500 ಟನ್ ಬೆಂಗಳೂರು ಹಸಿಕಸ ಗ್ಯಾಸ್ ಆಗಿ ಪರಿವರ್ತನೆ: ಡಿ.ಕೆ ಶಿವಕುಮಾರ್ ಗುಡ್‌ನ್ಯೂಸ್!
ಬೆಂಗಳೂರಿನಲ್ಲಿ ಕಸದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದಕ್ಕೆ ಮಾಸ್ಟರ್ ಪ್ಲ್ಯಾನ್ ಮಾಡಿರುವುದಾಗಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ನಗರದಲ್ಲಿ ಉತ್ಪಾದನೆಯಾಗುವ ಸುಮಾರು 500 ಟನ್ ಹಸಿಕಸದಿಂದ ಗ್ಯಾಸ್ ಉತ್ಪಾದನೆ ಮಾಡಲು ಕೇಂದ್ರ ಸರ್ಕಾರ ಸ್ವಾಮ್ಯದ ಗೇಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.
ವಿಧಾನಸೌಧದಲ್ಲಿ ಹಸಿಕಸದಿಂದ ಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಗೇಲ್ ಸಂಸ್ಥೆಯೊಟ್ಟಿಗೆ ಮಾಡಿಕೊಂಡಿರುವ ಒಡಂಬಡಿಕೆ ಹಸ್ತಾಂತರ ನಂತರ ಶಿವಕುಮಾರ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಗೇಲ್ ಸಂಸ್ಥೆಯವರು 123 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ಯಾಸ್ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಇವರಿಗೆ ಸ್ಥಳವನ್ನೂ ನೀಡಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಯೋಗಕ್ಕೆ ಸರ್ಕಾರ ಕೈ ಜೋಡಿಸಿದೆ. ಮುಂದಕ್ಕೂ ಹಲವಾರು ಒಪ್ಪಂದಗಳಿಗೆ ಈ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದರು.

ಇದರಿಂದ ಬೆಂಗಳೂರು ನಗರದ ಕಸದ ಸಮಸ್ಯೆ ಕಡಿಮೆಯಾಗಲಿದೆ. ಇದರಿಂದ ಆದಷ್ಟು ಬೇಗ ಗ್ಯಾಸ್ ಉತ್ಪಾದನೆ ಪ್ರಾರಂಭವಾಗಲಿ. ಇಲ್ಲಿ ಉತ್ಪಾದನೆ ಮಾಡುವ ಗ್ಯಾಸ್ ಅನ್ನು ಸಾರ್ವಜನಿಕರು, ಹೋಟೆಲ್ ಉದ್ದಿಮೆದಾರರಿಗೆ ವಿತರಣೆಯಾಗಲಿ ಎಂದಿದ್ದಾರೆ.
ಗ್ರೇಟರ್ ಬೆಂಗಳೂರು ಆಡಳಿತ ಬೆಂಗಳೂರಲ್ಲಿ ಕಸ ಸಮಸ್ಯೆ ನಿರ್ವಹಣೆ ಮಾಡುತ್ತಿಲ್ಲ ಎಂದು ಉದ್ಯಮಿ ಕಿರಣ್ ಮಜುಂದಾರ್ ಶಾ ಮತ್ತೆ ಎಕ್ಸ್ ಮಾಡಿರುವ ಬಗ್ಗೆ ಕೇಳಿದಾಗ, ಗೇಲ್ ಸಂಸ್ಥೆಯೊಂದಿಗೆ ಯಾವ ಕೆಲಸ ಮಾಡುತ್ತಿದ್ದೇವೆ, ಕಸ ವಿಲೇವಾರಿಗೆ ನಾವು ಎಲ್ಲಾ ಕೆಲಸ ಮಾಡಿದ್ದೇವೆ. ನ್ಯಾಯಾಲಯದಲ್ಲಿನ ಪ್ರಕರಣದಿಂದಾಗಿ ನಮಗೆ ಅಡಚಣೆ ತಂದಿತ್ತು.
ಇದರ ಹಿಂದೆ ದೊಡ್ಡ ತಂಡವೇ ಕೆಲಸ ಮಾಡುತ್ತಿದೆ. ಅವರುಗಳು ಯಾರೂ ನಮಗೆ ಸಹಕಾರ ನೀಡಲಿಲ್ಲ. ಈಗ 33 ಪ್ಯಾಕೇಜ್‌ಗಳಲ್ಲಿ ಕಸ ವಿಲೇವಾರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ವಿಲೇವಾರಿ ಘಟಕಗಳನ್ನು ಸಹ ಸ್ಥಾಪಿಸಲಾಗುತ್ತಿದೆ. ಇದು ಮುಂದಕ್ಕೆ ನಿರಂತರವಾಗಿ ನಡೆದುಕೊಂಡು ಹೋಗುತ್ತದೆ ಎಂದಿದ್ದಾರೆ.
ಸರ್ಕಾರದ ಅಧಿಕಾರಿಗಳು, ಜಿಬಿಎ ಆಯುಕ್ತರು, ಘನತ್ಯಾಜ್ಯ ನಿರ್ವಹಣಾ ಸಂಸ್ಥೆಯ ಅಧಿಕಾರಿಗಳು ನನ್ನ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಿ ಗೇಲ್ ಸಂಸ್ಥೆಯ ಜೊತೆಗಿನ ಒಡಂಬಡಿಕೆಗಳನ್ನ ಹಸ್ತಾಂತರ ಮಾಡಿಕೊಂಡಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.












Click it and Unblock the Notifications