RV Road-Bommasandra Metro Line: ಪ್ರಯಾಣಿಕರಿಗೆ ಗುಡ್ ನ್ಯೂಸ್, 2026 ಜನರಿಗೆ 8ರೈಲು ಸಂಚಾರ?
ಬೆಂಗಳೂರು, ಡಿಸೆಂಬರ್ 01: ಬೆಂಗಳೂರು ಮೆಟ್ರೋ ರೈಲು ಜಾಲದ ಪೈಕಿ 19.15 ಕಿಲೋ ಮೀಟರ್ ಉದ್ದದ ಹಳದಿ ಮಾರ್ಗದ (ಆರ್.ವಿ.ರಸ್ತೆ-ಬೊಮ್ಮಸಂದ್ರ) ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಗುಡ್ ನ್ಯೂಸ್ ಸಿಗಲಿದೆ. ನೇರಳೆ ಮಾರ್ಗ ಮತ್ತು ಹಸಿರು ಮಾರ್ಗದಂತೆ ಹೆಚ್ಚು ರೈಲುಗಳು ಹಳದಿ ಮಾರ್ಗದಲ್ಲೂ ಸಂಚಾರ ಮಾಡಲಿವೆ. ಈ ಮೂಲಕ ಬಹುದಿನಗಳ ಆಸೆ ಈಡೇರಿಲಿದೆ.
ನವೆಂಬರ್ ಮೂರನೇ ವಾರ ಹಳದಿ ಮಾರ್ಗದ 6ನೇ ರೈಲಿನ ಆರು ಬೋಗಿಗಳನ್ನು ಟಿಟಾಘರ್ ಕಂಪನಿಯು ಕಳುಹಿಸಿದೆ. ಅವುಗಳು ಇನ್ನೇನು ಹೆಬ್ಬಗೋಡಿಯ ಡಿಪೋಗೆ ಬಂದು ಸೇರಲಿವೆ. ಅದೇ ರೀತಿ ಡಿಸೆಂಬರ್ ಹಾಗೂ ಜನವರಿಗೆ ತಿಂಗಳಿಗೆ ಒಂದರಂತೆ ಮೆಟ್ರೋ ರೈಲುಗಳು ಕೊಲ್ಕತ್ತಾದ ಟಿಟಾಘರ್‌ನಿಂದ ಬೆಂಗಳೂರಿಗೆ ಆಗಮಿಸಲಿವೆ. ಈ ಮೂಲಕ ಪ್ರಯಾಣಿಕರ ಕಾಯುವಿಕೆ ಸಮಯ ಪರಿಣಾಮಕಾರಿಯಾಗಿ ತಗ್ಗಲಿದೆ.

ನವೆಂಬರ್ ಅಂತ್ಯಕ್ಕೆ ಬರಬೇಕಿದ್ದ ಆರನೇ ಮೆಟ್ರೋ ತಡವಾಗಿದೆ. ರೈಲು ಬರುತ್ತಿದ್ದ ಅದನ್ನು ಇಳಿಸಿ ಹಳಿಗೆ ಜೋಡಿಸಲಾಗುತ್ತದೆ. ಎಂದಿನಂತೆ ತಾಂತ್ರಿಕ, ವಿದ್ಯುತ್ ಪೂರೈಕೆ, ಸಿಗ್ನಲಿಂಗ್, ಭಾರ ಹೀಗೆ ಹಲವು ವಿಧದ ಪರೀಕ್ಷೆಗಳ ನಡೆಯುತ್ತಿದ್ದಂತೆ ಡಿಸೆಂಬರ್ ಮಧ್ಯಕ್ಕೆ ಸೇವೆಗೆ ನಿಯೋಜನೆಗೊಳ್ಳಲಿದೆ. ಅದರ ಬೆನ್ನಲ್ಲೆ 7ನೇ ಮೆಟ್ರೋ ರೈಲು ಸಹ ಡಿಸೆಂಬರ್‌ನಲ್ಲಿ 8ನೇ ರೈಲು ಜನವರಿಯಲ್ಲಿ ಬೆಂಗಳೂರಿಗೆ ಆಗಮಿಸಲಿವೆ.
8 ರೈಲುಗಳ ಸಂಚಾರ, ಕಾಯುವಿಕೆ 10 ನಿಮಿಷಕ್ಕೆ ಇಳಿಕೆ?
2026 ಜನವರಿ ಅಂತ್ಯದ ಹೊತ್ತಿಗೆ ಸುಮಾರು ಎಂಟು ರೈಲುಗಳು ಉದ್ದೇಶಿತ ಆರ್.ವಿ.ರಸ್ತೆ ಮತ್ತು ಬೊಮ್ಮಸಂದ್ರದ ನಡುವೆ ಸಂಚಾರ ಮಾಡುವ ನಿರೀಕ್ಷೆ ಇದೆ. ಸದ್ಯ 15-17 ನಿಮಿಷಗಳ ಅಂತರದಲ್ಲಿ ಐದು ರೈಲುಗಳು ಸಂಚಾರ ಸೇವೆ ನೀಡುತ್ತಿವೆ. ಈ ರೈಲುಗಳ ಆವರ್ತನ ಈ ತಿಂಗಳು 12-13ನಿಮಿಷಕ್ಕೆ ಇಳಿಕೆ ಆಗಲಿದೆ. ಮುಂದಿನ ವರ್ಷ ಜನವರಿ ಅಂತ್ಯ ಇಲ್ಲವೇ ಫೆಬ್ರವರಿ ಹೊತ್ತಿಗೆ ಇತರ ಮಾರ್ಗಗಳಂತೆ 10 ನಿಮಿಷಗಳಿಗೆ ಇಳಿಕೆ ಆಗಲಿದೆ ಎಂದು BMRCL ಮೂಲಗಳು ಮಾಹಿತಿ ನೀಡಿವೆ.
ಪೂರೈಕೆಯ ರೈಲುಗಳು ಯೆಲ್ಲೋ ಮಾರ್ಗಕ್ಕೆ..!
ಬಿಎಂಆರ್‌ಸಿಎಲ್ ಮತ್ತು ಚೀನಾ ಕಂಪನಿ ಜೊತೆಗೆ 36 ಸೆಟ್ ರೈಲುಗಳ (216 ಬೋಗಿಗಳು) ಪೂರೈಕೆಗಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಒಟ್ಟು 1578 ಕೋಟಿ ರೂಪಾಯಿ ಒಪ್ಪಂದ 2019ರಲ್ಲಿ ಮಾಡಿಕೊಳ್ಳಲಾಗಿದೆ. ಸಾಕಷ್ಟು ವಿಳಂಬದ ಬಳಿಕ ಇದೀಗ ಟಿಟಾಘರ್ ಕಂಪನಿ ಒಂದೊಂದೆ ರೈಲುಗಳನ್ನು ಪೂರೈಕೆ ಮಾಡುತ್ತಿದೆ. ಸದ್ಯ ಬರುತ್ತಿರುವ ಹೊಸ ರೈಲುಗಳ ಪೈಕಿ ಮೊದಲು ಹಳದಿ ಮಾರ್ಗಕ್ಕೆ ಒದಗಿಸುವ ಸಾಧ್ಯತೆ ಇದೆ. ನಂತರ ಇತರ ನೇರಳೆ, ಹಸಿರು ಮತ್ತು 2026ರಲ್ಲಿ ತೆರೆಯಲಿರುವ ಗುಲಾಬಿ ಮಾರ್ಗಕ್ಕೆ ನಿಯೋಜನೆಗೊಳ್ಳಲಿವೆ.
ಹಳದಿ ಮಾರ್ಗದಲ್ಲಿ ಪ್ರಯಾಣಿಕರ ಸಂಚಾರ ಹೆಚ್ಚಳ
2025ರ ಆಗಸ್ಟ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು ಹಳದಿ ಮಾರ್ಗವನ್ನು ಉದ್ಘಾಟಿಸಿದ್ದರು. ಮೊದಲ ದಿನವೇ ಸುಮಾರು 30 ಸಾವಿರ ಜನರು ಪ್ರಯಾಣಿಸಿದ್ದರು. ನಂತರ ಈವರೆಗೆ ಸುಮಾರು 70 ಸಾವಿರ ಪ್ರಯಾಣಿಕರು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರವರೆಗೆ ನಿತ್ಯ ಸಂಚಾರ ಮಾಡುತ್ತಿದ್ದಾರೆ. ಮಾರ್ಗದಲ್ಲಿ ರೈಲುಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಪ್ರಯಾಣಿಕರು ಓಡಾಟ ಸಹ ಏರಲಿದೆ ಎಂದು ಅಂದಾಜಿಸಲಾಗಿದೆ.
ಟ್ರಾಫಿಕ್ ಇಳಿಕೆಗೆ ಮತ್ತಷ್ಟು ಕೊಡುಗೆ
ಹಳದಿ ಮಾರ್ಗದಿಂದಾಗಿ ಸಿಲ್ಕ್ ಬೋರ್ಡ್, ಬಿಟಿಎಂ, ಎಲೆಕ್ಟ್ರಾನಿಕ್ ಸಿಟಿ, ಎಚ್‌ಆರ್ ಬಡಾವಣೆ, ಜಯದೇವ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ಮುಖ್ಯವಾಗಿ ಸಿಲ್ಕ್ ಬೋರ್ಡ್‌ನಲ್ಲಿ ಟ್ರಾಫಿಕ್ ಇಳಿಕೆ ಕೊಂಚ ತಗ್ಗಿದೆ. ಆದರೆ ಮೆಟ್ರೋ ರೈಲಿಗೆ ಹೆಚ್ಚಿನ ಸಮಯ ಕಾಯಬೇಕಾದ ಅನಿವಾರ್ಯತೆ ಇರುವ ಕಾರಣ ಹಲವರು ಖಾಸಗಿ ವಾಹನದಲ್ಲಿ ಓಡಾಡುವುದು ಕಂಡು ಬರುತ್ತಿದೆ. ಇದು ನಿಲ್ಲಬೇಕಾದರೆ ಹಳದಿ ಮಾರ್ಗದಲ್ಲಿ ಅಧಿಕ ಮೆಟ್ರೋ ಓಡಾಡಬೇಕಿದೆ. ಮೆಟ್ರೋ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಆವರ್ತನ ಸಮಯ ಇಳಿಕೆ ಆಗುತ್ತದೆ. ಆಗ ಉದ್ಯೋಗಿಗಳು, ಪ್ರಯಾಣಿಕರು ಮೆಟ್ರೋ ಅವಲಂಬಿಸುವ ಸಾಧ್ಯತೆ ಇದ್ದು, ಈ ಭಾಗ ರಸ್ತೆ ಮಾರ್ಗಗಳಲ್ಲಿನ ಟ್ರಾಫಿಕ್ ಮತ್ತಷ್ಟು ಇಳಿಕೆ ಆಗುವ ಸಂಭವವಿದೆ.












Click it and Unblock the Notifications