BMTC: ಜನವರಿ 16 ರಿಂದ 3 ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್, ವಿವರ
ಬೆಂಗಳೂರು, ಜನವರಿ 13: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಪ್ರಯಾಣಿಕರ ಬೇಡಿಕೆಯಂತೆ ಮೂರು ಹೊಸ ಮಾರ್ಗದಲ್ಲಿ ಬಸ್ ಸಂಚಾರವನ್ನು ಆರಂಭಿಸುತ್ತಿದೆ. ಹವಾನಿಯಂತ್ರಣ ರಹಿತ ಬಸ್‌ಗಳು ಈ ಮಾರ್ಗದಲ್ಲಿ ಓಡಲಿದ್ದು, ಬಸ್ ಟ್ರಿಪ್‌ಗಳ ಸಂಖ್ಯೆ, ಮಾರ್ಗ ವಿವರವನ್ನು ಪ್ರಯಾಣಿಕರ ಮಾಹಿತಿಗಾಗಿ ಬಿಡುಗಡೆ ಮಾಡಲಾಗಿದೆ, ಹೊಸ ಬಸ್‌ಗಳ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಜನವರಿ 16 ರಿಂದ ಮೂರು ಹೊಸ ಮಾರ್ಗದಲ್ಲಿ ಬಿಎಂಟಿಸಿ ಬಸ್‌ಗಳ ಸಂಚಾರ ಆರಂಭವಾಗಲಿದೆ. ಈ ಮಾರ್ಗವನ್ನು 168-ಎ, 161-ಬಿ, 168-ಇ ಎಂದು ಹೆಸರಿಸಲಾಗಿದೆ. ನಾನ್ ಎಸಿ ಬಸ್‌ಗಳು ಈ ಮಾರ್ಗದಲ್ಲಿ ಸಂಚಾರ ನಡೆಸಲಿವೆ ಎಂದು ಬಿಎಂಟಿಸಿ ಹೇಳಿದೆ.

ಮಾರ್ಗದ ವಿವರಗಳು
* ಮಾರ್ಗ ಸಂಖ್ಯೆ 168-ಎ: ಜೈ ಭೀಮಾ ನಗರ್, ಕೆ. ಆರ್. ಮಾರುಕಟ್ಟೆ, ತಾವರೆಕೆರೆ, ಸದ್ದುಗುಂಟೆಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್, ಲಾಲ್‌ಬಾಗ್ ಮುಖ್ಯ ಗೇಟ್. 1 ಬಸ್. ಬಸ್‌ಗಳು 18 ಟ್ರಿಪ್ ಸಂಚಾರವನ್ನು ನಡೆಸುತ್ತದೆ.
* ಮಾರ್ಗ ಸಂಖ್ಯೆ 161-ಬಿ: ಈ ಮಾರ್ಗದ ಬಸ್‌ಗಳು ಜೈ ಭೀಮಾ ನಗರ್, ಶಿವಾಜಿನಗರ, ತಾವರೆಕೆರೆ, ಸದ್ದುಗುಂಟೆಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್, ರಿಚ್ಮಂಡ್ ಸರ್ಕಲ್, ಎಂಜಿ ಸ್ಟ್ಯಾಚ್ಯು 1 ಬಸ್. 18 ಟ್ರಿಪ್‌ಗಳು.
* ಬಸ್ ಮಾರ್ಗ 168-ಇ: ಜೈ ಭೀಮಾನಗರ್, ಕೆಂಪೇಗೌಡ ಬಸ್ ನಿಲ್ದಾಣ, ತಾವರೆಕೆರೆ, ಸದ್ದುಗುಂಟೆಪಾಳ್ಯ, ಬೆಂಗಳೂರು ಡೈರಿ, ವಿಲ್ಸನ್ ಗಾರ್ಡನ್ ಪೊಲೀಸ್ ಸ್ಟೇಷನ್, ಕಾರ್ಪೊರೇಷನ್. 1 ಬಸ್, 15 ಟ್ರಿಪ್‌ಗಳು.
ಜನರ ಬೇಡಿಕೆ, ಪ್ರದೇಶಗಳ ಅಭಿವೃದ್ಧಿ, ಖಾಸಗಿ ವಾಹನಗಳ ಸಂಚಾರ ಮುಂತಾದ ಅಂಶಗಳನ್ನು ಗಮನಿಸಿ, ಸಮೀಕ್ಷೆಗಳನ್ನು ನಡೆಸುವ ಮೂಲಕ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಹೊಸ ಬಸ್ ಮಾರ್ಗವನ್ನು ಪರಿಚಯಿಸುತ್ತದೆ.
ಕರ್ನಾಟಕ ಸರ್ಕಾರದ ಒಪ್ಪಿಗೆ ಬಳಿಕ ಜನವರಿ 5ರಿಂದಲೇ ಜಾರಿಗೆ ಬರುವಂತೆ ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಪರಿಷ್ಕೃರಣೆ ಮಾಡಿದೆ. ಶೇ 15ರಷ್ಟು ಪ್ರಯಾಣ ದರವನ್ನು ಪರಿಷ್ಕರಿಸಲು ಸರ್ಕಾರ ಅನುಮತಿ ನೀಡಿತ್ತು.
ಪರಿಷ್ಕೃತ ಆದೇಶದ ಪ್ರಕಾರ ಬಿಎಂಟಿಸಿ ಮೊದಲ ಸ್ಟೇಜ್ ಪ್ರಯಾಣ ದರ 5 ರೂ. ಇದ್ದದ್ದು 6 ರೂ. ಆಗಿದೆ. ಅತಿ ಹೆಚ್ಚು ಪ್ರಯಾಣ ದರ 25ನೇ ಸ್ಟೇಜ್‌ನಲ್ಲಿ 30 ರಿಂದ 32 ರೂ.ಗೆ ಏರಿಕೆ ಆಗಿತ್ತು. ಬಿಎಂಟಿಸಿ ಬೆಂಗಳೂರಿನ ಜನರ ಜೀವನಾಡಿಯಾಗಿದೆ. ಪ್ರತಿನಿತ್ಯ 5 ಲಕ್ಷಕ್ಕೂ ಅಧಿಕ ಜನರು ಬಸ್‌ಗಳಲ್ಲಿ ಸಂಚಾರವನ್ನು ನಡೆಸುತ್ತಾರೆ.
ಬಿಎಂಟಿಸಿ ಎಸಿ, ನಾನ್ ಎಸಿ, ವಾಯು ವಜ್ರ ಬಸ್‌ಗಳನ್ನು ಓಡಿಸುತ್ತದೆ. ಎಲೆಕ್ಟ್ರಿಕ್ ಬಸ್‌ಗಳು, ಡೀಸೆಲ್ ಬಸ್‌ಗಳನ್ನು ಓಡಿಸುತ್ತದೆ. ನಮ್ಮ ಮೆಟ್ರೋ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಬಿಎಂಟಿಸಿ ಮೆಟ್ರೋ ಫೀಡರ್ ಬಸ್ ಸೇವೆಗಳನ್ನು ಪರಿಚಯಿಸಿದೆ. ನಗರದ ವಿವಿಧ ಪ್ರದೇಶಗಳಿಂದ ಈ ಬಸ್‌ಗಳು ಮೆಟ್ರೋ ನಿಲ್ದಾಣಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ.












Click it and Unblock the Notifications