಂದು ದಂಡ ಹಾಕುತ್ತಿದ್ದಾರೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದರು.

 ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದ್ದ ನಿಯಮ

ಸಾರ್ವಜನಿಕರ ಆಕ್ರೊಶಕ್ಕೆ ಕಾರಣವಾಗಿದ್ದ ನಿಯಮ

"ವಿಜಯನಗರದಲ್ಲಿ ಸಂಚಾರ ಪೊಲೀಸರು ತಪಾಸಣೆಗೆ ತಡೆದ ವೇಳೆ ಡಿಎಲ್, ವಿಮೆ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಪೊಲೀಸ್ ಸಿಬ್ಬಂದಿ ನಂಬರ್ ಪ್ಲೇಟ್ ಬದಲಾಯಿಸಿ ಎಂದು ಹೇಳಿದರು. ಇದು ಹೊಸ ವಾಹನಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿದರೂ ಕೇಳದ ಪೊಲೀಸರು ಎಲ್ಲಾ ವಾಹನಗಳಿಗೂ ಕಡ್ಡಾಯ ಎಂದು ವಾದ ಮಾಡಿದರು. ಎಚ್‌ಎಸ್‌ಆರ್‍‌ಪಿ ಅಳವಡಿಕೆಗೆ ಕೊನೆ ದಿನಾಂಕ ಯಾವಾಗ ಎಂದು ಕೇಳಿದಾಗ ಸಮರ್ಪಕ ಉತ್ತರ ಕೊಡದೆ ಪೊಲೀಸರು ಹೊಸ ನಂಬರ್ ಪ್ಲೇಟ್ ಹಾಕಿಸಿಕೊಳ್ಳುವಂತೆ ಒತ್ತಾಯಿಸಿದರು,'' ಎಂದು ವಾಹನ ಸವಾರ ಶಿವಪ್ರಸಾದ್ ಹೇಳುತ್ತಾರೆ.

ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಅಳವಡಿಸುವ ಕುರಿತು ಸಂಚಾರ ಪೊಲೀಸರ ಈ ವರ್ತನೆ ಬಗ್ಗೆ ಇದೇ ರೀತಿಯ ಹಲವಾರು ದೂರುಗಳು ಕೇಳಿಬಂದಿದ್ದವು. ಈಗ ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸ್ ವಿಭಾಗ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಏಪ್ರಿಲ್ 2019ರ ಮೊದಲು ಖರೀದಿಸಿದ ವಾಹನಗಳಿಗೆ ಎಚ್‌ಎಸ್‌ಆರ್‍‌ಪಿ ಕಡ್ಡಾಯವಲ್ಲ ಎಂದು ಹೇಳಿದೆ.

ಏಪ್ರಿಲ್ 2019ಕ್ಕೂ ಮೊದಲು ಕರ್ನಾಟಕದಲ್ಲಿ 1.75 ಕೋಟಿಗೂ ಅಧಿಕ ವಾಹನಗಳು ನೋಂದಣಿಯಾಗಿವೆ. ನಂಬರ್ ಪ್ಲೇಟ್ ಅಳವಡಿಕೆ ವಿಚಾರದಲ್ಲಿ ಸಂಚಾರ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕ ದೂರುಗಳು ಹೆಚ್ಚಾಗಿದ್ದವು. ನಿಯಮ ಮೀರಿ ದಂಡ ವಿಧಿಸುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತಮಗಾದ ಅನುಭವವನ್ನು ಹೇಳಿಕೊಂಡು ಹಲವು ವಾಹನ ಸವಾರರು ಸಂಚಾರಿ ಪೊಲೀಸರ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿದ್ದರು.

ಸಾರಿಗೆ ಆಯುಕ್ತರ ಸ್ಪಷ್ಟನೆ:

ಸಾರಿಗೆ ಆಯುಕ್ತರ ಸ್ಪಷ್ಟನೆ:

"ಹಳೆಯ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯವಲ್ಲ. ಏಪ್ರಿಲ್ 2019ರ ನಂತರ ಖರೀದಿಸಿದ ವಾಹನಗಳಿಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ. ಪರವಾನಗಿ ಪಡೆದ ಮಾರಾಟಗಾರರ ಮೂಲಕ, ನೋಂದಣಿ ಫಲಕ ಸರಿಪಡಿಸಬೇಕು, ಎಚ್‌ಎಸ್‌ಆರ್‍‌ಪಿ ಪೂರೈಕೆ ಮತ್ತು ಅಳವಡಿಕೆಗಾಗಿ ಟೆಂಡರ್‍‌ ಕರೆಯಲಾಗಿತ್ತು. ಕಾನೂನು ಸಮಸ್ಯೆಯಿಂದಾಗಿ ಟೆಂಡರ್ ಪ್ರಕ್ರಿಯೆ ಸ್ಥಗಿತವಾಗಿದ್ದು, ಈ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಣಯ ತೆಗೆದುಕೊಳ್ಳಬೇಕಿದೆ," ಎಂದು ಸಾರಿಗೆ ಇಲಾಖೆ ಆಯುಕ್ತ ಎನ್‌.ಶಿವಕುಮಾರ್ ತಿಳಿಸಿದ್ದಾರೆ.


"ಹಳೆಯ ವಾಹನಗಳಿಗೆ ಎಸ್‌ಎಸ್‌ಆರ್‍‌ಪಿ ಅಳವಡಿಸಿ ಎಂದು ಪೊಲೀಸರು ಒತ್ತಾಯಿಸುವಂತಿಲ್ಲ ಎಂದ ಅವರು, ಮೋಟಾರು ವಾಹನಗಳ ನಿಯಮದ ಪ್ರಕಾರ ನಂಬರ್ ಪ್ಲೇಟ್ ಅಳವಡಿಸಬೇಕು. ದೋಷಯುಕ್ತ ನಂಬರ್ ಪ್ಲೇಟ್‌ ಅಳವಡಿಸಿಕೊಂಡ ಚಾಲಕರಿಗೆ ದಂಡ ವಿಧಿಸಬಹುದು" ಎಂದು ತಿಳಿಸಿದರು

ಪೊಲೀಸ್ ಆಯುಕ್ತರು ಹೇಳಿದ್ದೇನು?

ಪೊಲೀಸ್ ಆಯುಕ್ತರು ಹೇಳಿದ್ದೇನು?

ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್‍‌. ಜೈನ್ ಮಾತನಾಡಿ, "ವಾಹನ ಸವಾರರು ಹಳೆ ನಂಬರ್ ಪ್ಲೇಟ್ ಬದಲಾಯಿಸುವಂತೆ ಹೇಳಲು ಸಂಚಾರ ಪೊಲೀಸರಿಗೆ ಯಾವುದೇ ಸೂಚನೆ ನೀಡಿಲ್ಲ, ನಂಬರ್ ಪ್ಲೇಟ್‌ ಕುರಿತಂತೆ ಇರುವ ನಿಯಮಗಳನ್ನು ಅನುಸರಿಸಬೇಕು" ಎಂದಿದ್ದಾರೆ

ಏನಿದು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್?

ಏನಿದು ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್?

2018ರಲ್ಲಿ ಕೇಂದ್ರ ಸರ್ಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ನಿಯಮ ಘೋಷಿಸಿತ್ತು, ಏಪ್ರಿಲ್ 1,2019ರಿಂದ ಈ ನಿಯಮ ಜಾರಿಯಾಗಿದೆ. ಮೋಟಾರು ವಾಹನ ಕಾನೂನಿಗೆ ತಿದ್ದುಪಡಿ ತಂದ ಕೇಂದ್ರ ಸಚಿವ ನಿತಿನ್ ಗಡ್ಕರಿ, ಹೊಸ ನಿಯಮ ಜಾರಿಗೆ ತಂದಿದ್ದರು. ಈ ನೋಂದಣಿ ಫಲಕದಲ್ಲಿ ಕ್ರೋಮಿಯಂ ಹಾಲೋಗ್ರಾಮ್ ಸ್ಟಾಂಪ್ ಅಳವಡಿಸಲಾಗುತ್ತದೆ. ಈ ಸ್ಟಾಂಪ್ ಸ್ಕ್ಯಾನ್ ಮಾಡಿದರೆ ವಾಹನ ಸಂಪೂರ್ಣ ಮಾಹಿತಿ ಪಡೆಯಬಹುದಾಗಿದೆ.

ವಾಹನದ ನೋಂದಣಿ, ವಿಮೆ, ಮಾಲೀಕರ ವಿಳಾಸ ಸೇರಿದಂತೆ ಎಲ್ಲಾ ಮಾಹಿತಿ ಇದರಲ್ಲಿ ಅಡಕವಾಗಿರುತ್ತದೆ. ಪೊಲೀಸರು ಸ್ಕ್ಯಾನ್ ಮಾಡಿದ ತಕ್ಷಣ ಎಲ್ಲಾ ಮಾಹಿತಿ ಲಭ್ಯವಾಗಲಿದೆ. ಸಿಸಿಟಿವಿ ಮುಖಾಂತರ ವಾಹನ ತಪಾಸಣೆ ಮಾಡಲು, ವಾಹನದ ನೋಂದಣಿ ಸಂಖ್ಯೆ ಪತ್ತೆ ಹಚ್ಚಲು ಎಚ್‌ಎಸ್‌ಆರ್‍‌ಪಿ ನಂಬರ್‍‌ ಪ್ಲೇಟ್ ನೆರವಾಗಲಿದೆ. ಭದ್ರತೆ, ನಕಲಿ ನಂಬರ್ ಪ್ಲೇಟ್‌ ಸೇರಿದಂತೆ ಹಲವು ಸಮಸ್ಯೆಗಳ ನಿವಾರಿಸುವಲ್ಲಿ ಎಚ್‌ಎಸ್‌ಆರ್‍‌ಪಿ ಸಹಾಯಕವಾಗಲಿದೆ ಎನ್ನಲಾಗಿದೆ. ಈ ಕಾರಣಕ್ಕೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ ಕಡ್ಡಾಯ ಮಾಡಲಾಗಿದೆ.

English summary
Transport Department clarified High security number plates only for vehicles registered in Karnataka after April 1, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X