ಪಹಲ್ಗಾಮ್ ದಾಳಿಯ ರೂವಾರಿ ಹಬೀಬುಲ್ಲಾ ಇಸ್ಲಾಮಾಬಾದ್‌ನಲ್ಲಿ ಪತ್ತೆ: ಭಾರತದ ಮೋಸ್ಟ್ ವಾಂಟೆಡ್ ಉಗ್ರನ ಬಗ್ಗೆ ಸ್ಫೋಟಕ ಮಾಹಿತಿ
ಭಾರತಕ್ಕೆ ಬೇಕಾಗಿರುವ ಲಷ್ಕರ್-ಎ-ತೈಬಾ ಸಂಘಟನೆಯ ಅತ್ಯಂತ ಅಪಾಯಕಾರಿ ಉಗ್ರ ಹಬೀಬುಲ್ಲಾ ಅಲಿಯಾಸ್ ಸೈಫುಲ್ಲಾ ಸಾಜಿದ್ ಜಟ್ ಈಗ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಇರುವುದು ಪತ್ತೆಯಾಗಿದೆ. ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ದಾಳಿ ಸೇರಿದಂತೆ ಹಲವು ಭಯೋತ್ಪಾದಕ ಕೃತ್ಯಗಳಲ್ಲಿ ಈತನ ನೇರ ಕೈವಾಡವಿರುವುದು ಗುಪ್ತಚರ ಮಾಹಿತಿ ಹಾಗೂ ವಿಧಿವಿಜ್ಞಾನ ಪುರಾವೆಗಳಿಂದ ದೃಢಪಟ್ಟಿದೆ ಎಂದು ವರದಿಯಾಗಿದೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದವರು ಪಾಕಿಸ್ತಾನದ ಪಂಜಾಬ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಎಂಬುದು ಸಾಬೀತಾಗಿದ್ದು, ಈ ಮೂಲಕ ಭಯೋತ್ಪಾದನೆಯಲ್ಲಿ ಗಡಿಯಾಚೆಗಿನ ಸಂಪರ್ಕ ಮತ್ತೊಮ್ಮೆ ಬಹಿರಂಗವಾಗಿದೆ.
ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಕಸೂರ್ ಜಿಲ್ಲೆಯವನಾದ ಹಬೀಬುಲ್ಲಾ, ಕಾಶ್ಮೀರದಲ್ಲಿ ತನ್ನ ಜಾಲವನ್ನು ವಿಸ್ತರಿಸಲು ಸಲೀಂ ಮತ್ತು ಸೈಫುಲ್ಲಾ ಎಂಬ ಹೆಸರುಗಳನ್ನು ಬಳಸುತ್ತಿದ್ದನು. ಕುಲಗಾಮ್ ಜಿಲ್ಲೆಯ ಯಾರಿಪೋರಾದಲ್ಲಿ ಈತ ತನ್ನ ಕಾರ್ಯಾಚರಣೆಯ ಕೇಂದ್ರವನ್ನು ಸ್ಥಾಪಿಸಿಕೊಂಡಿದ್ದನು. ಅಷ್ಟೇ ಅಲ್ಲದೆ, ಸ್ಥಳೀಯವಾಗಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸಲು ಯಾರಿಪೋರಾದ ಶಬೀರಾ ಕುಚ್ಚೆ ಎಂಬ ಮಹಿಳೆಯನ್ನು ವಿವಾಹವಾಗುವ ಮೂಲಕ ಅಲ್ಲಿನ ಜನರ ನಡುವೆ ಬೆರೆಯಲು ಪ್ರಯತ್ನಿಸಿದ್ದನು ಎಂದು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿರುವುದಾಗಿ ಎಬಿಪಿ ನ್ಯೂಸ್ ವರದಿ ಮಾಡಿದೆ.

ಹಲವು ಕೃತ್ಯಗಳಲ್ಲಿ ಭಾಗಿ
ಸದ್ಯ ಇಸ್ಲಾಮಾಬಾದ್‌ನಲ್ಲಿ ಆಶ್ರಯ ಪಡೆದಿರುವ ಈತ ಅಲ್ಲಿಂದಲೇ ಭಾರತದ ವಿರುದ್ಧ ಸಂಚು ರೂಪಿಸುತ್ತಿದ್ದು, ಭದ್ರತಾ ಪಡೆಗಳು ಈತನ ಮೇಲೆ ತೀವ್ರ ನಿಗಾ ಇರಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕದಡಲು ಈತ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನಗಳನ್ನು ವಿಫಲಗೊಳಿಸಲು ಸರ್ಕಾರವು ತಂತ್ರಗಳನ್ನು ರೂಪಿಸುತ್ತಿದೆ. ಲಷ್ಕರ್-ಎ-ತೈಬಾದ ಈ ಅಪಾಯಕಾರಿ ಉಗ್ರ 2007ರ ಹೊತ್ತಿಗಾಗಲೇ ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿದ್ದ ಅನ್ಯ ರಾಜ್ಯದ ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆದ ಹಲವು ಹತ್ಯೆಗಳಲ್ಲಿ ಭಾಗಿಯಾಗಿದ್ದನು ಎನ್ನಲಾಗಿದೆ.
ಮೊಣಕಾಲಿನ ಕೆಳಗೆ ಕೃತಕ ಕಾಲನ್ನು ಅಳವಡಿಸಿಕೊಂಡಿದ್ದ ಈತನನ್ನು ಸ್ಥಳೀಯರು 'ಲಂಗ್ಡಾ' ಎಂಬ ಹೆಸರಿನಿಂದ ಕರೆಯುತ್ತಿದ್ದರು. ಅದೇ ವರ್ಷ ತನ್ನ ಒಂದು ವರ್ಷದ ಮಗ ಉಮರ್‌ನನ್ನು ಯಾರಿಪೋರಾದಲ್ಲಿಯೇ ಬಿಟ್ಟು, ಭಾರತೀಯ ಪತ್ನಿಯೊಂದಿಗೆ ಪಾಕಿಸ್ತಾನಕ್ಕೆ ಪರಾರಿಯಾಗಿದ್ದನು. ಅಲ್ಲಿಂದ ಈತ ಕಣಿವೆ ರಾಜ್ಯದಲ್ಲಿ ನೇರವಾಗಿ ಕೃತ್ಯವೆಸಗುವುದನ್ನು ಬಿಟ್ಟು, ಗಡಿಯಾಚೆ ಕುಳಿತು ದಾಳಿಗಳನ್ನು ನಿಯಂತ್ರಿಸುವ ಕಮಾಂಡರ್ ಆಗಿ ಬದಲಾದನು ಎಂದು ತಿಳಿದದುಬಂದಿದೆ.
ಪಾಕಿಸ್ತಾನಕ್ಕೆ ಮರಳಿದ ನಂತರ ಹಬೀಬುಲ್ಲಾ ಕಸೂರ್‌ನಲ್ಲಿ ನೆಲೆಸಿ, ಹೊರನೋಟಕ್ಕೆ ಡೈರಿ ವ್ಯವಹಾರ ನಡೆಸುತ್ತಿದ್ದನು. ಆದರೆ ಈ ಉದ್ಯಮದ ಮರೆಯಲ್ಲಿ ಲಷ್ಕರ್-ಎ-ತೈಬಾ ಜೊತೆಗಿನ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡಿದ್ದನು. ಕಸೂರ್‌ನಲ್ಲಿರುವ ಲಷ್ಕರ್‌ನ 'ಮರ್ಕಜ್ ಯಾರ್ಮೂಕ್' ತರಬೇತಿ ಕೇಂದ್ರಕ್ಕೆ ವರ್ಷದಲ್ಲಿ ಸುಮಾರು ಮೂರು ಬಾರಿ ಭೇಟಿ ನೀಡುತ್ತಿದ್ದ ಈತ, ಅಲ್ಲಿ ಹೊಸದಾಗಿ ಸೇರ್ಪಡೆಯಾದ ಉಗ್ರರಿಗೆ ತರಬೇತಿ ನೀಡುತ್ತಿದ್ದನು ಎಂಬ ಮಾಹಿತಿಯೂ ಲಭ್ಯವಾಗಿದೆ.
2012ರಲ್ಲಿ ಲಷ್ಕರ್-ಎ-ತೈಬಾದ ಉನ್ನತ ಕಮಾಂಡರ್ ಝಕಿ-ಉರ್-ರೆಹಮಾನ್ ಲಖ್ವಿ ಈತನಿಗೆ ಕಾಶ್ಮೀರ ಕಾರ್ಯಾಚರಣೆಯ ಪ್ರಮುಖ ಜವಾಬ್ದಾರಿಯನ್ನು ವಹಿಸಿದ ನಂತರ ಹಬೀಬುಲ್ಲಾ ಪ್ರಭಾವ ಮತ್ತಷ್ಟು ಹೆಚ್ಚಾಯಿತು. ಅಂದಿನಿಂದ ಈತ ಪಾಕ್ ಆಕ್ರಮಿತ ಕಾಶ್ಮೀರದ ಶಿಬಿರಗಳಲ್ಲಿ ಉಗ್ರರಿಗೆ ತರಬೇತಿ ನೀಡುವುದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಸಬೇಕಾದ ದಾಳಿಗಳಿಗೆ ನಿರ್ದೇಶನ ನೀಡುವುದು ಹಾಗೂ ಸ್ಥಳೀಯ ಉಗ್ರಗಾಮಿ ಘಟಕಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಗಡಿಯಾಚೆಗಿನ ಭಯೋತ್ಪಾದನೆಯ ಪ್ರಮುಖ ಸಂಚುಕೋರನಾಗಿ ಹೊರಹೊಮ್ಮಿದ್ದಾನೆ ಎಂದು ವರದಿಯಾಗಿದೆ.












Click it and Unblock the Notifications