Get Updates
Get notified of breaking news, exclusive insights, and must-see stories!

ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಉದ್ಯೋಗ ಅವಕಾಶ

ನೀವು ವಿದ್ಯಾರ್ಥಿಯಾಗಿದ್ದು, ಲಿನಕ್ಸ್ ಅನ್ನು ಹವ್ಯಾಸಕ್ಕಾಗಿ ಬಳಸುತ್ತಿದ್ದು ಮತ್ತು ನಿಮಗೆ ಉಚಿತ ಮತ್ತು ಮುಕ್ತ ತಂತ್ರಾಂಶಗಳತ್ತ (FOSS) ಒಲವಿದ್ದರೆ, ಈ ನಿಮ್ಮ ಹವ್ಯಾಸದಿಂದ ಉದ್ಯೋಗಾವಕಾಶಗಳು ದೊರೆಯುವಂತಿದ್ದರೆ ಎಷ್ಟು ಒಳ್ಳೆಯದಲ್ಲವೆ? ಇಂದಿನ ಬೆಳೆಯುತ್ತಿರುವ ತಂತ್ರಜ್ಞಾನ ಜಗತ್ತಿನಲ್ಲಿ ಲಿನಕ್ಸ್ ಪ್ರಮಾಣಿತ (ಸರ್ಟಿಫೈಡ್) ವೃತ್ತಿಪರರಿಗೆ ಸಾಕಷ್ಟು ಬೇಡಿಕೆಗಳಿವೆ.

ಆಂಡ್ರಾಯ್ಡ್, ಕ್ಲೌಡ್ ಮತ್ತು ಬಿಗ್ ಡೇಟಾದಂತಹ ಹೊಸ ಕ್ಷೇತ್ರಗಳು ದಾಪುಗಾಲು ಹಾಕುವಿಕೆಯೂ ಸಹ ಈ ಬೇಡಿಕೆಯು ಇನ್ನಷ್ಟು ಹೆಚ್ಚಾಗಲು ಗಮನಾರ್ಹ ಪಾತ್ರ ವಹಿಸುತ್ತಿವೆ. ಈ ಲೇಖನದಲ್ಲಿ ಲಿನಕ್ಸ್ ಮತ್ತು ಉಚಿತ ಹಾಗೂ ಮುಕ್ತ ತಂತ್ರಾಂಶಕ್ಕೆ (FOSS) ಸಂಬಂಧಿಸಿದಂತೆ ಯಾವ ರೀತಿಯಲ್ಲಿ ನಿಮ್ಮ ವೃತ್ತಿಬದುಕನ್ನು ಹೇಗೆ ರೂಪಿಸಿಕೊಳ್ಳಲು ಸಾಧ್ಯವಿದೆ ಎನ್ನುವುದನ್ನು ಸಂಕ್ಷಿಪ್ತವಾಗಿ ತಿಳಿಸಲಾಗಿದೆ.

ಟೆಕ್ನಿಶಿಯನ್ (ಲಿನಕ್ಸ್) ಕೆಲಸ : ಈ ವೃತ್ತಿಯನ್ನು ಬಯಸುವ ಅಭ್ಯರ್ಥಿಯು ಲಿನಕ್ಸ್ ವರ್ಕ್-ಸ್ಟೇಶನ್‌ಗಳನ್ನು ಮತ್ತು ಡೆಸ್ಕ್‌ಟಾಪ್‌ಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊರಬೇಕಿರುತ್ತದೆ. ಒಬ್ಬ ಟೆಕ್ನಿಶಿಯನ್ ಆದ ವ್ಯಕ್ತಿಯು ಹಾರ್ಡ್ ಡಿಸ್ಕ್ ವಿಭಾಗ ಮಾಡುವಿಕೆ (ಪಾರ್ಟಿಶನಿಂಗ್), ಅನುಸ್ಥಾಪನೆ (ಇನ್ ‌ಸ್ಟಲೇಶನ್), ಸೇವೆಗಳನ್ನು (ಸರ್ವಿಸಸ್) ನಿರ್ವಹಿಸುವಿಕೆ, ಬಳಕೆದಾರರನ್ನು ನೋಡಿಕೊಳ್ಳುವಿಕೆ, ಜಾಲಬಂಧದಲ್ಲಿನ ತೊಂದರೆ ಸರಿಪಡಿಸುವಿಕೆ, ಸಣ್ಣಪುಟ್ಟ ಸ್ಕ್ರಿಪ್ಟ್ ಬರೆಯುವಿಕೆ ಮತ್ತು ಕಾರ್ಯಾಚರಣೆ ವ್ಯವಸ್ಥೆಯಲ್ಲಿ (ಆಪರೇಟಿಂಗ್ ಸಿಸ್ಟಂ) ತೊಂದರೆಗಳನ್ನು ಕೊನೆಗಾಣಿಸುವ ಜ್ಞಾನವನ್ನು ಹೊಂದಿರಬೇಕಿರುತ್ತದೆ. ಈ ಪರಿಣಿತಿಯನ್ನು ಹೊಂದಿರುವವರು ಲಿನಕ್ಸ್ ಬಳಸುವ ಕಂಪನಿಗಳಲ್ಲಿ, ಶಾಲೆ, ಕಾಲೇಜುಗಳಲ್ಲಿ, ಡೇಟಾಸೆಂಟರುಗಳಲ್ಲಿ, ಮಳಿಗೆ ಮುಂತಾದೆಡೆಗಳಲ್ಲಿ ಕೆಲಸ ಗಿಟ್ಟಿಸುವ ಅವಕಾಶವಿರುತ್ತದೆ. ಟೆಕ್ನಿಶಿಯನ್ ಆಗಿ ಹೆಚ್ಚಿನ ವರ್ಷಗಳ ಅನುಭವ ಹೊಂದಿದ ಮೇಲೆ ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್ ಆಗಿ ಬಡ್ತಿ ಹೊಂದಬಹುದು. ಇನ್ನಷ್ಟು ವಿವರ ಮುಂದೆ ಓದಿ:

ಗಣಕ ವ್ಯವಸ್ಥಾಪಕ (ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್)

ಗಣಕ ವ್ಯವಸ್ಥಾಪಕ (ಸಿಸ್ಟಮ್ಸ್ ಅಡ್ಮಿನಿಸ್ಟ್ರೇಟರ್)

ನೇರ ಕಲಿಕೆಯ ಮೂಲಕ ಅಥವ ಟೆಕ್ನಿಶಿಯನ್ ಅನುಭವದ ಮೂಲಕ ಲಿನಕ್ಸ್ ಸಿಸ್ಟಮ್ ಅಡ್ಮಿನಿಸ್ಟ್ರೇಟರ್ ಆಗಿ ಕೆಲಸ ಮಾಡಬಹುದು. ಇದಕ್ಕಾಗಿಯೆ RHCE ನಂತಹ (Red Hat Certified Engineers) ಕೋರ್ಸುಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಲಿನಕ್ಸ್ ಬಳಕೆಯ ಒಂದು ಪರಿಪೂರ್ಣ ಜ್ಞಾನದ ಅಗತ್ಯವಿರುವ ಈ ಕೆಲಸದಲ್ಲಿ ಲಿನಕ್ಸ್ ಟೆಕ್ನಿಶಿಯನ್ ‌ಗಿಂತಲೂ ಹೆಚ್ಚಿನ ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಇವರು, ftp, http, dns ಮುಂತಾದ ಪ್ರಮುಖ ಸೇವೆಗಳು, ಕ್ರಾನ್ ‌ ಜಾಬ್ಸ್, ಬ್ಯಾಕ್ ‌ಅಪ್ ಸಿದ್ಧಗೊಳಿಸುವಿಕೆ ಮತ್ತು ಇತರೆ ವ್ಯವಸ್ಥಾಪನಾ ಕಾರ್ಯಗಳನ್ನು ನಿರ್ವಹಿಸಲು ಸಮರ್ಥರಾಗಿರಬೇಕು. ಇದರ ಜೊತೆಗೆ, ಈ ಹುದ್ದೆಯು ವ್ಯವಸ್ಥೆಗಳು (ಸಿಸ್ಟಮ್) ಮತ್ತು ಪೂರೈಕೆಗಣಕಗಳನ್ನು (ಸರ್ವರ್) ಹೇಗೆ ಸುರಕ್ಷಿತವಾಗಿರಿಸುವುದು, ಫೈರ್ವಾಲ್ ‌ ಅನ್ನು ಹೇಗೆ ನೋಡಿಕೊಳ್ಳುವುದು, ತಂತ್ರಾಂಶ ಪ್ಯಾಕೇಜುಗಳನ್ನು ನಿರ್ವಹಿಸುವ ಬಗೆ ಮುಂತಾದ ಕೆಲಸಗಳ ಕುರಿತು ಜ್ಞಾನವನ್ನು ಅಪೇಕ್ಷಿಸುತ್ತದೆ. ಹೆಚ್ಚಿನ ಲಿನಕ್ಸ್ ಸಿಸ್ಟಮ್ ಅಡ್ಮಿನ್ ‌ಗಳು Red hat Enterprise Linux, Debian ಮುಂತಾದ ಪೂರೈಕೆಗಣಕಕ್ಕೆಂದೇ ಅಭಿವೃದ್ಧಿಪಡಿಸಲಾದ ವಿತರಣೆಗಳೊಂದಿಗೆ (ಡಿಸ್ಟ್ರಿಬ್ಯೂಶನ್ಸ್) ಕೆಲಸಮಾಡುತ್ತಾರೆ. ಆದ್ದರಿಂದ ಈ ಕೆಲಸದಲ್ಲಿ ತೊಡಗಿಕೊಳ್ಳಲು ಬಯಸುವವರು ವ್ಯವಸ್ಥೆಗಳನ್ನು ನಿರ್ವಹಿಸುವ ಕುರಿತಾದ ಮೂಲಭೂತ ಅಗತ್ಯತೆಗಳನ್ನು ಅಭ್ಯಾಸ ಮಾಡಿ ನಂತರ ಯಾವುದಾದರೂ ಒಂದು ಲಿನಕ್ಸ್ ವಿತರಣೆಯ ಕಲಿಕೆಯತ್ತ ಗಮನಹರಿಸುವುದು ಒಳಿತು.

ಅನ್ವಯ (ಅಪ್ಲಿಕೇಶನ್) ಮತ್ತು ಜಾಲ (ವೆಬ್) ವಿಕಸನೆಗಾರ

ಅನ್ವಯ (ಅಪ್ಲಿಕೇಶನ್) ಮತ್ತು ಜಾಲ (ವೆಬ್) ವಿಕಸನೆಗಾರ

ನಾಗಲೋಟದಲ್ಲಿ ಓಡುತ್ತಿರುವ ಇಂದಿನ ತಂತ್ರಜ್ಞಾನ ಯುಗದಲ್ಲಿ ಲಿನಕ್ಸಿನ ಪಾಲಿನ ಕುರಿತು ನಿಮಗೆಲ್ಲಾ ಸಾಕಷ್ಟು ಅರಿವಿರಬಹುದು. ಇಂದಿನ ಕಾರ್ಪೋರೇಟ್ ಜಗತ್ತಿನಲ್ಲಿ ಅದರ ಬಳಕೆ ಹೆಚ್ಚಾದ ಕಾರಣ ಜಾಲ ಆಧರಿತವಾಗಿ ವಿಷಯವನ್ನು ಪ್ರಕಟಿಸುವಿಕೆ ಕಾರ್ಯವು ಬಹುಮಟ್ಟಿಗೆ ಲಿನಕ್ಸ್, PHP, MySQl ಮತ್ತು Apache ಮೇಲೆಯೆ ಅವಲಂಬಿತವಾಗಿದೆ. ಈ ಕಾರಣದಿಂದಾಗಿ, ಪ್ಲಗ್ ‌ಇನ್ ‌ಗಳು ಮತ್ತು ಆಡ್-ಆನ್ ‌ಗಳನ್ನು ಅಭಿವೃದ್ಧಿಪಡಿಸುವ, ಅನೇಕ ಪ್ರೊಗ್ರಾಮಿಂಗ್ ಭಾಷೆಯಲ್ಲಿ ಕೋಡ್ ‌ ಬರೆಯುವ, ಡೇಟಾಬೇಸ್ ‌ಗಳನ್ನು ಮತ್ತು ಅನ್ವಯಗಳನ್ನು ವಿನ್ಯಸಿಸುವ ಮತ್ತು ಗಣಕಸೇವೆಗಳನ್ನು ನಿರ್ವಹಿಸುವ ತಂತ್ರಜ್ಞರ ಬೇಡಿಕೆಯು ದಿನೇ ದಿನೇ ಹೆಚ್ಚುತ್ತಿದೆ. ಇಷ್ಟೆ ಅಲ್ಲದೆ, ಡೆಸ್ಕ್ ‌ಟಾಪ್ ‌ ಕ್ಷೇತ್ರದಲ್ಲಿ ಲಿನಕ್ಸ್ ಬಳಕೆಯು ಹೆಚ್ಚುತ್ತಿರುವುದರಿಂದಲೂ ಸಹ ಹಲವು ತಂತ್ರಾಂಶ ತಯಾರಕರು ಮತ್ತು ಸಂಸ್ಥೆಗಳು ತಮ್ಮ ಅನ್ವಯಗಳು ಮತ್ತು ಆಟಗಳ ಲಿನಕ್ಸ್ ಆವೃತ್ತಿಗಳನ್ನು ಹೊರತರುತ್ತಿದ್ದಾರೆ. ಈ ಬಗೆಯ ಅನ್ವಯಗಳು ಹೆಚ್ಚಾಗಿ GTK+ ಮತ್ತು QT ಯಂತಹ ಮೇಲುಸ್ತರದ ಕೋಡ್ ‌ ಮಾಡುವ ಟೂಲ್‌ಕಿಟ್‌ಗಳನ್ನು ಅಥವ ಕೆಳಸ್ತರದ ಪ್ರೊಗ್ರಾಮಿಂಗ್ ಭಾಷೆಗಳಾದಂತಹ C++, C ಮತ್ತು ಅಸೆಂಬ್ಲರ್ ಬಳಸಿಕೊಳ್ಳಲಾಗಿರುತ್ತದೆ.

ಬೆಂಬಲ (ಸಪೋರ್ಟ್) ಉದ್ಯೋಗ ಅವಕಾಶ

ಬೆಂಬಲ (ಸಪೋರ್ಟ್) ಉದ್ಯೋಗ ಅವಕಾಶ

ಹೆಚ್ಚಿನ ಸಂಖ್ಯೆಯ ಕಂಪನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಲಿನಕ್ಸ್ ಕುರಿತು ಸಹಾಯ ಮಾಡುವವರ ಅಥವ ಲಿನಕ್ಸಿನಲ್ಲಿ ಪರಿಣಿತಿ ಹೊಂದಿದವರ ಬೇಡಿಕೆ ಇದೆ. ಉದ್ದಿಮೆ ಮತ್ತು ಕಾರ್ಪೋರೇಟ್ ವಲಯಗಳಲ್ಲಿ ಲಿನಕ್ಸ್ ಬಳಕೆ ಹೆಚ್ಚುತ್ತಿರುವುದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಲೈಸೆನ್ಸಿಂಗ್‌ ಖರ್ಚುಗಳನ್ನು ಕಡಿಮೆ ಮಾಡಲು ಡೆಸ್ಕ್‌ಟಾಪ್‌ಗಳಲ್ಲಿ ಲಿನಕ್ಸ್ ಅನ್ನು ಅಳವಡಿಸಲು ಮುಂದಾಗುತ್ತಿದ್ದಾರೆ. ಈ ವಲಸೆಯಿಂದ ಉತ್ಪಾದಕತೆಯಲ್ಲಿ ಉಂಟಾಗುವ ಗೊಂದಲವನ್ನು ಪರಿಹರಿಸಲು ಈ ಬಗೆಯ ಬೆಂಬಲ ತಂತ್ರಜ್ಞನ ಅಗತ್ಯವಿರುತ್ತದೆ. ಇದಕ್ಕೆ ಸೇರಬಯಸುವ ಅಭ್ಯರ್ಥಿಯು ಆ ಸಂಸ್ಥೆಯ ಉದ್ಯೋಗಿಗಳಿಗೆ ಲಿನಕ್ಸ್ ಬಳಸುವ ಕುರಿತು ನೆರವು ನೀಡುವುದು ಪ್ರಮುಖ ಕಾರ್ಯವಾಗಿರುತ್ತದೆ. ಇದರ ಜೊತೆಗೆ, ಉದ್ಯೋಗಿಗಳ ಕೆಲಸ ಮಾಡುವ ರೀತಿ ಮತ್ತು ಬಳಸುವ ಕಾರ್ಯಾಚರಣೆ ವ್ಯವಸ್ಥೆ (ಓಎಸ್) ಮತ್ತು ಅನ್ವಯಗಳಲ್ಲಿಮಾಡಲಾದ ಬದಲಾವಣೆಗಳಿಂದಾಗಿ ಒಟ್ಟಾರೆ ಕಾರ್ಯಕ್ಷಮತೆಗೆ ಯಾವುದೆ ತೊಂದರೆ ಉಂಟಾಗದಂತೆ ನೋಡಿಕೊಳ್ಳುವುದೂ ಸಹ ಮುಖ್ಯವಾಗಿರುತ್ತದೆ.

ಬೆಂಬಲ ನೀಡುವ ತಂತ್ರಜ್ಞರ ಅಗತ್ಯವಿರುವ ಇನ್ನೊಂದು ಪ್ರಮುಖ ಸ್ಥಳವೆಂದರೆ ಎಂಟರ್ಪ್ರೈಸ್ ಲಿನಕ್ಸ್ ಅಭಿವೃದ್ದಿ ಪಡಿಸುವ ಸಂಸ್ಥೆಗಳು. Red Hat, Carnonicle, Suse, ಮುಂತಾದ ಕಂಪನಿಗಳು ಎಂಟರ್ಪ್ರೈಸ್ ಮಟ್ಟದ ಲಿನಕ್ಸ್ ಅನ್ನು ಸಿದ್ಧಗೊಳಿಸುತ್ತವೆ. ಇದನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಲು ಬಯಸುವವರು, ಬಳಸುವಾಗ ಉಂಟಾಗಬಹುದಾದ ಯಾವುದೆ ಬಗೆಯ ತೊಂದರೆಗಳನ್ನು ಪರಿಹರಿಸಿಕೊಳ್ಳಲು ಇದೇ ಎಂಟರ್ಪ್ರೈಸ್ ತಯಾರಕ ಕಂಪನಿಗಳ ಬೆಂಬಲ ಸೇವೆಗೆ ಚಂದಾದಾರರಾಗಿರುತ್ತಾರೆ. ಇಂತಹ ಒಂದು ಸೇವೆಯನ್ನು ಪೂರೈಸಲು ನುರಿತ ಲಿನಕ್ಸ್ ಕಂಪನಿಗಳಿಗೆ ತಂತ್ರಜ್ಞರ ದೊಡ್ಡ ತಂಡದ ಅಗತ್ಯವಿರುತ್ತದೆ. ಈ ತಂಡದಲ್ಲಿ ಒಬ್ಬರಾಗಿ ಕೆಲಸ ಮಾಡಲು ಹೆಚ್ಚು ಕಡಿಮೆ ಸಿಸ್ಟಮ್ ಅಡ್ಮಿನ್‌ಸ್ಟ್ರೇಟರಿನ ಅರ್ಹತೆಗಳು ಇರಬೇಕಾಗುತ್ತದೆ ಮತ್ತು ಇಲ್ಲಿ ಕೆಲಸ ಮಾಡಿದ ಅನುಭವ ಹೊಂದಿದವರಿಗೆ ಸಿಸ್ಟಮ್ ಅಡ್ಮಿನ್ ಕ್ಷೇತ್ರದಲ್ಲಿ ಬಹುವಾಗಿ ಬೇಡಿಕೆ ಇದೆ.

ತರಬೇತಿ ಮತ್ತು ಬರವಣಿಗೆ, ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ

ತರಬೇತಿ ಮತ್ತು ಬರವಣಿಗೆ, ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ

ತರಬೇತಿ ಮತ್ತು ಬರವಣಿಗೆ : ಸೂಕ್ತವಾದ ಸರ್ಟಿಫಿಕೇಶನ್ ಇದ್ದಲ್ಲಿ ಅಥವ ಲಿನಕ್ಸ್ ಕಲಿಸುವಿಕೆಯ ಅನುಭವವಿದ್ದಲ್ಲಿ, ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಮತ್ತು ಕಾಲೇಜುಗಳಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಬಹುದು. ಲಿನಕ್ಸ್ ಹಾಗೂ ಬರವಣಿಗೆಯ ಕುರಿತು ಆಸಕ್ತಿ ಮತ್ತು ಪ್ರಾವಿಣ್ಯತೆ ಇದ್ದಲ್ಲಿ, ಇದರಲ್ಲಿಯೂ ಸಹ ಬದುಕು ರೂಪಿಸಿಕೊಳ್ಳುವ ಅವಕಾಶಗಳಿವೆ. ಲಿನಕ್ಸ್ ಅಥವ ಮುಕ್ತ ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ದೊಡ್ಡ ದೊಡ್ಡ ಸಂಸ್ಥೆಗಳಲ್ಲಿನ ಮಾಹಿತಿ ದಸ್ತಾವೇಜುಗಳನ್ನು (ಡಾಕ್ಯುಮೆಂಟೇಶನ್) ಬರೆಯುವವರ ಜಾಗಕ್ಕೆ ಇಂತಹ ಅಭ್ಯರ್ಥಿಗಳ ಅಗತ್ಯವಿರುತ್ತದೆ. ಆದ್ದರಿಂದ ಇಂತಹ ಆಸಕ್ತಿಗಳನ್ನು ಹೊಂದಿರುವವರು ಸಮಯ ದೊರೆತಾಗ ಲಿನಕ್ಸ್ ಕುರಿತು ಬ್ಲಾಗ್‌ಗಳನ್ನು ಬರೆಯುವುದನ್ನು ಹವ್ಯಾಸ ಮಾಡಿಕೊಂಡಿರೆ ಒಳಿತು.

ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ : ಇವುಗಳ ಹೊರತಾಗಿ, 2010 ರ ಈಚೆಗೆ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯೂ ಸಹ ಲಿನಕ್ಸ್ ಕರ್ನಲ್‌ ಆಧರಿತವಾಗಿದೆ. ಇದರ ಕೋಡ್‌ನಲ್ಲಿನ ಮುಕ್ತತೆ ಕಾರಣದಿಂದಾಗಿಯೆ ಇದರ ಬಳಕೆ ಈ ಮಟ್ಟಿಗೆ ಬೆಳದಿರುವುದು. ಇಂತಹ ಆಂಡ್ರಾಯ್ಡಿನ ಅನ್ವಯಗಳನ್ನು (ಆಪ್) ಅಭಿವೃದ್ಧಿಪಡಿಸುವವರಿಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ. ಮೊಬೈಲ್ ಮುಖಾಂತರ ಜನರನ್ನು ತಲುಪಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪ್ರತಿಯೊಂದು ಕಂಪನಿ, ಪ್ರತಿಯೊಬ್ಬ ವ್ಯಕ್ತಿಯೂ ಸಹ ತಮ್ಮದೆ ಆದ ಆಪ್ ಹೊಂದಿರಲು ಬಯಸುತ್ತಿದ್ದಾರೆ. ಇದಕ್ಕೆ ಪೂರಕವಾದ ಕೋರ್ಸುಗಳೂ ಸಹ ಎಲ್ಲೆಡೆ ದೊರೆಯುತ್ತಿದೆ. ಲಿನಕ್ಸ್ ಮತ್ತು ಆಂಡ್ರಾಯ್ಡ್ ಅನ್ವಯಗಳನ್ನು ಅಭಿವೃದ್ಧಿಪಡಿಸುವಿಕೆಯಲ್ಲಿನ ತರಬೇತಿಯು ಸಾಕಷ್ಟು ಅವಕಾಶಗಳು ಒದಗಿಬರುವುದರಲ್ಲಿ ಸಂಶಯೇ ಇಲ್ಲ.

ಕ್ಲೌಡ್‌ ಕಂಪ್ಯೂಟಿಂಗ್ , ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)

ಕ್ಲೌಡ್‌ ಕಂಪ್ಯೂಟಿಂಗ್ , ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)

ಅಗತ್ಯಕ್ಕೆ ಬೇಕಿರುವಷ್ಟೇ ಸಂಪನ್ಮೂಲವನ್ನು (ಯಂತ್ರಾಂಶ ಮತ್ತು ತಂತ್ರಾಂಶ) ಮಾತ್ರ ಬಾಡಿಗೆಗೆ ಪಡೆದುಕೊಳ್ಳುವುದು ಇಂದಿನ ತಂತ್ರಜ್ಞಾನದ ನಾಗಲೋಟದಲ್ಲಿ ಮುಂದಿನ ಮಜಲಾದಂತಹ ಕ್ಲೌಡ್‌ ತಂತ್ರಜ್ಞಾನದ ಸಾಧ್ಯವಿದೆ. ಆನ್‌ಲೈನ್ ವ್ಯಾಪಾರ ಮತ್ತು ಖರೀದಿ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕ್ಲೌಡ್‌ ತಾಂತ್ರಿಕತೆಯು ಹೆಚ್ಚು ಹೆಚ್ಚು ಪ್ರಸ್ತುತವೆನಿಸುತ್ತಿದೆ. ಭಾರತದಂತಹ ದೇಶಕ್ಕೆ ಉಚಿತ ಮತ್ತು ಮುಕ್ತ ತಂತ್ರಾಂಶಗಳನ್ನು (ಉದಾ. ಲಿನಕ್ಸ್) ಒಳಗೊಂಡಿರುವ ಕ್ಲೌಡ್‌ ಸೇವೆಗಳು ಹೆಚ್ಚು ಮಿತವ್ಯಯಕಾರಿಯಾಗಿರಬಲ್ಲವು. ಇಂತಹ ಕ್ಲೌಡ್‌ ಸೇವೆಯನ್ನು ಒದಗಿಸುವ ಸಂಸ್ಥೆಗಳಿಂದ ಯಾವುದೆ ಕ್ಷೇತ್ರದವರು ಸೇವೆಯನ್ನು ಪಡೆಯಬಹುದು, ಉದಾ ಬ್ಯಾಕಿಂಗ್, ಆರೋಗ್ಯ, ವಿಮಾ ಇತ್ಯಾದಿ. ಇಂತಹ ಸಂದರ್ಭದಲ್ಲಿ ಕ್ಲೌಡ್‌ ಸೇವೆಯನ್ನು ಒದಗಿಸುವ ಸಂಸ್ಥೆಗಳಿಗೆ ವಿವಿಧ ಕ್ಷೇತ್ರಗಳಿಗೆ ಸೇವೆಯನ್ನು ಒದಗಿಸಲು ಲಿನಕ್ಸ್ ಅರಿವಿನ ಜೊತೆಗೆ ಆಯಾಯ ಕ್ಷೇತ್ರದ ಜ್ಞಾನವನ್ನು (ಡೊಮೇನ್ ನಾಲೆಜ್) ಹೊಂದಿರುವ ಅಭ್ಯರ್ಥಿಗಳು ಅತ್ಯಗತ್ಯವಾಗಿರುತ್ತಾರೆ.

ಒಂದು ದೊಡ್ಡ ಗಾತ್ರದ (ಮೆಮೊರಿ) ಹಾರ್ಡ್ ಡಿಸ್ಕಿನಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸಣ್ಣ ಸಣ್ಣ ಗಣಕಯಂತ್ರಗಳಾಗಿ ಮಾಡಿಕೊಳ್ಳುವ ಒಟ್ಟಾರೆ ವ್ಯವಸ್ಥೆಯೆ ವರ್ಚುವಲೈಸೇಶನ್. ಕ್ಲೌಡ್ ಮತ್ತು ವರ್ಚುವಲೈಸೇಶನ್ ಅನ್ನು ಒಟ್ಟಿಗೆ ಬೆರೆಸಿದಲ್ಲಿ, ಒಂದು ವ್ಯವಸ್ಥಿತವಾದ ಕ್ಲೌಡ್‌ ಸೇವೆಯನ್ನು ಪಡೆಯಲು ಸಾಧ್ಯ. ಆದ್ದರಿಂದ ವರ್ಚುವಲೈಸೇಶನ್‌ ಕುರಿತಾದ ಜ್ಞಾನ ಮತ್ತು ಅನುಭವವು ಬಹುಬೇಡಿಕೆಯ ಕ್ಲೌಡ್‌ ಜಗತ್ತಿನಲ್ಲಿ ಉತ್ತಮ ಅವಕಾಶವನ್ನು ದೊರಕಿಸಿಕೊಡಬಲ್ಲವು.

ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)

ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)

ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ ಕಂಪನಿಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಲಿನಕ್ಸ್ ಮತ್ತು FOSS ಗೆ ಸಂಬಂಧಿಸಿದ ತಂತ್ರಾಂಶ ಮತ್ತು ಸೇವೆಯನ್ನು ಒದಗಿಸುವವರು ಇದಕ್ಕೆ ಹೊರತಾಗಿಲ್ಲ. ಸಾಮಾನ್ಯವಾಗಿ, ಅಭಿವೃದ್ಧಿ ಪಡಿಸಲಾದ ತಂತ್ರಾಂಶವು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮುನ್ನ ಅವುಗಳು ದೋಷಮುಕ್ತವಾಗಿವೆಯೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ತಂತ್ರಾಂಶಗಳನ್ನು ಬಳಸಿ ನೋಡುವುದು ಇವರ ಕೆಲಸವಾಗಿರುತ್ತದೆ. ಇದಕ್ಕಾಗಿ ಸ್ವಯಂಚಾಲಿತ (ಆಟೊಮ್ಯಾಟಿಕ್) ಮತ್ತು ಮ್ಯಾನುವಲ್ ವಿಧಾನಗಳಿರುತ್ತವೆ. ದೋಷ ವರದಿ ಮಾಡುವುದೂ (ಬಗ್ ರಿಪೋರ್ಟಿಂಗ್) ಸಹ ಈ ಕ್ಷೇತ್ರದಲ್ಲಿರುವವರ ಮುಖ್ಯವಾದ ಕೆಲಸವಾಗಿರುತ್ತದೆ. ಸೂಕ್ತವಾದ ತರಬೇತಿ ನೀಡುವ ಕೋರ್ಸುಗಳನ್ನು ಪಡೆದುಕೊಂಡಲ್ಲಿ ಹೇರಳವಾದ ಅವಕಾಶಗಳಿರುವ ಈ ಕ್ಷೇತ್ರದಲ್ಲಿ ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು.

ಕೇವಲ ಹವ್ಯಾಸಿಗರ ಆಟದ ವಸ್ತುವಾಗಿ ಜನ್ಮತಾಳಿದ ಲಿನಕ್ಸ್ ಮತ್ತು ಅದರಿಂದ ಪ್ರೇರಿತಗೊಂಡ ಉಚಿತ ಮತ್ತು ಮುಕ್ತ ತಂತ್ರಾಂಶಗಳಲ್ಲಿನ ಹಲವಾರು ಧನಾತ್ಮಕ ಅಂಶಗಳ ಕಾರಣದಿಂದಾಗಿ ದಿನ ಕಳೆದಂತೆಲ್ಲಾ ವ್ಯಾಪಕವಾಗಿ ಹರಡುತ್ತಿವೆ. ಸೂಕ್ತವಾದ ನಿಲುವು, ತಿಳುವಳಿಕೆ, ಅದೃಷ್ಟ ಮತ್ತು ಸಂಪರ್ಕಗಳನ್ನು ಹೊಂದಿದ್ದರೆ ನೀವು ಲಿನಕ್ಸ್ ಸಂಬಂಧಿ ವೃತ್ತಿಯಿಂದ ಸುಲಭವಾಗಿ ಹಣಗಳಿಸಬಹುದು. ಈಗಾಗಲೆ ಮಾಹಿತಿ ತಂತ್ರಜ್ಞಾನದ ಈ ಕ್ಷೇತ್ರದಲ್ಲಿ ನೀವು ಕೆಲಸ ಮಾಡುತ್ತಿದ್ದರೆ, ಸೂಕ್ತವಾದ ಸರ್ಟಿಫಿಕೇಶನ್‌ ಕೋರ್ಸುಗಳನ್ನು ಮತ್ತು ತಿಳುವಳಿಕೆಗಳನ್ನು ಪಡೆಯುವುದರಿಂದ ನಿಮ್ಮ ವೃತ್ತಿಜೀವನದ ಸ್ತರವನ್ನು ವೃದ್ಧಿಸಲು ಸಹಕಾರಿಯಾದೀತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+