ಕಬ್ಬನ್ ಪಾರ್ಕ್ ಅಲ್ಲಿರೋ ಸುಪ್ರಸಿದ್ಧ ಮೀನು ಹೋಟೆಲ್ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ ಮಾಹಿತಿ
ಬೆಂಗಳೂರು, ಡಿಸೆಂಬರ್ 21: ಅತಿಯಾದ ವಾಹನ ದಟ್ಟಣೆ, ವಾಯು ಮಾಲಿನ್ಯ, ಊಹಿಸಲಾಗದ ವಾತಾವರಣ ಎಂದೆಲ್ಲ ಆರೋಪ ಹೊತ್ತಿರುವ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನಸ್ಸಿಗೆ ಶಾಂತಿ ನೀಡುವ ನೂರಾರು ಪ್ರವಾಸಿ ತಾಣಗಳಿವೆ. ಸಮಸ್ಯೆಗಳನೆಲ್ಲಾ ಬದಿಗೊತ್ತಿ ಒಮ್ಮೆ ಕಣ್ಣು ಹಾಯಿಸಿದರೆ ಬೆಂಗಳೂರಿನಲ್ಲಿ ನಿಮ್ಮ ಮನಸ್ಸು ಉಲ್ಲಾಸಗೊಳ್ಳುವ ಅನೇಕ ತಾಣಗಳಿವೆ.
ಉದ್ಯಾನ ನಗರಿ ಎಂದೇ ಪ್ರಸಿದ್ಧವಾಗಿರುವ ಬೆಂಗಳೂರಿನ ಹೃದಯ ಭಾಗದಲ್ಲೇ ಲಾಲ್ ಬಾಗ್ ಹಾಗೂ ಮತ್ತು ಕಬ್ಬನ್ ಪಾರ್ಕ್ ಎಂಬ ವಿಶಾಲವಾದ ಉದ್ಯಾನವನಗಳಿವೆ. ನಿಮ್ಮ ಒತ್ತಡ ಜೀವನದಲ್ಲಿ ಒಮ್ಮೆ ಈ ಸ್ಥಳಗಳಿಗೆ ಭೇಟಿ ನೀಡಿದರೆ ನಿಮ್ಮ ಮನಸ್ಸಿಗೆ ನೂರರಲ್ಲಿ ಹತ್ತು ಶೇಕಡಾವಾದರೂ ಶಾಂತಿ ಸಿಗುವುದು ಖಚಿತ. ಹೀಗಾಗಿ ವೀಕೆಂಡ್ ಹಾಗೂ ರಜಾ ದಿನಗಳಲ್ಲಿ ಈ ಉದ್ಯಾನವನಗಳಿಗೆ ಭೇಟಿ ನೀಡಿ.

ಸುಮಾರು ನೂರು ಎಕರೆ ವಿಸ್ತೀರ್ಣವಿರುವ ಕಬ್ಬನ್ ಪಾರ್ಕ್‌ನಲ್ಲಿ ಸ್ಥಳೀಯ ಮತ್ತು ವಿದೇಶೀಯ ಪ್ರಭೇದಗಳ ಒಟ್ಟು ಸುಮಾರು 6,000 ಸಸ್ಯಗಳು ಹಾಗೂ ಮರಗಳನ್ನು ಕಾಣಬಹುದಾಗಿದೆ. ಹೀಗಾಗಿ ರಜಾ ದಿನಗಳಲ್ಲಿ ಮುಂಜಾನೆ ಮತ್ತು ಸಂಜೆ ಸಾವಿರಾರು ಜನರು ಈ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ನೈಸರ್ಗಿಕ ಪ್ರಶಾಂತವಾದ ಈ ಪರಿಸರದ ಸುತ್ತಮುತ್ತ ಜನರಿಗೆ ತಿಳಿಯದ ಅನೇಕ ಸ್ಥಳಗಳಿವೆ. ಅದರಲ್ಲಿ ಮತ್ಸ್ಯ ದರ್ಶಿನಿಯೂ ಒಂದು.
ಕಬ್ಬನ್ ಪಾರ್ಕ್‌ನಲ್ಲಿ ಮತ್ಸ್ಯ ದರ್ಶಿನಿ ಎಂದಾಕ್ಷಣ ಯಾವುದೋ ಅಕ್ವೇರಿಯಮ್ ಎಂದುಕೊಳ್ಳಬೇಡಿ. ಮತ್ಸ್ಯ ದರ್ಶಿನಿ ಎನ್ನುವುದು ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ (ಕೆಎಫ್‌ಡಿಸಿ) ಸ್ಥಾಪಿಸಿದ ಬೆಂಗಳೂರು ನಗರದ ಅತ್ಯಂತ ಹಳೆಯ ಮೀನು ಕ್ಯಾಂಟೀನ್‌ಗಳಲ್ಲಿ ಒಂದಾಗಿದೆ. ಬಿಸಿ ಬಿಸಿ ರುಚಿ ರುಚಿಯಾದ ಮೀನೂಟಕ್ಕೆ ಮತ್ಸ್ಯ ದರ್ಶಿನಿ ಜನಪ್ರಿಯವಾಗಿದೆ.
ಕಬ್ಬನ್ ಪಾರ್ಕ್‌ನಲ್ಲಿರುವ ಮತ್ಸ್ಯ ದರ್ಶಿನಿ ಫಿಶ್ ಕ್ಯಾಂಟೀನ್ ಸರ್ಕಾರ ನಡೆಸುತ್ತಿರುವ ಮೀನು ಊಟದ ಹೋಟೆಲ್ ಆಗಿದೆ. ಇದು ರುಚಿ ರುಚಿಯಾದ ಮೀನಿನ ವಿವಿಧ ಖಾದ್ಯಗಳಿಂದ ಜನಪರಿಚಿತವಾಗಿದೆ. ಇಲ್ಲಿ ಫಿಶ್ ಫ್ರೈ, ಫಿಶ್ ಕರಿ ಊಟ, ಫಿಶ್ ಕಬಾಬ್ ಮತ್ತು ಫಿಶ್ ಬಿರಿಯಾನಿ, ಮುದ್ದೆ ಹಾಗೂ ಮೀನು ಸಾರು ಸೇರಿದಂತೆ ವಿವಿಧ ಬಗೆಯ ಮೀನಿನ ಖಾದ್ಯಗಳು ಸಿಗುತ್ತದೆ.

ಬೆಂಗಳೂರಿನಲ್ಲಿರುವ ಮೀನು ಪ್ರಿಯರಿಗೆ ಇದು ಸೂಕ್ತವಾದ ಸ್ಥಳವಾಗಿದ್ದು, ಕಡಿಮೆ ಬಜೆಟ್‌ನಲ್ಲಿ ಹೊಟ್ಟೆ ತುಂಬುವ ತೃಪ್ತಿಕರ ಊಟವನ್ನು ಇಲ್ಲಿ ಸವಿಯಬಹುದಾಗಿದೆ. ಕೆಎಫ್‌ಡಿಸಿಯ ಬೇರೆ ಮೀನಿನ ಕ್ಯಾಂಟೀನ್‌ಗಳಿಗಿಂತ ಈ ಹೋಟೆಲ್ ಅನುಕೂಲಕರವಾಗಿದೆ. ಇಲ್ಲಿ ಗ್ರಾಹಕರಿಗೆ ಕುಳಿತು ತಿನ್ನುವ ವ್ಯವಸ್ಥೆ ಇದ್ದು, ಶುಚಿತ್ವವನ್ನು ಕಾಪಾಡಿಕೊಳ್ಳಲಾಗಿದೆ. ಯಾವುದೇ ಅತಿಯಾದ ಅಲಂಕಾರವಿಲ್ಲದೇ ಸಾಮಾನ್ಯವಾದ ಹೋಟೆಲ್‌ನಂತಿದೆ. ಆದರೆ ರುಚಿಗೆ ಮಾತ್ರ ಕಮ್ಮಿ ಇಲ್ಲ. ಹೀಗಾಗಿ ಮತ್ಸ್ಯ ದರ್ಶಿನಿ ಯಾವಾಗಲೂ ಜನರಿಂದ ತುಂಬಿರುತ್ತದೆ.
ಕಬ್ಬನ್ ಪಾರ್ಕ್, ವಿಧಾನ ಸೌಧ ಹಾಗೂ ಹೈಕೋರ್ಟ್ ಹತ್ತಿರ ಇರುವುದರಿಂದ ಮಧ್ಯಾಹ್ನದ ಊಟದ ಸಮಯಲ್ಲಿ ಸರ್ಕಾರಿ ನೌಕರರು ಅಥವಾ ವಕೀಲರು ಹಾಗೂ ಕಬ್ಬನ್ ಪಾರ್ಕ್‌ಗೆ ಬಂದ ಪ್ರವಾಸಿಗರಿಂದ ಈ ಕ್ಯಾಂಟೀನ್ ತುಂಬಿ ತುಳುಕುತ್ತಿರುತ್ತದೆ. ಫ್ರೆಶ್ ಫಿಶ್, ಅಲ್ಲಿಯೇ ತಯಾರಿಸುವ ಮಸಾಲೆಯಿಂದ ಇಲ್ಲಿನ ರುಚಿಗೆ ಮನಸೋಲದವರಿಲ್ಲ. ಹೀಗಾಗಿ ಒಮ್ಮೆ ಇಲ್ಲಿಗೆ ಭೇಟಿ ನೀಡಿದವರು ಮತ್ತೆ ಮತ್ತೆ ಭೇಟಿ ನೀಡುತ್ತಾರೆ.

ಮತ್ಸ್ಯ ದರ್ಶಿನಿಯ ಸಮಯ, ವಿಶೇಷತೆ, ದರ..!
ಸರ್ಕಾರದ ಹೋಟೆಲ್ ಆಗಿರುವ ಮತ್ಸ್ಯ ದರ್ಶಿನಿಯು ಬೆಳಗ್ಗೆ 9ರಿಂದ ಸಂಜೆ ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ. ಕೇವಲ ನೂರು ರೂಪಾಯಿಂದ ವಿವಿಧ ಬಗೆ ಇರುವ ಇಲ್ಲಿನ ಮೀನೂಟ ಆರಂಭವಾಗುತ್ತದೆ. ಇಲ್ಲಿ ಹಸಿ ಮೀನುಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಗ್ರಾಹಕರು ಸ್ಥಳದಲ್ಲೇ ಆಯ್ಕೆ ಮಾಡಿದ ಮೀನುನಿಂದಲೇ ಖಾದ್ಯವನ್ನು ತಯಾರಿಸಿಕೊಡಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವವರು ಮೀನು ಫ್ರೈ ಜೊತೆಗೆ ರಾಗಿ ಮುದ್ದೆ ಊಟವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಕೇವಲ ಮೀನಷ್ಟೇ ಅಲ್ಲದೇ ಇಲ್ಲಿ ಸಮುದ್ರ ಏಡಿ, ಹಾಗೂ ಸೀಗಡಿಯಂತರ ಇತರ ಖಾದ್ಯಗಳ ಸಹ ಲಭ್ಯವಿರುತ್ತದೆ.












Click it and Unblock the Notifications