ಮಹದಾಯಿ ಕುರಿತು ರಾಜ್ಯದ ನಿಲುವು: ಬೆಳಗಾವಿಯಲ್ಲಿ ಪ್ರಕಟ ಸಾಧ್ಯತೆ
ಬೆಂಗಳೂರು, ಸೆಪ್ಟೆಂಬರ್ 14: ಮಹದಾಯಿ ನದಿ ನೀರಿನ ವಿಚಾರವಾಗಿ ನ್ಯಾಯಾಧಿಕರಣ ನೀಡಿರುವ ತೀರ್ಪಿನ ಕುರಿತಂತೆ ಮುಂದಿನ ಹೋರಾಟ ಕುರಿತು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಶುಕ್ರವಾರ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಮಹದಾಯಿ ನ್ಯಾಯಾಧಿಕರಣದಿಂದ ರಾಜ್ಯಕ್ಕೆ ಅತ್ಯಂತ ಪ್ರಮಾಣದ ನೀರು ಬತ್ತುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಧೀಕರಣದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸಬೇಕೆ ಎನ್ನುವ ಕುರಿತು ಚರ್ಚೆ ನಡೆಸಿದರು.
ಶನಿವಾರ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿರುವ ಕುಮಾರಸ್ವಾಮಿ ಅಲ್ಲಿನ ರೈತರಿಂದ ಮಹದಾಯಿ ವಿಚಾರ ಕುರಿತು ಪ್ರಶ್ನೆ ಎದುರಾಗಬಹುದು ಎನ್ನುವ ಕಾರಣದಿಂದ ತೀರ್ಪಿನ ಸಾಧಕ ಬಾಧಕಗಳ ಕುರಿತು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಅಲ್ಲದೆ ರಾಜ್ಯ ಸರ್ಕಾರ ಕಾನೂನು ಹೋರಾಟ ನಡೆಸಲು ಬೇಕಾದ ಅಂಶಗಳ ಕುರಿತು ಮಾಹಿತಿ ಪಡೆದರು.

ಈ ಮಧ್ಯೆ ಬೆಳಗಾವಿ ಭೇಟಿ ವೇಳೆ ರಾಜಕೀಯ ಸ್ಥಿತ್ಯಂತರ ಉಂಟಾಗಿರುವ ಹಿನ್ನೆಲೆಯಲ್ಲಿ ಮಹದಾಯಿ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರಿದೆ ಎನ್ನುವ ಭಾವನೆ ರೈತರಲ್ಲಿ ಮೂಡದಂತೆ ನೋಡಿಕೊಳ್ಳುವ ಸಲುವಾಗಿ ಸಿಎಂ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಸಮ್ಮಿಶ್ರ ಸರ್ಕಾರ ಮಹದಾಯಿ ನ್ಯಾಯಾಧಿಕರಣ ಕುರಿತು ಮೇಲ್ಮನವಿ ಸಲ್ಲಿಸುತ್ತೇವೆ ಎಂದು ಹೇಳಿದೆ ಆದರೆ ಮಹದಾಯಿ ನ್ಯಾಯಾಧಿಕರಣದ ತೀರ್ಪು ಹೊರಬಿದ್ದು ತಿಂಗಳು ಕಳೆದರೂ ರಾಜ್ಯ ಸರ್ಕಾರ ಯಾವುದೇ ಅರ್ಜಿಯನ್ನು ಸಲ್ಲಿಸಿಲ್ಲ.
ವಿವಾದಕ್ಕೀಡಾಗಿರುವ ಗೋವಾ ರಾಜ್ಯ ಈಗಾಗಲೇ ತೀರ್ಪಿನ ಕುರಿತು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುವುದಾಗಿ ಪ್ರಕಟಿಸಿದೆ. ಆದರೆ ರಾಜ್ಯ ಸರ್ಕಾರ ನ್ಯಾಯಾಧಿಕರಣದ ತೀರ್ಪನ್ನು ಒಪ್ಪಿಕೊಳ್ಳಬೇಕೆ, ಅಥವಾ ಮೇಲ್ಮನವಿ ಸಲ್ಲಿಸಬೇಕೆ ಎಂದು ಅಧಿಕೃತವಾಗಿ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ.
ಈ ಹಿನ್ನೆಲೆಯಲ್ಲಿ ಇಂದಿನ ಸಭೆಯಲ್ಲಿ ಪರಾಮರ್ಶೆ ನಡೆಸಿದ ಸಿಎಂ ಬೆಳಗಾವಿಯಲ್ಲಿ ಶನಿವಾರ ರಾಜ್ಯ ಸರ್ಕಾರದ ಮುಂದಿನ ನಿಲುವನ್ನು ಅಧಿಕೃತವಾಗಿ ಪ್ರಕಟಿಸುವ ನಿರೀಕ್ಷೆ ಇದೆ ಎಂದು ಹೇಳಲಾಗುತ್ತಿದೆ.
ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಡಿಕೆ ಶಿವಕುಮಾರ್, ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಅಡ್ವೊಕೇಟ್ ಜನರಲ್ ಉದಯಹೊಳ್ಳ, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಕೆ.ಎಲ್. ಮಂಜುನಾಥ್ ಇದ್ದರು.












Click it and Unblock the Notifications