ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕೋಟಿ ರೂ. ಬೆಲೆಬಾಳುವ ಚಿನ್ನಾಭರಣ ಕಳ್ಳತನ
ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಯಲ್ಲಿ ನಡೆದಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಪ್ರಕರಣವನ್ನು ಶಿವಾಜಿನಗರ ಪೊಲೀಸರು ಭೇದಿಸಿದ್ದಾರೆ. ಈ ಕೃತ್ಯದ ಹಿಂದೆ ಜಮೀರ್ ನಿಕಟ ಸಂಬಂಧಿಯೇ ಮಾಸ್ಟರ್‌ಮೈಂಡ್ ಆಗಿರುವುದು ಬೆಳಕಿಗೆ ಬಂದಿದೆ.
ನಂಬಿಕಸ್ಥನೇ ಕಳ್ಳನಾದ ಕಥೆ
ಬಂಧಿತ ಆರೋಪಿಗಳನ್ನು ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಎಂದು ಗುರುತಿಸಲಾಗಿದೆ. ಇವರಲ್ಲಿ ಸೈಯದ್ ಅಮೀರ್, ಸಚಿವ ಜಮೀರ್ ಅಹ್ಮದ್ ಅವರ ತಾಯಿಯ ಸಂಬಂಧಿಯಾಗಿದ್ದು, ಈತನಿಗೆ ಸಚಿವರ ಮನೆಗೆ ಮುಕ್ತ ಪ್ರವೇಶವಿತ್ತು. ಪ್ರೀತಿಯ ಸಂಬಂಧಿಯಂತೆ ನಟಿಸುತ್ತಲೇ ಈತ ತನ್ನ ಗೆಳೆಯ ಅಮಿರ್ ಅಹ್ಮದ್ ಜೊತೆ ಸೇರಿ ಕಳ್ಳತನದ ಸಂಚು ರೂಪಿಸಿದ್ದ ಎಂದು ತಿಳಿದುಬಂದಿದೆ.

ಆರೋಪಿಗಳು ಟ್ರಾವೆಲ್ಸ್ ವ್ಯವಹಾರ ನಡೆಸುತ್ತಿದ್ದರು. ಆದರೆ ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ಉದ್ಯಮ ನಷ್ಟ ಅನುಭವಿಸಿದ್ದರಿಂದ ಭಾರಿ ಸಾಲಕ್ಕೆ ಸಿಲುಕಿದ್ದರು. ಸಾಲ ತೀರಿಸಲು ಮತ್ತು ರಿಯಲ್ ಎಸ್ಟೇಟ್ ವ್ಯವಹಾರದ ಮೂಲಕ ಶ್ರೀಮಂತನಾಗುವ ಆಸೆಯಿಂದ ಸೈಯದ್ ತನ್ನ ಸಂಬಂಧಿಕರ ಮನೆಯನ್ನೇ ಗುರಿಯಾಗಿಸಿಕೊಂಡಿದ್ದ ಎನ್ನಲಾಗಿದೆ.
ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣದ ಆರೋಪಿಗಳಾದ ಸೈಯದ್ ಅಮೀರ್ ಮತ್ತು ಅಮಿರ್ ಅಹ್ಮದ್ ಇಬ್ಬರೂ ಸೇರಿ ಟ್ರಾವೆಲ್ಸ್ ವ್ಯವಹಾರವನ್ನು ನಡೆಸುತ್ತಿದ್ದರು. ಆದರೆ, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಇವರ ಉದ್ಯಮವು ತೀವ್ರ ಹಿನ್ನಡೆ ಅನುಭವಿಸಿ ಪಾತಾಳಕ್ಕೆ ಕುಸಿದಿತ್ತು. ಇದರಿಂದ ಉಂಟಾದ ಭಾರಿ ಆರ್ಥಿಕ ನಷ್ಟವನ್ನು ಸರಿದೂಗಿಸಲು ಮತ್ತು ಸಾಲಗಾರರ ಒತ್ತಡದಿಂದ ಪಾರಾಗಲು ಇವರಿಗೆ ತುರ್ತಾಗಿ ದೊಡ್ಡ ಮೊತ್ತದ ಹಣದ ಅವಶ್ಯಕತೆ ಇತ್ತು.
ಯಾವುದೇ ಮೂಲಗಳಿಂದ ಸಾಲ ಸಿಗದಿದ್ದಾಗ, ಸೈಯದ್ ಅಮೀರ್ ತನ್ನ ನಿಕಟ ಸಂಬಂಧಿಯಾದ ಸಚಿವ ಜಮೀರ್ ಅವರ ಮನೆಯನ್ನೇ ಕಳ್ಳತನಕ್ಕೆ ಗುರಿಯಾಗಿಸಿಕೊಂಡಿದ್ದನು. ಕದ್ದ ಚಿನ್ನಾಭರಣಗಳನ್ನು ಅಡವಿಟ್ಟು ಬಂದ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡುವ ಮೂಲಕ ಅಲ್ಪ ಅವಧಿಯಲ್ಲಿ ಕೋಟ್ಯಧಿಪತಿಯಾಗಬೇಕೆಂಬ ದುರಾಸೆಯಿಂದ ಈ ಇಬ್ಬರು ಆರೋಪಿಗಳು ಈ ಖತರ್ನಾಕ್ ಪ್ಲಾನ್ ಮಾಡಿದ್ದರು. ಸದ್ಯ ಈ ಇಬ್ಬರೂ ಪೊಲೀಸರ ಅತಿಥಿಗಳಾಗಿದ್ದು, ಜೈಲು ಕಂಬಿ ಎಣಿಸುತ್ತಿದ್ದಾರೆ.
ಸಿಕ್ಕಿಬಿದ್ದಿದ್ದೇಗೆ?
ಆರೋಪಿಗಳು ಯಾರಿಗೂ ಅನುಮಾನ ಬಾರದಂತೆ 2023ರಿಂದಲೇ ಸೈಯದ್ ಅಮೀರ್ ಸ್ವಲ್ಪ ಸ್ವಲ್ಪವೇ ಚಿನ್ನಾಭರಣಗಳನ್ನು ಲಪಟಾಯಿಸಲು ಆರಂಭಿಸಿದ್ದ. ಈವರೆಗೆ ಸುಮಾರು 1 ಕೆಜಿ 200 ಗ್ರಾಂ ಚಿನ್ನವನ್ನು ಕಳವು ಮಾಡಲಾಗಿತ್ತು ಎಂದು ತನಿಖೆ ವೇಳೆ ತಿಳಿದುಬಂದಿದೆ. ಕಳ್ಳತನದ ನಂತರ ಸೈಯದ್ ಅಮೀರ್ ಜಮೀರ್ ಅವರ ಮನೆಗೆ ಬರುವುದನ್ನೇ ನಿಲ್ಲಿಸಿದ್ದ. ಸಚಿವರ ತಾಯಿ ಕರೆ ಮಾಡಿದರೂ ಸ್ವೀಕರಿಸದೆ ತಪ್ಪಿಸಿಕೊಳ್ಳುತ್ತಿದ್ದ. ಯಾವಾಗ ಈತನ ಮೊಬೈಲ್ ಸ್ವಿಚ್ ಆಫ್ ಆಯಿತೋ, ಆಗ ಪೊಲೀಸರಿಗೆ ಈತನ ಮೇಲೆ ಸಂಶಯ ಹೆಚ್ಚಾಗಿತ್ತು.
ಪೊಲೀಸರಿಂದ ಆಭರಣ ವಶ
ಬಳಿಕ ಇದೇ ಆಯಾಮದಲ್ಲಿ ತನಿಖೆ ನಡೆಸಿದ ಶಿವಾಜಿನಗರ ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಸದ್ಯ 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ ಸುಮಾರು 759 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಸದ್ಯ ಈ ಸಂಬಂಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂಬಿಕಸ್ಥ ಸಂಬಂಧಿಯೇ ಈ ರೀತಿ ದ್ರೋಹ ಬಗೆದಿರುವುದು ಸಚಿವರ ಕುಟುಂಬಕ್ಕೆ ತೀವ್ರ ಆಘಾತ ಉಂಟುಮಾಡಿದೆ.












Click it and Unblock the Notifications