ಬೆಂಗಳೂರಿನ ಪ್ರಮುಖ ಕೆ–100 ಯೋಜನೆಗೆ ಡೆಡ್‌ಲೈನ್ ಫಿಕ್ಸ್ ಮಾಡಿದ ಜಿಬಿಎ ಕಮಿಷನರ್
ಬೆಂಗಳೂರಿನ ಪ್ರಮುಖ ಯೋಜನಯೊಂದಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕಮಿಷನರ್ ಮಹೇಶ್ವರ್ ರಾವ್ ಅವರು ಡೆಡ್‌ಲೈನ್ ಫಿಕ್ಸ್ ಮಾಡಿದ್ದಾರೆ. ಕೆ-100 ನಾಗರಿಕ ಜಲಮಾರ್ಗಕ್ಕೆ ಕೊಳಚೆ ನೀರು ಸೇರುವುದನ್ನು ಸಂಪೂರ್ಣ ಬಗೆಯಲ್ಲಿ ತಡೆಯಲು ಸಮಗ್ರ ಯೋಜನೆ ರೂಪಿಸುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆನೆಪಾಳ್ಯ ಜಂಕ್ಷನ್‌ನಿಂದ ಶಾಂತಿನಗರ ಬಸ್ ನಿಲ್ದಾಣದವರೆಗೆ ಸುಮಾರು 2 ಕಿ.ಮೀ ವ್ಯಾಪ್ತಿಯಲ್ಲಿ "ಕೆ-100 ನಾಗರಿಕ ಜಲಮಾರ್ಗ" ವನ್ನು ನಡಿಗೆಯ ಮೂಲಕ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಕೆ-100 ಮಾರ್ಗದ ಬಹುತೇಕ ಭಾಗದಲ್ಲಿ ಕೊಳಚೆ ನೀರು ನಿಯಂತ್ರಣದಲ್ಲಿದೆ. ಇನ್ನೂ ನಿಯಂತ್ರಣವಾಗದಿರುವ ಸ್ಥಳಗಳನ್ನು ಬೆಂಗಳೂರು ಜಲಮಂಡಳಿಯು ಸಮೀಕ್ಷೆ ನಡೆಸಿ ತಕ್ಷಣ ಸಮಗ್ರ ಪರಿಹಾರದ ಯೋಜನೆ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಎಸ್.ಟಿ.ಪಿ. ಮೂಲಕ ಸಂಸ್ಕರಿತ ನೀರು: ಇನ್ನು ಕುಂಬಾರಗುಡಿ ಬಳಿ ರಾಜಕಾಲುವೆಯಲ್ಲಿ ಹರಿಯುವ ನೀರನ್ನು ಶುದ್ಧೀಕರಿಸಲು 5 ಎಂ.ಎಲ್.ಡಿ ಸಾಮರ್ಥ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (STP) ನಿರ್ಮಿಸಲಾಗಿದೆ. ಇದು ಒಳಚರಂಡಿಯ ಕೊಳಚೆ ನೀರನ್ನು ಸಂಸ್ಕರಿಸಿ, ದೀರ್ಘಕಾಲಿಕವಾಗಿ ಕೆ-100 ವ್ಯಾಲಿಯ ರಾಜಕಾಲುವೆಗೆ ಸಂಸ್ಕರಿತ ನೀರನ್ನು ಬಿಡುತ್ತಿದೆ. ಉಳಿದ ಕೊಳಚೆ ನೀರನ್ನು ಸಂಸ್ಕರಿಸಲು ಜೈವಿಕ ವಿಧಾನಗಳು ಹಾಗೂ ಪ್ರಕೃತಿ ಆಧಾರಿತ ಪರಿಹಾರ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಿದ್ದಾರೆ.
ಕೊಳಚೆ ನೀರನ್ನು ಶೋಧಿಸಲು ಜಲಮಾರ್ಗದ ಮಧ್ಯಭಾಗದಲ್ಲಿ ಕಾಂಕ್ರೀಟ್ ರಿಂಗ್ಸ್ ಅಳವಡಿಸಿ, ಅವುಗಳಲ್ಲಿ ಕೊಳಚೆ ನೀರನ್ನು ಹೀರಿಕೊಳ್ಳುವ ಸಸಿಗಳನ್ನು ನೆಡಲಾಗಿದೆ. ಈ ಸಸಿಗಳು ತ್ಯಾಜ್ಯ ವಸ್ತುಗಳನ್ನು ಹೀರಿಕೊಂಡು ಶುದ್ಧ ನೀರನ್ನು ಹೊರಬಿಡುವ ಕಾರ್ಯ ಮಾಡಲಿವೆ. ರಾಜಕಾಲುವೆಗೆ ತ್ಯಾಜ್ಯ ನೀರು ಸೇರುವುದನ್ನು ನಿಲ್ಲಿಸಲು ಜಲಮಂಡಳಿ 15 ಎಂ.ಎಲ್.ಡಿ ಸಾಮರ್ಥ್ಯದ ಇಂಟರ್ ಮೀಡಿಯೇಟ್ ಸೀವೇಜ್ ಪಂಪಿಂಗ್ ಸ್ಟೇಷನ್ (ISPS) ನಿರ್ಮಿಸುತ್ತಿದ್ದು, ಕಾಮಗಾರಿಯು ಬಹುತೇಕ ಪೂರ್ಣಗೊಂಡಿದೆ. ಇನ್ನೊಂದು ತಿಂಗಳೊಳಗೆ ಕಾರ್ಯಾಚರಣೆ ಪ್ರಾರಂಭಿಸಲು ಸೂಚನೆ ನೀಡಿದ್ದಾರೆ.
ಕೆ-100 ಮಾರ್ಗದಲ್ಲಿ ಕೆಲವಡೆ ಕಸ ಮತ್ತು ತ್ಯಾಜ್ಯ ಬಿಸಾಡಿರುವುದು ಕಂಡುಬಂದಿರುವುದರಿಂದ, ತ್ಯಾಜ್ಯ ಬಿಸಾಡುವ ಮನೆಗಳನ್ನು ಗುರುತಿಸಿ ಅವರಿಗೆ ಅರಿವು ಮೂಡಿಸಬೇಕು. ಅಗತ್ಯವಿರುವ ಸ್ಥಳಗಳಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಿ ಮೇಲ್ವಿಚಾರಣೆ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಅಲ್ಲದೇ ಬಹುತೇಕ ಕಾಮಗಾರಿ ಪೂರ್ಣಗೊಂಡಿರುವುದರಿಂದ ಜಲಮಾರ್ಗವನ್ನು ನಾಗರಿಕರಿಗೆ ಓಡಾಡಲು ತೆರೆಯಬೇಕು. ನಡಿಗೆ ಮಾರ್ಗದಲ್ಲಿ ಸದಾ ಸ್ವಚ್ಛತೆ ಕಾಪಾಡಿ, ಜಲಮಾರ್ಗದಲ್ಲಿ ಸಂಗ್ರಹವಾಗುವ ಹೂಳನ್ನು ನಿರಂತರವಾಗಿ ತೆರವುಗೊಳಿಸಲು ಗುತ್ತಿಗೆದಾರರಿಗೆ ನಿರ್ದೇಶನ ನೀಡಲಾಗಿದೆ.
ಕೆ.ಆರ್. ಮಾರುಕಟ್ಟೆಯಿಂದ ಬೆಳ್ಳಂದೂರು ಕೆರೆಯವರೆಗೆ 9.2 ಕಿ.ಮೀ ಉದ್ದದ ಕೋರಮಂಗಲ ರಾಜಕಾಲುವೆಯಲ್ಲಿ ಜಲಮಾರ್ಗ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಈಗಾಗಲೇ ಶೇ. 90 ರಷ್ಟು ಪೂರ್ಣಗೊಂಡಿದೆ. ಉಳಿದ ಬಾಕಿ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ತಿಳಿಸಲಾಗಿದೆ.
ಕೆ-100 ಯೋಜನೆಯ ಪ್ರಗತಿ ವಿವರ:
1. 100 ಎಂ.ಎಲ್.ಡಿ ಕೊಳಚೆ ನೀರು ಮತ್ತು ಕೈಗಾರಿಕಾ ತ್ಯಾಜ್ಯವನ್ನು ರಾಜಕಾಲುವೆಯಿಂದ ಒಳಚರಂಡಿ ಜಾಲಕ್ಕೆ ತಿರುಗಿಸಲಾಗಿದೆ. (765 ಸ್ವತ್ತುಗಳಿಗೆ ಹೊಸ ಒಳಚರಂಡಿ ಸಂಪರ್ಕ, 12.5 ಕಿ.ಮೀ ಹೊಸ ಲೈನ್‌ಗಳು, 6.03 ಕಿ.ಮೀ ಹಳೆಯ ಜಾಲದ ಸುಧಾರಣೆ)
2. ಕೆ.ಎಸ್.ಆರ್.ಟಿ.ಸಿ ಡಿಪೋ ಮತ್ತು ಕೆ.ಎಂ.ಎಫ್ ನಲ್ಲಿ 2 ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ.
3. ಪ್ರಮುಖ ನೀರುಗಾಲುವೆ ಮತ್ತು 32 ಚ.ಕಿ.ಮೀ ಕ್ಯಾಚ್ಮೆಂಟ್ ಪ್ರದೇಶದಲ್ಲಿ ಸಮೀಕ್ಷೆ ಮತ್ತು ಹೂಳೆತ್ತುವ ಕಾರ್ಯ. 27,896 ಒಳಚರಂಡಿ ಹೊಂಡಗಳಲ್ಲಿ ಹೂಳೆತ್ತಲಾಗಿದೆ. 12,602 ಸ್ವತ್ತುಗಳ ಮಳೆನೀರು ಒಳಚರಂಡಿಗೆ ಹೋಗುತ್ತಿದ್ದ ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.
4. ಕೆ-100 ರಾಜಕಾಲುವೆಯಲ್ಲಿ 15 ಸಿಲ್ಟ್ ಟ್ರ್ಯಾಪ್‌ಗಳ ನಿರ್ಮಾಣ ಮತ್ತು ನಿರ್ವಹಣೆ.
5. 2 ಸಾರ್ವಜನಿಕ ಉದ್ಯಾನಗಳು, 8 ಸಾರ್ವಜನಿಕ ಬಾಲ್ಕನಿಗಳು, 4 ಹೊಸ ಪಾದಚಾರಿ ಸೇತುವೆಗಳು ಮತ್ತು 18 ವಾಹನ ಸೇತುವೆಗಳು ನಿರ್ಮಿಸಲಾಗಿದೆ. 9 ಹಳೆಯ ಸೇತುವೆಗಳನ್ನು ಲ್ಯಾಂಡ್‌ಸ್ಕೇಪ್ ಮತ್ತು ಬೆಳಕು ವ್ಯವಸ್ಥೆಯೊಂದಿಗೆ ನವೀಕರಿಸಲಾಗಿದೆ.
6. 3.25 ಕಿ.ಮೀ ಉದ್ದದ, 2 ಮೀ. ಅಗಲದ ಪಾದಚಾರಿ ಮಾರ್ಗವನ್ನು ಕಾಲುವೆಯೊಳಗೆ ನಿರ್ಮಿಸಿ, ಶಾಂತಿನಗರ (ಕೆ.ಎಚ್ ರಸ್ತೆ) ದಿಂದ ಈಜಿಪುರ ಮುಖ್ಯರಸ್ತೆಯವರೆಗೆ ನೇರ ಸಂಪರ್ಕ ಕಲ್ಪಿಸಲಾಗಿದೆ. (ಕೆವಲ 200 ಮೀ. ಬಾಕಿ)
7. ರಾಜಕಾಲುವೆ ಪಕ್ಕದಲ್ಲಿನ 3 ಕಿ.ಮೀ ರಸ್ತೆ ಹಾಗೂ ಪಾದಚಾರಿ ಮಾರ್ಗ ನಿರ್ಮಾಣ.
8. ಜಾಗ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಸಸಿಗಳು ಮತ್ತು ಹೂಗಿಡಗಳ ನೆಡುವಿಕೆ ಮೂಲಕ ಲ್ಯಾಂಡ್ ಸ್ಕೇಪಿಂಗ್ ಪೂರ್ಣಗೊಂಡಿದೆ ಎಂದು ಜಿಬಿಎ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.












Click it and Unblock the Notifications