ಹೆಬ್ಬಾಳದಿಂದ ಕೆ.ಆರ್ ಪುರಂ ಕಡೆ ಹೋಗುವ ವಾಹನ ಸವಾರರಿಗೆ ಗುಡ್ ನ್ಯೂಸ್
ಬೆಂಗಳೂರು, ಸೆಪ್ಟೆಂಬರ್26: ಹೆಬ್ಬಾಳದಿಂದ ಕೆ.ಆರ್ ಪುರಂ ಕಡೆ ಹೋಗುವ ರಸ್ತೆಯಲ್ಲಿ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಭಾಗಗಳಲ್ಲಿ ಸರ್ವಿಸ್ ರಸ್ತೆ ದುರಸ್ತಿಪಡಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಉತ್ತರ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಹೊರ ವರ್ತುಲ ರಸ್ತೆಯ(ORR)ಯಾದ ಹೆಬ್ಬಾಳ ಮೇಲ್ಸೇತುವೆಯಿಂದ ರಾಮಮೂರ್ತಿ ನಗರ ಜಂಕ್ಷನ್ ವರೆಗೆ ಮಧ್ಯರಾತ್ರಿ 1 ಗಂಟೆಯಿಂದ ಮುಂಜಾನೆ 4.30 ರವರೆಗೆ ಜಂಟಿ ಪರಿಶೀಲನೆ ನಡೆಸಿದ ವೇಳೆ ಮಾತನಾಡಿದ ಅವರು, ಇಲಾಖೆಗಳ ನಡುವೆ ಸಮನ್ವಯ ಸಾಧಿಸಿ ಕಾಮಗಾರಿಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು. ಹೆಬ್ಬಾಳ ಮೇಲ್ಸೇತುವೆಯಿಂದ ವೆಂಕಟಂ ಕಾಫೆ ರಸ್ತೆವರೆಗಿನ ಸರ್ವೀಸ್ ರಸ್ತೆ(LHS)ಯಲ್ಲಿ ಮೆಟ್ರೋ ನಿರ್ಮಾಣದ ಪ್ರಮುಖ ಕೆಲಸಗಳು ಪೂರ್ಣಗೊಂಡ ಬಳಿಕ ಸಾರ್ವಜನಿಕರ ಸುಗಮ ಸಂಚಾರಕ್ಕಾಗಿ ಮೆಟ್ರೋ ಇಲಾಖೆಯ ವತಿಯಿಂದ ರಸ್ತೆ ದುರಸ್ತಿ ಕಾರ್ಯ ನಡೆಸಲು ಸೂಚಿಸಿದರು.

ಮೆಟ್ರೋ ವತಿಯಿಂದ ರಸ್ತೆ ಭಾಗದಲ್ಲಿ ನಡೆಯುತ್ತಿರುವ ಎಲ್ಲಾ ಪೈಲ್ ಕ್ಯಾಪ್ ಭಾಗಗಳನ್ನು ಸಮರ್ಪಕವಾಗಿ ಪುನಃಸ್ಥಾಪಿಸಬೇಕು. ಈಗಾಗಲೇ ಕೆಲವು ಭಾಗಗಳಲ್ಲಿ ಪುನಃಸ್ಥಾಪನೆಯಾಗಿದ್ದು, ಆದರೆ ಸರಿಯಾಗಿ ದುರಸ್ತಿ ಕಾರ್ಯ ಕೈಗೊಳ್ಳದಿರುವುದನ್ನು ಗಮನಿಸಿ ಅದನ್ನು ಸರಿಪಡಿಸಲು ಸೂಚನೆ ನೀಡಿದರು. ವೀರಣ್ಯ ಪಾಳ್ಯ ಮೇಲ್ಸೇತುವೆ ಬಳಿ ಕೆಪಿಟಿಸಿಎಲ್ ವತಿಯಿಂದ ಭೂಗತ ಕೇಬಲ್ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಆ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. ಆ ನಂತರ ಹೈಡೆನ್ಸಿಟಿ ಕಾರಿಡಾರ್(HDC) ಯೋಜನೆ ವತಿಯಿಂದ ಸರ್ವೀಸ್ ರಸ್ತೆ(LHS)ಗೆ ಸಂಪೂರ್ಣ ಡಾಂಬರೀಕರಣ ಮಾಡಬೇಕು. ಡಾಂಬರೀಕರಣ ನಡೆಸುವವರೆಗೆ ರಸ್ತೆಯಲ್ಲಿ ಗುಂಡಿಗಳಿಲ್ಲದಂತೆ ನೋಡಿಕೊಳ್ಳಲು ಸೂಚನೆ ನೀಡಿದರು.
ವೀರಣ್ಯ ಪಾಳ್ಯ ಮೇಲ್ಸೇತುವೆ ಬಳಿ ಕೆಪಿಟಿಸಿಎಲ್ ವತಿಯಿಂದ ಕಾಮಗಾರಿ ನಡೆಯುತ್ತಿದ್ದು, ಮಳೆ ನೀರುಗಾಲುವೆಯನ್ನು ಹಾನಿ ಮಾಡಿದ್ದಾರೆ. ಈ ಸಂಬಂಧ 2 ದಿನಗಳೊಳಗೆ ಅದನ್ನು ಪುನಃಸ್ಥಾಪನೆ ಮಾಡಬೇಕು. ಅದರ ಜೊತೆಗೆ ತ್ಯಾಜ್ಯ ಹಾಗೂ ಕಟ್ಟಡ ಭಗ್ನಾವಶೇಷಗಳನ್ನು ತೆರವುಗೊಳಿಸಲು ಸೂಚಿಸಿದರು. ವೀರಣ್ಣಪಾಳ್ಯ ಮೇಲ್ಸೇತುವೆ ಡೌನ್ ರ್ಯಾಂಪ್ ಬಳಿ(ಮಾನ್ಯತಾ ಕಡೆ) ರಸ್ತೆ ಮೇಲೆ ನೀರು ನಿಂತು ವಾಹನಗಳ ಸಂಚಾರಕ್ಕೆ ಸಾಕಷ್ಟು ಸಮಸ್ಯೆ ಆಗಲಿದೆ. ಈ ಪೈಕಿ ಹೆಚ್ಡಿಸಿ ವತಿಯಿಂದ ರಸ್ತೆಯಲ್ಲಿ ನೀರು ನಿಲ್ಲದೆ ಡ್ರೈನ್ ನಿರ್ಮಿಸಿ ನೀರು ಹೋಗುವ ವ್ಯವಸ್ಥೆ ಮಾಡಬೇಕು. ಮೆಟ್ರೋ ಕೂಡ ಮಳೆ ನೀರನ್ನು ಅದೇ ಡ್ರೈನ್ ಗೆ ಹೋಗುವ ವ್ಯವಸ್ಥೆ ಮಾಡಲು ಸೂಚನೆ ನೀಡಿದರು.
ಪರಿಶೀಲನೆಯ ವೇಳೆ ನೀಡಿದ ಇತರೆ ಪ್ರಮುಖ ನಿರ್ದೇಶನಗಳು
* ಮಾನ್ಯತಾ ಟೆಕ್ ಪಾರ್ಕ್ ನಿಂದ ನಾಗವಾರ ಮೇಲ್ಸೇತುವೆ ವರೆಗೆ ಮೆಟ್ರೋ ವತಿಯಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ಹೆಚ್ಡಿಸಿ ರಸ್ತೆ ಪಕ್ಕದ ಡ್ರೈನ್ ಗಳಲ್ಲಿ ಹೂಳೆತ್ತಿ ಮೆಟ್ರೋಗೆ ಹಸ್ತಾಂತರಿಸಬೇಕು.
* ಮಾನ್ಯತಾ ಟೆಕ್ ಪಾರ್ಕ್ ಎದುರು ಮೆಟ್ರೋ ಇಲಾಖೆಯ ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಬೇಕು.
* ನಾಗವಾರ ಮೇಲ್ಸೇತುವೆ ಬಳಿ ಗೇಲ್ ಗ್ಯಾಲ್ ಪೈಪ್ ಲೈನ್ ಬದಲಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅದ ಮುಗಿದ ಕೂಡಲೆ ಸರ್ವೀಸ್ ರಸ್ತೆಗೆ ಹೆಚ್.ಡಿ.ಸಿ ವತಿಯಿಂದ ಡಾಂಬರೀಕರಣ ಮಾಡಲು ಸೂಚನೆ.
* ನಾಗವಾರ ಮೇಲ್ಸೇತುವೆ ಬಳಿ ಪ್ರಾಥಮಿಕ ಮಳೆ ನೀರುಗಾಲುವೆಯ ಅಗಲವನ್ನು ಹೆಚ್ಚಿಸಿ, ಸಮೀಪದ ರಾಜಕಾಲುವೆಗೆ ಸಂಪರ್ಕ ಕಲ್ಪಿಸಬೇಕು.
* ಹೆಣ್ಣೂರು ಜಂಕ್ಷನ್ ಬಳಿ ರಸ್ತೆಯಲ್ಲಿ ನೀರಿನ ಸೋರಿಕೆ ಆಗುತ್ತಿದ್ದು, ಕೂಡಲೆ ದುರಸ್ತಿ ಕಾರ್ಯ ಕೈಗೊಳ್ಳಲು ಸೂಚನೆ.
* ರಾಮಮೂರ್ತಿ ನಗರದವರೆಗೆ ಸರ್ವೀಸ್ ರಸ್ತೆ(LHS)ಯವರೆಗೆ ಹೆಚ್.ಡಿ.ಸಿಯು ರಸ್ತೆ ನಿರ್ವಹಣೆ ಹಾಗೂ ಗುಂಡಿ ಮುಕ್ತ ರಸ್ತೆಯನ್ನಾಗಿ ಮಾಡಬೇಕು.
* ನಾಗವಾರ ಮೇಲ್ಸೇತುವೆ ಕೆಳಭಾಗದ ಸರ್ವೀಸ್ ರಸ್ತೆ(RHS)ಯಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಮಾಡಬೇಕು.
* ಪರಿಶೀಲನೆ ನಡೆಸಿದ ರಸ್ತೆಗಳಲ್ಲಿ ನಿರಂತರವಾಗಿ ಧೂಳುರಹಿತವಾಗಿರುವಂತೆ ಕಾಯ್ದುಕೊಳ್ಳಬೇಕು.












Click it and Unblock the Notifications