'ಟ್ವಿಂಕಲ್ ಟ್ವಿಂಕಲ್' ಪದ್ಯ ಕಲಿಯಲು 2 ಲಕ್ಷ ರೂ. ಶುಲ್ಕ; Viral ಆಗುತ್ತಿರುವ ಕೆಜಿ ಶಾಲಾ ಶುಲ್ಕದ ರಸೀದಿ ಕಂಡು ನೆಟ್ಟಿಗರು ಗರಂ

ಸಣ್ಣ ಮಕ್ಕಳನ್ನು ಕೂಡ ಶಾಲೆಗೆ ಸೇರಿಸುವುದು ಇಂದಿನ ದಿನಗಳಲ್ಲಿ ಪೋಷಕರಿಗೆ ದೊಡ್ಡ ಆರ್ಥಿಕ ಹೊರೆಯಾಗಿ ಪರಿಣಮಿಸುತ್ತಿರುವುದು ನಮಗೆಲ್ಲರಿಗೂ ಗೊತ್ತೇ ಇದೆ. ದಿನೇ ದಿನೇ ಗಗನಕ್ಕೇರುತ್ತಿರುವ ಶಾಲಾ ಶುಲ್ಕಗಳು ಮಧ್ಯಮ ವರ್ಗದ ಜನರ ನಿದ್ದೆಗೆಡಿಸಿರುವುದಂತೂ ಸತ್ಯ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಕಿಂಡರ್ ಗಾರ್ಟನ್ (Kindergarten/LKG) ವಿದ್ಯಾರ್ಥಿಯ ಶಾಲಾ ಶುಲ್ಕದ ರಸೀದಿಯೊಂದು ನೆಟ್ಟಿಗರನ್ನು ಬೆಚ್ಚಿಬೀಳಿಸಿದೆ.

ಕೇವಲ 'ಟ್ವಿಂಕಲ್ ಟ್ವಿಂಕಲ್ ಲಿಟಲ್ ಸ್ಟಾರ್' ಪದ್ಯ ಕಲಿಯುವ ಈ ಪುಟ್ಟ ಮಕ್ಕಳಿಗೆ ಬರೋಬ್ಬರಿ 2.25 ಲಕ್ಷ ರೂಪಾಯಿ ವಾರ್ಷಿಕ ಶುಲ್ಕ ವಿಧಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಭಾರತದಲ್ಲಿ ಆರಂಭಿಕ ಶಿಕ್ಷಣದ ವೆಚ್ಚ ಮತ್ತು ಶಿಕ್ಷಣದ ವ್ಯಾಪಾರೀಕರಣದ ಬಗ್ಗೆ ಈಗ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.

LKG Fee

ವೈರಲ್ ಆದ ಪೋಸ್ಟ್‌ನಲ್ಲಿ ಏನಿದೆ?

ಸಾಕ್ಷಿ ಎಂಬ ಸಾಫ್ಟ್‌ವೇರ್ ಡೆವಲಪರ್ ಅವರು ಎಕ್ಸ್ ಜಾಲತಾಣದಲ್ಲಿ ಶಾಲೆಯೊಂದರ ಶುಲ್ಕದ ವಿವರಗಳನ್ನು ಹಂಚಿಕೊಂಡಿದ್ದರು. 2026-27ನೇ ಶೈಕ್ಷಣಿಕ ಸಾಲಿನ ಈ ಶುಲ್ಕದ ಪಟ್ಟಿಯೊಂದಿಗೆ ಅವರು, "ಕೇವಲ ಟ್ವಿಂಕಲ್ ಟ್ವಿಂಕಲ್ ಕಲಿಯಲು 2.5 ಲಕ್ಷ ರೂಪಾಯಿ ಶುಲ್ಕ" ಎಂಬ ವ್ಯಂಗ್ಯಭರಿತ ಕ್ಯಾಪ್ಷನ್‌ ಬರೆದುಕೊಂಡಿದ್ದರು. ಶಾಲಾ ಶುಲ್ಕದ ಮೊತ್ತ ಎಷ್ಟು ಅಸಂಬದ್ಧವಾಗಿದೆ ಎಂಬುದನ್ನು ಎತ್ತಿತೋರಿಸುವ ಅವರ ಈ ಪೋಸ್ಟ್ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಸಾಕ್ಷಿ ಅವರು ಹಂಚಿಕೊಂಡಿರುವ ರಸೀದಿಯಲ್ಲಿ ಶಾಲೆಯ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ, ಆ ಶಾಲೆಯು ಪೋಷಕರಿಂದ ಪ್ರವೇಶ ಶುಲ್ಕವಾಗಿ 15,000 ರೂಪಾಯಿಗಳನ್ನು ಮತ್ತು ಮರುಪಾವತಿಸಲಾಗದ ಕೌಶನ್ ಮನಿ ರೂಪದಲ್ಲಿ 33,000 ರೂಪಾಯಿಗಳನ್ನು ವಿಧಿಸಿದೆ. ಇದಲ್ಲದೆ ಬೋಧನಾ ಶುಲ್ಕ, ಗ್ರಂಥಾಲಯ ಮತ್ತು ಜಿಮ್ಖಾನಾ ಶುಲ್ಕಗಳನ್ನು ಸೇರಿಸಿ ಒಟ್ಟು 2.25 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡುತ್ತಿರುವುದು ಬಿಲ್‌ನಲ್ಲಿ ದಾಖಲಾಗಿದೆ.

ಅಚ್ಚರಿಯ ವಿಚಾರವೆಂದರೆ, ಈ ಬೃಹತ್ ಮೊತ್ತದಲ್ಲಿ ಶಾಲಾ ಸಮವಸ್ತ್ರ, ಬೂಟುಗಳು, ಸಾಕ್ಸ್ ಮತ್ತು ಶಾಲೆಯ ಕೆಫೆಟೇರಿಯಾದಲ್ಲಿ ನೀಡುವ ಊಟದ ವೆಚ್ಚವು ಸೇರಿಲ್ಲ. ಇವುಗಳಿಗೆ ಪ್ರತ್ಯೇಕವಾಗಿ ಹಣ ಪಾವತಿಸಬೇಕೆಂದು ರಸೀದಿಯ ಕೆಳಭಾಗದಲ್ಲಿ ಸೂಚನೆ ನೀಡಲಾಗಿದೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್ ಭಾರಿ ವೈರಲ್‌ ಆಗುತ್ತಿದ್ದು, ಈಗಾಗಲೇ ಅರ್ಧ ದಶಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಶುಲ್ಕದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಕೆಲವರು ಪ್ರೀಮಿಯಂ ಶಾಲೆಗಳು ಉತ್ತಮ ಮೂಲಸೌಕರ್ಯ ಮತ್ತು ಜಾಗತಿಕ ಮಟ್ಟದ ಶಿಕ್ಷಣವನ್ನು ನೀಡುತ್ತವೆ ಎಂದು ವಾದಿಸಿದರೆ, ಬಹುಪಾಲು ಜನರು ಇದು ಮಧ್ಯಮ ವರ್ಗದ ಕುಟುಂಬಗಳಿಗೆ ಗುಣಮಟ್ಟದ ಶಿಕ್ಷಣವನ್ನು ಮರೀಚಿಕೆಯಾಗಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಬಳಕೆದಾರರೊಬ್ಬರು, "ಇದು ಸಂಪೂರ್ಣವಾಗಿ ಮಿತಿ ಮೀರುತ್ತಿದೆ. ಸರ್ಕಾರ ಏನು ಮಾಡುತ್ತಿದೆ? ಈ ಶುಲ್ಕ ಹೆಚ್ಚಳವನ್ನು ನಿಯಂತ್ರಿಸಲು ಯಾವುದೇ ಕಠಿಣ ನಿಯಮಗಳಿಲ್ಲವೇ?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು, "ಐಬಿ (IB) ಶಾಲೆಗಳ ಶುಲ್ಕ ನರ್ಸರಿಯಿಂದಲೇ 3.5 ಲಕ್ಷ ರೂ.ಗಳಿಂದ ಪ್ರಾರಂಭವಾಗುತ್ತದೆ. ಇದರಲ್ಲಿ ಸಂಗೀತ ಕೊಠಡಿ, ಕೆಫೆಟೇರಿಯಾದಲ್ಲಿ ಉಚಿತ ಆಹಾರ, ಎಸಿ ತರಗತಿಗಳು, ಈಜು, ಸ್ಕೇಟಿಂಗ್ ಇತ್ಯಾದಿ ಸೇರಿರುತ್ತವೆ. ಇಂತಹ ಶಾಲೆಗಳು ಪ್ರವೇಶಿಸಿದಾಕ್ಷಣ ಪಂಚತಾರಾ ಹೋಟೆಲ್‌ಗಳಂತೆ ಕಾಣುತ್ತವೆ" ಎಂದು ಬರೆದುಕೊಂಡಿದ್ದಾರೆ.

ಒಟ್ಟಾರೆಯಾಗಿ, ಎಳೆಯ ಮಕ್ಕಳ ಶಿಕ್ಷಣದ ಹೆಸರಿನಲ್ಲಿ ನಡೆಯುತ್ತಿರುವ ಈ ಹಗಲು ದರೋಡೆಯನ್ನು ನಿಯಂತ್ರಿಸಬೇಕು ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಬಲವಾಗಿ ಕೇಳಿಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+