ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಹೆಸರು ಸೂಚಿಸಿ 35 ಸಾವಿರ ಬಹುಮಾನ ಗೆಲ್ಲಿ!
ಬೆಂಗಳೂರು, ನ.30: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್‌ಆರ್‌ಟಿಸಿ) ನೂತನವಾಗಿ ಆರಂಭಿಸುತ್ತಿರುವ ವೋಲ್ವೊ ಮಲ್ಟಿ ಆ್ಯಕ್ಸೆಲ್ ಸ್ಲೀಪರ್ ಹಾಗೂ ಎಲೆಕ್ಟ್ರಿಕ್ ವಾಹನಗಳಿಗೆ ಸಾರ್ವಜನಿಕರು ಹಾಗೂ ಪ್ರಯಾಣಿಕರಿಂದ ಬ್ರಾಂಡ್ ಹೆಸರು, ಟ್ಯಾಗ್‌ಲೈನ್ ಹಾಗೂ ಗ್ರಾಫಿಕ್ಸ್ ವಿನ್ಯಾಸವನ್ನು ನೀಡುವಂತೆ ಆಹ್ವಾನಿಸಿದೆ.
ಈ ಬಸ್‌ಗಳಿಗೆ ಉತ್ತಮ ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸ ನೀಡಿದವರು 35,000 ರೂಪಾಯಿಗಳನ್ನು ಪಡೆಯಬಹುದು.
ಹೌದು, ಪ್ರತಿ ಮಾದರಿಯ ವಾಹನಗಳಿಗೆ ಉತ್ತಮ ಬ್ರಾಂಡ್ ಹೆಸರನ್ನು ಸೂಚಿಸುವ ವಿಜೇತರಿಗೆ 10,000 ನಗದು ಬಹುಮಾನ ನೀಡಲಾಗುತ್ತದೆ. ಜೊತೆಗೆ ಉತ್ತಮ ಗ್ರಾಫಿಕ್ಸ್ ವಿನ್ಯಾಸ ನೀಡಿದವರಿಗೆ ತಲಾ ರೂ. 25,000 ಬಹುಮಾನವನ್ನು ನೀಡಲಾಗುವುದು ಎಂದು ಘೋಷಿಸಿದೆ. ಒಟ್ಟು 35,000 ರೂಪಾಯಿ ಬಹುಮಾನ ಗೆಲ್ಲಬಹುದು.

ಬ್ರಾಂಡ್ ನೇಮ್, ಟ್ಯಾಗ್ ಲೈನ್ ಹಾಗೂ ಗ್ರಾಫಿಕ್ ವಿನ್ಯಾಸ ಸೂಚಿಸಲು ಕಡೆಯ ದಿನಾಂಕ ಡಿಸೆಂಬರ್ 5 ಎಂದು ಪ್ರಕಟಣೆ ತಿಳಿಸಿದೆ. ನಿಮ್ಮ ಐಡಿಯಾಗಳನ್ನು cpro @ksrtc.org ಮೇಲ್ ಗೆ ಅಥವಾ ನಿಗಮದ ಫೇಸ್ಬುಕ್, ಟ್ವಿಟರ್ ಖಾತೆಗೆ(KSRTC_Journeys) ಸಲ್ಲಿಸಬೇಕು.
ಕೆಎಸ್‌ಆರ್‌ಟಿಸಿ ತನ್ನ ಪ್ರಯಾಣಿಕರಿಗೆ ಅತ್ಯುನ್ನತ ಶೇಣಿಯ ಪ್ರವಾಸ ಅನುಭವ ನೀಡುವ ಉದ್ದೇಶದಿಂದ ಬಿಎಸ್ 4 - 9600 ವೋಲ್ವೊ ಮಲ್ಟಿಆಕ್ಸಲ್ ಸ್ಲೀಪರ್ ಬಸ್ ಮತ್ತು ಒಲೆಕ್ಟ್ರಾ ಎಲೆಕ್ಟ್ರಿಕ್ ಎಂಬ ಬಸ್ ಸೇವೆ ಆರಂಭಿಸಲು ಮುಂದಾಗಿದೆ ಎಂದು ತನ್ನ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

ಇದರ ಜೊತೆಗೆ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ನಡೆಸಲು ಸಿದ್ಧವಾಗಿದೆ. ಬೆಂಗಳೂರು ನಗರದಿಂದ 5 ಮಾರ್ಗಗಳಲ್ಲಿ ಬಸ್‌ಗಳು ಸಂಚಾರ ನಡೆಸಲಿವೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‌ಟೆಕ್ ಲಿ. ಮೊದಲ ಹಂತದಲ್ಲಿ ಬಸ್‌ಗಳನ್ನು ಕೆಎಸ್ಆರ್‌ಟಿಸಿಗೆ ಒದಗಿಸಲಿದೆ.
ಮೊದಲ ಹಂತದಲ್ಲಿ ಕೆಎಸ್ಆರ್‌ಟಿಸಿ ಬೆಂಗಳೂರು-ಮೈಸೂರು ನಡುವೆ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲಿದೆ. ಡಿಸೆಂಬರ್ 15ರಿಂದ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ.












Click it and Unblock the Notifications