ಬೆಂಗಳೂರಲ್ಲಿ ಎಲ್ಲೆಂದರಲ್ಲಿ ಕಸ ಎಸೆದರೆ ದುಬಾರಿ ದಂಡ!
ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ಬುದ್ಧಿ ಕಲಿಸುವುದಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರಿಗೆ ದುಬಾರಿ ದಂಡ ವಿಧಿಸುವುದಕ್ಕೆ ಬಿಬಿಎಂಪಿಯ ಅಧಿಕಾರಿಗಳು ಮುಂದಾಗಿದ್ದಾರೆ. ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಈ ಸಮಸ್ಯೆಗೆ ಕಡಿವಾಣ ಹಾಕುವುದಕ್ಕೆ ಮುಂದಾಗಿದೆ.
ಬೆಂಗಳೂರಿನ ಪೂರ್ವ ವಲಯ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ರಸ್ತೆ ಅಕ್ಕ ಪಕ್ಕದಲ್ಲಿ ಕಸ ಎಸೆಯುವವರನ್ನು ಗುರುತಿಸಿ, ದಂಡ ವಿಧಿಸಿ, ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಪೂರ್ವ ವಲಯ ಆಯುಕ್ತರಾದ ಸ್ನೇಹಲ್ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬೆಂಗಳೂರಿನ ವಿವಿಧ ವಲಯದಲ್ಲೂ ಇದೇ ಮಾದರಿಯನ್ನು ಅನುಸರಿಸುವ ಸಾಧ್ಯತೆ ಇದೆ. ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಬ್ಲ್ಯಾಕ್ ಸ್ಪಾಟ್‌ಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಹೀಗಾಗಿ ಇದಕ್ಕೆ ಬ್ರೇಕ್ ಹಾಕುವುದಕ್ಕೆ ಬಿಬಿಎಂಪಿ ಮುಂದಾಗಿದೆ.

ವಲಯ ಮಟ್ಟದಲ್ಲಿ ವ್ಯವಸ್ಥಿತ ಸ್ವಚ್ಛತಾ ಕಾರ್ಯ ನಿರ್ವಹಣೆ ಜಾರಿಯ ಉದ್ದೇಶದಿಂದ ಬುಧವಾರ ವಾರ್ಡ್ 62 - ರಾಮಸ್ವಾಮಿ ಪಾಳ್ಯದಲ್ಲಿ ಪರಿಶೀಲನೆ ನಡೆಸಿದ ವೇಳೆ, ಅವರು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಪರಿಶೀಲನೆ: ಇನ್ನು ಬೆಂಗಳೂರಿನ ಚಿನ್ನಪ್ಪ ಗಾರ್ಡನ್ ಮುಖ್ಯರಸ್ತೆ ಬಳಿಯ ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಪರಿಶೀಲಿಸಿದ ವಲಯ ಆಯುಕ್ತರು, ಆಟೋ ಟಿಪ್ಪರ್ ಚಾಲಕರ ಹಾಜರಾತಿ ಹಾಗೂ ಸಮಯ ಪಾಲನೆ ಪರಿಶೀಲನೆ ನಡೆಸಿ, ಎಲ್ಲಾ ಆಟೋ ಟಿಪ್ಪರ್ ಗಳು ಸ್ಥಳದಲ್ಲಿ ಹಾಜರಿರುವುದನ್ನು ಪರಿಶೀಲನೆ ಮಾಡಿದ್ದಾರೆ. ಮುಂದುವರಿದಂತೆ, ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್ ಮುಂಭಾಗದಲ್ಲಿ ತ್ಯಾಜ್ಯ, ಕಟ್ಟಡ ಭಗ್ನಾವಶೇಷಗಳು ಜಮೆಯಾಗಿದ್ದು, ಅವುಗಳನ್ನು ತೆರವುಗೊಳಿಸಿ ಆ ಸ್ಥಳದಲ್ಲಿ ಮೆಟಲ್ ಶೀಟ್ ಅಳವಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪೌರ ಕಾರ್ಮಿಕರ ಮಸ್ಟರಿಂಗ್ ಪಾಯಿಂಟ್ ಪರಿಶೀಲನೆ: ಚಿನ್ನಪ್ಪ ಗಾರ್ಡನ್, 4ನೇ ಮುಖ್ಯರಸ್ತೆಯಲ್ಲಿರುವ ಪೌರ ಕಾರ್ಮಿಕರ ಮಸ್ಟರಿಂಗ್ ಜಾಗಕ್ಕೆ ಭೇಟಿ ನೀಡಿ, ಪೌರ ಕಾರ್ಮಿಕರ ಹಾಜರಾತಿ ಹಾಗೂ ಸಮಯ ಪಾಲನೆಯನ್ನು ಪರಿಶೀಲಿಸಿ, ನಿಗದಿತ ರಸ್ತೆಗಳ ಸ್ವಚ್ಛತಾ ಕಾರ್ಯವನ್ನು ಕಡ್ಡಾಯವಾಗಿ ನಡೆಸುವಂತೆ, ಕಡ್ಡಾಯವಾಗಿ ಸುರಕ್ಷತಾ ಕೈಗವಸುಗಳನ್ನು ಧರಿಸಲು ಹಾಗೂ ಕಡ್ಡಾಯವಾಗಿ ಸಮಯಕ್ಕೆ ಸರಿಯಾಗಿ ಮಸ್ಟರಿಂಗ್ ಜಾಗದಲ್ಲಿ ಹಾಜರಿರುವಂತೆ ವಲಯ ಆಯುಕ್ತರು ಪೌರಕಾರ್ಮಿಕರಿಗೆ ಸೂಚನೆ ನೀಡಿದ್ದಾರೆ.
ನಿಗದಿತ ಸಮಯದಲ್ಲಿ ಮನೆಗಳಿಂದ ತ್ಯಾಜ್ಯ ಸಂಗ್ರಹಿಸಲು ಸೂಚನೆ: ಎಂ.ಆರ್.ಎಸ್ ಪಾಳ್ಯದ ಮುಂಭಾಗದಲ್ಲಿರುವ ಅಯ್ಯಪ್ಪ ಶಾಲೆಯ ಬಳಿ ಮನೆಮನೆ ತ್ಯಾಜ್ಯ ಸಂಗ್ರಹಣೆಯ ಕಾರ್ಯ ನಿರ್ವಹಣೆ ಪರಿಶೀಲನೆ ನಡೆಸಿ, ನಿಗದಿತ ಸಮಯದಲ್ಲಿ ಕಡ್ಡಾಯವಾಗಿ ತ್ಯಾಜ್ಯ ಸಂಗ್ರಹಿಸಲು ಆಟೋ ಟಿಪ್ಪರ್ ಚಾಲಕರಿಗೆ ಸೂಚನೆ ನೀಡಿದರು.
ಈ ವೇಳೆ ಎಜಿಎಂ ಅಭಿಲಾಷ್, ವಿಭಾಗೀಯ ಮಾರ್ಷಲ್ ಮೇಲ್ವಿಚಾರಕರು, ವಾರ್ಡ್ ಮಾರ್ಷಲ್, ಕಿರಿಯ ಆರೋಗ್ಯ ಪರಿವೀಕ್ಷಕರು, ಪೌರಕಾರ್ಮಿಕರು ಸೇರಿದಂತೆ ಇತರೆ ಸಂಬಂಧಪಟ್ಟ ಸಿಬ್ಬಂದಿಗಳು ಸೇರಿದಂತೆ ಹಲವರು ಇದ್ದರು.












Click it and Unblock the Notifications