ಜಿಬಿಎ ವಿಶೇಷ ಅಯುಕ್ತರಿಂದ ಕಿರುಕುಳ? 5 ನಗರ ಪಾಲಿಕೆ ಕಂದಾಯ ನೌಕರರ ಮಹತ್ವದ ನಿರ್ಧಾರ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಂದಾಯ ವಿಭಾಗದ ವಿಶೇಷ ಆಯುಕ್ತರ ಕಿರಕುಳ ವಿರುದ್ಧ ಐದು ನಗರ ಪಾಲಿಕೆ ನೌಕರರು ತಿರುಗಿ ಬಿದ್ದು, ಪ್ರತಿಭಟಿಸಿದ್ದಾರೆ. ಮೇಲಾಧಿಕಾರಿಗಳ ಅಸಹನೀಯ ನಡೆ ಖಂಡಿಸಿ, ಕಂದಾಯ ವಿಭಾಗದ ಉಪ ಆಯುಕ್ತರು ಮತ್ತು ಕಂದಾಯ ಅಧಿಕಾರಿಗಳ ಅಮಾನತು ಶಿಫಾರಸನ್ನು ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಅಲ್ಲಿಯವರೆಗೆ ಕಂದಾಯ ಆಯುಕ್ತರ ವಿಡಿಯೋ ಸಂವಾದದಲ್ಲಿ ಗೈರಾಗುವುದು ಸೇರಿದಂತೆ ಸಭೆಯಲ್ಲಿ ನೀರ್ಣಯಗಳನ್ನು ಕೈಗೊಂಡಿದ್ದಾರೆ.
ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ. ಈ ವಿಶೇಷ ಆಯುಕ್ತರು ತಮ್ಮ ಅಧೀನದ ಸಹ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರ ಹಾಗೂ ಕಂದಾಯ ವಸೂಲಿಗಾರರನ್ನು ಮನ ಬಂದಂತೆ ನಿಂದಿಸಿ ಕಿರುಕುಳ ನೀಡಿದ್ದಾರೆ. ವಿಡಿಯೋ ಸಂವಾದ ಸಭೆಗಳಲ್ಲಿ ಪಾಲ್ಗೊಂಡಾಗ ಅವಾಚ್ಯ ಶಬ್ದಗಳಿಂದ ನಿಂದಿದ್ದಾರೆ ಎಂದು ಐದು ನಗರ ಪಾಲಿಕೆ ಕಂದಾಯ ಅಧಿಕಾರಿಗಳು ದೂರಿದರು. ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆ ನಡೆಸಿದ ಜಿಬಿಎ -ಪಾಲಿಕೆ ಅಧಿಕಾರಿಗಳ ಹಾಗೂ ನೌಕರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಅಧ್ಯಕ್ಷ ಎ.ಅಮೃತ್ ರಾಜ್ ಅವರ ನೇತೃತ್ವದಲ್ಲಿ ನೆನ್ನೆ ಮಂಗಳವಾರ ಸಭೆ ಸೇರಿದರು. ಇದರಲ್ಲಿ ಪಾಲ್ಗೊಂಡಿದ್ದ ಐದು ಪಾಲಿಕೆಗಳ ಕಂದಾಯ ಅಧಿಕಾರಿಗಳು, ಸಹ ಕಂದಾಯ ಅಧಿಕಾರಿಗಳು, ಮೌಲ್ಯಮಾಪಕರು, ಕಂದಾಯ ಪರಿವೀಕ್ಷಕರು ಹಾಗೂ ಕಂದಾಯ ವಸೂಲಿಗಾರರು ಇನ್ನು ಮುಂದಿನ ವಿಶೇಷ ಆಯುಕ್ತರ ವಿಡಿಯೋ ಸಂವಾದದಲ್ಲಿ ಭಾಗವಹಿಸದಂತೆ ಎಲ್ಲರೂ ಒಕ್ಕೋರಲಿನಿಂದ ನೀರ್ಣಯಿಸಿದರು.
ಅಧಿಕಾರಿಗಳ ಸ್ವಾಭಿಮಾನಕ್ಕೆ ಧಕ್ಕೆ
ಸಭೆಯಲ್ಲಿ ಕಾನೂನು ಬಾಹಿರವಾಗಿ ಕಂದಾಯ ವಿಭಾಗದ ಉಪ ಆಯುಕ್ತ ಡಿ.ಕೆ.ಬಾನು ಮತ್ತು ಕಂದಾಯ ಅಧಿಕಾರಿ ವರಲಕ್ಷ್ಮಮ್ಮ ಅವರ ಅಮಾನತು ಮಾಡಲು ಸರ್ಕಾರ ಶಿಫಾರಸು ಮಾಡಿರುವ ಪಸ್ತಾವನೆ ಹಿಂದಕ್ಕೆ ಪಡೆಯಬೇಕೆಂದು ಒತ್ತಾಯಿಸಿದರು. ಇದಕ್ಕೆ ಸಂಬಂಧಿಸಿದ ಮನವ ಪತ್ರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರಿಗೆ ಸಲ್ಲಿಸಿದರು. ಮೇಲಾಧಿಕಾರಿಗಳ ನಿಂದನೆ, ಕಿರುಕುಳದಿಂದ ಅಧಿಕಾರಿಗಳ ಗೌರವ, ಸ್ವಾಭಿಮಾನಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಆಯುಕ್ತರು ಖುದ್ದು ಕ್ಷಮೆಯಾಚಿಸಬೇಕು
ಜಿಬಿಎ ವ್ಯಾಪ್ತಿಯಲ್ಲಿ ಹೆಚ್ಚುವರಿ ಆಯುಕ್ತರು, ಪ್ರತ್ಯೇಕ ಆಯುಕ್ತರು, ಕಂದಾಯ ಮತ್ತು ಜಂಟಿ ಆಯುಕ್ತರನ್ನು ನೇಮಿಸಲಾಗಿದೆ. ಆದ್ದರಿಂದ ಈ ವಿಶೇಷ ಆಯುಕ್ತರು ಸಭೆ ನಡೆಸುವ ಅಗತ್ಯವಿಲ್ಲ ಎಂದು ನೌಕರರು ಹೇಳಿದರು. ಮುನೀಶ್ ಮೌದ್ಗಿಲ್ ಅವರು ಖುದ್ದಾಗಿ ಅಧಿಕಾರಿಗಳ ಬಳಿ ಕ್ಷಮೆಯಾಚಿಸಬೇಕು. ಅಂದಾಗಲೇ ಮಾತ್ರ ನಾವು ಮತ್ತೊಮ್ಮೆ ಸಭೆ ಸೇರಿ ಆಯುಕ್ತರ ವಿಡಿಯೋ ಸಂವಾದದಲ್ಲಿ ಪಾಲ್ಗೊಳ್ಳುವ ಬಗ್ಗೆ ಸೂಕ್ತವಾಗಿ ಚರ್ಚಿಸಿ ನಿರ್ಧರಿಸುತ್ತೇವೆ. ಇಲ್ಲವೇವಾದರೆ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಅಧಿಕಾರಿಗಳು ಹಾಗೂ ನೌಕರರ ಮಧ್ಯದ ಈ ಗಲಾಟೆ, ವೈಮನಸ್ಸುಗಳು, ಭಿನ್ನಾಭಿಪ್ರಾಯ, ಪ್ರತಿಭಟನೆಗಳ ನೇರ ಪರಿಣಾಮ ಜಿಬಿಎ ಆಡಳಿತದ ಮೇಲೆ, ಅಭಿವೃದ್ಧಿ ಮೇಲೆ ಉಂಟಾಗುತ್ತದೆ. ಈ ಸಂಬಂಧ ಜಿಬಿಎ ಕೂಡಲೇ ಸೂಕ್ತ ನಿರ್ಧಾರ ಪ್ರಕಟಿಸುವ ಅಗತ್ಯವಿದೆ.












Click it and Unblock the Notifications