''KKRTC ಹೊಸ ಸಾರಿಗೆ ಕೇಂದ್ರ ಕಚೇರಿಗೂ ಮುನ್ನ 'ಪ್ರೀಮಿಯಂ ಸಾರಿಗೆ' ಬಸ್‌ಗಳನ್ನು ಬಿಡಿ''
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ರೈಲು, ರಸ್ತೆ ಸಾರಿಗೆ ವಿಚಾರದಲ್ಲಿ ವರ್ಷಗಳಿಂದಲೂ ಸಾಕಷ್ಟು ಸಮಸ್ಯೆಗಳನ್ನು ಕೇಳುತ್ತಲೇ ಬಂದಿದ್ದೇವೆ. ರಾಜ್ಯ ಸರ್ಕಾರ ಕೆಲವು ಯೋಜನೆಗಳ ಘೋಷಣೆ, ಅನುದಾನ ಹಂಚಿಕೆ ಮಾಡುತ್ತಲೇ ಇದೆ. ಆದರೆ ಈ ಭಾಗದ ಜನರಿಗೆ ಸಂಚಾರ ಸಮಸ್ಯೆಗಳು ಮಾತ್ರ ಕಡಿಮೆ ಆಗಿಲ್ಲ. ಇದೀಗ ರಾಜ್ಯ ಸರ್ಕಾರ 20 ಕೋಟಿ ರೂ.ವೆಚ್ಚದಲ್ಲಿ ನೂತನ ಕಚೇರಿ ನಿರ್ಮಾಣಕ್ಕೆ ಸಿದ್ಧವಾಗಿದೆ. ಆದರೆ ಇಲ್ಲಿನ ಜನರು 'ಕಚೇರಿ ಬಿಡಿ ಮೊದಲು ಬಸ್'ಗಳನ್ನು ಕಲ್ಪಿಸಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಸರ್ಕಾರವು ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಭಾಗವಾಗಿ ಕಲಬುರಗಿ ಜಿಲ್ಲೆಗೆ ಸಿಹಿ ಸುದ್ದಿ ನೀಡಿದೆ. ಬರೋಬ್ಬರಿ 20 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನೂತನ ಕೇಂದ್ರ ಕಚೇರಿ ನಿರ್ಮಾಣ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ. ಈ ಕುರಿತು ಐಟಿ ಬಿಟಿ ಖಾತೆ ಸಚಿವರೂ ಆಗಿರುವ ಕಲಬುರಗಿ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಎಕ್ಸ್ ಪೊಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.

ಕಲ್ಯಾಣ ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಿಬ್ಬಂದಿಗಳಿಗೆ ಅಗತ್ಯ ಮೂಲ ಸೌಕರ್ಯ ಒದಗಿಸಲು ಗ್ಯಾರಂಟಿ ಸರ್ಕಾರ ಬದ್ಧವಾಗಿದೆ ಎಂದು ಅವರು ಯೋಜನೆ ಕುರಿತು ತಿಳಿಸಿದ್ದಾರೆ. ಮತ್ತೊಂದೆಡೆ ಅವರ ಪೋಸ್ಟ್‌ಗೆ ಕಲಬುರಗಿ ಜಿಲ್ಲೆಯ ಜನರೇ ಅಸಮಾಧಾನ ಹೊರ ಹಾಕಿದ್ದಾರೆ.
ಪ್ರೀಮಿಯಂ ಸಾರಿಗೆ ಬಸ್ ಮೊದಲು ಬಿಡಿ
ಸಚಿವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗರ ಪೈಕಿ ಒಬ್ಬರು 'ಬೆಂಗಳೂರಿನಿಂದ ಪ್ರೀಮಿಯಂ ಸಾರಿಗೆ ಬಸ್ಸುಗಳು ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕದ ಪ್ರತೀ ದೊಡ್ಡ ಊರು ಹಾಗೂ ಜಿಲ್ಲಾ ಕೇಂದ್ರಕ್ಕೆ ಇರಬೇಕು. ಇದಿಯಾ? ಅದನ್ನು ಮೊದಲು ತರುವ ವ್ಯವಸ್ಥೆ ಮಾಡಬೇಕು ಅಲ್ವಾ?. ಹಾಗೆಯೇ ಜಿಲ್ಲೆಯಲ್ಲಿ ಓಡಾಡಲು ಒಳ್ಳೆಯ ಹೊಸ ಬಸ್ಸುಗಳು ಬೇಕು. ಕೆಲವು ಕಡೆ ಬಸ್ಸುಗಳಲ್ಲಿ ನಿಲ್ಲೊಕು ಜಾಗ ಇಲ್ಲದಂತೆ ತುಂಬಿಸಿರೋದನ್ನ ನೋಡಿದೀವಿ' ಎಂದು ಕಾಮೆಂಟ್ ಹಾಕಿದ್ದಾರೆ.
ನಾಯಕರು ಬೆಂಗಳೂರಲ್ಲಿದ್ದರೆ ಕ್ಷೇತ್ರ ಏಳಿಗೆ ಹೇಗೆ ಸಾಧ್ಯ?
ಮತ್ತೊಬ್ಬರು 'ಕಲ್ಯಾಣ ಹಾಗೂ ಕಿತ್ತೂರು ಕರ್ನಾಟಕ ಏಳಿಗೆ ಆಗಬೇಕು ಅಂದರೆ ಮೊದ್ಲು ಬೆಂಗಳೂರು ಸೇರ್ಕೊಂಡು ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿರೋ ಅಲ್ಲಿನ ರಾಜಕಾರಣಿಗಳನ್ನು ಊರು ಬಿಡಿಸಿ ತಮ್ಮ ಊರಿಗೆ ಹೋಗಿ ಇರುವಂತೆ ನೋಡಿಕೊಳ್ಳಬೇಕು. ಆಗ ಮಾತ್ರವೇ ಎಲ್ಲವು ಅಭಿವೃದ್ಧ ಆಗುತ್ತದೆ. ನಿಮ್ಮ ಪ್ರತಿನಿಧಿಗಳು ಬೆಂಗಳೂರಲ್ಲಿ ಇದ್ದು ಊರಿನ ಏಳಿಗೆ ಮಾಡು ಎಂದರೆ ಹೇಗೆ ಮಾಡಬಲ್ಲರು!' ಎಂದು ಸ್ಥಳೀಯ ಜನಪ್ರತಿನಿಧಿಗಳು ಕ್ಷೇತ್ರದ ಜನರ ಕಷ್ಟ ಕೇಳದೇ ಬೆಂಗಳೂರು ಸೇರುವ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ.
'ಉತ್ತರ ಕರ್ನಾಟಕದ ಜನಪ್ರತಿನಿಧಿಗಳನ್ನು ಕೇಳುತ್ತಿದ್ದಾರೆ, ಸಮಯ ಬಂದಾಗ ತಕ್ಕ ಪಾಠ ಕಲಿಸಲೂ ಜನರು ಸಜ್ಜಾಗಿದ್ದಾರೆ. ವಲಸಿಗರ ಒಲೈಕೆ, ಹಾವಳಿ, ವಲಸಿಗರ ಕೈಗೆ ಅಧಿಕಾರ, ಆಡಳಿತ, ವ್ಯಾಪಾರ ಹಾಗೂ ವಲಸಿಗರನ್ನೇ ಜನಪ್ರತಿನಿಧಿಯಾಗಿ ಆರಿಸಿ ಕಳಿಸಿದ ನೀವು ಈ ರಿಯಲ್ ಎಸ್ಟೇಟ್ ದಂಧೆಯನ್ನೇ ತಡೆಯಬಹುದಿತ್ತಲ್ಲ. ಬೇಲಿಯೇ ಎದ್ದು ಹೊಲ ಮೇಯ್ದರೇ ಹೇಗೆ?' ಅಂತಲೂ ಮೂರನೇಯವರು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಭಾಗವಾಗಿ ಕಲಬುರಗಿಯಲ್ಲಿ ₹20 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೂತನ ಕೇಂದ್ರ ಕಚೇರಿ ನಿರ್ಮಾಣ ಮಾಡಲು ನಿನ್ನೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) April 19, 2026
ಕಲ್ಯಾಣ ಕರ್ನಾಟಕದಲ್ಲಿ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಸಿಬ್ಬಂದಿಗಳಿಗೆ ಅಗತ್ಯ ಮೂಲ… pic.twitter.com/muNgYgsdPP
ಒಟ್ಟಾರೆ ಕಲಬುರಗಿ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಅಭಿವೃದ್ಧಿ ವಿಚಾರದಲ್ಲಿ ಪ್ರಾದೇಶಿಕ ಅಸಮಾನತೆ ಇನ್ನೂ ಜೀವಂತವಾಗಿರುವುದಕ್ಕೆ ಈಗಿರುವ ಸಮಸ್ಯೆಗಳೇ ಸಾಕ್ಷಿಯಾಗಿದೆ. ಅದಕ್ಕೆ ತಕ್ಕಂತೆ ಜನಸಾಮಾನ್ಯರು ತಮ್ಮ ಜನಪ್ರತಿನಿಧಿಗಳ ಮೇಲೆ ಕಿಡಿ ಕಾರುತ್ತಿದ್ದಾರೆ.












Click it and Unblock the Notifications