ಕೃಷಿ ತ್ಯಾಜ್ಯದಿಂದ ಅಣಬೆ ಬೆಳೆದು ಯಶಸ್ವಿ ಉದ್ಯಮಿಯಾದ ಮಾಜಿ ಪ್ರೊಫೆಸರ್: ತೃಪ್ತಿ ಧಕಾಟೆ ಯಶೋಗಾಥೆ
ನಾವು ಪ್ರತಿದಿನ ಎಸೆಯುವ, ಕಸವೆಂದು ಭಾವಿಸುವ ತ್ಯಾಜ್ಯವೇ ಯಾರಿಗಾದರೂ ಪೌಷ್ಟಿಕ ಆಹಾರ, ನೂರಾರು ಜನರಿಗೆ ಜೀವನೋಪಾಯ ಹಾಗೂ ಪ್ರಕೃತಿಗೆ ಪೂರಕವಾದ ಸುಸ್ಥಿರ ಕೃಷಿ ಮಾಡಲು ಸಾಧ್ಯವೇ? ಮೇಲ್ನೋಟಕ್ಕೆ ಇದು ಅಸಾಧ್ಯ ಎನಿಸಿದರೂ, ಇದು ಸಂಪೂರ್ಣವಾಗಿ ಸಾಧ್ಯ ಎಂಬುದನ್ನ ಮಹಾರಾಷ್ಟ್ರದ ಪುಣೆಯ ತೃಪ್ತಿ ಧಕಾಟೆ ಅವರು ತಮ್ಮ ವಿಶಿಷ್ಟ ಸಾಧನೆಯ ಮೂಲಕ ಇಡೀ ದೇಶಕ್ಕೆ ಸಾಬೀತುಪಡಿಸಿದ್ದಾರೆ.
ವೃತ್ತಿಯಲ್ಲಿ ಮೈಕ್ರೋಬಯಾಲಜಿ ವಿಭಾಗದ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದ ತೃಪ್ತಿ, ತಮ್ಮ ಆರಾಮದಾಯಕ ಶೈಕ್ಷಣಿಕ ವೃತ್ತಿಜೀವನವನ್ನ ಬಿಟ್ಟು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಲು ಮುಂದಾದರು.

2018ರಲ್ಲಿ ತಮ್ಮ ಪತಿಯಿಂದ ಕೇವಲ 3 ಲಕ್ಷ ರೂಪಾಯಿಗಳ ಸಣ್ಣ ಬಂಡವಾಳವನ್ನ ಪಡೆದು 'ಕ್ವಾಲಿಟಿ ಮಶ್ರೂಮ್ ಫಾರ್ಮ್' ಎಂಬ ಉದ್ಯಮವನನು ಹುಟ್ಟುಹಾಕಿದರು. ಇಂದು ಅವರು ಕೇವಲ ಒಬ್ಬ ಯಶಸ್ವಿ ಉದ್ಯಮಿಯಾಗಿರದೆ, ಸಾವಿರಾರು ರೈತರಿಗೆ ಮತ್ತು ಯುವಕರಿಗೆ ದಾರಿದೀಪವಾಗಿದ್ದಾರೆ.
ಕೃಷಿ ತ್ಯಾಜ್ಯ ನಿರ್ವಹಣೆ ಮತ್ತು ಸಾವಯವ ಕೃಷಿ ಜಾಗೃತಿ
ನಮ್ಮ ದೇಶದಲ್ಲಿ ರೈತರು ಬೆಳೆ ಕಟಾವಿನ ನಂತರ ಉಳಿಯುವ ಕೃಷಿ ತ್ಯಾಜ್ಯವನ್ನ ಸಾಮಾನ್ಯವಾಗಿ ಹೊಲಗಳಲ್ಲಿಯೇ ಸುಟ್ಟು ಹಾಕುತ್ತಾರೆ. ಇದರಿಂದ ಮಣ್ಣಿನ ಫಲವತ್ತತೆ ನಾಶವಾಗುವುದರ ಜೊತೆಗೆ ಭಾರೀ ಪ್ರಮಾಣದ ವಾಯುಮಾಲಿನ್ಯ ಉಂಟಾಗುತ್ತದೆ. ವಿಜ್ಞಾನದ ಹಿನ್ನೆಲೆ ಹೊಂದಿದ್ದ ತೃಪ್ತಿ ಧಕಾಟೆ ಈ ಸಮಸ್ಯೆಯನ್ನ ವಿಭಿನ್ನವಾಗಿ ನೋಡಿದ್ದಾರೆ. ಕೃಷಿ ತ್ಯಾಜ್ಯವನ್ನ ಸುಡುವ ಬದಲು, ಅದೇ ತ್ಯಾಜ್ಯವನ್ನ ಕಚ್ಚಾವಸ್ತುವನ್ನಾಗಿ ಬಳಸಿಕೊಂಡು ಅಣಬೆ ಕೃಷಿ ಮಾಡಲು ನಿರ್ಧರಿಸಿದರು.
ಕೃಷಿ ತ್ಯಾಜ್ಯವನ್ನ ಮೌಲ್ಯಯುತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಅವರ ಈ ಸರಳ ಹಾಗೂ ವೈಜ್ಞಾನಿಕ ಆಲೋಚನೆ ದೊಡ್ಡ ಬದಲಾವಣೆಗೆ ನಾಂದಿ ಹಾಡಿತು. ಇದು ಪರಿಸರ ಸ್ನೇಹಿಯಾಗಿದ್ದು, ಸುಸ್ಥಿರ ಸಾವಯವ ಕೃಷಿ ಪದ್ಧತಿಗೆ ಒಂದೊಳ್ಳೆ ಮಾದರಿ.
ಕೋವಿಡ್ ಸವಾಲು
ಯಾವುದೇ ಹೊಸ ವ್ಯವಹಾರವನ್ನ ಶುರು ಮಾಡುವುದು ಮತ್ತು ಅದನ್ನ ಬೆಳೆಸುವುದು ಅಷ್ಟು ಸುಲಭದ ಮಾತಲ್ಲ. ತೃಪ್ತಿ ಅವರಿಗೂ ಆರಂಭಿಕ ದಿನಗಳಲ್ಲಿ ಮಾರುಕಟ್ಟೆ ಹುಡುಕುವುದು ಸೇರಿದಂತೆ ಹಲವು ಕಠಿಣ ಸವಾಲುಗಳು ಎದುರಾದವು. ವಿಶೇಷವಾಗಿ ಕೋವಿಡ್-19 ಮಹಾಮಾರಿ ಶುರುವಾದಾಗ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾಗಿ, ಮಾರುಕಟ್ಟೆ ವ್ಯವಸ್ಥೆ ಸಂಪೂರ್ಣವಾಗಿ ಕುಸಿದುಹೋಯಿತು.
ಬೇರೆಲ್ಲಾ ಉದ್ಯಮಿಗಳಂತೆ ಕಂಗಾಲಾಗದ ತೃಪ್ತಿ, ಈ ಬಿಕ್ಕಟ್ಟನ್ನೇ ಹೊಸ ಅವಕಾಶವನ್ನಾಗಿ ಬದಲಾಯಿಸಿದರು. ತಾಜಾ ಅಣಬೆಗಳನ್ನ ಶೀಘ್ರವಾಗಿ ಗ್ರಾಹಕರಿಗೆ ತಲುಪಿಸಲು ಕಷ್ಟವಾದಾಗ, ಅವರು ಅಣಬೆಯ ಮೌಲ್ಯವರ್ಧನೆಗೆ ಮುಂದಾದರು. ಪೌಷ್ಟಿಕಾಂಶ ಭರಿತ ಅಣಬೆಗಳನ್ನು ಬಳಸಿ ಕುಕೀಸ್, ಖಾಖ್ರಾ ಮತ್ತು ಕಪ್‌ಕೇಕ್‌ಗಳಂತಹ ವಿಭಿನ್ನ, ರುಚಿಕರ ಹಾಗೂ ಆರೋಗ್ಯಕರ ತಿನಿಸುಗಳನ್ನ ತಯಾರಿಸಿ ಮಾರುಕಟ್ಟೆಗೆ ಪರಿಚಯಿಸಿದರು. ಇದರಿಂದ ಅವರ ಮಶ್ರೂಮ್ ಬಿಸಿನೆಸ್ ನಷ್ಟದಿಂದ ಪಾರಾಗಿದ್ದಲ್ಲದೆ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಹೊಸ ವರ್ಗದ ಗ್ರಾಹಕರನ್ನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಎರೆಹುಳು ಗೊಬ್ಬರ ತಯಾರಿಕೆ ಬಗ್ಗೆ ರೈತರಿಗೆ ಮಾರ್ಗದರ್ಶನ
ಇಂದು ತೃಪ್ತಿ ಧಕಾಟೆ ಅವರ ಈ ಸಾಧನೆ ಕೇವಲ ಅವರ ಒಂದು ಫಾರ್ಮ್‌ಗೆ ಮಾತ್ರ ಸೀಮಿತವಾಗಿಲ್ಲ. ತಮ್ಮ ಶೈಕ್ಷಣಿಕ ಜ್ಞಾನ ಮತ್ತು ಕೃಷಿ ಅನುಭವವನ್ನ ಇತರರಿಗೂ ಹಂಚುತ್ತಿರುವ ಅವರು, ಇದುವರೆಗೆ 7,000ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೃಷಿ ಉದ್ಯಮದ ಕುರಿತು ತರಬೇತಿ ನೀಡಿದ್ದಾರೆ.
ಇದರ ಜೊತೆಗೆ, 200ಕ್ಕೂ ಹೆಚ್ಚು ರೈತರಿಗೆ ಮಾರ್ಗದರ್ಶನ ನೀಡಿ, ಅವರು ತಮ್ಮದೇ ಆದ ಸ್ವತಂತ್ರ ಅಣಬೆ ಕೃಷಿ ಉದ್ಯಮವನ್ನ ಪ್ರಾರಂಭಿಸಲು ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಸಹಾಯ ಮಾಡಿದ್ದಾರೆ. ಕೇವಲ ಅಣಬೆ ಬೆಳೆಯುವುದು ಮಾತ್ರವಲ್ಲದೆ, ವಿಷಮುಕ್ತ ಆಹಾರ ಉತ್ಪಾದನೆಗಾಗಿ ಸಾವಯವ ಕೃಷಿ ಮತ್ತು ಕೃಷಿ ಭೂಮಿಯ ಆರೋಗ್ಯ ಕಾಪಾಡಲು ಎರೆಹುಳು ಗೊಬ್ಬರ ತಯಾರಿಕೆಯ ಬಗ್ಗೆಯೂ ರೈತರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.


Click it and Unblock the Notifications
