GBA Election: ಜಿಬಿಎ ಚುನಾವಣೆಗೆ ಬಿಜೆಪಿಯ ಸಾರಥಿಯಾಗಿ ರಾಮ್ ಮಾಧವ್ ನೇಮಕ

ಬೆಂಗಳೂರು: ಸುದೀರ್ಘ ಸಮಯದಿಂದ ನೆನೆಗುದಿಗೆ ಬಿದ್ದಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಪಾಲಿಕೆಗಳ ಚುನಾವಣೆಗೆ ಕೊನೆಗೂ ಮುಹೂರ್ತ ಹತ್ತಿರವಾಗುತ್ತಿದೆ. ಸುಪ್ರೀಂ ಕೋರ್ಟ್ ಜೂನ್ 30ರೊಳಗೆ ಚುನಾವಣೆ ನಡೆಸುವಂತೆ ಕಟ್ಟುನಿಟ್ಟಿನ ಆದೇಶ ನೀಡಿರುವ ಬೆನ್ನಲ್ಲೇ, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಬಿಜೆಪಿ, ಅನುಭವಿ ನಾಯಕ ರಾಮ್ ಮಾಧವ್ ಅವರನ್ನು ಚುನಾವಣಾ ಉಸ್ತುವಾರಿಯನ್ನಾಗಿ ನೇಮಕ ಮಾಡುವ ಮೂಲಕ ರಣತಂತ್ರ ರೂಪಿಸಲು ಆರಂಭಿಸಿದೆ.

ಇತ್ತೀಚೆಗಷ್ಟೇ (ಜನವರಿ 20) ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ನಬಿನ್ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ವಹಿಸಿಕೊಂಡ ಕೂಡಲೇ ಅವರು ತೆಗೆದುಕೊಂಡ ಪ್ರಮುಖ ನಿರ್ಧಾರಗಳಲ್ಲಿ ಜಿಬಿಎ ಚುನಾವಣಾ ಉಸ್ತುವಾರಿಗಳ ನೇಮಕವೂ ಒಂದು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಹೊರಡಿಸಿರುವ ಆದೇಶದನ್ವಯ, ಬಿಜೆಪಿಯ ಹಿರಿಯ ಮುಖಂಡ ರಾಮ್ ಮಾಧವ್ ಅವರನ್ನು ಜಿಬಿಎ ಚುನಾವಣಾ ಉಸ್ತುವಾರಿಯನ್ನಾಗಿ ನೇಮಿಸಲಾಗಿದೆ.

Greater Bengaluru Authority Elections BJP Appoints Ram Madhav as In-Charge

ರಾಮ್‌ ಮಾಧವ್‌ ಅವರಿಗೆ ಸಾಥ್ ನೀಡಲು ಸಹ-ಉಸ್ತುವಾರಿಗಳಾಗಿ ಸತೀಶ್ ಪೂನಿಯಾ ಮತ್ತು ಸಂಜಯ್ ಉಪಧ್ಯಾಯ್ ಅವರನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮೈತ್ರಿಕೂಟ ಸಾಧಿಸಿದ ಅಭೂತಪೂರ್ವ ಗೆಲುವು, ಕರ್ನಾಟಕದಲ್ಲೂ ಪಕ್ಷಕ್ಕೆ ಹೊಸ ಚೈತನ್ಯ ತುಂಬಿದೆ.

ಮೈತ್ರಿ ಗೊಂದಲಕ್ಕೆ ಕುಮಾರಸ್ವಾಮಿ ತೆರೆ:

ಮತ್ತೊಂದೆಡೆ, ಜಿಬಿಎ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಉಂಟಾಗಿದ್ದ ಗೊಂದಲಗಳಿಗೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ತೆರೆ ಎಳೆದಿದ್ದಾರೆ. ಕೆಲದಿನಗಳ ಹಿಂದೆ ಜೆಡಿಎಸ್ ವರಿಷ್ಠರಾದ ಹೆಚ್.ಡಿ. ದೇವೇಗೌಡರು, "ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಮಾತ್ರ ಮೈತ್ರಿ ಸೀಮಿತ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ," ಎಂಬ ಹೇಳಿಕೆ ನೀಡಿದ್ದರು. ಇದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು ಮತ್ತು ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಸಿತ್ತು.

ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಕುಮಾರಸ್ವಾಮಿ ಅವರು ಜೆಪಿ ಭವನದಲ್ಲಿ ನಡೆದ ಪಕ್ಷದ ಮಹತ್ವದ ಸಭೆಯಲ್ಲಿ ಮಾತನಾಡುತ್ತಾ, "ಮೈತ್ರಿ ಬಗ್ಗೆ ಯಾವುದೇ ಗೊಂದಲಗಳು ಬೇಡ. ಬೆಂಗಳೂರಿನ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಲು ನಾವು ಜಿಬಿಎ ಚುನಾವಣೆಯನ್ನು ಮೈತ್ರಿಯಾಗಿಯೇ ಎದುರಿಸುತ್ತೇವೆ," ಎಂದು ಘೋಷಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಎನ್‌ಡಿಎ ಒಕ್ಕೂಟ ಒಗ್ಗೂಡಿ ಹೋರಾಡಿ ಯಶಸ್ಸು ಕಂಡ ಮಾದರಿಯಲ್ಲೇ ಇಲ್ಲೂ ಒಗ್ಗಟ್ಟಿನಿಂದ ಕೆಲಸ ಮಾಡುವಂತೆ ಅವರು ಕರೆ ನೀಡಿದ್ದಾರೆ.

ಏನಿದು ಸುಪ್ರೀಂ ಡೆಡ್‌ಲೈನ್?

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಸರ್ಜನೆಯಾಗಿ ಹಲವು ವರ್ಷ ಕಳೆದರೂ ಚುನಾವಣೆ ನಡೆದಿರಲಿಲ್ಲ. ಇದೀಗ ಸುಪ್ರೀಂ ಕೋರ್ಟ್ ಮಧ್ಯ ಪ್ರವೇಶಿಸಿದ್ದು, 2026ರ ಜೂನ್ 30ರೊಳಗೆ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಖಡಕ್ ಆದೇಶ ನೀಡಿದೆ. ಹೀಗಾಗಿ, ಬೆಂಗಳೂರಿನಲ್ಲಿ ಜಿಬಿಎ ಚುನಾವಣಾ ಕಣ ರಂಗೇರುತ್ತಿದೆ. ಚುನಾವಣೆಯ ಪ್ರಕ್ರಿಯೆಗಳು ಆರಂಭವಾಗಿವೆ. ಇತ್ತೀಚೆಗೆ ಚುನಾವಣೆ ಸಂಬಂಧ ಜಿಬಿಎ ವ್ಯಾಪ್ತಿಯ ಕರಡು ಮತದಾರರ ಪಟ್ಟಿ ಸಹ ಪ್ರಕಟಿಸಲಾಗಿದೆ. ಆಕ್ಷೇಪಣೆಗಳನ್ನು ನೋಡಿಕೊಂಡು ಅಂತಿಮ ಫಲಿತಾಂಶ ಪ್ರಕಟಗೊಳ್ಳಲಿದೆ. ಮತ್ತೊಂದೆಡೆ ರಾಜಕೀಯ ಪಕ್ಷಗಳು ಉಸ್ತುವಾರಿ ನೇಮಕ ಮಾಡುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+