ಬೆಂಗಳೂರಿನ ಪೌರಕಾರ್ಮಿಕರಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದಿಂದ ಗುಡ್‌ನ್ಯೂಸ್
ಬೆಂಗಳೂರು: ಬೆಂಗಳೂರಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪೌರಕಾರ್ಮಿಕರಿಗೆ ಎರಡು ವಿಚಾರದಲ್ಲಿ ಭರ್ಜರಿ ಗುಡ್‌ನ್ಯೂಸ್ ಸಿಕ್ಕಿದೆ. ರಸ್ತೆ ಗುಡಿಸಲು ಹೊಸ ಯಂತ್ರಗಳನ್ನು ಪರಿಚಯಿಸಲಾಗಿದೆ. ಪೌರಕಾರ್ಮಿಕರಿಗೆ ಹೋಟೆಲ್‌ಗಳ ಶೌಚಾಲಯ ಬಳಸಲು ಅವಕಾಶ ಇರಲಿದೆ ಎಂದು ಹೇಳಲಾಗಿದೆ.
ರಸ್ತೆ ಗುಡಿಸಲು ಪೊರಕೆಗಳ ಬದಲಾಗಿ ಯಾಂತ್ರೀಕೃತ ಶುಚಿಗೊಳಿಸುವ ಯಂತ್ರಗಳ (Mechanised Cleaning Machines) ಬಳಕೆಗೆ ಗುರುವಾರ ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯ ಸಹಕಾರನಗರದ ಪಾರ್ಕ್ ಬಳಿಯ 1ನೇ ಮುಖ್ಯ ರಸ್ತೆಯಲ್ಲಿ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ಅವರು ಪ್ರಾಯೋಗಿಕ ಚಾಲನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶುಚಿಗೊಳಿಸುವ ಯಂತ್ರಗಳನ್ನು ತಾವೇ ಚಲಾಯಿಸಿ ಅದರ ಸಾಧಕ ಬಾಧಕಗಳನ್ನು ಖುದ್ದು ಪರಿವೀಕ್ಷಣೆ ನಡೆಸಿದರು. ಪೌರಕಾರ್ಮಿಕರಿಗೆ ಇವುಗಳ ಬಳಕೆಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಲಾಯಿತು. ಸ್ವಚ್ಛ ಸುಂದರ ನಗರವನ್ನಾಗಿಸಲು ಯಾವ ರೀತಿಯ ಕೆಲಸಗಳನ್ನು ನಿರ್ವಹಿಸಬೇಕು ಎನ್ನುವ ಸೂಚನೆಗಳನ್ನು ಸಹ ನೀಡಿದರು.
ಸಾಂಕೇತಿಕ ಚಾಲನೆ ಕಾರ್ಯಕ್ರಮದ ನಂತರ ಮಾತನಾಡಿದ ಆಯುಕ್ತರು, ಬೆಂಗಳೂರು ಉತ್ತರ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ದೈನಂದಿನ ರಸ್ತೆ ಸ್ವಚ್ಛತಾ ಕಾರ್ಯವನ್ನು ಉನ್ನತೀಕರಣಗೊಳಿಸಲು ಹಾಗೂ ಪೌರಕಾರ್ಮಿಕರ ಕೆಲಸವನ್ನು ಸರಳೀಕರಣಗೊಳಿಸುವ ನಿಟ್ಟಿನಲ್ಲಿ ಯಾಂತ್ರೀಕೃತ ಶುಚಿಗೊಳಿಸುವ ಯಂತ್ರಗಳ ಬಳಕೆಗೆ ಚಾಲನೆ ನೀಡಲಾಗಿದೆ. ಕಸಗುಡಿಸುವ ಯಂತ್ರಗಳು, ಬ್ಲೋವರ್ ಮಷೀನ್, ರಸ್ತೆ ಕಸವನ್ನು ಶೇಖರಣೆ ಮಾಡಲು ಟ್ರಾಲಿ ಡಸ್ಟ್ ಬಿನ್‌ಗಳನ್ನು ಪ್ರಾಯೋಗಿಕವಾಗಿ ಇನ್ಮುಂದೆ ಉಪಯೋಗಿಸಲಾಗುತ್ತದೆ. ಸುರಕ್ಷತಾ ದೃಷ್ಟಿಯಿಂದ ಟ್ರಾಫಿಕ್ ಕೋನ್ಸ್‌ಗಳನ್ನು ಸಹ ಖರೀದಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಪ್ರಾಯೋಗಿಕವಾಗಿ ಚಾಲನೆ ನೀಡಿರುವ ಯಂತ್ರಗಳನ್ನು ಪೌರಕಾರ್ಮಿಕರು ಸದ್ಭಳಕೆ ಮಾಡಿಕೊಂಡು ಇನ್ನಷ್ಟು ಪರಿಣಾಮಕಾರಿಯಾಗಿ ಸ್ವಚ್ಛತಾ ಕಾರ್ಯವನ್ನು ನಡೆಸಬೇಕು. ಇದರ ಸಾಧಕ - ಬಾಧಕಗಳನ್ನು ಗಮನಿಸಿ ಇನ್ನಷ್ಟು ಯಂತ್ರಗಳನ್ನು ಖರೀದಿಸಲು ಪ್ರಸ್ತಾವನೆ ಸಲ್ಲಿಸಲಾಗುತ್ತದೆ ಎಂದಿದ್ದಾರೆ.
ಪೌರಕಾರ್ಮಿಕರಿಗೆ ಹೋಟೆಲ್‌ಗಳ ಶೌಚಾಲಯ ಬಳಸಲು ಅವಕಾಶ
ಪೌರಕಾರ್ಮಿಕರು ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕ ಶೌಚಾಲಯಗಳು ಹತ್ತಿರದಲ್ಲಿ ಲಭ್ಯವಿರದ ಪಕ್ಷದಲ್ಲಿ ಹೋಟೆಲ್‌ಗಳ ಶೌಚಾಲಯಗಳನ್ನು ಬಳಸಬಹುದು ಎಂದು ಈಗಾಗಲೇ ಸೂಚಿಸಲಾಗಿದೆ. ಹೋಟೆಲ್ ಮಾಲೀಕರ ಸಭೆ ನಡೆಸಿ ಪೌರಕಾರ್ಮಿಕರಿಗೆ ಶೌಚಾಲಯ ಬಳಸಲು ಅವಕಾಶ ನೀಡುವಂತೆ ಕೋರಲಾಗಿದೆ. ಆದರೆ ಕೆಲವರು ಇದಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎನ್ನುವುದು ಸಹ ಗಮನಕ್ಕೆ ಬಂದಿದೆ. ಈ ವಿಷಯದಲ್ಲಿ ಯಾವುದೇ ತೊಂದರೆ ಉಂಟಾದರೂ ಹಿರಿಯ ಅಧಿಕಾರಿಗಳ ಗಮನಕ್ಕೆ ತರಬಹುದು ಎಂದು ಹೇಳಿದ್ದಾರೆ.
ಸಾರ್ವಜನಿಕರಿಂದ ಕಸ ನಿರ್ವಹಣೆ ಬಗ್ಗೆ ಯಾವುದೇ ದೂರು ಬರದಂತೆ ಕೆಲಸ ನಿರ್ವಹಿಸುವುದು ಸಹ ಪೌರಕಾರ್ಮಿಕರ ಜವಾಬ್ದಾರಿಯಾಗಿದೆ. ಆದ್ದರಿಂದ ಕಾಯಕವೇ ಕೈಲಾಸ ಎನ್ನುವುದನ್ನು ಮನಗಂಡು ನಾವು ನೀವೆಲ್ಲರೂ ಒಟ್ಟಾಗಿ ನಗರ ಪಾಲಿಕೆಗಾಗಿ ಶ್ರಮಿಸೋಣ ಹಾಗೂ ಯಾವುದೇ ತೊಂದರೆಗಳು ಅಡ್ಡಿ ಆತಂಕಗಳು ಪೌರಕಾರ್ಮಿಕರಿಗೆ ಬಂದರು ಸಹ ಅಧಿಕಾರಿಗಳು ಸಕಾಲದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications