ಬಡವರಿಗೆ ಉಚಿತ ಚಿಕಿತ್ಸೆ; ಬೆಂಗಳೂರಿನಲ್ಲಿ 1,000 ಹಾಸಿಗೆಗಳ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ
ರಾಜ್ಯ ಸರ್ಕಾರವು ಬಡವರ ಆರೋಗ್ಯಕ್ಕಾಗಿ ಮಹತ್ವದ ಹೆಜ್ಜೆ ಇಟ್ಟಿದೆ. ಬಡ ರೋಗಿಗಳಿಗಾಗಿ 1,000 ಹಾಸಿಗೆ ಸಾಮರ್ಥ್ಯದ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬಡವರ ಪಾಲಿಗೆ ಆಶಾಕಿರಣವಾಗುವಂತಹ ಈ ಕ್ರಾಂತಿಕಾರಿ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯ ಆವರಣದಲ್ಲಿ ಸುಮಾರು 1,000 ಕೋಟಿ ರೂಪಾಯಿ ವೆಚ್ಚದಲ್ಲಿ 1,000 ಹಾಸಿಗೆಗಳ ಅತ್ಯಾಧುನಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲು ಅಜೀಂ ಪ್ರೇಮ್‌ಜೀ ಫೌಂಡೇಶನ್ ಜೊತೆ ಕೈಜೋಡಿಸಲಾಗಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದಿದ್ದಾರೆ.

ಈ ಯೋಜನೆಗಾಗಿ ಸರ್ಕಾರವು 10 ಎಕರೆ ಜಾಗವನ್ನು ನೀಡುತ್ತಿದ್ದು, ಆಸ್ಪತ್ರೆಯ ಸಂಪೂರ್ಣ ನಿರ್ಮಾಣ ಹಾಗೂ ಮುಂದಿನ ನಿರ್ವಹಣಾ ವೆಚ್ಚವನ್ನು ಅಜೀಂ ಪ್ರೇಮ್‌ಜೀ ಫೌಂಡೇಶನ್ ಭರಿಸಲಿದೆ. ದುಬಾರಿ ವೆಚ್ಚದ ಕಾರಣಕ್ಕೆ ಬಡವರು ಚಿಕಿತ್ಸೆಯಿಂದ ವಂಚಿತರಾಗಬಾರದು ಎಂಬುದು ನಮ್ಮ ಸರ್ಕಾರದ ಪರಮೋದ್ದೇಶ. ಹಣದ ಕೊರತೆಯಿಂದ ಕಣ್ಣೀರು ಹಾಕುವ ಸಾವಿರಾರು ಕುಟುಂಬಗಳಿಗೆ ಈ ಆಸ್ಪತ್ರೆ ಹೊಸ ಬದುಕಿನ ಭರವಸೆ ನೀಡಲಿದೆ ಎಂದು ಹೇಳಿದ್ದಾರೆ.
ಲಕ್ಷಾಂತರ ರೂಪಾಯಿ ವೆಚ್ಚದ ಅಂಗಾಂಗ ಕಸಿ ಚಿಕಿತ್ಸೆಗಳನ್ನು ಸಂಪೂರ್ಣ ಉಚಿತವಾಗಿ ನೀಡುವ ಮೂಲಕ ನಾವು ಸಾಮಾನ್ಯ ಜನರ ಪ್ರಾಣ ಉಳಿಸುವ ಸಂಜೀವಿನಿಯನ್ನು ನಿರ್ಮಿಸುತ್ತಿದ್ದೇವೆ. ಬಡತನವು ಎಂದಿಗೂ ಗುಣಮಟ್ಟದ ಚಿಕಿತ್ಸೆಗೆ ಅಡ್ಡಿಯಾಗಬಾರದು ಎನ್ನುವ ಮಾನವೀಯ ಕಾಳಜಿಯ ಈ ಯೋಜನೆಯು, ಲಕ್ಷಾಂತರ ಜನರ ಬಾಳಿನಲ್ಲಿ ಬೆಳಕು ಮೂಡಿಸಲಿದೆ. ಸುಸಜ್ಜಿತ ಸೌಲಭ್ಯ, ಪರಿಣಿತ ವೈದ್ಯರು ಮತ್ತು ಉಚಿತ ಸೇವೆಯ ಮೂಲಕ ಬೆಂಗಳೂರನ್ನು ದೇಶದಲ್ಲೇ ನಂಬರ್ 1 ವೈದ್ಯಕೀಯ ಸೇವೆ ಸಿಗುವ ನಗರವಾಗಿ ರೂಪಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೊಸ ಆಸ್ಪತ್ರೆಯಲ್ಲಿ ಏನೆಲ್ಲ ಸೌಲಭ್ಯ?
ಅಂಗಾಂಗ ಕಸಿ ಚಿಕಿತ್ಸೆಗಾಗಿಯೇ ಮೀಸಲಾದ ಈ ಬೃಹತ್ ಸಂಕೀರ್ಣದಲ್ಲಿ ಶೇ. 70ರಷ್ಟು ಬೆಡ್‌ಗಳು ಬಡವರಿಗೆ ಸಂಪೂರ್ಣ ಉಚಿತ ಚಿಕಿತ್ಸೆಗಾಗಿ ಲಭ್ಯವಿರಲಿವೆ. ಯಕೃತ್, ಮೂತ್ರಪಿಂಡ, ಹೃದಯ ಹಾಗೂ ಶ್ವಾಸಕೋಶದಂತಹ ಸಂಕೀರ್ಣ ಮತ್ತು ದುಬಾರಿ ಚಿಕಿತ್ಸೆಗಳು ಇನ್ನು ಸಾಮಾನ್ಯ ಜನರಿಗೂ ಸುಲಭವಾಗಿ ಸಿಗಲಿವೆ ಎಂದು ಮಾಹಿತಿ ನೀಡಿದ್ದಾರೆ.
ಅಂಗಾಂಗ ದಾನದಲ್ಲಿ 3ನೇ ಸ್ಥಾನ
ಅಂಗಾಂಗ ದಾನ ಕಾರ್ಯದಲ್ಲಿ ಕರ್ನಾಟಕವು 2025ನೇ ಸಾಲಿನಲ್ಲಿ ದೇಶದಲ್ಲೇ 3ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 2016 ರಿಂದ ಈವರೆಗೂ ದಾನಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬರುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಅಂಗಾಂಗ ದಾನವು ಕೇವಲ ಒಂದು ಕೊಡುಗೆಯಲ್ಲ, ಅದು ಮತ್ತೊಬ್ಬರಿಗೆ ನೀಡುವ ಜೀವದಾನ. ಹಾಗಾಗಿ ಇಡೀ ರಾಜ್ಯದ ಜನತೆಯಲ್ಲಿ ವಿನಂತಿಸುವೆ, 'ಜೀವಸಾರ್ಥಕತೆ' ಕಾರ್ಯಕ್ರಮದೊಂದಿಗೆ ಕೈಜೋಡಿಸೋಣ, ಅಂಗಾಂಗ ದಾನ ಮಾಡುವ ಮೂಲಕ ಸಾವಿನ ನಂತರವೂ ಜೀವಂತವಿರೋಣ ಹಾಗೂ ಜೀವ ಉಳಿಸೋಣ ಎಂದು ಕರೆ ನೀಡಿದ್ದಾರೆ.
ಕಳೆದ ವರ್ಷ 198 ದಾನಿಗಳಿಂದ 564 ಅಂಗಾಂಗಗಳ ಕಸಿ ಮಾಡುವ ಮೂಲಕ ನೂರಾರು ಜೀವಗಳಿಗೆ ಮರುಜನ್ಮ ಸಿಕ್ಕಿದಂತಾಗಿದೆ ಎಂದು ದಿನೇಶ್ ಗುಂಡೂರಾವ್ ಅಂಕಿಅಂಶ ಹಂಚಿಕೊಂಡಿದ್ದಾರೆ.
* ಒಟ್ಟು ದಾನಿಗಳು: 198
* ಕಿಡ್ನಿ: 306
* ಲಿವರ್: 167
* ಹೃದಯ: 50
* ಶ್ವಾಸಕೋಶ: 29
* ಕಣ್ಣು (Cornea): 288












Click it and Unblock the Notifications