Property Owners: ಮನೆ ಮಾಲೀಕರು, ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಭರ್ಜರಿ ಸಿಹಿಸುದ್ದಿ
ಬೆಂಗಳೂರು ಈಗ ಐಟಿ ಸಿಟಿ, ಗಾರ್ಡನ್ ಸಿಟಿ ಮಾತ್ರವಲ್ಲ, ಅಪಾರ್ಟ್‌ಮೆಂಟ್‌ಗಳ ಸಿಟಿಯಾಗಿಯೂ ಬೆಳೆಯುತ್ತಿದೆ. ಮೊದಲೆಲ್ಲ ಪುಟ್ಟ ಪುಟ್ಟ ಮನೆಗಳಿದ್ದ ನಗರದಲ್ಲಿ ಈಗ ಎಲ್ಲೆಡೆಯೂ ಅಪಾರ್ಟ್‌ಮೆಂಟ್ ಸಂಸ್ಕೃತಿ ಹೆಚ್ಚಾಗಿದೆ. ಬಿಲ್ಡರ್‌ಗಳು ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಆಕಾಶದೆತ್ತರದ ಅಪಾರ್ಟ್‌ಮೆಂಟ್‌ಗಳನ್ನು ನಿರ್ಮಿಸುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿ ಎತ್ತ ಕಣ್ಣು ಹಾಯಿಸಿದರೂ ಅಪಾರ್ಟ್‌ಮೆಂಟ್‌ಗಳೇ ಕಣ್ಣಿಗೆ ರಾಚುತ್ತವೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಮನೆ ಮಾಲೀಕರು ಹಾಗೂ ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಲು ಮುಂದಾಗಿದೆ.
ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟವು (ಬಿಎಎಫ್) ಹಲವು ದಿನಗಳ ಪ್ರಮುಖ ಬೇಡಿಕೆಯನ್ನು ಸರ್ಕಾರ ಮುಂದೆ ಇಟ್ಟಿತ್ತು. ಹಲವು ವರ್ಷಗಳಿಂದ ಈ ಬೇಡಿಕೆ ಈಡೇರದೆ ಬೇಸರದಲ್ಲೇ ಇದ್ದರು. ಕೊನೆಗೂ ಈ ಬೇಡಿಕೆ ಈಡೇರುವ ಕಾಲ ಸಮೀಪಿಸಿದ್ದು, ಈ ಬಗ್ಗೆ ರಾಜ್ಯ ಸರ್ಕಾರ ದಿಟ್ಟ ಹೆಜ್ಜೆ ಇಡಲು ಹೊರಟಿದೆ. ಲಕ್ಷಾಂತರ ಮನೆಮಾಲೀಕರಿಗೆ ಪರಿಹಾರ ನೀಡುವ ಹಾಗೂ ಅಪಾರ್ಟ್‌ಮೆಂಟ್ ಸಂಘಗಳ ಸಬಲೀಕರಣಕ್ಕೆ ನೆರವಾಗುವ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ-2024 ಜಾರಿ ಮಾಡುವ ಕುರಿತು ಸುಳಿವು ನೀಡಿದೆ.

ಈ ಸಂಬಂಧ ಬೆಂಗಳೂರು ಅಪಾರ್ಟ್‌ಮೆಂಟ್‌ಗಳ ಒಕ್ಕೂಟವು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿಯೂ ಸಲ್ಲಿಸಿದೆ. ಈ ಸಭೆಯಲ್ಲಿ ಕರ್ನಾಟಕದಲ್ಲಿ ಅಪಾರ್ಟ್‌ಮೆಂಟ್ ಮಾಲೀಕತ್ವ ಮತ್ತು ನಿರ್ವಹಣಾ ಕಾಯ್ದೆಯನ್ನು ತ್ವರಿತವಾಗಿ ಪರಿಚಯಿಸುವಂತೆ ಬಿಎಎಫ್ ಅವರನ್ನು ಒತ್ತಾಯಿಸಿದೆ. ಲಕ್ಷಾಂತರ ಮನೆಮಾಲೀಕರಿಗೆ ಪರಿಹಾರ ನೀಡುವ ಮತ್ತು ಅಪಾರ್ಟ್‌ಮೆಂಟ್ ಸಂಘಗಳ ಸಬಲೀಕರಣಕ್ಕೆ ಅನುಕೂಲವಾಗುವ ಈ ಕಾಯ್ದೆಯನ್ನು ವಿಧಾನಸಭೆಯಲ್ಲಿ ತ್ವರಿತವಾಗಿ ಮಂಡಿಸಿ ಅಂಗೀಕರಿಸುವುದಾಗಿ ಅವರು ಭರವಸೆ ನೀಡಿದ್ದಾರೆ.
ಅಪಾರ್ಟ್‌ಮೆಂಟ್‌ಗಳ ಒಕ್ಕೂಟದ ಬೇಡಿಕೆಗಳೇನು?: ಅಪಾರ್ಟ್‌ಮೆಂಟ್ ಸಂಕೀರ್ಣಗಳ ವಿಲೀನ ಹಾಗೂ ಅಭಿವೃದ್ಧಿಗೆ ನಮಗೆ ಒಂದು ಕಾನೂನು ಬೇಕು. ನಗರ ನವೀಕರಣ ಯೋಜನೆಗಳಿಗೆ ಕಾನೂನು ಚೌಕಟ್ಟುಗಳನ್ನು ವ್ಯಾಖ್ಯಾನಿಸುವ ಸ್ಪಷ್ಟ ಪುನರ್‌ನಿರ್ಮಾಣದ ಮಾರ್ಗಸೂಚಿಗಳು ಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ಸ್ಥಳಾಂತರಗೊಂಡ ನಿವಾಸಿಗಳಿಗೆ ಸಾಕಷ್ಟು ಪರಿಹಾರ, ಪುನರ್ವಸತಿ ಆಯ್ಕೆಗಳು ಮತ್ತು ಆರ್ಥಿಕ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು, ಎಲ್ಲ ಮಾಲೀಕರಿಗೆ ನ್ಯಾಯಯುತ ವಾತಾವರಣ, ಪುನರ್‌ನಿರ್ಮಾಣದ ಅನುಮೋದನೆಗಳಿಗಾಗಿ ಸುಲಭದ ಕಾರ್ಯವಿಧಾನಗಳು ಬೇಕು ಎಂದು ಕೇಳಿವೆ. ಸುಸ್ಥಿರತೆ ಹಾಗೂ ಪರಿಸರ ಸ್ನೇಹಿ ಯೋಜನೆಗಳಿಗೆ ತೆರಿಗೆ ವಿನಾಯಿತಿ, ನೆಲದ ಸ್ಥಳ ಸೂಚ್ಯಂಕ (ಎಫ್‌ಎಸ್‌ಐ) ಸಡಿಲಿಕೆ, ಸೌರಶಕ್ತಿ, ಮಳೆನೀರು ಕೊಯ್ಲು ಮತ್ತು ಹಸಿರು ನಿರ್ಮಾಣ ಪದ್ಧತಿಗಳ ಬಳಕೆಯನ್ನು ಪ್ರೋತ್ಸಾಹಿಸುವುದು ಸೇರಿದಂತೆ ಹೊಸ ಅಪಾರ್ಟ್‌ಮೆಂಟ್‌ಗಳ ಮಾಲೀಕತ್ವ ಮತ್ತು ನಿರ್ವಹಣಾ ಕಾನೂನುಗಳು ಬೇಕು ಎಂದು ಅಪಾರ್ಟ್‌ಮೆಂಟ್‌ಗಳ ಒಕ್ಕೂಟ ಒತ್ತಾಯಿಸಿದೆ.

ಹೊಸ ಕಾಯಿದೆ ಜಾರಿ ನಂತರ ಸದ್ಯ ಜಾರಿಯಲ್ಲಿರುವ ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯಿದೆ-1972 ಹಾಗೂ ಕರ್ನಾಟಕ ಓನರ್‌ಶಿಪ್ ಫ್ಲಾಟ್ ಕಾಯಿದೆ-1972 ಅನ್ನು ಸೂಪರ್ ಸೀಡ್ ಮಾಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಸದ್ಯ ಈ ಹೊಸ ಕಾಯ್ದೆ ಶೀಘ್ರದಲ್ಲೇ ಜಾರಿಯಾಗಲಿದೆ.












Click it and Unblock the Notifications