ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಜನರಿಗಿದ್ದ ನಿರೀಕ್ಷೆ ಹುಸಿಯಾಗಿದೆ : ಬೊಮ್ಮಾಯಿ
ಕಾಂಗ್ರೆಸ್ ನೀಡಿದ್ದ ಗ್ಯಾರಂಟಿಗಳ ಬಗ್ಗೆ ಕರ್ನಾಟಕ ಜನತೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ಕಾಂಗ್ರೆಸ್ ಸರ್ಕಾರದ ಮೊದಲ ಸಚಿವ ಸಂಪುಟದ ಬಳಿಕ ಅವರ ನಿರೀಕ್ಷೆಗಳು ಸುಳ್ಳಾಗಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 5 ಗ್ಯಾರಂಟಿಗಳನ್ನು ಜಾರಿ ಮಾಡುವ ಬಗ್ಗೆ ಸಿದ್ದರಾಮಯ್ಯ ಯಾವ ಸ್ಪಷ್ಟನೆ ನೀಡಿಲ್ಲ ಎಂದು ಹೇಳಿದರು. ಇನ್ನು 5 ಗ್ಯಾರಂಟಿಗಳನ್ನು ಜಾರಿ ಮಾಡಲು 50 ಸಾವಿರ ಕೋಟಿ ರುಪಾಯಿ ಬೇಕಾಗುತ್ತದೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಅದಕ್ಕೆ ಬೇಕಾದ ಹಣಕಾಸು ಹೊಂದಿಸಲು ಯಾವುದೇ ಆಲೋಚನೆ ಇಲ್ಲ ಎನ್ನುವುದು ಅವರ ಮಾತಿನಲ್ಲಿ ಸ್ಪಷ್ಟವಾಗಿದೆ ಎಂದು ಹೇಳಿದರು.

"ದಾರಿಯಲ್ಲಿ ಹೋಗುವವರಿಗೆ ಉಚಿತ ಭಾಗ್ಯಗಳನ್ನು ಕೊಡಲು ಆಗುತ್ತಾ ಎಂದು ಕೇಳಿದ್ದಾರೆ. ಮನೆಲಿದ್ದವರು, ಬೀದಿಯಲ್ಲಿದ್ದವರು ಎಲ್ಲರೂ ಮತ ಹಾಕಿದ್ದಾರೆ. ಅವರು ಮತದಾರರಿಗೆ ಎಷ್ಟು ಗೌರವ ಕೊಡುತ್ತಾರೆ ಎನ್ನುವುದು ಈಗ ಅರ್ಥವಾಗುತ್ತಿದೆ, ಕಾಂಗ್ರೆಸ್‌ನ ನಿಜವಾದ ಬಣ್ಣ ಈಗ ಬಯಲಾಗುತ್ತಿದೆ" ಎಂದು ಬೊಮ್ಮಾಯಿ ಆರೋಪಿಸಿದರು.
ಕುಂಟು ನೆಪ ಹೇಳಲು ಆರಂಭಿಸಿದ್ದಾರೆ
ಎಲ್ಲಾ ಮನೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆ ಮಾಡಿದ್ದವರು ಈಗ ವಿವಿಧ ನೆಪಗಳನ್ನು ಹೇಳುತ್ತಿದ್ದಾರೆ. ಈ ವರ್ಷ ಪದವಿ ಪಾಸಾದವರಿಗೆ ಮಾಸಿಕ ಭತ್ಯೆ ಎಂದು ಹೇಳಿದ್ದಾರೆ. ಕಷ್ಟದಲ್ಲಿರುವ ನಿರುದ್ಯೋಗಿಗಳಿಗೆ ಸಹಾಯ ಮಾಡುವ ಆಶಯ ಇವರಿಗೆ ಇಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ.
ಬಿಜೆಪಿ ಆಡಳಿತದ ಅವಧಿಯಲ್ಲಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ. ಇದಕ್ಕೆ ಈಗಾಗಲೇ ಶಾಸಕಾಂಗ ಸಭೆಯಲ್ಲೇ ಉತ್ತರ ಕೊಟ್ಟಿದ್ದೇನೆ. ಕೋವಿಡ್ ಸಾಂಕ್ರಾಮಿಕದ ಕಾರಣ ಎಲ್ಲಾ ರಾಜ್ಯಗಳ ಸಾಲ ಹೆಚ್ಚಾಗಿದೆ. ಸಿದ್ದರಾಮಯ್ಯ ಈಗಲೂ ಪ್ರತಿಪಕ್ಷದವರಂತೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
50 ಸಾವಿರ ಕೋಟಿ ಸಣ್ಣ ಮೊತ್ತವೇ
ಎಲ್ಲಾ ಗ್ಯಾರಂಟಿಗಳನ್ನು ಪೂರೈಸಲು 50 ಸಾವಿರ ಕೋಟಿ ರುಪಾಯಿ ಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದೇನು ಕಡಿಮೆ ಮೊತ್ತವಾ? ಎಂದು ಮಾಜಿ ಸಿಎಂ ಬೊಮ್ಮಾಯಿ ಪ್ರಶ್ನೆ ಮಾಡಿದರು. ಇವೆಲ್ಲಾ ಬರಿ ಘೋಷಣೆಗಾಗಿ ಇರುವ ಗ್ಯಾರಂಟಿಗಳಾಗಿವೆ. ಏನು ಆಶ್ವಾಸನೆ ನೀಡಿದ್ದರು, ಏನು ಮಾಡುತ್ತಾರೆ ಎಂದು ಸಚಿವ ಸಂಪುಟದವರೆಗೆ ಕಾದು ನೋಡುತ್ತೇವೆ. ಇವರು ಷರತ್ತುಗಳನ್ನು ವಿಧಿಸಿಯೇ ಗ್ಯಾರಂಟಿಗಳನ್ನು ಜಾರಿ ಮಾಡುವುದು, ಜನರೇ ಇದರ ಬಗ್ಗೆ ತೀರ್ಮಾನ ಮಾಡುತ್ತಾರೆ. ಜನರ ಪರವಾಗಿ ನಾವು ಧ್ವನಿ ಎತ್ತುತ್ತೇವೆ ಎಂದು ಹೇಳಿದರು.












Click it and Unblock the Notifications