ಕುಮಾರಸ್ವಾಮಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು
ಬೆಂಗಳೂರು, ಮೇ.29: ಆರ್.ಟಿ. ನಗರದ ಗಂಗೇನಹಳ್ಳಿಯ ಜಮೀನು ಡಿನೋಟಿಫಿಕೇಷನ್ ಗೆ ಸಂಬಂಧಿಸಿದಂತೆ ಅಧಿಕಾರ ದುರ್ಬಳಕೆ ಆರೋಪ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಲೋಕಾಯುಕ್ತ ವಿಶೇಷ ಕೋರ್ಟ್ ನಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಸಿಕ್ಕಿದೆ.
ಜೂ. 6ರವರೆಗೆ ಷರತ್ತುಬದ್ಧ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲಾಗಿದ್ದು, ತನಿಖಾಧಿಕಾರಿ ಅನುಮತಿ ಇಲ್ಲದೆ ವಿದೇಶಕ್ಕೆ ಹಾರುವಂತಿಲ್ಲ. ಸಾಕ್ಷಿ ಹಾಗೂ ದಾಖಲೆಗಳನ್ನು ನಾಶಪಡಿಸಬಾರದು. ಜಾಮೀನು ಕುರಿತಂತೆ ತನಿಖಾಧಿಕಾರಿ ಆಕ್ಷೇಪಣೆ ಸಲ್ಲಿಸಬಹುದು ಎಂದು ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಬೋಪಯ್ಯ ಅವರು ಹೇಳಿದ್ದಾರೆ.
ಬೆಂಗಳೂರಿನ ಆರ್.ಟಿ. ನಗರದ ಗಂಗೇನಹಳ್ಳಿಯಲ್ಲಿ 1 ಎಕರೆ 11 ಗುಂಟೆ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಅವ್ಯವಹಾರ ನಡೆಸಲಾಗಿದೆ. ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ಕೆಲ ಜಮೀನುಗಳನ್ನು ಕೈಬಿಡಲಾಗಿದೆ. ಎಚ್ ಡಿ ಕುಮಾರಸ್ವಾಮಿ ಅವರು ಅಧಿಕಾರ ದುರ್ಬಳಕೆ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಜಯಕುಮಾರ್ ಪಾಟೀಲ್ ಅವರು ಆರೋಪಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಸೇರಿ ಐವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗಿದ್ದು, ಎಚ್ಡಿ ಕುಮಾರಸ್ವಾಮಿ, ಯಡಿಯೂರಪ್ಪ, ವಿಮಲಾ, ಟಿ.ಎಸ್.ಚನ್ನಪ್ಪ, ರಾಜಶೇಖರಯ್ಯ ಎಂಬುವರ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಭ್ರಷ್ಟಚಾರ ನಿಗ್ರಹ ಕಾಯ್ದೆ ಸೆಕ್ಷನ್ 13 (1) ಸಿ, 13 (1) ಡಿ, 13 (2) ಮತ್ತು ಐಪಿಸಿ 409, 418, 420 ಮತ್ತು 120 ಬಿ ಅನ್ವಯ ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಪ್ರಕರಣದ ವಿವರ : ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಮಠದಹಳ್ಳಿಯ ಸರ್ವೆ ನಂ. 7/1ಬಿ, 7/1ಸಿ ಹಾಗೂ 7/1ಡಿಗೆ ಸೇರಿದ ತಲಾ ಹದಿನೇಳು ಗುಂಟೆಯಂತೆ ಒಟ್ಟು 1.11 ಎಕರೆ ಜಮೀನನ್ನು ಅಕ್ರಮವಾಗಿ ಡಿನೋಟಿಫಿಕೇಶನ್ ಮಾಡಲಾಗಿದೆ ಎಂಬುದು ಆರೋಪ.
ಈ ಜಮೀನಿನ ಮೂಲ ವಾರಸುದಾರರು ತಿಮ್ಮಾರೆಡ್ಡಿ. ಆದರೆ, ರಾಜಶೇಖರಯ್ಯ ಎಂಬುವವರು ಜಮೀನಿನ ಮಾಲೀಕ ನಾನೇ ಎಂದು ಸಿವಿಲ್‌ಕೋರ್ಟ್‌ನಿಂದ ಹಕ್ಕುದಾರಿಕೆ ಪಡೆದು, ಜಮೀನು ಡಿನೋಟಿಫೈ ಮಾಡುವಂತೆ 2007ರಲ್ಲಿ ಮುಖ್ಯಮಂತ್ರಿಗಳಿಗೆ ಅರ್ಜಿ ಸಲ್ಲಿಸಿದ್ದರು. [ಪ್ರಕರಣದ ಪೂರ್ತಿ ವಿವರ ಇಲ್ಲಿ ಓದಿ]











Click it and Unblock the Notifications