Bengaluru Rain: ಬೆಂಗಳೂರಿನತ್ತ ಮತ್ತೆ ವರುಣನ ವಕ್ರದೃಷ್ಟಿ, ಹಲವೆಡೆ ಜೋರು ಮಳೆ!
ವೀಕೆಂಡ್ ಮೂಡ್‌ನಲ್ಲಿದ್ದ ಸಿಲಿಕಾನ್ ಸಿಟಿ ಮಂದಿಗೆ ಮಳೆ ಮತ್ತೆ ಜೊತೆಯಾಗಿದೆ. ನಿನ್ನೆಯೂ ಧಾರಾಕಾರ ಮಳೆಯಿಂದ ನಗರವಾಸಿಗಳು ನೊಂದಿದ್ದರು. ಇಂದಾದರೂ ವರುಣ ವೀಕೆಂಡ್ ರಜೆ ಪಡೆಯಬಹುದು ಎಂದು ಭಾವಿಸಿದ್ದರು. ಆದರೆ, ಮಳೆ ನಾ ನಿನ್ನ ಬಿಡಲಾರೆ ಎಂದು ಮತ್ತೆ ಆರ್ಭಟಿಸುತ್ತಿದೆ.
ಬೆಂಗಳೂರು ದಕ್ಷಿಣ ಭಾಗದ ಬಹುತೇಕ ಕಡೆಗಳಲ್ಲಿ ವರುಣಾರ್ಭಟ ಶುರುವಾಗಿದೆ. ಇದರಿಂದ ಜನರ ವೀಕೆಂಡ್ ಮೂಡ್ ಹಾಳಾಗಿದೆ. ಬಸವನಗುಡಿ, ಬನಶಂಕರಿ, ಜೆ.ಪಿ.ನಗರ, ಜಯನಗರ ಸೇರಿದಂತೆ ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ ಸುರಿಯುತ್ತಿದೆ.

ಇನ್ನು ಕೆಲವು ಏರಿಯಾಗಳಲ್ಲಿ ತುಂತುರು ಮಳೆ ಬೀಳುತ್ತಿದ್ದರೆ, ಹಲವೆಡೆ ಗುಡುಗು ಸಹಿತ ಮಳೆಯಾಗುತ್ತಿದೆ. ಮಳೆ ಜೊತೆಗೆ ಬೆಂಗಳೂರಿನಲ್ಲಿ ಗಾಳಿ ಕೂಡ ಜೋರಾಗಿ ಬೀಸುತ್ತಿದೆ. ಇಂದು ನಗರದಲ್ಲಿ ಆಗಾಗ ಮಳೆಯಾಗುತ್ತಲೇ ಇದ್ದು, ಸಂಜೆಯಿಂದ ಜೋರು ಮಳೆ ವರದಿಯಾಗಿದೆ.
ಧಾರಾಕಾರ ಮಳೆಗೆ ಹಲವು ಸ್ಥಳಗಳಲ್ಲಿ ಜಲಾವೃತವಾಗಿದೆ. ಇದರಿಂದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವೂ ಆಗಿ ಕತ್ತಲೆ ಆವರಿಸಿದೆ. ಇನ್ನು ಬಸವೇಶ್ವರ ನಗರ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ಯಶವಂತಪುರ, ಹೆಬ್ಬಾಳ ಸೇರಿದಂತೆ ಎಲ್ಲೆಡೆಯೂ ಭಾರಿ ಸುರಿದಿದೆ. ಹವಾಮಾನ ಇಲಾಖೆಯ ಪ್ರಕಾರ ಬೆಂಗಳೂರಿನಲ್ಲಿ ಇನ್ನೂ ಕೆಲ ಗಂಟೆಗಳ ಕಾಲ ಮಳೆ ಆರ್ಭಟಿಸಲಿದೆ ಎಂದು ಹೇಳಿದೆ.

ಸಹಕಾರನಗರ, ಬ್ಯಾಟರಾಯನಪುರ ವಿಭಾಗದಲ್ಲಿ ಭಾರಿ ಮಳೆಯಿಂದ ರಸ್ತೆಗಳಲ್ಲಿ ಬೃಹದಾಕಾರ ಕೊಂಬೆಗಳು ಬಿದ್ದಿವೆ. ಸ್ಥಳಕ್ಕೆ ಯಲಹಂಕ ವಲಯದ ಬಿಬಿಎಂಪಿ ಅರಣ್ಯ ಇಲಾಖೆ ಸಿಬ್ಬಂದಿ ಬಂದು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ನಾಗವಾರ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ, ವೀರಣ್ಣಪಾಳ್ಯ ಕಡೆಗೆ ನಿಧಾನಗತಿಯ ಸಂಚಾರವಿದೆ. ಹಾಗಾಗಿ, ಪ್ರಯಾಣಿಕರು ಸಹಕರಿಸುವಂತೆ ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಕರ್ನಾಟಕದ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಸತತ ಮಳೆಯಾಗುತ್ತಿದೆ. ಮುಂದಿನ ಎರಡು ಮೂರು ದಿನವೂ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಇಂದಿನಿಂದ ಇನ್ನೂ ಮೂರು ದಿನ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು 141 ಮಿಲಿಮೀಟರ್ ಮಳೆ ದಾಖಲಾಗಿದೆ.
Insane downpour over parts of BENGALURU city ⛈️⚡
— Karnataka Weather (@Bnglrweatherman) October 20, 2024
Stay safe 🙏
📸: Ravi Gowda 📍 Global Village Tech Park#KarnatakaRains #BengaluruRains #BangaloreRains #Bangalore https://t.co/AzyxTKZ9BN pic.twitter.com/he4Dlw6SaY
ಭಾರಿ ಮಳೆಯಾಗುವ ಹಿನ್ನೆಲೆ 11 ಜಿಲ್ಲೆಗಳಲ್ಲಿ ಈಗಾಗಲೇ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಕ್ಟೋಬರ್ 21ರ ಸೋಮವಾರವೂ (ನಾಳೆ) ಮಳೆಯ ಪ್ರಮಾಣ ಇನ್ನೂ ಹೆಚ್ಚಾಗಲಿದೆಯಂತೆ. ಇನ್ನೂ ಕೆಲವು ಭಾಗಗಳಲ್ಲಿ ಮಳೆ ಇರುವುದಿಲ್ಲ. ಆದರೆ, ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಉತ್ತರ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಹಾವೇರಿ, ಗದಗ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲೂ ಇನ್ನೂ ಎರಡು ಮೂರು ದಿನ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ನಿರಂತರ ಮಳೆಯಿಂದಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಜನ ತತ್ತರಿಸಿದ್ದಾರೆ.












Click it and Unblock the Notifications