Ganesh Chaturthi 2023: ರಾಜ್ಯ ರಾಜಧಾನಿಯಲ್ಲಿ ಗಗನಕ್ಕೇರಿದ ಹೂ, ಹಣ್ಣುಗಳ ಬೆಲೆ, ದರಗಳ ವಿರವ ಇಲ್ಲಿದೆ
ಬೆಂಗಳೂರು, ಸೆಪ್ಟೆಂಬರ್, 17: ಹಿಂದೂಗಳ ದೊಡ್ಡ ಹಬ್ಬ ಗೌರಿ-ಗಣೇಶ ಹಬ್ಬಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಎಲ್ಲೆಡೆ ಹಬ್ಬದ ಸಂಭ್ರಮ ಮನೆಮಾಡಿದೆ. ನಾಳಿನ ಹಬ್ಬಕ್ಕೆ ಸಿಲಿಕಾನ್ ಸಿಟಿ ಜನರು ಹಬ್ಬದ ಸಾಮಾಗ್ರಿಗಳನ್ನು ಖರೀದಿಸಿ ಹಬ್ಬಕ್ಕೆ ಸಜ್ಜಾಗಿದ್ದಾರೆ. ಒಂದಷ್ಟು ಕಡೆಗಳಲ್ಲಿ ಪರಿಸರಸ್ನೇಹಿ ಗಣಪನ ಮೂರ್ತಿಗಳನ್ನು ವಿತರಿಸುವ ಕೆಲಸ ಕೂಡ ನಡೆದಿದ್ದು, ಗಜಮುಖನನ್ನು ಸ್ವಾಗತ ಮಾಡುವುದಕ್ಕೆ ಸಿಲಿಕಾನ್ ಸಿಟಿ ಜನರು ಸಜ್ಜಾಗಿ ನಿಂತಿದ್ದಾರೆ.
ಸೆಪ್ಟೆಂಬರ್ ಬಂತು ಅಂದರೆ ಸಾಕು ಹಳ್ಳಿಯಿಂದ ದಿಲ್ಲಿವರೆಗೆ, ಗಲ್ಲಿ ಗಲ್ಲಿಯಲ್ಲೂ ಗಣಪತಿ ಬಪ್ಪಾ ಮೋರಿಯಾ ಅನ್ನೋ ಸೌಂಡ್ ಕೇಳುತ್ತದೆ. ಗೌರಿ-ಗಣೇಶ ಹಬ್ಬಕ್ಕೆ ಕೆಲವೇ ಕ್ಷಣಗಳು ಬಾಕಿ ಇದ್ದು, ಸಿಲಿಕಾನ್ ಸಿಟಿ ಜನರು ಹಬ್ಬದ ತಯಾರಿಯನ್ನು ಜೋರಾಗಿಯೇ ನಡೆಸ್ತಿದ್ದಾರೆ. ಇಂದು ಬೆಳ್ಳಂಬೆಳಗ್ಗೆಯೇ ಕೆ.ಆರ್.ಮಾರ್ಕೆಟ್‌ಗೆ ಎಂಟ್ರಿಕೊಟ್ಟ ಜನರು ಹಬ್ಬಕ್ಕೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ರು. ಹೂ-ಹಣ್ಣು, ಎಕ್ಕದ ಹೂ ಹಾರ, ಗರಿಕೆಗೆ ಸಖತ್ ಡಿಮ್ಯಾಂಡ್ ಇದ್ದು, ಖರೀದಿಗೆ ಬಂದವರಿಗೆ ಹೂ-ಹಣ್ಣಿನ ದರ ಹೆಚ್ಚಳದಿಂದ ಕೊಂಚ ಬೇಸರವಾದರೂ, ಹಬ್ಬಕ್ಕೆ ಭರ್ಜರಿಯಾಗೇ ಖರೀದಿ ಭಾರಾಟೆ ಮುಂದುವರೆಸಿದರು.
ಇನ್ನು ಬೆಂಗಳೂರಿನ ಹಲವೆಡೆ ಕೆಲ ಸಂಘ-ಸಂಸ್ಥೆಗಳು, ಯುವಕರು ಸೇರಿ ಮಕ್ಕಳು, ಅಕ್ಕಪಕ್ಕದ ಏರಿಯಾ ನಿವಾಸಿಗಳಿಗೆ ಮಣ್ಣಿನ ಗೌರಿ-ಗಣೇಶ ಮೂರ್ತಿ ಹಂಚಿ ಸಂಭ್ರಮಿಸಿದರು. ಇತ್ತ ಕಾಕ್ಸ್ ಟೌನ್‌ನಲ್ಲಿ ನಟಿ ತಾರಾ ಅನುರಾಧ ಪೌರಕಾರ್ಮಿಕರಿಗೆ ಮಣ್ಣಿನ ಗಣಪನ ಮೂರ್ತಿಗಳನ್ನು ಹಂಚುವ ಮೂಲಕ ಹಬ್ಬಕ್ಕೆ ಶುಭಕೋರಿದರು.
ಇನ್ನು ಈ ಬಾರಿ ಗೌರಿ-ಗಣೇಶ ಹಬ್ಬ ಎರಡು ಒಟ್ಟಿಗೆ ಬಂದಿರುವುದರಿಂದ ಜನರು ಇಬ್ಬರನ್ನೂ ಬರಮಾಡಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ಅಕಾಲಿಕ ಮಳೆಯಿಂದ ಹಬ್ಬಕ್ಕೂ ಕೊಂಚ ಎಫೆಕ್ಟ್ ತಟ್ಟಿದ್ದು ಹೂ-ಹಣ್ಣುಗಳ ದರ ಗಗನಕ್ಕೇರಿದೆ. ಸದ್ಯ ಯಾವ್ಯಾವ ಹೂ-ಹಣ್ಣಿನ ಬೆಲೆ ಹೇಗಿದೆ ಅಂತಾ ಇಲ್ಲಿ ತಿಳಿಯಿರಿ.

ಗಗನಕ್ಕೇರಿದ ಹೂಗಳ ದರ (ಕೆ.ಜಿ.ಗಳಲ್ಲಿ)
1. ಕೆ.ಜಿ. ಮಲ್ಲಿಗೆ - 1000 ರಿಂದ 1200 ರೂಪಾಯಿ
2. ಸೇವಂತಿಗೆ - 250 ರಿಂದ 350 ರೂಪಾಯಿ
3. ಗುಲಾಬಿ - 150 ರಿಂದ 200 ರೂಪಾಯಿ
4. ಕನಕಾಂಬರ-1000ರಿಂದ 1200 ರೂಪಾಯಿ
ಹಣ್ಣುಗಳ ದರ (ಕೆ.ಜಿ.ಗಳಲ್ಲಿ)
1. ಏಲಕ್ಕಿ ಬಾಳೆ -120 ರಿಂದ 140 ರೂಪಾಯಿ
2. ಅನಾನಸ್- 30 ರಿಂದ 70 ರೂಪಾಯಿ
3. ದಾಳಿಂಬೆ - 50 ರಿಂದ 100 ರೂಪಾಯಿ
4. ಸೇಬು -180 ರಿಂದ 250 ರೂಪಾಯಿ
5. ಸೀಬೆ - 60 ರಿಂದ 80 ರೂಪಾಯಿ
ಒಟ್ಟಿನಲ್ಲಿ ದರ ಏರಿಕೆಯ ಮಧ್ಯೆ ಕೂಡ ಗೌರಿ-ಗಣೇಶ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಎಲ್ಲೆಡೆ ಗೌರಿ-ಗಣೇಶನನ್ನು ಬರಮಾಡಿಕೊಳ್ಳೋ ಕಾತುರದಲ್ಲಿ ಜನರು ಕಾದುಕುಳಿತಿದ್ದಾರೆ. ನಾಳೆಯಿಂದ ಗಲ್ಲಿ ಗಲ್ಲಿಯಲ್ಲೂ ಗಣಪನ ಗುಣಗಾನ ನುಡಿಸೋಕೆ ಸಿಲಿಕಾನ್ ಸಿಟಿ ಜನರು ಸಜ್ಜಾಗಿ ನಿಂತಿದ್ದಾರೆ.












Click it and Unblock the Notifications