Bengaluru: ಚಲಿಸುವ ಕಾರಿನಲ್ಲಿ ಡ್ಯಾನ್ಸ್ ಮಾಡಿದ್ದ ನಾಲ್ವರು ಮಲಯಾಳಿಗಳ ಬಂಧನ
ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಡ್ಯಾನ್ಸ್ ಮಾಡಿ ಅವಾಂತರ ಸೃಷ್ಟಿಸಿದ್ದ ನಾಲ್ವರು ಮಲಯಾಳಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಲಪ್ಪುರಂ ಮೂಲದ ಸಲ್ಮಾನ್ ಫಾರಿಸ್, ನಸೀಮ್ ಅಬ್ಬಾಸ್ (21), ಸಲ್ಮಾನುಲ್ ಫಾರಿಸ್ (21) ಮತ್ತು ಮುಹಮ್ಮದ್ ನುಸೈಫ್ (21) ಎಂದು ಗುರುತಿಸಲಾಗಿದೆ.
ಕಳೆದ ಗುರುವಾರ ಈ ಘಟನೆ ನಡೆದಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಚಾಲನೆ ಮಾಡುವಾಗ, ಯುವಕ ಗುಂಪೊಂದು ತಮ್ಮ ಕಾರಿನ ಸನ್‌ರೂಫ್ ಮತ್ತು ಕಿಟಕಿಗಳ ಮೂಲಕ ನೃತ್ಯ ಮಾಡುವ ಮೂಲಕ ಇತರೆ ವಾಹನ ಸವಾರರಿಗೆ ತೊಂದರೆ ನೀಡಿದ್ದರು.

ನಂತರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಸಲ್ಮಾನ್ ಫಾರಿಸ್ ಹೊರತುಪಡಿಸಿ ಉಳಿದ ಆರೋಪಿಗಳು ಬೆಂಗಳೂರಿನಲ್ಲಿ ಬಿಬಿಎ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಘಟನೆ ನಡೆದ ದಿನ ಸ್ನೇಹಿತರನ್ನು ಭೇಟಿಯಾಗಲು ಸಲ್ಮಾನ್ ಫಾರಿಸ್ ಬೆಂಗಳೂರಿಗೆ ಬಂದಿದ್ದರು. ಪೊಲೀಸರ ಪ್ರಕಾರ, ಆತ ದೆಹಲಿಯಲ್ಲಿ ತನ್ನ ತಂದೆ ಖರೀದಿಸಿದ ಬಳಸಿದ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ವಿಮಾನ ನಿಲ್ದಾಣಕ್ಕೆ ಜಾಯ್ ರೈಡ್‌ಗಾಗಿ ಹೋಗಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಘಟನೆ ಬಗ್ಗೆ ಆಕ್ರೋಶ
ಹೆಚ್ಚಿನ ವಾಹನ ದಟ್ಟಣೆ ಇರುವ ವಿಮಾನ ನಿಲ್ದಾಣ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಶರ್ಟ್‌ಗಳನ್ನು ಬಿಚ್ಚಿ ನೃತ್ಯ ಮಾಡುವ ಮೂಲಕ ಕಿರಿ ಕಿರಿ ಉಂಟು ಮಾಡಿದ್ದರು. ಈ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಮುಂದೆ ಇಂತಹ ಘಟನೆಗಳು ನಡೆಯಬಾರದು, ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದರು.












Click it and Unblock the Notifications