ಮೂರು ತಿಂಗಳು ಗೂಡ್ಸ್ ಶೆಡ್ ರಸ್ತೆಯಲ್ಲಿ ವಾಹನ ಸಂಚಾರ ಬಂದ್
ಬೆಂಗಳೂರು, ಆಗಸ್ಟ್ 23; ಬೆಂಗಳೂರಿನ ಮೆಜೆಸ್ಟಿಕ್‌ಗೆ ಸಂಪರ್ಕ ಕಲ್ಪಿಸುವ ಗೂಡ್ಸ್ ಶೆಡ್ ರಸ್ತೆ ಮೂರು ತಿಂಗಳ ಕಾಲ ಬಂದ್ ಆಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈಟ್ ಟಾಪಿಂಗ್ ಕಾಮಗಾರಿ ಕೈಗೊಳ್ಳಲಿರುವ ಹಿನ್ನಲೆಯಲ್ಲಿ 90 ದಿನಗಳ ಕಾಲ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
1.3 ಕಿ. ಮೀ. ಉದ್ದದ ಗೂಡ್ಸ್ ಶೆಡ್ ರಸ್ತೆಯ ವೈಟ್ ಟಾಪಿಂಗ್ ಕಾಮಗಾರಿಯನ್ನು ಬಿಬಿಎಂಪಿ ಎರಡು ಹಂತಗಳಲ್ಲಿ ಕೈಗೊಳ್ಳಲಿದೆ. ಕಾಮಗಾರಿಗಳು ಪೂರ್ಣಗೊಳ್ಳುವ ತನಕ ರಸ್ತೆಯಲ್ಲಿ ವಾಹನಗಳ ಸಂಚಾರ ರದ್ದುಗೊಂಡಿದೆ.
ಮೂರು ತಿಂಗಳಿನಲ್ಲಿ ಎರಡು ಹಂತದ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ. ಮೊದಲ ಹಂತದಲ್ಲಿ ಬೇಲಿಮಠ ರಸ್ತೆಯ ತನಕ, ಬಳಿಕ ಕಾಟನ್ ಪೇಟೆ ಅಡ್ಡ ರಸ್ತೆಯ ತನಕ ಕಾಮಗಾರಿ ನಡೆಯಲಿದೆ.

ಕಾಮಗಾರಿ ಪೂರ್ಣಗೊಳ್ಳುವ ತನಕ ಗೂಡ್ಸ್ ಶೆಡ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಬಿಬಿಎಂಪಿ ಪರ್ಯಾಯ ಮಾರ್ಗಗಳನ್ನು ಸಹ ವಾಹನ ಸವಾರರಿಗೆ ನೀಡಿದೆ. ಕಾಮಗಾರಿ ಪೂರ್ಣಗೊಳ್ಳುವ ತನಕ ಮೆಜೆಸ್ಟಿಕ್‌ಗೆ ಸಂಚಾರ ನಡೆಸುವ ವಾಹನ ಸವಾರರು ಸಂಚಾರ ದಟ್ಟಣೆಯನ್ನು ಅನುಭವಿಸಬೇಕಾದಿತು.
ಗೂಡ್ಸ್ ಶೆಡ್ ರಸ್ತೆಯಲ್ಲಿ ಈಗಾಗಲೇ ವೈಟ್ ಟ್ಯಾಪಿಂಗ್ ಕಾಮಗಾರಿಗೆ ತಯಾರಿ ನಡೆಯುತ್ತಿದೆ. ಫುಟ್‌ಪಾತ್, ಒಳಚರಂಡಿ, ನೀರಿನ ಸಂಪರ್ಕ, ರಾಜಾಕಾಲುವೆಗಳಿಗೆ ಸಂಪರ್ಕಿಸುವ ಮೋರಿಗಳನ್ನು ದುರಸ್ಥಿ ಮಾಡಲಾಗುತ್ತಿದೆ. ಗೂಡ್ಸ್ ಶೆಡ್ ಮಾರ್ಗದಲ್ಲಿ ಸಂಚಾರ ನಡೆಸುವ ವಾಹನ ಸವಾರರು ಪರ್ಯಾಯ ಮಾರ್ಗದ ಕುರಿತು ಮಾಹಿತಿ ತಿಳಿದಿರುವುದು ಅಗತ್ಯವಾಗಿದೆ.
ಪರ್ಯಾಯ ಮಾರ್ಗ
* ಮೈಸೂರು ರಸ್ತೆ ಕಡೆಯಿಂದ ಮೆಜೆಸ್ಟಿಕ್‌ಗೆ ಬರುವ ವಾಹನಗಳು ಮೈಸೂರು ರಸ್ತೆಯ ಬಾಡಿ ಬಿಲ್ಡರ್ ಜಂಕ್ಷನ್‌ಗೆ ಬಂದು ಎಡ ತಿರುವು ಪಡೆದು ಬಿನ್ನಿ ಮಿಲ್ ಟ್ಯಾಂಕ್ ಬಂಡ್ ರಸ್ತೆ, ಬಾಳೇಕಾಯಿ ಮಂಡಿ ಜಂಕ್ಷನ್‌ಗೆ ಬಂದು ಬಿನ್ನಿಮಿಲ್ ಸರ್ಕಲ್‌ನಲ್ಲಿ ಬಲ ತಿರುವು ಪಡೆದು ರಾಯನ್ ರಸ್ತೆ ಜಂಕ್ಷನ್ ಮಾರ್ಗವಾಗಿ ಗೂಡ್ಸ್ ಶೆಡ್ ರಸ್ತೆ ಮೂಲಕ ಶಾಂತಲಾ ಜಂಕ್ಷನ್ ತಲುಪಬಹುದು.
* ಫ್ಲೈ ಓವರ್ ಮೂಲಕ ಬರುವವರು ಪುರಭವನ, ಕಾರ್ಪೊರೇಷನ್ ಮಾರ್ಗವಾಗಿ ಕೆ. ಜಿ. ರಸ್ತೆ ಮೂಲಕ ಮೆಜೆಸ್ಟಿಕ್ ತಲುಪಬೇಕು.
* ಫ್ಲೈ ಓವರ್ ಕೆಳ ರಸ್ತೆಯಲ್ಲಿ ಬರುವ ವಾಹನ ಸವಾರರು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಸಾಗಿ ಕೆ. ಜಿ. ರಸ್ತೆ ಸಂಪರ್ಕ ಪಡೆದು ಮೆಜೆಸ್ಟಿಕ್‌ಗೆ ಬರಬಹುದು.












Click it and Unblock the Notifications