ಸಹಾಯ ಮರೆತ ಸರ್ಕಾರಿ ವಾಣಿಗಳು, ಸಹಾಯವಾಣಿಯನ್ನೇ ಮರೆತ ಜನಸಾಮಾನ್ಯರು: ರಾಜೀವ್ ಹೆಗಡೆ ಬರಹ

ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗಳಲ್ಲಿ ಸಮಸ್ಯೆಗಳು ಕಂಡು ಬಂದರೆ ಆಯಾ ಇಲಾಖೆ, ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತರಬೇಕಾದರೆ ಸಹಾಯವಾಣಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಕೆಲವು ಇಲಾಖೆ, ಸಂಸ್ಥೆಗಳ ಸಹಾಯವಾಣಿಗಳು ನಾಮಕಾವಸ್ತೆ ಇವೆ. ಇನ್ನೂ ಕೆಲವು ಸಹಾಯವಾಣಿಗಳು ಜನರಿಗಾಗಿ ಇವೆ. ಆದರೆ ಅವುಗಳ ಬಳಕೆಯನ್ನು ಜನಸಾಮಾನ್ಯರೇ ಮರೆತಿದ್ದಾರೆ. ಈ ಕುರಿತು ಪತ್ರಕರ್ತ ಮತ್ತು ಗ್ಲ್ಯಾನ್ಸ್ ಅಸೋಸಿಯೇಟ್ ಎಡಿಟರ್ ರಾಜೀವ್ ಹೆಗಡೆ ಅವರ ಫೇಸ್‌ಬುಕ್ ಬರಹ ಇಲ್ಲಿದೆ.

'ನಾನು ಓಡಾಡುವಾಗ ಅಥವಾ ಕಾರಿನಲ್ಲಿ ಹೋಗುವಾಗ ಯಾವುದೇ ಸಮಸ್ಯೆಗಳು ಕಣ್ಣಿಗೆ ಬಿದ್ದರೆ ಸಂಬಂಧಪಟ್ಟವರ ಗಮನಕ್ಕೆ ತರುವ ಚಟವೊಂದು ನನಗಿದೆ. ಇದರಿಂದ ನನ್ನ ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಮನಸ್ಸಿಗೂ ಬೇಸರವಾಗಿರುವ ಉದಾಹರಣೆಗಳಿವೆ. ಆದರೆ ಅದನ್ನು ನೋಡಿ ನನಗೆ ಸುಮ್ಮನಿರಲು ಸಾಧ್ಯವಿಲ್ಲ. ಕಳೆದ ಹಲವು ವರ್ಷಗಳಿಂದ ಇದನ್ನು ಮಾಡಿಕೊಂಡು ಬಂದಿದ್ದೇನೆ. ಒಂದಿಷ್ಟು ವಿಚಾರಗಳಿಗೆ ಪರಿಹಾರ ದೊರೆತಿದೆ, ಸಾಕಷ್ಟು ವಿಚಾರಗಳಲ್ಲಿ ಏನೂ ಆಗಿಲ್ಲ. ನನ್ನ ಕರೆಯಿಂದ ಎಲ್ಲವೂ ಬದಲಾಗುತ್ತದೆ ಎನ್ನುವ ಭ್ರಮೆಯಲ್ಲಿ ನಾನು ಬದುಕುತ್ತಿಲ್ಲ. ಆದರೆ ನನ್ನ ಇಷ್ಟು ವರ್ಷಗಳ ಅನುಭವ ಆಧರಿಸಿ ʼಸಹಾಯವಾಣಿʼ ಬಗ್ಗೆ ಬರೆಯಲೇಬೇಕು ಎಂದೆನಿಸಿದೆ.

Government Helplines

ನಾನು ಹೆಚ್ಚಿನ ಸಂದರ್ಭದಲ್ಲಿ ಕರೆ ಮಾಡುವುದು ಗ್ರೇಟರ್‌ ಬೆಂಗಳೂರು (1533), ಎಸ್ಕಾಂ(1912), ರಾಷ್ಟ್ರೀಯ ಹೆದ್ದಾರಿ(1800116062), ಆಹಾರ ಇಲಾಖೆ(1967), ಸಂಚಾರ ಪೊಲೀಸ್‌(112), ಬ್ಯಾಂಕ್‌ ಹಾಗೂ ಇ-ಕಾಮರ್ಸ್‌ ವೇದಿಕೆಗಳ ಸಹಾಯವಾಣಿಗಳಿಗೆ. ಕೆಲವೊಮ್ಮೆ ಹಠದಿಂದ ಸಂಬಂಧಪಟ್ಟ ಅಧಿಕಾರಿಗಳ ದೂರವಾಣಿ ಸಂಖ್ಯೆಗೆ ಬಿಗಿಪಟ್ಟು ಹಿಡಿದು ಹಿಂದೆ ಬಿದ್ದ ಉದಾಹರಣೆಗಳಿವೆ.

KEA AO Recruitment: ಕೃಷಿ ಇಲಾಖೆಯಲ್ಲಿ ಬರೋಬ್ಬರಿ 890 ಹುದ್ದೆಗಳ ಭರ್ತಿ, ಮೇ 10ರೊಳಗೆ ಅರ್ಜಿ ಸಲ್ಲಿಸಿ
KEA AO Recruitment: ಕೃಷಿ ಇಲಾಖೆಯಲ್ಲಿ ಬರೋಬ್ಬರಿ 890 ಹುದ್ದೆಗಳ ಭರ್ತಿ, ಮೇ 10ರೊಳಗೆ ಅರ್ಜಿ ಸಲ್ಲಿಸಿ

ಇವೆಲ್ಲ ಸರ್ಕಾರಿ ಹಾಗೂ ಕಾರ್ಪೊರೇಟ್‌ ಸಂಸ್ಥೆಗಳ ಸಹಾಯವಾಣಿಗಳಲ್ಲಿ ಕಳೆದೈದು ವರ್ಷಗಳಿಂದ ಒಂದು ಸಾಮಾನ್ಯವಾದ ಬದಲಾವಣೆಯಾಗಿದೆ. ಸಹಾಯವಾಣಿಯನ್ನು ನಡೆಸುವ ಗುತ್ತಿಗೆ ಸಂಸ್ಥೆಗಳ ಗುಣಮಟ್ಟ ಹಳ್ಳ ಹಿಡಿದಿದೆ ಹಾಗೂ ಇದರ ಜವಾಬ್ದಾರಿಯನ್ನು ಹೊತ್ತ ಜನರು ಸಮಸ್ಯೆಗಳನ್ನು ಆಲಿಸುವುದಕ್ಕಷ್ಟೇ ಸೀಮಿತವಾಗಿದ್ದಾರೆ. ʼಸಹಾಯವಾಣಿʼ ಎನ್ನುವುದರ ಬದಲಾಗಿ, ʼದೂರುವಾಣಿʼ ಎಂದು ಬದಲಿಸುವುದು ಒಳ್ಳೆಯದು. ಉದ್ಯಮದ ಕಾರಣದಿಂದ ಇ-ಕಾಮರ್ಸ್‌ ಹಾಗೂ ಮೊಬೈಲ್‌ ಕಂಪೆನಿಗಳ ಸಹಾಯವಾಣಿಗಳು ಒಂದು ಹಂತಕ್ಕೆ ಸಮರ್ಪಕವಾಗಿವೆ. ಆದರೆ ಬ್ಯಾಂಕಿಂಗ್‌ ಹಾಗೂ ಸರ್ಕಾರದ ಉಳಿದ ಸಹಾಯವಾಣಿಗಳು ನೆಪ ಮಾತ್ರಕ್ಕೆ ಸೀಮಿತವಾಗಿವೆ.

ಜನಸ್ಪಂದನ, ಜಿಬಿಎ, ಆಹಾರ ಇಲಾಖೆ ಸಹಾಯವಾಣಿ ಹಾಗೂ ಬ್ಯಾಂಕಿಂಗ್‌ ಸಹಾಯವಾಣಿಗೆ ಸಂಬಂಧಿಸಿ ನನ್ನ ಅನುಭವ ಹಂಚಿಕೊಳ್ಳುತ್ತೇನೆ. ನಿಮ್ಮ ಅನುಭವ ವಿಭಿನ್ನವಾಗಿದ್ದರೆ, ಅದನ್ನೂ ಹಂಚಿಕೊಳ್ಳಿ' ಎಂದಿದ್ದಾರೆ.

ಜಬಿಎ ಸಹಾಯವಾಣಿ

'ಬೆಂಗಳೂರನ್ನು ಉದ್ದಾರ ಮಾಡುತ್ತೇವೆ ಎಂದು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಮಾಡಿದ ರಾಜ್ಯ ಸರ್ಕಾರವು, ಕಸ ವಿಂಗಡಣೆಗೆ ಇನ್ನೊಂದು ಪ್ರಾಧಿಕಾರ ಮಾಡಿತು. ಕಸದ ಸಮಸ್ಯೆಗೆ ಕರೆ ಮಾಡಬೇಕಿದ್ದರೆ ಜಿಬಿಎ ಸಹಾಯವಾಣಿಗೆ ಕರೆ ಮಾಡಿ ಅವರಿಗೆ ಮನವಿ ಮಾಡಿಕೊಂಡು ಕರೆಯನ್ನು ವರ್ಗಾಯಿಸಿಕೊಳ್ಳಬೇಕು. ಇನ್ನು ಜಿಬಿಎಗೆ ನೇರವಾಗಿ ಕರೆ ಮಾಡಬಹುದು. ಆದರೆ ಇಬ್ಬರ ವರ್ತನೆಯಲ್ಲಿ ಯಾವುದೇ ದೊಡ್ಡ ಬದಲಾವಣೆಯಿಲ್ಲ. ಮೊದಲೆಲ್ಲ ಕರೆ ಮಾಡಿದರೆ ಸಂಬಂಧಪಟ್ಟ ಅಧಿಕಾರಿಗಳ ಮೊಬೈಲ್‌ ಸಂಖ್ಯೆ ನೀಡುತ್ತಿದ್ದರು. ಬಳಿಕ ಸಮಸ್ಯೆ ಪರಿಹಾರದ ಕಾಲಮಿತಿಯೊಳಗೆ ಮತ್ತೆ ಕರೆ ಮಾಡಿ, ಏನಾಯಿತು ಎಂದು ವಿಚಾರಿಸುತ್ತಿದ್ದರು. ಆದರೀಗ ಎಲ್ಲವೂ ಸಂಪೂರ್ಣ ಹದಗೆಟ್ಟಿದೆ.

Government Helplines

ಬೇಕಾಬಿಟ್ಟಿಯಾಗಿ ಅಧಿಕಾರಿಗಳಿಗೆ ದೂರುಗಳು ವರ್ಗಾವಣೆಯಾಗುತ್ತವೆ. ದೂರುದಾರರನ್ನು ಸಂಪರ್ಕಿಸದೇ ದೂರುಗಳನ್ನು ಮುಕ್ತಾಯಗೊಳಿಸಲಾಗುತ್ತದೆ. ಹಾಗೆಯೇ ದೂರಿನ ಬಗ್ಗೆ ಯಾವುದೇ ಕ್ರಮಗಳನ್ನು ಕೂಡ ತೆಗೆದುಕೊಳ್ಳುವುದಿಲ್ಲ. ಕನಕಪುರ ಮುಖ್ಯ ರಸ್ತೆಯ ಯಲಚೇನಹಳ್ಳಿ ಮೆಟ್ರೋ ನಿಲ್ದಾಣದ ಬಳಿ ಚರಂಡಿ ನೀರು ಒಂದು ವಾರದಿಂದ ಹರಿಯುತ್ತಿತ್ತು. ಸತತ ಎರಡು ಬಾರಿ ಅದಕ್ಕೆ ಪರಿಹಾರವನ್ನೇ ಒದಗಿಸದೇ ದೂರನ್ನು ಮುಕ್ತಾಯಗೊಳಿಸಿದ್ದರು. ʼನಿಮ್ಮ ಉಸ್ತುವಾರಿ ಸಚಿವರ ಊರಿಗೆ ಹೋಗುವ ರಸ್ತೆಯಲ್ಲಿ ಕೊಳಚೆ ನೀರು ಹರಿಯುವುದನ್ನು ನಿಲ್ಲಿಸಲಾಗದಿದ್ದರೆ ನೀವೆಲ್ಲ ಕತ್ತೆ ಮೇಯಿಸೋಕೆ ಹೋಗಿʼ ಎಂದು ಬೈದ ಮರುದಿನ ತೆರೆದ ಚರಂಡಿಯನ್ನು ಮುಚ್ಚಿದ್ದರು. ಬೀದಿ ನಾಯಿಗಳಿಗೆ ಸಂಬಂಧಿಸಿದ ಇಂತಹದ್ದೇ ಹಲವು ದೂರುಗಳು ಪರಿಹಾರವಿಲ್ಲದೇ ಮುಕ್ತಾಯವಾಗಿದೆ. ಕಸದ ಸಮಸ್ಯೆಯ ಕಥೆಯೂ ವಿಭಿನ್ನವಾಗಿಲ್ಲ. ಅಂದರೆ ನಮ್ಮ ದೂರುಗಳ ಸಂಖ್ಯೆಯು ಕೇವಲ ಯಾವುದೋ ಏಜೆನ್ಸಿಯ ಮಾಸಿಕ ಬಿಲ್‌ ಪಾವತಿಗೆ ಲೆಕ್ಕವಷ್ಟೇ. ಏಜೆನ್ಸಿ ನಡೆಸಲು ಅವರಿಗೆ ನಮ್ಮ ದೂರುಗಳು ಬೇಕಷ್ಟೆ. ಆ ದೂರುಗಳಿಗೆ ಪರಿಹಾರ ಸಿಕ್ಕಿತೇ ಎನ್ನುವುದಕ್ಕೆ ಯಾರಿಗೂ ಜವಾಬ್ದಾರಿಯಿಲ್ಲ.

SSLC Results 2026: 10ನೇ ತರಗತಿ ಫಲಿತಾಂಶ ಏ.24ರಂದು ಬಿಡುಗಡೆ ಅನುಮಾನ
SSLC Results 2026: 10ನೇ ತರಗತಿ ಫಲಿತಾಂಶ ಏ.24ರಂದು ಬಿಡುಗಡೆ ಅನುಮಾನ

ಈ ಬಗ್ಗೆ ಸಹಾಯವಾಣಿ ಸಿಬ್ಬಂದಿ ಕೇಳಿದರೆ, ಇದಕ್ಕೆ ಪೂರಕವಾದ ಉತ್ತರ ಬರುತ್ತದೆ. ʼನಮ್ಮ ಕೆಲಸ ದೂರು ಪಡೆದುಕೊಂಡು ವರ್ಗಾಯಿಸುವುದಷ್ಟೇ. ನಿಮಗೆ ಪರಿಹಾರ ಸಿಕ್ಕಿತೇ, ಇಲ್ಲವೇ ಎನ್ನುವುದು ನಮಗೆ ಸಂಬಂಧಿಸಿದ್ದಲ್ಲʼ ಎನ್ನುತ್ತಾರೆ. ಅವರು ನಮಗೆ ನೀಡುವ ಅಧಿಕಾರಿಗಳು ಬಹುತೇಕ ಸಂದರ್ಭದಲ್ಲಿ ಜನಸಾಮಾನ್ಯರ ಕರೆಯನ್ನು ಸ್ವೀಕರಿಸಿ ಮಾತನಾಡುವ ವ್ಯವಧಾನ ಹೊಂದಿರುವುದಿಲ್ಲ. ಹೀಗಾಗಿ ಸಹಾಯವಾಣಿಯು ಕೇವಲ ದೂರು ಕೇಳುವ ವಾಣಿಯಾಗಿ ಪರಿವರ್ತನೆ ಆಗುತ್ತಿದೆ.

ಆಹಾರ ಇಲಾಖೆ

ಆಹಾರ ಇಲಾಖೆಯ ಅತಿ ದೊಡ್ಡ ಕಾರ್ಯಕ್ರಮವೆಂದರೆ ಅನ್ನಭಾಗ್ಯ ಯೋಜನೆ. ಇದಕ್ಕಾಗಿ ಸರ್ಕಾರವು ವಿಶೇಷ ಸಹಾಯವಾಣಿಯನ್ನು ಹೊಂದಿದೆ. ಆದರೆ ಈ ಸಹಾಯವಾಣಿಯ ವಿಶೇಚವೇನೆಂದರೆ ವರ್ಷದ ಒಂದು ದಿನವೂ ಇಲ್ಲಿ ಕರೆ ಸ್ವೀಕರಿಸುವವರು ಇರುವುದಿಲ್ಲ. ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ ಮಾಡುವಾಗ ಮುಚ್ಚಿಗೆ ಮಾಡುವುದಿಲ್ಲ ಎನ್ನುವ ಬಗ್ಗೆ ಒಂದು ದೂರು ನೀಡಲು ನಾನು ಕನಿಷ್ಠ 20 ಜನರಿಗೆ ಕರೆ ಮಾಡಿದ್ದೇನೆ. ನಾನು ಇಂತಹ ಹತ್ತಕ್ಕೂ ಅಧಿಕ ದೂರು ನೀಡಿದ್ದು, ಒಮ್ಮೆಯೂ ಸಹಾಯವಾಣಿಯಲ್ಲಿ ಕರೆಯನ್ನು ಯಾರೂ ಸ್ವೀಕರಿಸಿಲ್ಲ. ಆದರೆ ಬಡವರ ಹೆಸರಲ್ಲಿ ಸತತವಾಗಿ ಗೆಲ್ಲುತ್ತಿರುವ ಮುನಿಯಪ್ಪನವರು ಮಾತ್ರ ತಮ್ಮ ಭಾಷಣ ಹಾಗೂ ಇಲಾಖೆಯ ವೆಬ್‌ಸೈಟ್‌ನಲ್ಲಿ ಸಹಾಯವಾಣಿಯನ್ನು ಉಲ್ಲೇಖಿಸುತ್ತಾರೆ. ಆ ಸಹಾಯವಾಣಿ ಹೆಸರಲ್ಲಿ ಯಾರ ಮನೆಯ ತಿಜೋರಿ ತುಂಬುತ್ತಿದೆಯೋ ದೇವರಿಗೆ ಗೊತ್ತು.

ಜನಸ್ಪಂದನ ವೇದಿಕೆ

ಜನಸ್ಪಂದನ ಎನ್ನುವ ಅಪ್ಲಿಕೇಷನ್‌ ಲಭ್ಯವಿದೆ. ಅದರಲ್ಲಿ ಯಾವುದೇ ಇಲಾಖೆಯನ್ನು ಟ್ಯಾಗ್‌ ಮಾಡಿ ದೂರು ನೀಡಲು ಅವಕಾಶವಿದೆ. ಹಾಗೆಯೇ ದೂರುಗಳನ್ನು ಟ್ರ್ಯಾಕ್‌ ಕೂಡ ಮಾಡಬಹುದು. ಮೇಲೆ ಉಲ್ಲೇಖಿಸಿದ ಪ್ರಕರಣದಲ್ಲಿಯೇ ನಾನು ಫೋಟೋ ಸಮೇತ ದೂರು ನೀಡಿದ್ದೆ. ಈ ವೇದಿಕೆ ಎಷ್ಟು ಅದ್ಭುತವಾಗಿ ಕೆಲಸ ಮಾಡುತ್ತಿದೆಯೆಂದರೆ, ಯಾವ ಕ್ರಮ ಜರುಗಿಸಲಾಯಿತು, ಏನಾಯಿತು ಎನ್ನುವ ಯಾವುದೇ ಮಾಹಿತಿಯಿಲ್ಲದೇ ದೂರನ್ನು ಮುಕ್ತಾಯಗೊಳಿಸಿದ್ದರು. ಆದರೆ ವಾಸ್ತವದಲ್ಲಿ ನಾನು ನೀಡಿದ್ದ ಸಮಸ್ಯೆಯು ಇಂದಿಗೂ ಮುಂದುವರಿದಿದೆ.

ಬ್ಯಾಂಕಿಂಗ್‌ ವಲಯ

ಬಹುತೇಕ ಎಲ್ಲ ಬ್ಯಾಂಕ್‌ಗಳು ಸಹಾಯವಾಣಿಯನ್ನು ಹೊಂದಿವೆ. ಹಾಗೆಯೇ ಕುಖ್ಯಾತ ಎಸ್‌ಬಿಐನಲ್ಲೂ ಈ ಅವ್ಯವಸ್ಥೆಯಿದೆ. ಇತ್ತೀಚೆಗೆ ನನ್ನ ಖಾತೆಯ ಕೆವೈಸಿ ಮಾಡಿಕೊಳ್ಳುವಂತೆ ಸಂದೇಶ ಬಂದಿತ್ತು. ಅವರ ವೆಬ್‌ಸೈಟ್‌ ಹೇಳುವಂತೆಯೇ ಯುನೋ ಅಪ್ಲಿಕೇಷನ್‌, ಸಹಾಯವಾಣಿಗೆ ಕರೆ, ಎಟಿಎಂ ಹಾಗೂ ಬ್ಯಾಂಕ್‌ ವೆಬ್‌ತಾಣದ ಮೂಲಕ ಕೆವೈಸಿ ಅಪ್ಡೇಟ್‌ ಮಾಡಲು ಪ್ರಯತ್ನಿಸಿದೆ.

''KKRTC ಹೊಸ ಸಾರಿಗೆ ಕೇಂದ್ರ ಕಚೇರಿಗೂ ಮುನ್ನ 'ಪ್ರೀಮಿಯಂ ಸಾರಿಗೆ' ಬಸ್‌ಗಳನ್ನು ಬಿಡಿ''
''KKRTC ಹೊಸ ಸಾರಿಗೆ ಕೇಂದ್ರ ಕಚೇರಿಗೂ ಮುನ್ನ 'ಪ್ರೀಮಿಯಂ ಸಾರಿಗೆ' ಬಸ್‌ಗಳನ್ನು ಬಿಡಿ''

ದಿನಗಟ್ಟಲೇ ಪ್ರಯಾಸದ ಬಳಿಕವೂ ತಾಂತ್ರಿಕ ದೋಷವೆನ್ನುವ ಕಾರಣ ನೀಡುತ್ತಲೇ ಇತ್ತು. ಈ ಸಂಬಂಧ ದೂರು ನೀಡಿ, ಸ್ಪಷ್ಟನೆ ಕೇಳಲು ಸಹಾಯವಾಣಿಗೆ ಕರೆ ಮಾಡಿದೆ. ಅಲ್ಲಿ ಕುಳಿತ ಸಿಬ್ಬಂದಿಯು ಎಸ್‌ಬಿಐ ಕಚೇರಿಯಲ್ಲಿ ಊಟಕ್ಕೆ ಹೋಗುವ ಸಿಬ್ಬಂದಿಗಿಂತ ಕೆಟ್ಟದಾಗಿದ್ದರು. ʼಸಮಸ್ಯೆಗಳ ಬಗ್ಗೆ ದೂರು ಪಡೆಯಲು ಸಾಧ್ಯವಿಲ್ಲ. ನೀವು ಹತ್ತಿರದ ಕಚೇರಿಗೆ ಭೇಟಿ ನೀಡಿʼ ಎಂದು ಕೈ ತೊಳೆದುಕೊಂಡರು. ʼತಾಂತ್ರಿಕ ದೋಷವು ನಿಮ್ಮ ಕಡೆಯಿಂದಿದ್ದರೆ ದೂರು ಪಡೆದುಕೊಂಡು ಸರಿಪಡಿಸಬಹುದಲ್ಲವೇʼ ಎಂದು ಕೇಳಿದರೆ, ಅದೆಲ್ಲ ಆಗುವುದಿಲ್ಲ ಎಂದು ಸುಮ್ಮನಾಗಿಬಿಟ್ಟರು.

ಪ್ರಭಾವಿ ಸಹಾಯವಾಣಿ ಹೇಗೆ ಮಾಡಬಹುದು?

ಸರ್ಕಾರಿ ಸಹಾಯವಾಣಿ ಕಚೇರಿಗಳೂ ಹೇಗೆ ಕೆಲಸ ಮಾಡುತ್ತವೆ ಎನ್ನುವ ಮಾಹಿತಿಯಿಲ್ಲ. ಖಾಸಗಿ ಕಂಪೆನಿಗಳಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವ ಅವಕಾಶವಿರುತ್ತದೆ. ಹೀಗಿರುವಾಗ ಕೆಲವೊಮ್ಮೆ ಸಂಕೀರ್ಣವಾದ ವಿಷಯಕ್ಕೆ ಪರಿಹಾರ ದೊರೆಯುತ್ತದೆ. ಆದರೆ ಸರ್ಕಾರಿ ಸಹಾಯವಾಣಿಯಲ್ಲಿ ಇಂತಹ ವ್ಯವಸ್ಥೆ ಇರುವುದು ನನ್ನ ಗಮನಕ್ಕಿಲ್ಲ. ಇದರಿಂದ ದೂರು ಪಡೆದುಕೊಂಡು ಸಂಬಂಧಪಟ್ಟವರಿಗೆ ವರ್ಗಾಯಿಸಿದರೆ ನಮ್ಮ ಕೆಲಸ ಮುಗಿಯಿತು ಎನ್ನುವ ವರ್ತನೆ ಇವರದ್ದಾಗಿರುತ್ತದೆ. ಈ ದೂರುಗಳ ಹಿಂದೆ ಬಿದ್ದು, ಜನರಿಗೆ ಪರಿಹಾರ ಕೊಡಿಸಲು ಅಲ್ಲಿ ಜವಾಬ್ದಾರಿ ಹೊರುವವರು ಯಾರೂ ಇರುವುದಿಲ್ಲ. ಅದರ ಬದಲಾಗಿ ಪ್ರತಿಯೊಂದು ಸಹಾಯವಾಣಿ ಕಚೇರಿಗೂ ಕೆಲ ಅಧಿಕಾರಿಗಳನ್ನು ನೇಮಿಸಬೇಕು. ಪರಿಹಾರ ಕ್ರಮದ ಬಗ್ಗೆ ಈ ಅಧಿಕಾರಿಗಳಿಗೆ ಜವಾಬ್ದಾರಿ ನಿಗದಿ ಮಾಡಬಹುದು. ಇದರಿಂದ ಜನರು ನೀಡುವ ದೂರುಗಳು ʼಸಹಾಯʼವಾಗಿ ಬದಲಾಗುತ್ತವೆ. ಇಲ್ಲವಾದಲ್ಲಿ ಸಹಾಯವಾಣಿಗಳೆಲ್ಲ ʼದೂರುʼವಾಣಿಗಳಾಗಿ ಸೀಮಿತವಾಗಿರುತ್ತವೆ. ಹಾಗೆಯೇ ಇದು ಕೇವಲ ಪ್ರಭಾವಿಗಳ ಆಪ್ತರ ಏಜೆನ್ಸಿಗಳಿಗೆ ಹೊಟ್ಟೆ ತುಂಬಿಸುವ ಕಾಲ್‌ ಸೆಂಟರ್‌ಗಳಾಗಿ ಉಳಿಯುತ್ತವೆ.
ಜನರೂ ದೂರವಾಗುತ್ತಿದ್ದಾರೆ!

ಮೊನ್ನೆ ಕಸಕ್ಕೆ ಸಂಬಂಧಿಸಿ ಓರ್ವ ಅಧಿಕಾರಿಗೆ ಕರೆ ಮಾಡಿ ದೂರು ನೀಡುತ್ತಿದ್ದಾಗ ಅವರೊಂದು ಮಾತನ್ನು ಹೇಳಿದಾಗ ನಾನು ನಿರುತ್ತರನಾಗಿದ್ದೆ. ʼಕಸದ ಸಮಸ್ಯೆ ಬಗ್ಗೆ ನೀವು ಮಾತ್ರ ಪದೇಪದೆ ದೂರು ಕೊಡುತ್ತೀರಿ. ನಿಮ್ಮ ಬಡಾವಣೆಯಲ್ಲಿ ಇನ್ಯಾರೂ ದೂರನ್ನು ಕೊಟ್ಟಿದ್ದೇ ಇಲ್ಲ. ಉಳಿದವರ ಹಾಗೇ ನೀವು ಸಹಿಸಿಕೊಂಡು ಹೋಗಿʼ ಎಂದು ಹೇಳಿದರು. ಅಕ್ಕಿ ಸಮಸ್ಯೆ ಬಗ್ಗೆ ಕರೆ ಮಾಡಿ ಹೇಳಿದ್ದಾಗಲೂ ಓರ್ವ ಅಧಿಕಾರಿಯಂತೂ ನನಗೆ ಬೈದಿದ್ದರು. ʼಯಾರಿಗೂ ಕಾಣದ ಸಮಸ್ಯೆ ನಿಮಗೆ ಮಾತ್ರ ಕಾಣಿಸುವುದೇಕೆʼ ಎಂದು ಕೂಗಾಡಿದ್ದರು. ವಾಸ್ತವ ಏನೆಂದರೆ ಸಮಸ್ಯೆಗಳು ನನಗೆ ಮಾತ್ರ ಇರುವುದಲ್ಲ.

ಹಾಗೆಯೇ ಈ ವಿಚಾರಗಳನ್ನು ಬರೆಯಲು ಹಾಗೂ ಕರೆ ಮಾಡಿ ವಿಚಾರಿಸಲು ನನಗೆ ಯಾವುದೇ ಹಣ ಸಂದಾಯವೂ ಆಗುವುದಿಲ್ಲ. ಹಾಗೆಯೇ ವಿಶೇಷವಾದ ಸಮಯವನ್ನು ಯಾರೂ ನನಗೆ ದಯಪಾಲಿಸುವುದಿಲ್ಲ. ಬದಲಾಗಿ ನನ್ನ ಮೇಲಿನ ಸಾಮಾಜಿಕ ಜವಾಬ್ದಾರಿಯಿಂದ ಇದನ್ನು ಮಾಡುತ್ತೇನೆ. ಇದೇ ರೀತಿ ಸಮಾಜದಲ್ಲಿನ ಒಂದಿಷ್ಟು ಜನರು ಇಂತಹ ಕೆಲಸ ಮಾಡಿದರೆ, ತನ್ನಿಂದ ತಾನೆಯೇ ಆಡಳಿತ ವ್ಯವಸ್ಥೆ ಮೇಲೆ ಒತ್ತಡ ಸೃಷ್ಟಿಯಾಗುತ್ತದೆ.

ದೂರು ನೀಡಿದವರಿಗೆ ಕರೆಸಿ ಧಮಕಿ!

ಅಂದಹಾಗೆ ಇದರಲ್ಲಿ ಸರ್ಕಾರದ ಪಾಲು ಕೂಡ ದೊಡ್ಡದಿದೆ. ಜನರನ್ನು ಸಂಚಾರ ದಟ್ಟಣೆ ಹಾಗೂ ಇತರೇ ಸಮಸ್ಯೆಗಳಲ್ಲಿಯೇ ನಿರತವಾಗಿರುವಂತೆ ನೋಡಿಕೊಂಡರೆ, ಸರ್ಕಾರದ ಅವ್ಯವಸ್ಥೆ ಬಗ್ಗೆ ಧ್ವನಿ ಎತ್ತಲು ಸಮಯವಿಲ್ಲದಂತೆ ಮಾಡಬಹುದು. ಇನ್ನೊಂದೆಡೆ ಭಯ ಹುಟ್ಟಿಸುವ ಕೆಲಸವನ್ನು ಕೂಡ ಮಾಡಬಹುದು. ಈ ರಾಜ್ಯದ ಇಂಧನ ಸಚಿವರೊಬ್ಬರಿಗೆ ಕರೆ ಮಾಡಿ ದೂರು ನೀಡಿದ್ದಕ್ಕೆ, ಆ ವ್ಯಕ್ತಿಯನ್ನು ಕೋರ್ಟ್‌ಗೆ ಕರೆಯಿಸಿ ಧಮಕಿ ಹಾಕಿದ ಮಹಾನುಭಾವರನ್ನು ನಾವೆಲ್ಲ ನೋಡಿದ್ದೇವೆ. ಆದರೆ ಇಂತಹ ಹುಚ್ಚಾಟಗಳನ್ನೆಲ್ಲ ಮರೆತು ನಾವು ಧ್ವನಿಗೂಡಿಸಬೇಕಿದೆ. ಇಂತಹ ಧ್ವನಿಗಳು ಹೆಚ್ಚಾದಾಗ ಕೆಲಸ ಮಾಡದೇ ಅನ್ಯ ಮಾರ್ಗವು ಭ್ರಷ್ಟ ಆಡಳಿತ ವರ್ಗಕ್ಕೆ ಇರುವುದಿಲ್ಲ. ಪ್ರಾಮಾಣಿಕ ಪ್ರಜೆಗಳ ಮೌನವೇ ಭ್ರಷ್ಟರ ಬಾಡೂಟಕ್ಕೆ ಎಲೆಯಾಗುತ್ತದೆ.

ಕೊನೆಯದಾಗಿ: ಪ್ರಜಾಪ್ರಭುತ್ವವೆಂದರೆ ಜನರಿಂದ, ಜನರಿಗೋಸ್ಕರ ಎಂದೆಲ್ಲ ಕೇವಲ ಸಂವಿಧಾನ ಪುಸ್ತಕಕ್ಕೆ ಸೀಮಿತ. ಪಕ್ಷಾತೀತವಾಗಿ ಯಾವುದೇ ಸರ್ಕಾರಗಳು ಜನರಿಗಾಗಿ ಕೆಲಸ ಮಾಡುವುದು ಬಹಳ ವಿರಳ. ಸಹಾಯವಾಣಿಗಳು ಕೂಡ ನಮ್ಮ ಸಹಾಯಕ್ಕಾಗಿ ಇರುವುದು ಎಂದು ತಿಳಿದುಕೊಂಡಿರುವುದು ದೊಡ್ಡ ಪ್ರಮಾದವಾಗಿದೆ. ಅವರ ಯಾವುದೋ ಆಪ್ತರ ಹೊಟ್ಟೆ ತುಂಬಿಸಲು ಇರುವ ಇನ್ನೊಂದು ಗಂಜಿಕೇಂದ್ರವದು ಎನ್ನುವುದು ದಿನದಿಂದ ದಿನಕ್ಕೆ ಸಾಬೀತಾಗುತ್ತಿದೆ. ಸದ್ಯಕ್ಕೆ ಇರುವುದರಲ್ಲಿ ಅಲ್ಪಮಟ್ಟಿಗೆ ಉತ್ತಮವಾಗಿ ಪೊಲೀಸ್‌ ಇಲಾಖೆಯ ತುರ್ತು ಸಹಾಯವಾಣಿ ಕೆಲಸ ಮಾಡುತ್ತಿದೆ. ಇದರ ಮೇಲೆ ಯಾರ ಕಣ್ಣು ಬೀಳದಿರಲಿ' ಎಂದು ಅವರು ವಿವರಿಸಿದ್ದಾರೆ. ಅವರ ಪೋಸ್ಟ್‌ಗಳಿಗೆ ಒಂದಷ್ಟು ಕಾಮೆಂಟ್‌ಗಳು ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+